ಬೆಂಗಳೂರು : ರಾಜ್ಯದಲ್ಲಿ ಹಲವು ಇಲಾಖೆಗಳಲ್ಲಿ 2.84 ಲಕ್ಷ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ.
news.ashwasurya.in
ಅಶ್ವಸೂರ್ಯ/ ಬೆಳಗಾವಿ : ರಾಜ್ಯದ ಆರೋಗ್ಯ, ಕೃಷಿ, ಇಂಧನ, ಸಾರಿಗೆ,ಶಿಕ್ಷಣ ಸೇರಿ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ 2 ಲಕ್ಷ 84 ಸಾವಿರ 881 ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇಲ್ಮನೆಯಲ್ಲಿ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಇಂದು ಬಿಜೆಪಿಯ ಹನುಮಂತ ನಿರಾಣಿ ಅವರ ಪ್ರಶ್ನೆಗೆ ಉತ್ತರ ನೀಡಿದ ಮುಖ್ಯಮಂತ್ರಿಗಳು ಒಳ ಮೀಸಲಾತಿ ಜಾರಿಯ ವಿಳಂಬದಿಂದ ಖಾಲಿ ಹುದ್ದೆಗಳ ಭರ್ತಿಗೆ ತಡವಾಗಿತ್ತು ಎಂದು ಹೇಳಿದರು.
ಈಗಾಗಲೇ ಒಳ ಮೀಸಲಾತಿ ಜಾರಿಯಾಗಿರುವುದರಿಂದ ಖಾಲಿ ಹುದ್ದೆಗಳ ನೇಮಕಾತಿಯು ವೇಗವಾಗಲಿದೆ ಆರ್ಥಿಕ ಇಲಾಖೆಯ ಅನುಮೋದನೆ ಪಡೆದು ಹಂತಹಂತವಾಗಿ ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿಯನ್ನು ವೃಂದ ಮತ್ತು ನೇಮಕಾತಿ ನಿಯಮಗಳ್ವಯ ಆರ್ಥಿಕ ಇಲಾಖೆಯಿಂದ ಅನುಮೋದಿತವಾದ ಹುದ್ದೆಗಳನ್ನು ಕಾಲಕಾಲಕ್ಕೆ ಭರ್ತಿ ಮಾಡಲು ನಿಯಮಾನುಸಾರ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಕಳೆದ 3 ವರ್ಷಗಳಲ್ಲಿ ವಿವಿಧ ನೇಮಕಾತಿ ಪ್ರಾಧಿಕಾರಗಳ ಮೂಲಕ 8157 ಹುದ್ದೆಗಳ ನೇಮಕಾತಿಯನ್ನು ಪೂರ್ಣಗೊಳಿಸಲಾಗಿದೆ ಹಾಗೂ 3081 ಹುದ್ದೆಗಳ ನೇಮಕಾತಿಯು ಪ್ರಗತಿಯಲ್ಲಿದೆ ಎಂದರು.
ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 24,300 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆಯು ನೀಡಿದೆ,ಅಧಿಕಾರಿ / ನೌಕರರ ನಿಧನ, ವಯೋ ನಿವೃತ್ತಿ ಮತ್ತು ಸ್ವಯಂ ನಿವೃತ್ತಿಯಿಂದ ತೆರವಾಗುವ ಹುದ್ದೆಗಳನ್ನು ಆಯಾ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳ ಅನುಸಾರ ಆರ್ಥಿಕ ಇಲಾಖೆಯಿಂದ ಅನುಮೋದನೆ ಮಾಡಲಾಗುತ್ತಿದೆ.
ಇಲಾಖೆಗಳು ಖಾಲಿ ಇರುವ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯಿಂದ ಒಂದು ಬಾರಿ ಸಹಮತಿಯನ್ನು ಪಡೆದ ನಂತರ, ಮತ್ತೊಮ್ಮೆ ಸಹಮತಿಯನ್ನು ಕೋರುವ ಅಗತ್ಯವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.


