ಕಿರುತೆರೆಯಲ್ಲಿ ಮತ್ತೆ ಕಂಗೊಳಿಸುತ್ತಿದೆ “ಪವರ್ ಟಿವಿ”
ಪವರ್ ಟಿವಿ ಪ್ರಸಾರ ಸ್ಥಗಿತಕ್ಕೆ ಹೈಕೋರ್ಟ್ ನೀಡಿದ್ದ ಆದೇಶ ತೆರವುಗೊಳಿಸಿದ ಸುಪ್ರೀಂಕೋರ್ಟ್: ಇದೊಂದು ರಾಜಕೀಯ ದ್ವೇಷದ ಕ್ರಮ ಎಂದ ಸುಪ್ರೀಂಕೋರ್ಟ್
ಅಶ್ವಸೂರ್ಯ/ಬೆಂಗಳೂರು: ಜುಲೈ ಕನ್ನಡದ ಸುದ್ದಿ ವಾಹಿನಿ ಪವರ್ ಟಿವಿ ಮೇಲೆ ರಾಜ್ಯ ಹೈಕೋರ್ಟ್ ನೀಡಿದ್ದ ಪ್ರಸಾರ ಸ್ಥಗಿತದ ಮಧ್ಯಂತರ ಆದೇಶವನ್ನು ಸುಪ್ರೀಂಕೋರ್ಟ್ ತೆರವುಗೊಳಿಸಿ ಆದೇಶ ಹೊರಡಿಸಿದೆ. ಈ ಮೂಲಕ ಕನ್ನಡ ಸುದ್ದಿ ವಾಹಿನಿ ಪವರ್ ಟಿವಿ ಮತ್ತು ಅದರ ಅಂಗಸಂಸ್ಥೆ ಮಿಟ್‌ಕಾಯಿನ್ ಇನ್‌ಫ್ರಾಸ್ಟ್ರಕ್ಚರ್‌ಗೆ ಸುಪ್ರೀಂ ಕೋರ್ಟ್ ಶುಕ್ರವಾರ ಮಧ್ಯಂತರ ಪರಿಹಾರವನ್ನು ನೀಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಪವರ್ ಟಿವಿ ಚಾನೆಲ್ ವಿರುದ್ಧ ತೆಗೆದುಕೊಂಡ ಕ್ರಮಗಳು ರಾಜಕೀಯ ದ್ವೇಷಕ್ಕೆ ಸಂಬಂಧಿಸಿವೆ ಎಂದು ಅಭಿಪ್ರಾಯಪಟ್ಟಿದೆ. ನಾವು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ಒಲವು ತೋರುತ್ತೇವೆ. ಇದನ್ನು ನಾವು ಹೆಚ್ಚು ಕೇಳುತ್ತೇವೆ, ಇದು ರಾಜಕೀಯ ದ್ವೇಷದ ಸರಳ ಪ್ರಕರಣದಂತೆ ಕಾಣುತ್ತದೆ ಮತ್ತು ಇದನ್ನು ರಕ್ಷಿಸದಿದ್ದರೆ ಈ ನ್ಯಾಯಾಲಯವು ತನ್ನ ಕರ್ತವ್ಯದಲ್ಲಿ ವಿಫಲಗೊಳ್ಳುತ್ತದೆ” ಎಂದು ಸಿಜೆಐ ಹೇಳಿದರು.
ಆದ್ದರಿಂದ ಪವರ್ ಟಿವಿಯ ಮೇಲ್ಮನವಿಯ ಕುರಿತು ನೋಟಿಸ್ ಜಾರಿ ಮಾಡುವ ಸಂದರ್ಭದಲ್ಲಿ ಸೋಮವಾರದವರೆಗೆ (ಜುಲೈ 15) ಎಲ್ಲಾ ಪ್ರಸಾರಗಳನ್ನು ಸ್ಥಗಿತಗೊಳಿಸುವ ಹೈಕೋರ್ಟ್‌ನ ಮಧ್ಯಂತರ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಪವರ್ ಟಿವಿ ಸುದ್ದಿ ವಾಹಿನಿಯು ಕೇಂದ್ರ ಸರಕಾರದಿಂದ ಚಾನೆಲ್ ಪ್ರಸಾರಕ್ಕೆ ಯಾವುದೇ ಲೈಸೆನ್ಸ್ ಹೊಂದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಚಾನೆಲ್ ಪ್ರಸಾರಕ್ಕೆ ನಿರ್ಬಂಧ ಹೇರಿತ್ತು. ಅದನ್ನು ಪ್ರಶ್ನಿಸಿ ಪವರ್ ಟೀವಿ ಸುಪ್ರೀಂಕೋರ್ಟ್ ನಲ್ಲಿ ಮೆಲ್ಮನವಿ ಸಲ್ಲಿಸಿತ್ತು. ಪವರ್ ಟಿವಿ ಪರ ಹಿರಿಯ ವಕೀಲರಾದ ರಂಜಿತ್ ಕುಮಾರ್, ಸುನಿಲ್ ಫೆರ್ನಾಂಡಿಸ್ ಮತ್ತು ವಕೀಲರಾದ ಮಿಥು ಜೈನ್ ಮತ್ತು ಸಂಚಿತ್ ಗರ್ಗಾ ಅವರು ವಾದ ಮಂಡಿಸಿದ್ದರು.