ಯಡಿಯೂರಪ್ಪ ಮತ್ತವರ ಪುತ್ರರ ವಿರುದ್ದ ಮತ್ತೊಮ್ಮೆ ಹರಿಹಾಯ್ದ ಕೆ ಎಸ್ ಈಶ್ವರಪ್ಪ
ASHWASURYA/SHIVAMOGGA
✍️ ಸುಧೀರ್ ವಿಧಾತ
ಅಶ್ವಸೂರ್ಯ/ಶಿವಮೊಗ್ಗ; ಬಿ.ವೈ.ರಾಘವೇಂದ್ರ ಚುನಾವಣೆಯಲ್ಲಿ ಸೋಲುತ್ತಾನೆ, ಬಿ.ವೈ. ವಿಜಯೇಂದ್ರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾನೆ, ಬಿಜೆಪಿಯಲ್ಲಿ ರಾಜಕಾರಣ ಶುದ್ಧಿಯಾಗುತ್ತದೆ. ಕುಟುಂಬ ರಾಜಕಾರಣ ಅಂತ್ಯವಾಗುತ್ತದೆ. ಹಿಂದುತ್ವವೇ ವಿಜೃಂಭಿಸುತ್ತದೆ. ಕೆ.ಎಸ್.ಈಶ್ವರಪ್ಪ ಗೆದ್ದು ಮೋದಿಯನ್ನು ಮತ್ತೇ ಪ್ರಧಾನಿಯನ್ನಾಗಿ ಮಾಡುತ್ತಾರೆ. ಇದು ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಈಗಾಗಲೇ ನಾಮಪತ್ರ ಸಲ್ಲಿಸಿ ವಿರೋಧಿಗಳಿಗೆ ತೋಡೆ ತಟ್ಟಿರುವ ಕೆ.ಎಸ್. ಈಶ್ವರಪ್ಪನವರ ಮಾತುಗಳು.
ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಅವರು ಮತ್ತೇ ಯಡಿಯೂರಪ್ಪ ಮತ್ತು ಅವರ ಮಕ್ಕಳ ವಿರುದ್ಧ ವಾಗ್ದಾಳಿ ನಡೆಸಿದರು ಈಶ್ವರಪ್ಪ, ನನ್ನ ಬಗ್ಗೆ ಬಿ.ವೈ.ರಾಘವೇಂದ್ರ ಕ್ಷೇತ್ರದಲ್ಲಿ ಹರಿದಾಡುತ್ತಿರುವ ಹಾವು ಚೇಳುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಕಾರ್ಯಕರ್ತರಿಗೆ ತಿಳಿಸಿದ್ದಾರಂತೆ, ಆದರೆ ನಮ್ಮ ಕಾರ್ಯಕರ್ತರು ಹಾವು ಚೇಳುಗಳಲ್ಲ, ಅವರು ಹಿಂದು ಹುಲಿಗಳು.ಯಾರ ಮಾತಿಗೂ ಜಗ್ಗುವುದು ಇಲ್ಲ, ಬಗ್ಗುವುದು ಇಲ್ಲ, ಚುನಾವಣೆ ಚಿಹ್ನೆಗಾಗಿ ನಾವು ಈಗ ಎದುರು ನೋಡುತ್ತಿದ್ದೇವೆ. ನಮಗೆ ಏ.22 ರಂದು ಚಿಹ್ನೆ ಸಿಗಲಿದೆ ಆಗ ನಾವು ಗೆಲುವಿಗೆ ಇನ್ನೂ ಹತ್ತಿರವಾಗುತ್ತೇವೆ. ನಮ್ಮ ಹಿಂದುತ್ವದ ಹುಲಿಗಳ ಅರ್ಭಟ ಅವರಿಗೆ ತಿಳಿದಿಲ್ಲ ಎಂದರು.
ನಿನ್ನೆ ನಾಮಪತ್ರ ಸಲ್ಲಿಸುವಾಗ ನಿರೀಕ್ಷೆ ಮೀರಿ ಕಾರ್ಯಕರ್ತರು, ಬೆಂಬಲಿಗರು, ಪ್ರೀತಿ ಪಾತ್ರರು ನನ್ನೊಡನೆ ಬಂದಿದ್ದಾರೆ. ನನಗೆ ಶಕ್ತಿ ತುಂಬಿದ್ದಾರೆ. ನಾವೆಲ್ಲ ಈಶ್ವರಪ್ಪನವರ ಜೊತೆ ಇದ್ದೇವೆ ಎಂದು ಹೇಳಿದ್ದಾರೆ. ನಾಮಪತ್ರ ಸಲ್ಲಿಸುವುದಿಲ್ಲ ಎಂದು ಅನೇಕರು ಹೇಳಿದ್ದರು. ಈಗ ಅವರಿಗೆ ಅರ್ಥವಾಗಿರಬೇಕು. ಈ ಈಶ್ವರಪ್ಪ ಯಾರು ಎಂದು. ವಿಜಯೇಂದ್ರ ಅವರು ಈಶ್ವರಪ್ಪನವರು ನಾಮಪತ್ರವನ್ನು ವಾಪಾಸ್ಸು ತೆಗೆದುಕೊಳ್ಳುತ್ತಾರಂತೆ ಎಂದಿದ್ದಾರೆ. ಇಂತಹ ಅಪಪ್ರಚಾರಕ್ಕೆ ನಾನೇನು ಬಗ್ಗುವುದಿಲ್ಲ. ಲಕ್ಷಾಂತರ ಜನರ ಅಪೇಕ್ಷೆಯ ಮೇರೆಗೆ ದೃಢವಾದ ಹೆಜ್ಜೆ ಇಟ್ಟಿದ್ದೇನೆ. ಅದನ್ನು ಹಿಂದೆ ತೆಗೆಯುವ ಮಾತೆ ಇಲ್ಲಾ. ನನ್ನನ್ನು ನಂಬಿ ಬಂದವರಿಗೆ ನಿರಾಶೆಯನ್ನು ಮಾಡುವುದಿಲ್ಲ ಎಂದರು.
