SHIVAMOGGA : ನಟ ದರ್ಶನ್ ಅಭಿನಯದ “ಡೆವಿಲ್” ಸಿನಿಮಾ ಸಂಭ್ರಮಾಚರಣೆ ಮುಗಿಸಿ ಮನೆಗೆ ಮರಳುತ್ತಿದ್ದಾಗಲೇ ದುರಂತ: ಅಭಿಮಾನಿ ಬಲಿ.!
news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ಡೆವಿಲ್” ಸಿನಿಮಾ ರಿಲೀಸ್ ಆಗಿ ರಾಜ್ಯಾದ್ಯಂತ ಭರ್ಜರಿ ಸದ್ದು ಮಾಡುತ್ತಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಡಿಸೆಂಬರ್ 11 ರಂದು ತೆರೆಗೆ ಬಂದಿದ್ದು ರಾಜ್ಯದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ.ಎಲ್ಲೆಡೆ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ನಿನ್ನೆ ರಾತ್ರಿಯಿಂದಲೇ ಥಿಯೇಟರ್ಗಳ ಮುಂದೆ ಅಭಿಮಾನಿಗಳ ಸಂಭ್ರಮಾಚರಣೆ ಭರ್ಜರಿಯಾಗಿತ್ತು, ಡೆವಿಲ್ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದ ಅಭಿಮಾನಿಯೋರ್ವ ಈಗ ಉಸಿರು ಚಲ್ಲಿದ್ದಾನೆ.
ಡೆವಿಲ್ ಸಿನಿಮಾಗಾಗಿ ನಿನ್ನೆ ( ಡಿಸೆಂಬರ್,10) ರಾತ್ರಿಯಿಂದಲೇ ರಾಜ್ಯದಲ್ಲಿ ಸಂಭ್ರಮಾಚರಣೆ ಜೋರಾಗಿದ್ದು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಇದೆ ವೇಳೆ ಭೀಕರ ಅಪಘಾತ ಸಂಭವಿಸಿದ್ದು ದರ್ಶನ್ ಅಭಿಮಾನಿಯಾಗಿದ್ದ ಯುವಕನೊಬ್ಬ ಸಾವನಪ್ಪಿದ್ದಾನೆ.! ಸಿನಿಮಾ ಸಂಭ್ರಮಾಚರಣೆ ಮುಗಿಸಿ ಬೈಕ್ನಲ್ಲಿ ಮನೆಗೆ ಹೋಗುತ್ತಿದ್ದ ಯುವಕನಿಗೆ ಕೆಎಸ್ಅರ್ಟಿಸಿಯ ರಾಜಹಂಸ ಬಸ್ ಡಿಕ್ಕಿ ಹೊಡೆದ ಪರಿಣಾಮ ದರ್ಶನ್ ಅಭಿಮಾನಿಯಾಗಿದ್ದ ಪುನೀತ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಡೆವಿಲ್ ಸಂಭ್ರಮಾಚರಣೆ ಮುಗಿಸಿ ಮನೆಗೆ ಮರಳುತ್ತಿದ್ದಾಗ ದುರಂತ.!
ಈ ಘಟನೆ ತೀರ್ಥಹಳ್ಳಿ ತಾಲೂಕಿನ ರಂಜದಕಟ್ಟೆ ಸಮೀಪ ಶಿವರಾಜಪುರದಲ್ಲಿ ಕಳೆದ ರಾತ್ರಿ ನಡೆದಿದೆ. ಮೀನುಗುಂದ ಗ್ರಾಮದ ಪುನೀತ್ (26) ಎಂಬ ಯುವಕ ಮೃತ ಪಟ್ಟಿದ್ದಾನೆ. ತೀರ್ಥಹಳ್ಳಿಯ ವಿನಾಯಕ ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ‘ಡೆವಿಲ್’ ಸಿನಿಮಾ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಪುನೀತ್, ತನ್ನ ಸ್ನೇಹಿತರೊಂದಿಗೆ ಬೈಕ್ನಲ್ಲಿ ಮನೆಗೆ ಮರಳುತ್ತಿದ್ದರು. ಈ ವೇಳೆ ಎದುರಿಗೆ ಬಂದ ರಾಜಹಂಸ ಬಸ್ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪುನೀತ್ ತೀವ್ರ ಗಾಯಗೊಂಡು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಡೆವಿಲ್ ಸಂಭ್ರಮಾಚರಣೆ ಮುಗಿಸಿ ಸಿನಿಮಾ ನೋಡುವ ಮೊದಲೇ ಉಸಿರು ಚೆಲ್ಲಿದ ದರ್ಶನ್ ಅಭಿಮಾನಿ ಪುನೀತ್.
ಈ ಘಟನೆ ಸಿನಿಮಾ ಸಂಭ್ರಮದ ನಡುವೆ ದುರಂತವಾಗಿ ಪರಿಣಮಿಸಿದೆ. ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ವಿಶ್ವಾದ್ಯಂತ ಬಿಡುಗಡೆಯಾಗಿದ್ದು, ಕರ್ನಾಟಕದಾದ್ಯಂತ ದರ್ಶನ್ ಅಭಿಮಾನಿಗಳು ಉತ್ಸಾಹದಿಂದ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಶಿವಮೊಗ್ಗ ಸೇರಿದಂತೆ ತೀರ್ಥಹಳ್ಳಿ ಪ್ರದೇಶದಲ್ಲಿ ಚಿತ್ರಮಂದಿರಗಳ ಮುಂದೆ ಅಭಿಮಾನಿಗಳು ಡಾನ್ಸ್, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು. ಆದರೆ ಈ ಸಡಗರ ಸಂಭ್ರಮದ ನಡುವೆ ಪುನೀತ್ರಂತಹ ಯುವಕನೊಬ್ಬರ ಜೀವ ರಸ್ತೆ ಅಪಘಾತಕ್ಕೆ ಬಲಿಯಾಗಿರುವುದು ಕುಟುಂಬ ಮತ್ತು ಅಭಿಮಾನಿಗಳು ಆತನ ಸ್ನೇಹಿತ ಬಳಗವನ್ನು ಬೇಸರಕ್ಕೀಡು ಮಾಡಿದೆ.
ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ ಬಸ್ ಚಾಲಕನ ನಿರ್ಲಕ್ಷ್ಯ ಅಥವಾ ಅತಿವೇಗ ಕಾರಣವೇ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬರಬೇಕಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ!
ಘಟನೆಯ ಬಗ್ಗೆ ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮೃತ ಪುನೀತ್ರ ಕುಟುಂಬಕ್ಕೆ ಆಘಾತವಾಗಿದ್ದು, ಸ್ಥಳೀಯರು ಸಂತಾಪ ಸೂಚಿಸಿದ್ದಾರೆ. ರಸ್ತೆ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿರುವ ಈ ಘಟನೆ, ಸಂಭ್ರಮಾಚರಣೆಯ ಸಮಯದಲ್ಲಿ ಎಚ್ಚರಿಕೆ ವಹಿಸುವ ಅಗತ್ಯವನ್ನು ಎತ್ತಿ ತೋರಿಸಿದೆ.
ದರ್ಶನ್ ಅಭಿಮಾನಿಗಳು ಸಿನಿಮಾ ಸಂಭ್ರಮವನ್ನು ಸುರಕ್ಷಿತತೆಯನ್ನು ಅರಿತು ಆಚರಿಸುವಂತೆ ಸಲಹೆ ನೀಡಲು. ಪುನೀತ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.


