ಬೆಂಗಳೂರು : ಪೊಲೀಸ್ ಸಮವಸ್ತ್ರದಲ್ಲಿ ಬಂದು ದರೋಡೆ.! ಎಸ್ಕೇಪ್ ಆಗಿದ್ದ ನಕಲಿ ಪಿಎಸ್ಐ ಸೇರಿ ನಾಲ್ವರ ಬಂಧನ.!
ಬೆಂಗಳೂರಿನಲ್ಲಿ ನಕಲಿ ಪೊಲೀಸ್ ಸಬ್-ಇನ್ಸ್ಪೆಕ್ಟರ್ (PSI) ಮಲ್ಲಿಕಾರ್ಜುನ್ ಮತ್ತು ಅವನ ತಂಡದ ನಾಲ್ವರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ; ಇವರು ಪೊಲೀಸ್ ಸಮವಸ್ತ್ರದಲ್ಲಿ ಮನೆಗೆ ನುಗ್ಗಿ, ಗಾಂಜಾ ಮಾರಾಟ ಮಾಡುತ್ತಿದ್ದೀರಾ ಎಂದು ಬೆದರಿಸಿ, ಲಾಠಿ ಮತ್ತು ರಾಡ್ನಿಂದ ಹಲ್ಲೆ ಮಾಡಿ ಹಣ ದೋಚಿ ಪರಾರಿಯಾಗಿದ್ದರು, ಬಳಿಕ ಪೊಲೀಸರು ಕಾರು, ಬೈಕ್, ನಕಲಿ ಸಮವಸ್ತ್ರ ಮತ್ತು ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ….
news.ashwasurya.in

ಅಶ್ವಸೂರ್ಯ/ ಬೆಂಗಳೂರು :ಬೆಂಗಳೂರಿನಲ್ಲಿ ಒಂಟಿ ಮನೆಯೊಂದಕ್ಕೆ ನುಗ್ಗಿದ ನಾಲ್ವರ ಗ್ಯಾಂಗ್ ನಾವು ಕ್ರೈಮ್ ಪೊಲೀಸರೆಂದು ಹೆದರಿಸಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದೀಯಾ ಎಂದು ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಹಣ ದರೋಡೆ ಮಾಡಿಕೊಂಡು ಎಸ್ಕೇಪ್ ಆಗಿದ್ದ ನಾಲ್ವರು ನಕಲಿ ಪೊಲೀಸರನ್ನು ವಿದ್ಯಾರಣ್ಯಪುರ ಠಾಣೆ ಅಸಲಿ ಪೊಲೀಸರು ಬಂಧಿಸಿದ್ದಾರೆ.
ಯಶವಂತಪುರದ ಮತ್ತಿಕೆರೆ ನಿವಾಸಿಗಳಾದ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ ಅಲಿಯಾಸ್ ಪಿಎಸ್ಐ ಮಲ್ಲಣ್ಣ(27), ಪ್ರಮೋದ್(30), ವಿನಯ್(36) ಹಾಗೂ ಬಾಗಲಗುಂಟೆಯ ಹೃತ್ವಿಕ್ ಬಂಧಿತ ಆರೋಪಿಗಳು. ಆರೋಪಿ ಮಲ್ಲಿಕಾರ್ಜುನ ಮೂಲತಃ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನವನಾಗಿದ್ದು, ಈ ಹಿಂದೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಾಗಿ
ಕೋಚಿಂಗ್ ಪಡೆದು ಪರೀಕ್ಷೆ ಬರೆದಿದ್ದು, ಅದರಲ್ಲಿ ಆಯ್ಕೆಯಾಗಿರಲಿಲ್ಲ.

