ಬಂಧನದ ವಾರೆಂಟಿಗೆ ಸಂಭಂದಿಸಿದಂತೆ ತಹಶೀಲ್ದಾರ್ ಶ್ವೇತಾ ಸ್ಪಷ್ಟನೆ !
ಹಾಸನ : ಹಾಸನದ ಜಿಲ್ಲಾ ಸಿವಿಲ್ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣ ಎಫ್.ಡಿ./71/2014ಕ್ಕೆ ಸಂಬಂಧಿಸಿದಂತೆ ನಮ್ಮ ಕಚೇರಿಯಿಂದ ಯಾವ ಪ್ರಕ್ರಿಯೆಯು ಬಾಕಿ ಇಲ್ಲ ಎಂದು ತಹಶೀಲ್ದಾರ್ ಶ್ವೇತಾ ಅವರು ಸ್ಪಷ್ಟಪಡಿಸಿದ್ದಾರೆ.
ತಾಲ್ಲೂಕಿನ ಬೂವನಹಳ್ಳಿ ಗ್ರಾಮದ ಸರ್ವೆ ನಂ. 43ರಲ್ಲಿ 2 ಎಕರೆ ಜಮೀನಿಗೆ ಸಂಬಂಧಿಸಿದಂತೆ ನಮೂನೆ 1-5 ಕಡತವನ್ನು ಈಗಾಗಲೇ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಭೂದಾಖಲೆಗಳ ಉಪನಿರ್ದೇಶಕರಿಗೆ (ಪದನಿಮಿತ್ತ) ಸಲ್ಲಿಸಲಾಗಿದೆ. ಆ ಕಚೇರಿಯಿಂದ ಆದೇಶ ಬಂದ ಬಳಿಕ ಆರ್‌ಟಿಸಿ ಇಂಡೀಕರಣ ಮಾಡುತ್ತೇವೆ ಎಂದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಚೇರಿ ಹಂತದಲ್ಲಿ ಅಪೀಲುದಾರರ ಕೋರಿಕೆಯಂತೆ ಕಡತವನ್ನು ಸಿದ್ಧಪಡಿಸಿ ಪ್ರಸ್ತಾವನೆ ಸಹ ಕಳುಹಿಸಲಾಗಿದೆ. ನ.2ರಿಂದ 15ರ ವರೆಗೆ ಹಾಸನಾಂಬೆ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿದ್ದೆ ನ.8ರಂದು ವಾರಂಟ್ ಹೊರಡಿಸಿದ್ದು, ಈ ವಿಷಯ ನನಗೆ ತಿಳಿದಿಲ್ಲ. ಹೀಗಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಈ ರೀತಿಯ ಪ್ರಕರಣಗಳಲ್ಲಿ ತಹಶೀಲ್ದಾರ್‌ಗಳಿಗೆ ಸಮನ್ಸ್/ವಾರಂಟ್ ಬರುತ್ತಿರುತ್ತವೆ. ಆದರೆ, ಈ ಪ್ರಕರಣದಲ್ಲಿ ಏಕಾಏಕಿ ಮಾಧ್ಯಮದವರು ಬಂದು ಬಂಧನವೆಂದು ಮಾಹಿತಿ ಪ್ರಸಾರ ಮಾಡಿರುವುದು ಮಾನಸಿಕವಾಗಿ ಗೊಂದಲಕ್ಕೀಡು ಮಾಡಿದೆ. ಪ್ರಕರಣದ ವಾದಿ ಪರ ವಕೀಲರು ಬಂದಿದ್ದಾಗ ನಾನು ಸ್ಥಳ ಪರಿಶೀಲನೆ ಕಾರ್ಯಕ್ಕಾಗಿ ತೆರಳಿದ್ದೆ. ಮಾಧ್ಯಮದವರು ಹಾಗೂ ವಕೀಲರು ಕಚೇರಿಗೆ ಬಂದಿರುವುದನ್ನು ಶಿರಸ್ತೆದಾರ್ ಅವರು ದೂರವಾಣಿ ಮೂಲಕ ನನಗೆ ತಿಳಿಸಿದ್ದಾರೆ. ಆರ್‌ಟಿಸಿ ಇಂಡೀಕರಣದ ವಾಸ್ತವಾಂಶವನ್ನು ಸರ್ಕಾರಿ ವಕೀಲರ ಮೂಲಕ ನ್ಯಾಯಾಲಯದ ಗಮನಕ್ಕೆ ತರಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸುಧೀರ್ ವಿಧಾತ , ಶಿವಮೊಗ್ಗ