ಮಂಗಳೂರು : ತಲ್ವಾರ್ ಹಿಡಿದು ಡ್ಯಾನ್ಸ್ ರೀಲ್ಸ್.! ಇಬ್ಬರು ಆರೋಪಿಗಳ ಬಂಧನ.
news.ashwasurya. in
ಅಶ್ವಸೂರ್ಯ/ಮಂಗಳೂರು: ತಲ್ವಾರ್ ಹಿಡಿದು ಡ್ಯಾನ್ಸ್ ರೀಲ್ಸ್ ಮಾಡಿದ ಮಂಗಳೂರಿನಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಗೆ ಭಯ ಹುಟ್ಟಿಸುವಂತಹ ವಿಷಯಗಳನ್ನು ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಬಂದರು ಜೆ.ಡಮ್ ರೋಡ್ನ ನಿವಾಸಿ ಅಮೀರ್ ಸುಹೇಲ್ (28) ಮತ್ತು ಕಾವೂರಿನ ಉರುಂದಾಡಿಗುಡ್ಡೆ ನಿವಾಸಿ ಸುರೇಶ್ (29) ಬಂಧಿತ ಆರೋಪಿಗಳು. ಇವರುಗಳು ತಲ್ವಾರ್ ಹಿಡಿದು ನೃತ್ಯ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಪ್ರಕರಣದ ಹಿನ್ನೆಲೆ :

ಡಿಸೆಂಬರ್ 13 ರಂದು ಸುರೇಶ್ “Suresh Psy” ಎಂಬ ಹೆಸರಿನ ತನ್ನ ಫೇಸ್ಬುಕ್ ಖಾತೆಯ ಮೂಲಕ, ಅಮೀರ್ ಸುಹೇಲ್ ತಲ್ವಾರ್ ಹಿಡಿದು ಹಾಡಿಗೆ ನೃತ್ಯ ಮಾಡಿದ ರೀಲ್ಸ್ ವಿಡಿಯೋವನ್ನು ‘VIBES’ ಎಂಬ ಶೀರ್ಷಿಕೆ ಮತ್ತು ಬಿಳಿ ಬಣ್ಣದ ಹಾರ್ಟ್ ಚಿಹ್ನೆಯೊಂದಿಗೆ ಸ್ಟೋರಿಗೆ ಹಂಚಿಕೊಂಡಿದ್ದನು. ಇಂತಹ ಕೃತ್ಯವು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಲು ಕಾರಣವಾಗುತ್ತದೆ ಎಂದು ಪರಿಗಣಿಸಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಈ ವಿಡಿಯೋ ಕುರಿತಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಗಂಭೀರ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಅಮೀರ್ ಸುಹೇಲ್ ಮತ್ತು ಸುರೇಶ್ ವಿರುದ್ಧ ಅಪರಾಧ ಕ್ರಮಾಂಕ 188/2025 ರ ಅಡಿಯಲ್ಲಿ ಕಲಂ. 352(2) ಭಾರತೀಯ ನ್ಯಾಯ ಸಂಹಿತೆ 2023, ಜೊತೆಗೆ ಕಲಂ. 4, 25(1ಬಿ) ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕಲಂ. 66 ಐ.ಟಿ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಡಿಸೆಂಬರ್ 13 ರಂದೇ ಪೊಲೀಸರು ಕಾರ್ಯಾಚರಣೆ ನಡೆಸಿ, ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ, ಅವರು ವಿಡಿಯೋ ಚಿತ್ರೀಕರಣಕ್ಕಾಗಿ ಬಳಸಿದ್ದ ತಲ್ವಾರ್ ಹಾಗೂ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಬಳಸಿದ ಮೊಬೈಲ್ ಫೋನ್ಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ. ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಲ್ಲಿ, ಕಾವೂರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ರಾಘವೇಂದ್ರ ಎಂ. ಬೈಂದೂರು, ಪೊಲೀಸ್ ಉಪನಿರೀಕ್ಷಕರಾದ ಮಲ್ಲಿಕಾರ್ಜುನ ಬಿರಾದಾರ್ ಹಾಗೂ ಠಾಣಾ ಸಿಬ್ಬಂದಿಗಳಾದ ಸಂಭಾಜಿ ಕದಂ, ಕೆಂಚನ ಗೌಡ, ಶರಣಪ್ಪ, ರಾಘವೇಂದ್ರ, ರಿಯಾಜ್ ಅವರ ತಂಡವು ಆರೋಪಿಗಳನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದೆ.


