ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ. ಅದೇ ರೀತಿ ಕೇಂದ್ರದಲ್ಲಿಯೂ ಕಾಂಗ್ರೆಸ್ ಆಡಳಿತಕ್ಕೆ ಬಂದರೆ, ಕ್ಷೇತ್ರದ ತ್ವರಿತಗತಿಯ ಅಭಿವೃದ್ಧಿ ಸಾಧ್ಯವಾಗಲಿದೆ
ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಬೃಹತ್ ಬಹಿರಂಗ ಸಭೆಯಲ್ಲಿ ಶಾಸಕ ಸಂಗಮೇಶ್ ಹೇಳಿಕೆ ಕೇಂದ್ರದಲ್ಲಿ ಆಡಳಿತ ಹಿಡಿದರೆ, ಕ್ಷೇತ್ರದ ಅಭಿವೃದ್ಧಿ ಸಾಧ್ಯ
ಅಶ್ವಸೂರ್ಯ/ಭದ್ರಾವತಿ: ‘ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿ ಆಗಲಿದೆ’ ಎಂದು ಶಾಸಕ ಬಿ.ಕೆ.ಸಂಗಮೇಶ್ ಹೇಳಿದರು.
ತಾಲ್ಲೂಕಿನ ಅಂತರಗಂಗೆ, ಬಾರಂದೂರು, ಹಿರಿಯೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಬೃಹತ್ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ. ಅದೇ ರೀತಿ ಕೇಂದ್ರದಲ್ಲಿಯೂ ಕಾಂಗ್ರೆಸ್ ಆಡಳಿತಕ್ಕೆ ಬಂದರೆ, ಕ್ಷೇತ್ರದ ತ್ವರಿತಗತಿಯ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.
ಜಿಲ್ಲೆಗೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಅಪಾರ ಕೊಡುಗೆ ನೀಡಿದ್ದಾರೆ. ತಾಲ್ಲೂಕಿನಲ್ಲಿ ನಾಲ್ಕು ಬಾರಿ ಶಾಸಕನಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದೀರ. ಅದೇ ರೀತಿ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರಿಗೂ ಅವಕಾಶ ಮಾಡಿಕೊಡಿ ಎಂದು ಕೋರಿದರು.
ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಮಾತನಾಡಿ, ಅಯೋಧ್ಯೆಯ ರಾಮ ಮಂದಿರವನ್ನು ನಾವೆಲ್ಲರೂ ಸೇರಿ ಕಟ್ಟಿದ್ದೇವೆ. ಬಿಜೆಪಿಯವರು ಅಲ್ಲ. ಬಿಜೆಪಿಯವರು ಮೇಸ್ತ್ರಿ ಕೆಲಸ ಮಾಡಿದ್ದಾರೆ ಅಷ್ಟೇ. ಆದರೆ, ಇಲ್ಲಿ ಬಿಜೆಪಿ ನಾಯಕರು ದೇವರ ಹೆಸರಲ್ಲಿ ಮತಯಾಚನೆಗೆ ಮುಂದಾಗಿದ್ದಾರೆ. ಇದು ತಪ್ಪು ಎಂದರು.
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ರೈತರ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುವ ಮೂಲಕ, ಸಾಮಾನ್ಯ ಜನರು ಉಸಿರಾಡುಂತಹ ವಾತಾವರಣ ಸೃಷ್ಟಿಸಿ ಹೋಗಿದ್ದಾರೆ. ಅದರ ಋಣ ತೀರಿಸಲು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರಿಗೆ ಮತ ನೀಡಿ ಆಶೀರ್ವದಿಸಬೇಕು ಎಂದು ಕೋರಿದರು.
ಅಂತರಗಂಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಪೂರ್ಣಗೊಂಡಿದೆ. ಇಲ್ಲಿ ಕಾಂಗ್ರೆಸ್ ಸರ್ಕಾರದ ಯೋಜನೆಗಳು ಮಾತ್ರ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಆದರೆ, ಬಿಜೆಪಿ ಆಡಳಿತಕ್ಕೆ ಬಂದು ದಶಕ ಮಾತ್ರ ಕಳೆದಿವೆ. ಆದರೆ, ಇಲ್ಲಿ ಬಿಜೆಪಿ ಆಡಳಿತದಿಂದ ದೇಶ ದುಸ್ಥಿತಿಗೆ ತಲುಪಿದೆ ಎಂದು ದೂರಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರಿಗೆ ಮತ ನೀಡಿ ಹರಸಬೇಕು. ಬಿಜೆಪಿ ಪಕ್ಷವನ್ನು ನಂಬಿಕೊಂಡರೆ, ಬಡವರಿಗೆ ಆಶಾಕಿರಣವಾಗಿರುವ ಅನೇಕ ಯೋಜನೆಗಳಿಗೆ ಬಿಜೆಪಿಯಿಂದ ಪೆಟ್ಟು ಬೀಳಲಿದೆ ಎಂದರು.
ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಎಸ್. ಕುಮಾರ್ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಮತ ಹಾಕಿ ಗೆಲ್ಲಿಸಿದ್ದೇವೆ. ಆದರೆ, ತಾಲ್ಲೂಕಿಗೆ ಅವರ ಕೊಡುಗೆ ಶೂನ್ಯ. ಭದ್ರಾವತಿ ತಾಲ್ಲೂಕಿಗೆ ಮಲತಾಯಿ ಧೋರಣೆ ಮಾಡಿದ್ದಾರೆ. ಚುನಾವಣೆ ಸಮಯದಲ್ಲಿ ಮಾತ್ರ ರಾಘವೇಂದ್ರ ಅವರು ಮತದಾರರ ಎದುರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಇದಕ್ಕೆ ಜನರು ಕರಗಬಾರದು ಎಂದರು.
ಲೋಕಸಭಾ ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ನಟ ಶಿವರಾಜಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮಣಿಶಂಕರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್, ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ, ನಗರ ಸಭೆ ಸದಸ್ಯ ಬಿ.ಕೆ.ಮೋಹನ್, ಕಾಂಗ್ರೆಸ್ ಮುಖಂಡ ಬಿ.ಎಸ್.ಗಣೇಶ್, ಭದ್ರಾವತಿ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಷಡಾಕ್ಷರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಬಲ್ಕೀಷ್ ಬಾನು, ಜಿ.ಪಲ್ಲವಿ ಸೇರಿ ಕಾರ್ಯಕರ್ತರು ಇದ್ದರು.