ಬಿಜೆಪಿಯವರು, ಕಾಂಗ್ರೆಸ್ ನವರೋ ಗೊತ್ತಿಲ್ಲ ನಾಮಪತ್ರ ಸಲ್ಲಿಸಲು ಬರುವ ಬಸ್‌ಗಳನ್ನೇ ತಡೆದು ವಾಪಾಸ್ಸು ಕಳಿಸಿದ್ದಾರೆ. ಬಸ್ ಮಾಲೀಕರನ್ನು ಹೆದರಿಸಿದ್ದಾರೆ. ಯಾರೇ ಆಗಲಿ ನೇರ ಚುನಾವಣೆ ಮಾಡಬೇಕು. ಹೀಗೆ ಅಡ್ಡದಾರಿ ಹಿಡಿಯಬಾರದು. ಆದರೂ ಸುಮಾರು 25 ಸಾವಿರಕ್ಕೂ ಹೆಚ್ಚು ಜನರು, ತಮ್ಮ ತಮ್ಮ ವಾಹನಗಳಲ್ಲಿಯೇ ಬಂದು ಭಾಗಿಯಾಗಿದ್ದಾರೆ. ನಿಜಕ್ಕೂ ಅಪ್ಪ ಮಕ್ಕಳಿಗೆ ಈಗಿನಿಂದ ಭಯ ಶುರುವಾಗಿದೆ ಎಂದರು.
ಮಧುಬಂಗಾರಪ್ಪನವರು ನಿಮ್ಮನ್ನು ಬಿಜೆಪಿಯ ಬಿ ಟೀಮ್ ಎಂದು ಕರೆದಿದ್ದಾರಲ್ಲ ಎಂಬ ಪ್ರಶ್ನೆಗೆ ಕಟುವಾಗಿ ಉತ್ತರಿಸಿದ ಅವರು, ನನ್ನದು ಬಿ ಟೀಮ್ ಅಲ್ಲ. ನಾನು ಯಾವಾಗಲು ಎ ಟೀಮೇ. ನಾನೇ ಒರಿಜಿನಲ್ ಬಿಜೆಪಿ. ಹಾಗಾಗಿಯೇ ನನ್ನ ಜೊತೆ ಕೇಂದ್ರದ ನಾಯಕರು ಮಾತನಾಡಿಲ್ಲ, ನಾನು ಚುನಾವಣೆಗೆ ನಿಲ್ಲುವ ಬಯಕೆ ಮೋದಿಯವರದ್ದಾಗಿದೆ ಎಂದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ಧರಾಮಯ್ಯ ಮತ್ತು ಯಡಿಯೂರಪ್ಪ ನವರು
ಚುನಾವಣೆಯ ಹೊಂದಾಣಿಕೆ ರಾಜಕಾರಣ ಮಾಡಿದ್ದರು ಈ ಕಾರಣದಿಂದಲೇ ಗೆಲ್ಲಬೇಕಾಗಿದ್ದ ನಾಗರಾಜಗೌಡ ಸೋಲಿನಂಚಿಗೆ ಸರಿದದ್ದು ಎಂದು ಪುನರುಚ್ಛರಿಸಿದರು ಈಶ್ವರಪ್ಪ, ಅವರು ಎನೆ ಹೇಳಲಿ ಯಡಿಯೂರಪ್ಪನವರ ಜೊತೆ ಹೊಂದಾಣಿಕೆ ಮಾಡಿಕೊಂಡೇ ಗೀತಾ ಶಿವರಾಜ್‌ಕುಮಾರ್ ಅವರನ್ನು ಚುನಾವಣೆಗೆ ಕರೆತಂದಿದ್ದಾರೆ ಎಂಬ ಗಂಭೀರ ಆರೋಪ ಮಾಡಿದರು. ಇದು ಹೊಂದಾಣಿಕೆ ರಾಜಕಾರಣವಲ್ಲದೇ ಮತ್ತೇನು ಎಂದು ಪ್ರಶ್ನೆ ಮಾಡಿದ ಅವರು ಗೀತಾ ಶಿವರಾಜ್‌ಕುಮಾರ್ ನನ್ನ ಸಹೋದರಿ ಇದ್ದ ಹಾಗೆ. ಅವರ ಬಗ್ಗೆ ನಾನೇನು ಮಾತನಾಡುವುದಿಲ್ಲ. ಆದರೆ ಮಧು ಬಂಗಾರಪ್ಪ ಇದಕ್ಕೆ ಉತ್ತರ ಹೇಳಲಿ ಎಂದರು.