ರೌಡಿಶೀಟರ್ ಹೆಸರಲ್ಲಿ ಫ್ಯಾನ್ಸ್ ಪೇಜ್ ತೆರೆದರೆ ಗ್ಯಾರಂಟಿ ಬಿಳೋತ್ತೆ ಕ್ರಿಮಿನಲ್ ಕೇಸ್.!:ಚಂದ್ರಗುಪ್ತ, ಸಿಸಿಬಿ ಜಂಟಿ ಪೊಲೀಸ್ ಆಯುಕ್ತರು
ಅಶ್ವಸೂರ್ಯ/ಬೆಂಗಳೂರು: ಅಂಡರ್ ವರ್ಲ್ಡ್ ನ ನಟೋರಿಯಸ್ ರೌಡಿಶೀಟರ್‌ಗಳಿಗೆ ಬಿಲ್ಡಪ್ ಕೊಡೋ ರೀತಿ ರೀಲ್ಸ್ ಮಾಡುತ್ತಿದ್ದ ಪುಡಿರೌಡಿಗಳಿಗೆ ಸಿಸಿಬಿ ಅಧಿಕಾರಿಗಳು ಎಚ್ಚರಿಕೆ ಕೊಟ್ಟಿದ್ದಾರೆ.! ಈ ಬಗ್ಗೆ ತನಿಖೆ ಕೈಗೊಂಡ ಸಿಸಿಬಿ ಪೊಲೀಸರು ಸುಮಾರು 60 ರಿಂದ 70 ಇನ್‌ಸ್ಟ್ರಾಗ್ರಾಂ ಖಾತೆ ಹಾಗೂ ಯುಟ್ಯೂಬ್ ಹಲವು ಖಾತೆಗಳನ್ನು ಪತ್ತೆ ಹಚ್ಚಿದ್ದಾರೆ.
ಇತ್ತೀಚೆಗೆ ಇದೊಂದು ಶೋಕಿಯಾಗಿದೆ ರೌಡಿಗಳ ಹೆಸರಿನಲ್ಲಿ ಫ್ಯಾನ್ಸ್ ಪೇಜ್ ಗಳನ್ನು ತೆರೆದು ರೌಡಿಗಳ ವಿಡಿಯೋ ಮತ್ತು ಫೋಟೋಗಳಿಗೆ ಬೆಂಕಿ, ಲಾಂಗು ಮಚ್ಚು, ಎಫೆಕ್ಟ್ ಗಳನ್ನು ಹಾಕಿ ಸಿನಿಮಾ ಶೈಲಿಯಲ್ಲಿ ಹೊಗಳುತ್ತಿದ್ದರು. ಈ ಬಗ್ಗೆ
ಸಾರ್ವಜನಿಕರಿಂದ ಸಿಸಿಬಿಗೆ ಹತ್ತಾರು ದೂರುಗಳನ್ನು ನೀಡಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸಿಸಿಬಿ ಪೊಲೀಸರು ತಂಡ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರ ಸೂಚನೆ ಮೇರೆಗೆ ಇಂತಹ ಪೇಜ್‌ಗಳು ಹಾಗೂ ಯುಟ್ಯೂಬ್ ಅಡ್ಮಿನ್‌ಗಳನ್ನು ಸಿಸಿಬಿ ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.
ಈ ಅಡ್ಮಿನ್‌ಗಳ ಪೈಕಿ ಬಹುತೇಕ ಹುಡುಗರು ಇನ್ನೂ ಅಪ್ರಾಪ್ತರು ಎನ್ನುವುದು ಗೊತ್ತಾಗಿದೆ. ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ.
ಆನ್‌ಲೈನ್ ಮೂಲಕ ಸಂಪರ್ಕ:
ವಿಲ್ಸನ್ ಗಾರ್ಡನ್ ನಾಗ, ಮಾರತ್ ಹಳ್ಳಿ ರೋಹಿತ್, ಸೈಲೆಂಟ್ ಸುನೀಲ, ಕುಣಿಗಲ್ ಗಿರಿ ಸೇರಿದಂತೆ ಹಲವಾರು ರೌಡಿಗಳ ಶಿಷ್ಯರು ಯುವಕರನ್ನು ಆನ್ ಲೈನ್ ಮೂಲಕ ಸಂಪರ್ಕಿಸುತ್ತಿದ್ದರು. ಜೈಲಿನಲ್ಲಿರುವ ಹಾಗೂ ಹೊರಗಡೆ ಇರುವ ರೌಡಿಶೀಟರ್‌ಗಳು ಕೆಲವು ಹುಡುಗರನ್ನು ಬಳಸಿಕೊಂಡು ರೌಡಿಗಳ ಪರವಾಗಿ ಫ್ಯಾನ್ಸ್ ಪೇಜ್‌ಗಳನ್ನು ತೆರೆದು ಅದಕ್ಕೆ ಫಾಲೋಯಿಂಗ್ ಬರುವಂತೆ ನೋಡಿಕೊಳ್ಳುತ್ತಿದ್ದರು. ಇದು ಸಿಸಿಬಿ ಅಧಿಕಾರಿಗಳ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಫ್ಯಾನ್ಸ್ ಪೇಜ್‌ಗಳ ಕ್ರಿಯೇಟ್ ಮಾಡಿದ್ದ ಅಡ್ಮಿನ್‌ಗಳನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ.
