ಶಿವಮೊಗ್ಗದಲ್ಲಿ ಗೀತಾ ಶಿವರಾಜ್‌ಕುಮಾರ್ ನಾಮಪತ್ರ ಸಲ್ಲಿಕೆ,ಪತಿ ಶಿವರಾಜಕುಮಾರ್ ಸಹೋದರ ಮಧು ಬಂಗಾರಪ್ಪ ಸಾಥ್
ASHWASURYA/SHIVAMOGGA
✍️ ಸುಧೀರ್ ವಿಧಾತ
ಅಶ್ವಸೂರ್ಯ/ಶಿವಮೊಗ್ಗ; ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಕಾವು ದಿನದಂದ ದಿನಕ್ಕೆ ರಂಗೇರುತ್ತಿದೆ. ಶಿವಮೊಗ್ಗಕ್ಷೇತ್ರದಲ್ಲಿ ಗೀತಾ ಶಿವರಾಜಕುಮಾರ್ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಯ ಅಖಾಡಕ್ಕೆ ಇಳಿದಿದ್ದಾರೆ. ಅವರು ಸೋಮವಾರ ಏಪ್ರಿಲ್ 15 ರಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಗೀತಾ ಶಿವರಾಜಕುಮಾರ್ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಪತಿ ಶಿವರಾಜ್ ಕುಮಾರ್, ಸಚಿವ ಮಧು ಬಂಗಾರಪ್ಪ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಮಂಜುನಾಥ್ ಭಂಡಾರಿ ಜೋತೆಗಿದ್ದರು. ನಿರ್ಮಾಪಕರಾದ ಆರ್ ಚಂದ್ರು ಹಾಗೂ ಕೆಪಿ ಶ್ರೀಕಾಂತ್ ಕೂಡ ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನಾಮಪತ್ರ ಸ್ವೀಕರಿಸಿದರು. ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಭಾರಿ ಸಂಖ್ಯೆಯಲ್ಲಿ ಬೆಂಬಲಿಗರು ಜಮಾಯಿಸಿದ್ದರು.
ನಾಮಪತ್ರ ಸಲ್ಲಿಕೆ ನಂತರ ಇಲ್ಲಿನ ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಮೆರವಣಿಗೆ ಆರಂಭಗೊಂಡಿತು. ಮೆರವಣಿಗೆಯಲ್ಲಿ 30,000 ಕ್ಕೂ ಹೆಚ್ಚು ಜನರು ಸೇರಿದ್ದರು.
ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಸಾವಿರಾರು ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು. ಬಿಸಿಲಿನ ತಾಪವನ್ನು ಲೆಕ್ಕಿಸದೆ ಮೆರವಣಿಗೆಯಲ್ಲಿ ನೆರೆದಿದ್ದ ಜನರು ಹೆಜ್ಜೆ ಹಾಕಿದರು. ಮೆರವಣಿಗೆ ಕೋಟ್ ಸರ್ಕಲ್ ಬಳಿಗೆ ಬಂದಾಗ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಗಮಿಸಿ ಮೆರವಣಿಗಗೆ ಮೆರಗನ್ನು ನೀಡಿದರು ಒಂದೆರೆಡು ನಿಮಿಷ ಮಾತನಾಡಿ ಅಭ್ಯರ್ಥಿ ಪರ ಮತಯಾಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ನಟ ಶಿವರಾಜಕುಮಾರ್, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಭೀಮಣ್ಣ ನಾಯ್ಕ್, ಬಿ.ಕೆ.ಸಂಗಮೇಶ್, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಕೆಪಿಸಿಸಿ ಕಾರ್ಯಧ್ಯಕ್ಷ ಮಂಜುನಾಥ ಭಂಡಾರಿ,ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ, ಬಿ.ಕೆ.ಸುಕುಮಾರ್ ಶೆಟ್ಟಿ, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ, ಸೂಡ ಅಧ್ಯಕ್ಷರಾದ ಎಚ್.ಎಸ್.ಸುಂದರೇಶ್, ಕಾಂಗ್ರೆಸ್ ಮುಖಂಡರಾದ ಎಂ.