ಕೋಟೆ ಶ್ರೀ ಮಾರಿಕಾಂಬಾ ಜಾತ್ರೆ ಹಿನ್ನಲೆಯಲ್ಲಿ ಕೋಟೆ ಶ್ರೀ ಮಾರಿಕಾಂಬಾ ದೇವಾಲಯದ ಆವರಣದಲ್ಲಿ ಸಾರು ಹಾಕುವ ಕಾರ್ಯಕ್ರಮಕ್ಕೆ ಚಾಲನೆ:ಮಾರ್ಚ್ 12 ರಿಂದ 16 ರ ವರೆಗೆ ಮಾರಿಕಾಂಬೆಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆಡೆಯಲಿದೆ.
news.ashwasurya.in
✍️SUDHIR VIDHATA
ಅಶ್ವಸೂರ್ಯ/ಶಿವಮೊಗ್ಗ
ರಾಜ್ಯದ ಸುಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಶ್ರೀ ಕೋಟೆ ಮಾರಿಕಾಂಬ ದೇವಿಯ ಜಾತ್ರೆಗೆ ಸಾರ ಹಾಕಲಾಗಿದೆ. ಮಾರ್ಚ್ 12ರಿಂದ 16ರ ವರೆಗೆ ಐದು ದಿನಗಳ ಕಾಲ ಅದ್ದೂರಿಯಾಗಿ ನಡೆಯುವ ಅಮ್ಮನವರ ಜಾತ್ರಾಮಹೋತ್ಸವಕ್ಕೆ ಸಾರ್ವಜನಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಮ್ಮನ ಕೃಪೆಗೆ ಪಾತ್ರರಾಗಲೆಂದು ಇಂದು ದೇವಳದ ಸಮಿತಿಯ ಪರವಾಗಿ ಮಾರಿ ಅಮನವರ ಜಾತ್ರೆಯ ವಿಷಯವನ್ನು ಸಾರ್ವಜನಿಕರಿಗೆ ಮುಟ್ಟಿಸಲು ದೇವಸ್ಥಾನದ ಅಂಗಳದಲ್ಲಿ ಮಾರಿ ಸಾರುವ ಮುಖಾಂತರ ಆರಂಭಿಸಲಾಯಿತು. ಈ ಮಾರಿ ಸಾರುವ ಕಾರ್ಯಕ್ರಮದಲ್ಲಿ ಮಾರಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷರಾದ ಎಸ್ ಕೆ ಮರಿಯಪ್ಪ ಮತ್ತು ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಎನ್ ಮತ್ತು ಸಮಿತಿಯ ಎಲ್ಲಾ ಸದಸ್ಯರು ಹಾಜರಿದ್ದು ಸಾರುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಬಾರಿ ಮಾರ್ಚ್ 12 ರ ಮಂಗಳವಾರ ಮುಂಜಾನೆ ಅಮ್ಮನವರನ್ನು 5 ಗಂಟೆಗೆ ಸಮಿತಿಯವರ ಪಾರುಪತ್ಯದಲ್ಲಿ ಮಂಗಳವಾದ್ಯದೊಂದಿಗೆ ಬಿ.ಬಿ.ರಸ್ತೆಯಲ್ಲಿನ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂಬದವರನ್ನು ಪೂಜೆಗೆ ಆಹ್ವಾನಿಸಲಾಗುತ್ತದೆ. ಆ ಕುಟುಂಬದ ಮುತ್ತೈದೆಯರು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಬಾಸಿಂಗದೊಂದಿಗೆ ಗಾಂಧಿಬಜಾರಿನ ತವರು ಮನೆಯಲ್ಲಿರುವ ಶ್ರೀ ಮಾರಿಕಾಂಬೆಗೆ ಉಡಿ ತುಂಬಿಸಿ, ಪೂಜೆಸಲ್ಲಿಸಲಾಗುತ್ತಿದೆ.
ತದ ನಂತರ ವಿಶ್ವಕರ್ಮ ಸಮಾಜದವರು ಸಾರ್ವಜನಿಕವಾಗಿ ಪೂಜೆಯನ್ನು ಆರಂಭಿಸುತ್ತಾರೆ. ಮಂಗಳವಾರ ರಾತ್ರಿ 10 ಗಂಟೆಯವರೆಗೂ ಲಕ್ಷಾಂತರ ಮುತ್ತೈದೆಯರು ಗಾಂಧಿ ಬಜಾರಿನ ತವರು ಮನೆಯಲ್ಲಿ ಪ್ರತಿಷ್ಠಾಪಿತಳಾದ ಶ್ರೀ ಮಾರಿಕಾಂಬೆಗೆ ತವರು ಮನೆಯ ಸಂಪ್ರದಾಯದಂತೆ ಮಡ್ಲಕ್ಕಿಹಾಕಿ ಉಡಿ ತುಂಬಿಸುತ್ತಾರೆ ಸುಮಂಗಲಿಯರು ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ಹೊರ ಜಿಲ್ಲೆಯ ಲಕ್ಷಾಂತರ ಭಕ್ತರು ಭಾಗವಹಿಸಿ ದೇವಿಯ ದರ್ಶನಮಾಡಿ ಪೂಜೆಯನ್ನು ಸಲ್ಲಿಸುತ್ತಾರೆ.