ಇದರಲ್ಲಿ ಬಹುತೇಕರು ಅಪ್ರಾಪ್ತರು ಎಂದು ತಿಳಿದು ಬಂದಿದ್ದು, ಹೀಗಾಗಿ ಅಪ್ರಾಪ್ತರ ಪಾಲಕರನ್ನು ಕರೆಸಿ ಬುದ್ಧಿವಾದ ಹೇಳಿ ಎಚ್ಚರಿಕೆ ನೀಡುವ ಕೆಲಸ ಮುಂದುವರೆದಿದೆ. ಈ ಸಂಬಂಧ ಅಭಿಲಾಶ್ ಎಂಬ ಯುವಕ ಸೇರಿ ನಾಲ್ವರ ವಿರುದ್ಧ ಪ್ರಕರಣ ಕೂಡ ದಾಖಲಿಸಲಾಗಿದೆ.
ಈ ಯುವಕರು ವಿದ್ಯಾರಣ್ಯಪುರ ಅಭಿಲಾಶ್ ವಿಲ್ಸನ್ ಗಾರ್ಡನ್ ನಾಗ, ಕಾಡಬಿಸಲಹಳ್ಳಿ ರೋಹಿತ್ ನ ಹೆಸರಲ್ಲಿ ಅಕೌಂಟ್‌ಗಳನ್ನು ಹ್ಯಾಂಡಲ್ ಮಾಡುತ್ತಿದ್ದ ಎಂದು ಸಿಸಿಬಿ ಮೂಲಗಳು ತಿಳಿಸಿವೆ. 60 ರಿಂದ 70 ಅಕೌಂಟ್‌ನಿಂದ 500ಕ್ಕೂ ಹೆಚ್ಚು ವಿಡಿಯೋ ಗಳನ್ನು ಸಿಸಿಬಿ ಪೋಲಿಸರು ಡಿಲೀಟ್ ಮಾಡಿಸಿದ್ದಾರೆ. ಹಣ ಕೊಟ್ಟು ವಿಡಿಯೋ ಮಾಡಿಸಿದವರ ಶೋಧ ಕಾರ್ಯ ನಡೆಯುತ್ತಿದೆ ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೇವಲ 500 ರೂಪಾಯಿ ಹಣಕ್ಕೆ ವಿಡಿಯೋ ಪೋಸ್ಟ್ :
ಒಂದು ವಿಡಿಯೋ ಎಡಿಟ್ ಮಾಡಿ ಪೋಸ್ಟ್ ಮಾಡಲು ರೌಡಿಗಳ ಶಿಷ್ಯಂದಿರೇನ್ನಿಸಿಕೊಂಡ ಪುಡಿ ರೌಡಿಗಳು ಅಡ್ಮಿನ್‌ಗಳಿಗೆ ಕೇವಲ 500 ರೂ.ನೀಡುತ್ತಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ರೌಡಿಗಳು ತಮ್ಮ ಇರುವಿಕೆಯ ಬಗ್ಗೆ ಕೆಲವು ಯುವಕರಿಗೆ ತಿಳಿಸುವ ಮತ್ತು ಬ್ರೈನ್ ವಾಶ್ ಮಾಡುವ ಕೆಲಸ ಮಾಡುತ್ತಿದ್ದರು. ಅವರ ಪ್ರಭಾವಕ್ಕೊಳಗಾದ ಕೆಲವು ಯುವಕರು ರೌಡಿಗಳ ಹೆಸರಿನಲ್ಲಿ ಇನ್‌ಸ್ಟ್ರಾಗ್ರಾಂ ಮತ್ತು ಯುಟ್ಯೂಬ್‌ನಲ್ಲಿ ಅಕೌಂಟ್‌ಗಳನ್ನು ತೆರೆದು ರೌಡಿಗಳಿಗೆ ಬಿಲ್ಡಪ್ ಕೊಟ್ಟು ರೀಲ್ಸ್ ಮಾಡಿ ಅದನ್ನು ಅಪಲೋಡ್ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ವಿಚಿತ್ರವಾದ ಬೆಳವಣಿಗೆಗೆ ಬ್ರೇಕ್ ಹಾಕಲು ಪೋಲಿಸರು ಮುಂದಾಗಿದ್ದಾರೆ ಯಾವುದೇ ವ್ಯಕ್ತಿ ರೌಡಿ ಪರ ರೀಲ್ಸ್ ಮಾಡಿದರೆ ಕೇಸ್ ದಾಖಲು.
ಸಾಮಾಜಿಕ ಜಾಲತಾಣದಲ್ಲಿ ರೌಡಿಗಳ ಪರವಾಗಿ ರೀಲ್ಸ್ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಈ ಕಾರಣದಿಂದ ರೌಡಿಗಳ ಪರವಾಗಿ ಯಾರೂ ರೀಲ್ಸ್ ಮಾಡಬಾರದು. ಈ ರೀತಿ ರೀಲ್ಸ್ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಈಗಾಗಲೇ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. -ಚಂದ್ರಗುಪ್ತ, ಸಿಸಿಬಿ ಜಂಟಿ ಪೊಲೀಸ್ ಆಯುಕ್ತರು