ಶ್ರೀಕಾಂತ್, ಎಚ್.ಸಿ.ಯೋಗೀಶ್, ಎನ್.ರಮೇಶ್,ಆರ್ ಪ್ರಸನ್ನಕುಮಾರ್, ಶ್ರೀನಿವಾಸ ಕರಿಯಣ್ಣ ಇನ್ನೂ ಮುಂತಾದ ಕಾಂಗ್ರೆಸ್ ಮುಖಂಡರು ಮೆರವಣಿಗೆಯಲ್ಲಿ ಉಪಸ್ಥಿತರಿದ್ದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರ ರಾಷ್ಟ್ರದಲ್ಲೆ ಪ್ರತಿಷ್ಠಿತ ಕ್ಷೇತ್ರವೆಂದು ಗುರುತಿಸಿಕೊಂಡಿದೆ. ಈ ಬಾರಿ ನೋಡಲು ತ್ರಿಕೋನ ಸ್ಫರ್ಧೆ ಎನಿಸಿದರು ನೆರಾ ಹಣಾಹಣಿ ಸ್ಫರ್ಧೆ ನೆಡಯಲಿದೆ. ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ನವರ ಮಗಳಾದ
ಗೀತಾ ಶಿವರಾಜ್‌ಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪನವರ ಪುತ್ರ ಬಿವೈ ರಾಘವೇಂದ್ರ ವಿರುದ್ಧ ಕಣಕ್ಕೆ ಇಳಿದಿದ್ದಾರೆ ಇನ್ನೂ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಈಶ್ವರಪ್ಪ ಕೂಡ ಚುನಾವಣೆಯ ಕಣದಲ್ಲಿದ್ದಾರೆ. ಘಟಾನುಘಟಿಗಳ ಸ್ಪರ್ಧಿಯಿಂದಾಗಿ ಶಿವಮೊಗ್ಗ ಹೈವೋಲ್ಟೇಜ್ ಕ್ಷೇತ್ರವಾಗಿದೆ. ಗೀತಾ ಪರ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮತ್ತು ಸಹೋದರ ಸಚಿವ ಮಧು ಬಂಗಾರಪ್ಪ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಈ ಹಿಂದೆ ಕೂಡ ಶಿವಮೊಗ್ಗದಿಂದ ಗೀತಾ ಶಿವರಾಜ್‌ಕುಮಾರ್ ಜೆಡಿಎಸ್ ಪಕ್ಷದಿಂದ ಸ್ಫರ್ದೆಮಾಡಿ ಸೋತಿದ್ದರು.
ಈ ಬಾರಿ ಗೆದ್ದೆ ಗೆಲ್ಲುವ ವಿಶ್ವಾಸದೊಂದಿಗೆ ಆಡಳಿತರೂಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯ ಕಣದಲ್ಲಿದ್ದಾರೆ.
ಪತಿ ಶಿವರಾಜಕುಮಾರ್ ಜೋತೆಗೆ ಗೀತಾ ಶಿವರಾಜಕುಮಾರ್ ಭರ್ಜರಿ ಪ್ರಚಾರಕ್ಕೆ ಮುಂದಾಗಿದ್ದಾರೆ ಈ ಬಾರಿ ಗೆದ್ದೆ ಗೆಲ್ಲುವುದಾಗಿ ವಿಶ್ವಾಸ ಹೊಂದಿದ್ದಾರೆ. ದೊಡ್ಮನೆ ಸೊಸೆ , ನಿರ್ಮಾಪಕಿ ಹಾಗೂ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಶಿವಮೊಗ್ಗ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಮತಯಾಚನೆ ಮುಂದಾಗಿದ್ದಾರೆ. ಪತ್ನಿ ಪರ ಸ್ಯಾಂಡಲ್ವುಡ್ ಸೂಪರ್ ಸ್ಟಾರ್ ನಟ ಶಿವರಾಜಕುಮಾರ್ ಕೂಡ ಅಬ್ಬರದ ಪ್ರಚಾರಕ್ಕೆ ಮುಂದಾಗಿದ್ದಾರೆ. ಪತ್ನಿ ಪರ ಪ್ರಚಾರದಲ್ಲಿ ಶಿವಣ್ಣ
ನನ್ನ ಹೆಂಡತಿಗೆ ನಾನೇ ಗ್ಯಾರಂಟಿ
ಶಿವಮೊಗ್ಗದಲ್ಲಿ ಪತ್ನಿ ಗೀತಾ ಪರ ಮತಯಾಚಿಸಿದ ಶಿವರಾಜ್‌ಕುಮಾರ್, ಹೆಣ್ಣು ಮಕ್ಕಳೇ ಸ್ಟ್ರಾಂಗ್ ಗುರು ಎನ್ನುತ್ತಾ ನನ್ನ ಹೆಂಡತಿಯನ್ನು ಗೆಲ್ಲಿಸಿ ಎಂದಿದ್ದಾರೆ. ಗೀತಾ ಗೆದ್ರೆ ನಾನೂ ಕೆಲಸ ಮಾಡಿಸಿಯೆ ಮಾಡಿಸುತ್ತೇನೆ. ನನ್ನ ಹೆಂಡತಿಗೆ ನಾನೇ ಗ್ಯಾರಂಟಿ, ನನ್ನ ಹೆಂಡತಿ ಕೆಲಸ ಮಾಡೇ ಮಾಡುತ್ತಾಳೆ ಎಂದು ನಾನು ಗ್ಯಾರಂಟಿ ಕೊಡುತ್ತೇನೆ ಎಂದು ಶಿವಣ್ಣ ಚುನಾವಣೆಯ ಪ್ರಚಾರದಲ್ಲಿ ಹೇಳಿದ್ರು.