ಇದೆ ದಿನದಿಂದು ಮಂಗಳವಾರ ರಾತ್ರಿ 9 ಗಂಟೆಗೆ ಗಾಂಧಿ ಬಜಾರಿನ ತವರುಮನೆಯಲ್ಲಿ ಪ್ರತಿಷ್ಠಿತಳಾದ ಮಾರಿಕಾಂಬೆಯನ್ನು ರಥದಲ್ಲಿ ಕೂರಿಸಿ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ಮೆರವಣಿಗೆಯ ಮುಖಾಂತರ ಉಪ್ಪಾರ ಸಮಾಜದ ಬಾಂಧವರ ಮುಂದಾಳತ್ವದಲ್ಲಿ ಮಾರಿ ಅಮ್ಮನನ್ನು ಕೋಟೆ ರಸ್ತೆಯಲ್ಲಿರುವ ಶ್ರೀ ಮಾರಿಕಾಂಬೆಯನ್ನು ಗದ್ದುಗೆಗಯ ಅವರಣಕ್ಕೆ ತರಲಾಗುತ್ತದೆ.
ಈ ಸಂಧರ್ಭದಲ್ಲಿ ಗಂಗಾಪರಮೇಶ್ವರಿ ದೇವಸ್ಥಾನದಿಂದ ಗಂಗೆ ಪೂಜೆಯೊಂದಿಗೆ ಅಮ್ಮನವರನ್ನು ಮಂಗಳವಾದ್ಯದೊಂದಿಗೆ ಎದುರುಗೊಂಡು ಗಂಗಾಮತಸ್ಥದ ಸಮಾಜದ ಬಾಂಧವರು ಪೂಜೆ ಸಲ್ಲಿಸುತ್ತಾರೆ.
ಬುಧವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ವಿದ್ಯಾನಗರದ ಹರಿಜನ ಸಮಾಜದ ಬಾಂಧವರು ಬೇವಿನುಡುಗೆಯೊಂದಿಗೆ ಆಗಮಿಸಿ ಶ್ರೀ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿದ ನಂತರ ಅಮ್ಮನವರನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಇದಾದಮೇಲೆ ಕುರುಬಜನಾಂಗದ ಗುತ್ಯಮ್ಮ ದೇವಾಲಯದ ಅರ್ಚಕರಾದ ಚೌಡಿಕೆ ಕುಟುಂಬದವರು ನೈವೇದ್ಯ ಮಾಡಿ ಪೂಜೆ ಸಲ್ಲಿಸುತ್ತಾರೆ.
ಬುಧವಾರ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ವಾಲ್ಮೀಕಿ ಸಮಾಜದವರು, 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಉಪ್ಪಾರ ಸಮಾಜದವರು, ರಾತ್ರಿ 11 ಗಂಟೆಯಿಂದ ಮಡಿವಾಳ ಸಮಾಜದವರು ಸರದಿಯಂತೆ 4 ದಿನಗಳ ಕಾಲ ಗದ್ದಗೆಯಲ್ಲಿ ಅಮ್ಮನವರಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ಮಾರ್ಚ್ 16 ರ ಶನಿವಾರ ರಾತ್ರಿ 7 ಗಂಟೆಗೆ ಸಮಿತಿ ವತಿಯಿಂದ ದೇವಿಗೆ ಮಹಾಮಂಗಳಾರತಿ ಸಲ್ಲಿಸಿದ ನಂತರ ಶ್ರೀ ಮಾರಿಕಾಂಬಾ ದೇವಿಯನ್ನು ಮೆರವಣಿಗೆಯ ಮುಖಾಂತರ ವಿವಿಧ ಜಾನಪದ ತಂಡಗಳ ಮೆರುಗಿನೊಂದಿಗೆ ಲಕ್ಷಾಂತರ ಮಂದಿ ಭಕ್ತಾದಿಗಳು ಅತ್ಯಂತ ಸಂಭ್ರಮದಿಂದ ಅಮ್ಮನವರನ್ನು ವನ ಪ್ರವೇಶಕ್ಕೆ ಕಳಿಸಿಕೊಡುವ ಮೂಲಕ ಎರಡು ವರ್ಷಕ್ಕೊಮ್ಮೆ ನಡೆಯುವ ಐದುದಿನಗಳ ಜಾತ್ರಾ ಮಹೋತ್ಸವಕ್ಕೆ ತೆರೆ ಬಿಳುತ್ತದೆ.
ಮಡಿವಾಳ ಸಮಾಜದವರು ಅಮ್ಮನವರನ್ನು ಮಧ್ಯರಾತ್ರಿ ವನಕ್ಕೆ ತೆಗೆದುಕೊಂಡು ಹೋಗಿ ಅಂತಿಮವಾಗಿ ಸಮಾಜದ ಸಂಪ್ರದಾಯದಂತೆ ಶಾಸ್ತ್ರ ಪ್ರಕಾರ ಪೂಜೆ ಸಲ್ಲಿಸಿ ದೇವಿಯನ್ನು ವನಕ್ಕೆ ಬಿಟ್ಟು ಹಿಂದಿರುಗುತ್ತಾರೆ.
ಎರಡು ವರ್ಷಕ್ಕೊಮ್ಮೆ ಬರುವ ಅಮ್ಮನ ನವರ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವು
ಮಾರ್ಚ್ 15 ರಿಂದ 17 ರ ವರೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯನ್ನು ನಡೆಸಲಾಗುತ್ತದೆ ಈ ಪಂದ್ಯಾವಳಿಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಹೆಸರಾಂತ ಕುಸ್ತಿಪಟುಗಳು ಭಾಗವಹಿಸಲಿದ್ದಾರೆ.
ಪ್ರತಿ ಬಾರಿಯಂತೆ ಈ ಬಾರಿಯು ಶ್ರೀ ಕೋಟೆ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದಲ್ಲಿ ಭಕ್ತಾದಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಯಾಗಿ ನೆಡೆಸಿಕೊಡಬೇಕೆಂದು ಸಮಿತಿಯ ಸದಸ್ಯರು ಮನವಿ ಮಾಡಿದ್ದಾರೆ.