ಬಗರ್‌ಹುಕುಂ ಸಾಗುವಳಿದಾರರಿಗೆ ಅವಧಿಯನ್ನು 75 ವರ್ಷದಿಂದ 25 ವರ್ಷಕ್ಕೆ ಇಳಿಸಲು ತಿದ್ದುಪಡಿ ಇರಲಿ ಶಿಫಾರಸು ಕೂಡ ರಾಘವೇಂದ್ರ ಮಾಡಿಸಲಿಲ್ಲ ; ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್

ಬಗರ್‌ಹುಕುಂ ಸಾಗುವಳಿದಾರರಿಗೆ ಅವಧಿಯನ್ನು 75 ವರ್ಷದಿಂದ 25 ವರ್ಷಕ್ಕೆ ಇಳಿಸಲು ತಿದ್ದುಪಡಿ ಇರಲಿ ಶಿಫಾರಸು ಕೂಡ ರಾಘವೇಂದ್ರ ಮಾಡಿಸಲಿಲ್ಲ ; ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್

ASHWASURYA/SHIVAMOGGA

✍️ ಸುಧೀರ್ ವಿಧಾತ

ಅಶ್ವಸೂರ್ಯ/ಶಿವಮೊಗ್ಗ ; ಜನರ ಬದುಕಿಗೆ ಶಕ್ತಿ ಕೊಡದ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಏಕೆ ಮತ ಹಾಕಬೇಕು’ ಎಂದು ಶಿವಮೊಗ್ಗದಲ್ಲಿ ನೆಡೆದ ಪತ್ರಿಕಾಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಬಗರ್‌ಹುಕುಂ ಸಾಗುವಳಿದಾರರಿಗೆ ಅವಧಿಯನ್ನು 75 ವರ್ಷದಿಂದ 25 ವರ್ಷಕ್ಕೆ ಇಳಿಸಲು ತಿದ್ದುಪಡಿ ಇರಲಿ ಶಿಫಾರಸು ಕೂಡ ರಾಘವೇಂದ್ರ ಮಾಡಿಸಲಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಅವರದ್ದೇ ಸರ್ಕಾರ (ಬಿಜೆಪಿ) ಅಧಿಕಾರದಲ್ಲಿ ಇತ್ತು. ಸ್ವತಃ ಯಡಿಯೂರಪ್ಪ ಸಿಎಂ ಆಗಿದ್ದರೂ ಏನೂ ಮಾಡಲಿಲ್ಲ. ಭದ್ರಾವತಿಯ ಎರಡು ಕಾರ್ಖಾನೆಗಳಲ್ಲಿ ಒಂದು ಕಣ್ಣು ಮುಚ್ಚಿದರೆ ಮತ್ತೊಂದು ಕೊನೆಯ ಹಂತದಲ್ಲಿದೆ. ಅವುಗಳನ್ನು ಉಳಿಸಲು ಮುಂದಾಗಲಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.


