ಬಸವಣ್ಣನವರ ತತ್ವಾದರ್ಶಗಳ ಪಾಲನೆ ಆಗಬೇಕು : ಜಿಲ್ಲಾಧಿಕಾರಿ ಗುರುದತ್ ಹೆಗಡೆ
ಶಿವಮೊಗ್ಗ: ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರ ಅನಾವರಣ ಕೇವಲ ಸರ್ಕಾರಿ ಕಾರ್ಯಕ್ರಮವಾಗಿ ಸೀಮಿತವಾಗದೆ ಅವರ ತತ್ವ ಆದರ್ಶಗಳನ್ನು ನಾವೆಲ್ಲ ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು ತಿಳಿಸಿದರು.
ಜಿಲ್ಲಾಡಳಿ, ಜಿಲ್ಲಾ ಪಂಚಾಯತ್ ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ಕಚೇರಿಗಳಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದರು.
ಬಸವಣ್ಣನವರು ಜಾತಿ, ಧರ್ಮ ಲಿಂಗ ಬೇಧವಿಲ್ಲದೆ ಸಮಾನತೆ, ಪ್ರಜಾಪ್ರಭುತ್ವ ಕಲ್ಪನೆಯನ್ನು ಕಟ್ಟಿದವರು. 12 ನೇ ಶತಮಾನದಲ್ಲಿ ಬಸವಣ್ಣನವರ ವಚನಗಳು ಸಮಾಜದಲ್ಲಿನ ಅಸಮಾನತೆ, ಅಂಕುಡೊಂಕುಗಳನ್ನು ತಿದ್ದುವಂತದ್ದಾಗಿದ್ದವು ಹಾಗೂ ಇಂದಿಗೂ ವಚನಗಳು ಅತ್ಯಂತ ಪ್ರಸ್ತುತವಾಗಿದೆ.
ರಾಜ್ಯ ಸರ್ಕಾರವು ಸರ್ಕಾರಿ ಕಚೇರಿಗಳಲಿ ಇಂತಹ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅಳವಡಿಸುವಂತೆ ಆದೇಶಿಸಿದ್ದು ಇದರ ಅನ್ವಯ ಇಂದು ಭಾವಚಿತ್ರ ಅನಾವರಣ ಮಾಡಲಾಗಿದೆ. ಬಸವಣ್ಣವರ ಭಾವಚಿತ್ರವನ್ನು ಕಚೇರಿಗಳಲ್ಲಿ ಹಾಕಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗದೆ ಅಧಿಕಾರಿಗಳು, ಸಾರ್ವಜನಿಕರು ಅವರ ವಚನಗಳಲ್ಲಿನ ಸಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹೀಗೆ ಮಾಡುವ ಮೂಲಕ ರಾಜ್ಯದಲ್ಲಿ ಈ ಕಾರ್ಯಕ್ರಮ ಹೊಸ ಇತಿಹಾಸ ನಿರ್ಮಾಣಕ್ಕೆ ಸಾಕ್ಷಿಯಾಗಲಿ ಹಾಗೂ ವಿಶ್ವಗುರು ಬಸವಣ್ಣನವರ ತತ್ವ ಆದರ್ಶಗಳು ಜಗತ್ತಿನಲ್ಲಿ ಪ್ರಸಾರವಾಗಲಿ ಎಂದ ಅವರು ಇದಕ್ಕಾಗಿ ನಾವುಗಳು ಅವರ ಜೀವನದ ತತ್ವ, ಮೌಲ್ಯಗಳ ಕುರಿತು ಜನರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಎಎಸ್‍ಪಿ ಅನಿಲ್ ಕುಮಾರ್ ಭೂಮರಡ್ಡಿ ಮಾತನಾಡಿ, ಕಾಯಕ ಶ್ರದ್ದೆ, ಕರ್ತವ್ಯ ನಿಷ್ಠೆಯನ್ನು ನಾವು ಬಸವಣ್ಣನವರಿಂದ ಕಲಿಯಬೇಕಾಗಿ ಏಕೆಂದರೆ ಬಸವಣ್ಣನವರು ಬಿಜ್ಜಳ ರಾಜನ ಆಸ್ಥಾನದಲ್ಲಿ ಪ್ರಧಾನಿಗಳಾಗಿ ಸೇವೆಯನ್ನು ಸಲ್ಲಿಸುತ್ತಾ ತಮ್ಮ ಕರ್ತವ್ಯದೊಂದಿಗೆ ಎಲ್ಲಾ ಸಮುದಾಯದ ವಚನಕಾರರನ್ನು ಒಂದು ವೇದಿಕೆಗೆ ಕರೆತಂದರು. ಪ್ರಪಂಚದ ಮೊಟ್ಟಮೊದಲ ಸಂಸತ್ ಅನುಭವ ಮಂಟಪವನ್ನು ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ತತ್ವಗಳು ಇಡೀ ವಿಶ್ವದಲ್ಲಿ ಪ್ರಚಾರ ಆಗಿದೆ. ನಾವು ಬೇರೆ ದೇಶಗಳ ಕ್ರಾಂತಿಯ ಕುರಿತು ಮಾತನಾಡುತ್ತೇವೆ ಅದರೆ 12 ನೇ ಶತಮಾನದಲ್ಲಿ ಅವರು ಮಾಡಿದ ಸಾಮಾಜಿಕ ಕ್ರಾಂತಿ ಎಲ್ಲ ಕ್ರಾಂತಿಗಳಿಂತ ಹೆಚ್ಚು ಪರಿಣಾಮಕಾರಿ ಆಗಿದೆ. ಆದ್ದರಿಂದ ಬಸವಣ್ಣನವರ ವಚನಗಳು ನಮ್ಮ ಜೀವನಕ್ಕೆ ದಾರಿದೀಪ ಆಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಕನ್ನಡ ಮ್ತತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉಮೇಶ್ ಹೆಚ್, ಜಿಲ್ಲಾ ವೀರಶೈವ ಸಮಾಜದ ರುದ್ರಮುನಿ,ಮಹಾರುದ್ರಪ್ಪ, ಮಲ್ಲಿಕಾರ್ಜನ್, ಪ್ರಕಾಶ್ ಇತರರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.