ಪಿಎಸ್ಐನಂತೆ ಸಮವಸ್ತ್ರ ಹಾಕಿಕೊಂಡು ಜನರನ್ನು ಹೆದರಿಸಿ ಹಣ ವಸೂಲಿ ಮಾಡಲು ನಿರ್ಧರಿಸಿ ಅದಕ್ಕೆ ಬೇಕಾದಂತಹ ಶೂ, ಬೆಲ್ಟ್ ನ್ನು ಖರೀದಿಸಿ ಕಾಮಾಕ್ಷಿಪಾಳ್ಯದ ಟೈಲರ್ ಅಂಗಡಿಯಲ್ಲಿ ಯೂನಿಫಾರಂ ಹೊಲೆಸಿದ್ದಾನೆ. ನಂತರದ ದಿನಗಳಲ್ಲಿ ತನ್ನ ಸ್ನೇಹಿತರಾದ ಋತ್ವಿಕ್ ಜೊತೆ ಸೇರಿ ಒಂಟಿ ಮನೆಯಲ್ಲಿ ವಾಸವಿರುವ ವ್ಯಕ್ತಿ ಬಗ್ಗೆ ತಿಳಿದುಕೊಂಡು ಅವರ ಬಳಿ ಹಣ ಇರುವ ಬಗ್ಗೆ ಮಾಹಿತಿ ಪಡೆದು ದರೋಡೆಗೆ ಸಂಚು ರೂಪಿಸಿದ್ದಾರೆ.
ಅದರಂತೆ ಮಲ್ಲಿಕಾರ್ಜುನ ಪೊಲೀಸ್ ಸಮವಸ್ತ್ರ ಧರಿಸಿ ಕೈಯಲ್ಲಿ ಲಾಠಿ ಹಿಡಿದು, ಸ್ನೇಹಿತರಾದ ಋತ್ವಿಕ್, ಪ್ರಮೋದ್ ಹಾಗೂ ವಿನಯ್ ಜೊತೆ ಸೇರಿ ನರಸೀಪುರ ಲೇಔಟ್ನ ಒಂಟಿ ಮನೆಯಲ್ಲಿ ವಾಸವಿರುವ ನವೀನ್ ಅವರ ಮನೆಗೆ ಡಿ.7ರಂದು ರಾತ್ರಿ ನುಗ್ಗಿ ತಾವು ಕ್ರೈಮ್ ಪೊಲೀಸರೆಂದು ಹೇಳಿ, ನೀನು ಈ ಏರಿಯಾದಲ್ಲಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದೀಯ ಮನೆಯನ್ನು ಪರಿಶೀಲಿಸಬೇಕು ಎಂದು ಹೆದರಿಸಿದ್ದಾರೆೆ.
ನವೀನ್ ಅವರನ್ನು ಮನೆಯ ಒಂದು ಕಡೆ ಕೂರಿಸಿ ಮನೆಯನ್ನೆಲ್ಲ ಸರ್ಚ್ ಮಾಡುವಂತೆ ನಟಿಸಿ ಕೈಗಳಿಂದ ಅವರ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಲಾಠಿ ಮತ್ತು ಕಬ್ಬಿಣದ ರಾಡ್ನಿಂದ ವಿನಾಕಾರಣ ಹೊಡೆದಿದ್ದಾರೆ. ಮನೆಯಲ್ಲಿದ್ದ 53 ಸಾವಿರ ಹಣ, ಪರ್ಸ್ನಲ್ಲಿದ್ದ 2 ಸಾವಿರ ಹಣ ಕಿತ್ತುಕೊಂಡಿದ್ದಲ್ಲದೆ ನವೀನ್ ಅವರ ಬ್ಯಾಂಕ್ ಖಾತೆಯಲ್ಲಿದ್ದ 87 ಸಾವಿರ ಹಣವನ್ನು ಮೊಬೈಲ್ ಮೂಲಕ ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಬಗ್ಗೆ ವಿದ್ಯಾರಣ್ಯಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ.
ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡದಲ್ಲಿ ಯಲಹಂಕ ಉಪವಿಭಾಗದ ಎಸಿಪಿ ನರಸಿಂಹಮೂರ್ತಿ, ಇನ್ಸ್ಪೆಕ್ಟರ್ ಶಿವಸ್ವಾಮಿ, ಸಬ್ ಇನ್ಸ್ಪೆಕ್ಟರ್ ಇಬ್ರಾಹಿಂ ಮತ್ತು ಹರೀಶ್ಕುಮಾರ್ ಹಾಗೂ ಅಪರಾದ ವಿಭಾಗದ ಸಿಬ್ಬಂದಿ ಒಳಗೊಂಡ ತಂಡ ಆರೋಪಿಗಳ ಬಗ್ಗೆ ಹಲವು ಮಾಹಿತಿಗಳನ್ನು ಸಂಗ್ರಹಿಸಿದೆ.

ನಂತರ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿ 45 ಸಾವಿರ ಹಣ, ಕೃತ್ಯಕ್ಕೆ ಬಳಸಿದ್ದ ಕಾರು, ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದು, ತನಿಖೆ ಮುಂದುವರೆದಿದರ..
ಘಟನೆಯ ವಿವರಗಳು:
- ಆರೋಪಿಗಳು: ನಕಲಿ ಪಿಎಸ್ಐ ಮಲ್ಲಿಕಾರ್ಜುನ್ ಅಲಿಯಾಸ್ ಮಲ್ಲಣ್ಣ, ಪ್ರಮೋದ್, ವಿನಯ್ ಮತ್ತು ಋತ್ವಿಕ್.
- ಕೃತ್ಯ: ಡಿಸೆಂಬರ್ 7 ರಂದು ವಿದ್ಯಾರಣ್ಯಪುರದ ನವೀನ್ ಎಂಬುವರ ಮನೆಗೆ ನುಗ್ಗಿ, ತಾನು ಪಿಎಸ್ಐ ಎಂದು ಹೇಳಿಕೊಂಡು, ಗಾಂಜಾ ಮಾರಾಟದ ನೆಪದಲ್ಲಿ ಹಲ್ಲೆ ಮಾಡಿ ಹಣ ದೋಚಿ ಪರಾರಿಯಾಗಿದ್ದರು.
- ಬಂಧನ: ವಿದ್ಯಾರಣ್ಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
- ವಶಪಡಿಸಿಕೊಂಡ ವಸ್ತುಗಳು: ಬಂಧಿತರಿಂದ ನಕಲಿ ಪಿಎಸ್ಐ ಸಮವಸ್ತ್ರ, ಕಾರು, ಬೈಕ್, ಹಾಗೂ ಸುಮಾರು 1.37 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.
- ಹಿನ್ನೆಲೆ: ಮಲ್ಲಿಕಾರ್ಜುನ್ ಎರಡು ಬಾರಿ ಪಿಎಸ್ಐ ಪರೀಕ್ಷೆಯಲ್ಲಿ ಫೇಲ್ ಆಗಿದ್ದರೂ, ಪಿಎಸ್ಐ ಎಂದು ಬಿಲ್ಡಪ್ ಕೊಟ್ಟು ನಕಲಿ ಸಮವಸ್ತ್ರ ಹೊಲಿಸಿಕೊಂಡಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.