ವಿರೋಧಿಗಳಿಗೆ ಟಾಂಗ್ ಕೊಟ್ಟ ಶಿವಣ್ಣ
ಹೆಣ್ಣುಮಕ್ಕಳು ಎಲ್ಲಾ ರಂಗದಲ್ಲೂ ಇದ್ದಾರೆ. ಕೂಲಿ ಕೆಲಸ ಮಾಡುವುದರಿಂದ ಹಿಡಿದು ಫ್ಲೈಟ್ ಓಡಿಸುವವರೆಗೂ ಎಲ್ಲಾ ಕ್ಷೇತ್ರಗಳಲ್ಲೂ ಹೆಣ್ಣು ಮಕ್ಕಳು ಕೆಲಸ ಮಾಡ್ತಿದ್ದಾರೆ. ಇನ್ನೂ ಶಿವಮೊಗ್ಗದಲ್ಲಿ ಸ್ಪರ್ಧಿಸಿರುವ ಗೀತಾಗೆ ಇಲ್ಲಿ ಎಲ್ಲಿದೆ ನಿಮ್ಮ ಮನೆ ಅಂತ ಕೇಳ್ತಿದ್ದಾರೆ. ಗೀತಾ ಹುಟ್ಟಿ ಬೆಳೆದಿದ್ದು ಇಲ್ಲೇ, ಇಲ್ಲೇ ಹುಟ್ಟಿ ಬೆಳದ ಮೇಲೆ ಅವರ ಮನೆಯೂ ಇಲ್ಲೇ ಇರುತ್ತೆ ಎನ್ನುವ ಮೂಲಕ ವಿರೋಧಿಗಳಿಗೆ ಶಿವರಾಜ್ ಕುಮಾರ್ ಖಡಕ್ ವಾರ್ನಿಂಗ್ ಕೊಟ್ಟಿದ್ದರು.
ಗೀತಾ ಶಿವರಾಜ್‌ಕುಮಾರ್ ಭರ್ಜರಿ ಮತಬೇಟೆ
ಶಿವಣ್ಣ ದಂಪತಿ ಶಿವಮೊಗ್ಗ ಕ್ಷೇತ್ರದಲ್ಲಿ ಭರ್ಜರಿ ಮತಬೇಟೆಗೆ ಮುಂದಾಗಿದ್ದಾರೆ. ಯುಗಾದಿ ಹಬ್ಬದಂದು ಲಂಬಾಣಿ ತಾಂಡದ ಸಂಸ್ಕೃತಿಯ ಸಾಂಪ್ರದಾಯಿಕ ಉಡುಗೆ ತೊಟ್ಟು ರೋಡ್ ಶೋ ನಡೆಸಿದ್ರು. ತೆರೆದ ವಾಹನದಲ್ಲಿ ಪತಿ ಶಿವರಾಜ್‌ಕುಮಾರ್ ಜೊತೆ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ್ದರು.
ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಭರ್ಜರಿ ಪ್ರಚಾರಕ್ಕೆ ಮುಂದಾಗಿದೆ ಇವರ ಜೋತೆಗೆ ನಾನೇನು ಕಮ್ಮಿ ಇಲ್ಲ ಎನ್ನುವ ಮಟ್ಟಕ್ಕೆ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಚುನಾವಣೆಯ ಕಣದಲ್ಲಿರುವ ಕೆ ಎಸ್ ಈಶ್ವರಪ್ಪ ಕೂಡಾ ಕ್ಷೇತ್ರ ವ್ಯಾಪ್ತಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಭರ್ಜರಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಇಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಬರುವ ಜನರೆಲ್ಲ ನಮ್ಮ ಮತದಾರರು ಎಂದು ತಿಳಿಯುವುದು ಮುರ್ಖತನ.? ಅಂತಿಮವಾಗಿ ವಿಜಯಮಾಲೆ ಯಾರ ಕೊರಳಿಗೆ ಎನ್ನುವುದನ್ನು ನಿರ್ಧರಿಸಲು ಈಗಾಗಲೇ ಸಾಧ್ಯವಿಲ್ಲ ಎನ್ನುವುದು ಮಾತ್ರ ಅಷ್ಟೇ ಸತ್ಯ.! ಒಟ್ಟಿನಲ್ಲಿ ಪ್ರತಿಷ್ಠಿತ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ರಣಕಹಳೆ ಮೊಳಗುತ್ತಿದೆ….