ನಮ್ಮ ಗ್ಯಾರಂಟಿ (ಪ್ರಣಾಳಿಕೆ) ನಿಜ, ಬಿಜೆಪಿಯವರ ಭರವಸೆ ಬರೀ ಸುಳ್ಳು ಎಂದು ವಾಗ್ದಾಳಿ ನಡೆಸಿದ ಅವರು, ’ನಮ್ಮದು ಜನರ ಬದುಕಿನ ಪ್ರಶ್ನೆಯಾದರೆ, ಅವರು ಜನರ ಭಾವನೆಗಳ ಮೇಲೆ ಮತ ಕೇಳುತ್ತಿದ್ದಾರೆ‘ ಎಂದು ಹರಿಹಾಯ್ದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನಗೊಳಿಸಿ ಕೊಟ್ಟ ಮಾತಿನಂತೆ ನಡೆದಿರುವ ಕಾಂಗ್ರೆಸ್ ಬಸವಣ್ಣನವರ ನುಡಿದಂತೆ ನಡೆಯುವ ಆಶಯ ಈಡೇರಿಸಿದೆ. ಆದರೆ ಬಿಜೆಪಿಯವರು ಕೊಟ್ಟ ಮಾತು ಉಳಿಸಿಕೊಂಡಿದ್ದಾರಾ? ಆದ್ದರಿಂದ, ಇಲ್ಲಿ ಯಡಿಯೂರಪ್ಪ ಪುತ್ರನಿಗೆ ಏಕೆ ಮತ ಹಾಕಬೇಕು ಎಂದು ‍ಪ್ರಶ್ನಿಸಿದರು.
ನನ್ನ ರಾಜಕೀಯ ಗುರುಗಳ (ಬಂಗಾರಪ್ಪ) ಪುತ್ರಿಯ (ಗೀತಾ ಶಿವರಾಜಕುಮಾರ) ನಾಮಪತ್ರ ಸಲ್ಲಿಕೆಯಾಗಿದೆ. ಜಿಲ್ಲೆಯ ಜನರು ಗೀತಾ ಅವರಿಗೆ ಅವಕಾಶ ಕೊಡುವ ನಂಬಿಕೆ ಇದೆ. ಶಿವಮೊಗ್ಗದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಲಿದೆ ಎಂದರು.
ದೇಶದಲ್ಲಿ 400 ಸ್ಥಾನ ಗೆಲ್ಲಿಸಿ ಸಂವಿಧಾನ ಬದಲಾಯಿಸುತ್ತೇವೆ ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದರೂ ಆತನನ್ನು ಬಿಜೆಪಿ ಪಕ್ಷದಿಂದ ತೆಗೆದು ಹಾಕಲಿಲ್ಲ. ಜನಾಕ್ರೋಶದ ಕಾರಣ ಈಗ ಸಂವಿಧಾನ ಉಳಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಸ್ವಿಸ್‌ ಬ್ಯಾಂಕ್‌ನಲ್ಲಿನ ಕಪ್ಪು ಹಣ ಎಂದು ಬೋಗಸ್ ಪಟ್ಟಿ ಬಿಟ್ಟು ಪ್ರಚಾರ ತೆಗೊಂಡರು ಕಪ್ಪು ಹಣ ವಾಪಸ್ ತರಲಿಲ್ಲ. ಪ್ರತಿ ವ್ಯಕ್ತಿಯ ಬ್ಯಾಂಕ್ ಖಾತೆಗೆ15 ಲಕ್ಷ ಹಾಕುತ್ತೇವೆ ಅಂದರು ಹಾಕಲಿಲ್ಲ. ಉದ್ಯೋಗ ಕೊಡಲು ಅವರಿಂದ ಸಾಧ್ಯವಾಗಲಿಲ್ಲ. ಹೀಗಿದ್ದಾಗ ಬಿಜೆಪಿಗೆ ಏಕೆ ಮತ ಹಾಕಬೇಕು ಎಂದು ಪ್ರಶ್ನಿಸಿದರು.


ಭದ್ರಾ ಮೇಲ್ದಂಡೆ ಯೋಜನೆಗೆ ₹5300 ಕೋಟಿ ಕೊಡುವುದಾಗಿ ಕೇಂದ್ರ ಬಜೆಟ್‌ನಲ್ಲಿ ಪ್ರಕಟಿಸಿತು ಇದುವರೆಗೂ ಒಂದು ಪೈಸೆ ಕೊಡಲಿಲ್ಲ. ಆ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ಚಕಾರ ಎತ್ತುತ್ತಿಲ್ಲ. ಒಮ್ಮೆಯಾದರೂ ಸಂಸತ್ ಕಲಾಪದಲ್ಲಿ ರೈತರ ಪರವಾಗಿ ಮಾತನಾಡಿದ್ದರೆ ಉತ್ತರ ಕೊಡಪ್ಪ ರಾಘವೇಂದ್ರ ಎಂದು ಹೇಳಿದರು.
ಬಿಜೆಪಿ ಈ ಬಾರಿ 14 ಮಂದಿ ಹಾಲಿ ಸಂಸದರಿಗೆ ಟಿಕೆಟ್ ಕೊಟ್ಟಿಲ್ಲ. ಅವರ ಮುಖ ಸರಿ ಇಲ್ಲವೇ? ಅವರಿಗೆಲ್ಲ ಏನು ಕಡಿಮೆ ಆಗಿತ್ತು. ಏನು ತಪ್ಪು ಮಾಡಿದ್ದರು ಎಂದು ವ್ಯಂಗ್ಯವಾಡಿದರು.


ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧುಬಂಗಾರಪ್ಪ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ,
ನಟ ಶಿವರಾಜಕುಮಾರ, ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಭೀಮಣ್ಣ ನಾಯ್ಕ್, ಬಿ.ಕೆ.ಸಂಗಮೇಶ್, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಕೆಪಿಸಿಸಿ ಕಾರ್ಯಧ್ಯಕ್ಷ ಮಂಜುನಾಥ ಭಂಡಾರಿ, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ, ಸೂಡ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಮಲೆ‌ನಾಡು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಎಂ.ಶ್ರೀಕಾಂತ್, ಎಚ್.ಸಿ.ಯೋಗೀಶ್, ಎನ್.ರಮೇಶ್, ಶ್ರೀನಿವಾಸ ಕರಿಯಣ್ಣ ಇದ್ದರು.

Leave a Reply

Your email address will not be published. Required fields are marked *

Optimized by Optimole
error: Content is protected !!