ಮತ್ತೆ ಮುನ್ನಲೆಗೆಬಂದ ನಿಗಮ ಮಂಡಳಿ ಸ್ಥಾನ ಮಾನ,25 ಜನರ ಮೊದಲ ಪಟ್ಟಿ ಬಹುತೇಕ ಫೈನಲ್, ಯಾರಿಗೆ ಒಲಿಯಲಿದೆ ನಿಗಮ ಮಂಡಳಿ ಹುದ್ದೆ?
news.ashwasurya.in
ನಿಗಮ ಮಂಡಳಿಯ ಸ್ಥಾನಕ್ಕೆ ಕುರಿತಂತೆ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಯವರು ಹಲವು ಹಿರಿಯ ಶಾಸಕರಿಗೆ ತಾವೆ ದೂರವಾಣಿ ಕರೆ ಮಾಡಿ ನೇಮಕಾತಿ ಬಗ್ಗೆ ಅಭಿಪ್ರಾಯಗಳನ್ನು ಕಲೆ ಹಾಕಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಅವರನ್ನು ಸಭೆಗೆ ಕರೆಸಿಕೊಂಡು ನಿಗಮ-ಮಂಡಳಿ ಸೇರ್ಪಡೆ ಬಗ್ಗೆ ಕೇಳಿದ್ದು ಇದಕ್ಕೆ ರೆಡ್ಡಿ ನಿರಾಕರಿಸಿದ್ದಾರೆ ಎಂದುಯ ತಿಳಿದುಬಂದಿದೆ.
ಕೇಲವು ದಿನಗಳಿಂದ ಕುತೂಹಲ ಹುಟ್ಟುಹಾಕಿರುವ ನಿಗಮ-ಮಂಡಳಿ ನೇಮಕಾತಿಗಾಗಿ ಕಳೆದ ಮಂಗಳವಾರ ತಡರಾತ್ರಿವರೆಗೂ ತೀವ್ರ ಕಸರತ್ತು ನಡೆಸಿರುವ ಪಕ್ಷದ ನಾಯಕರು, ಒಂದು ತೀರ್ಮಾನಕ್ಕೆ ಬಂದು 25 ಜನರ ಪಟ್ಟಿಯನ್ನು ಬಹುತೇಕ ಅಂತಿಮ ಗೊಳಿಸಿದ್ದು ಕೆಲವೇ ದಿನಗಳಲ್ಲಿ ಶಾಸಕರು ಮಾತ್ರ ಇರುವ ಸುಮಾರು 25 ಮಂದಿಯ ಪಟ್ಟಿ ಪ್ರಕಟವಾಗುವ ಎಲ್ಲಾ ಸಾಧ್ಯತೆಗಳು ಇದೆ.?ಎಂದು ವಿಧಾನಸೌದದ ಪಡುಸಾಲೆಯಿಂದಲೆ ಕೇಳಿಬರುತ್ತಿದೆ.
ಮೂಲಗಳ ಪ್ರಕಾರ ಸುಮಾರು 21 ಮಂದಿ ಶಾಸಕರು ಹಾಗೂ 4 ಮಂದಿ ವಿಧಾನಪರಿಷತ್ ಸದಸ್ಯರನ್ನು ಮೊದಲ ಹಂತದಲ್ಲಿ ನೇಮಕಾತಿ ಮಾಡುವ ಬಗ್ಗೆ ಸಭೆಯಲ್ಲಿ ಬಹುತೇಕ ತೀರ್ಮಾನವಾಗಿದ್ದು, ಹೆಸರು ಅಂತಿಮಗೊಳಿಸುವ ಹಾಗೂ ಯಾವ ನಿಗಮ ಮಂಡಳಿಗೆ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಹೀಗಾಗಿ ತಡರಾತ್ರಿಯವರೆಗೂ ಚರ್ಚೆ ಮುಂದುವರೆದಿತ್ತು.
ನಿಗಮ-ಮಂಡಳಿ ಅಧ್ಯಕ್ಷ ಹುದ್ದೆಗೆ ಮೊದಲ ಪಟ್ಟಿ ಅಂತಿಮಗೊಳಿಸುವ ಉದ್ದೇಶಕ್ಕಾಗಿಯೇ ಮಂಗಳವಾರ ನಗರಕ್ಕೆ ಆಗಮಿಸಿದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸುದೀರ್ಘ ಚರ್ಚೆ ನಡೆಸಿದರು. ಸಂಜೆ ನಾಲ್ಕರ ಸುಮಾರಿಗೆ ಆರಂಭಗೊಂಡ ಈ ಸಭೆ ತಡರಾತ್ರಿಯವರೆಗೂ ಮುಂದುವರೆದಿತ್ತು.
ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರು ಈ ಹಿಂದೆಯೇ ಚರ್ಚೆ ನಡೆಸಿ ಸಿದ್ಧಪಡಿಸಿದ್ದ ಪ್ರಾಥಮಿಕ ಪಟ್ಟಿಯನ್ನು ಮುಂದಿಟ್ಟುಕೊಂಡು ಚರ್ಚೆ ಆರಂಭಗೊಂಡಿದೆ ಎನ್ನಲಾಗಿದೆ. ಈ ಪಟ್ಟಿಯಲ್ಲಿ ಬಹುತೇಕ ಹಿರಿಯ ಶಾಸಕರಿದ್ದು, ಅದರಲ್ಲಿ ಹೆಚ್ಚಿನ ಮಂದಿ ಸಚಿವ ಸ್ಥಾನದ ಆಕಾಂಕ್ಷಿಗಳು. ಹೀಗಾಗಿ ಅಧ್ಯಕ್ಷಗಿರಿ ಕೊಟ್ಟ ನಂತರವೂ ಅವರು ತಿರಸ್ಕರಿಸುವ ಮುಜುಗರ ಎದುರಾಗುವ ಹಾಗೂ ಈ ಬಾರಿ ಅಧ್ಯಕ್ಷಗಿರಿ ಪಡೆದವರು ಮುಂದೆ ಸಚಿವ ಸ್ಥಾನ ಅಪೇಕ್ಷಿಸಬಾರದು ಎಂಬ ಷರತ್ತು ವಿಧಿಸುವ ತೀರ್ಮಾನ ಮಾಡಲಾಗಿದೆ.
ಅನಂತರ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರು ಹಲವು ಹಿರಿಯ ಶಾಸಕರಿಗೆ ಖುದ್ದು ದೂರವಾಣಿ ಕರೆ ಮಾಡಿ ನೇಮಕಾತಿ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಅವರನ್ನು ಸಭೆಗೆ ಕರೆಸಿಕೊಂಡು ನಿಗಮ-ಮಂಡಳಿ ಸೇರ್ಪಡೆ ಬಗ್ಗೆ ಪ್ರಶ್ನಿಸಿದ್ದು, ಇದಕ್ಕೆ ರೆಡ್ಡಿ ನಿರಾಕರಿಸಿದ್ದಾರೆ ಎನ್ನಲಾಗಿದೆ.
ಈ ಪ್ರಕ್ರಿಯೆ ಸುದೀರ್ಘವಾಗಿ ನಡೆದಿದೆ. ಇದಲ್ಲದೆ, ಸುಮಾರು 10 ರಿಂದ 15 ಮಂದಿ ಕಾರ್ಯಕರ್ತರ ನೇಮಕ ಮಾಡುವ ಬಗ್ಗೆಯೂ ಪಟ್ಟಿ ಸಿದ್ಧಪಡಿಸಿಕೊಳ್ಳಲಾಗಿದೆ. ಆದರೆ, ಈ ಕಾರ್ಯಕರ್ತರನ್ನು ಮೊದಲ ಹಂತದಲ್ಲಿ ನೇಮಕ ಮಾಡುವ ಬಗ್ಗೆ ಒಮ್ಮತ ತಡರಾತ್ರಿಯವರೆಗೂ ಮೂಡಿರಲಿಲ್ಲ ಎನ್ನಲಾಗಿದೆ.
ಈ ಸಭೆಯ ನಡುವೆಯೇ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಕೂಡ ನಾಯಕರೊಂದಿಗೆ ಚರ್ಚಿಸಲು ಸಭೆಗೆ ಆಗಮಿಸಿದ್ದರು. ಆದರೆ, ಪರಮೇಶ್ವರ್ ಅವರನ್ನು ಕರೆಸಿಕೊಂಡಿದ್ದು ಸರ್ಕಾರದ ಇತರೆ ವಿಚಾರಗಳ ಹಾಗೂ ಚುನಾವಣೆ ಸಿದ್ಧತೆ ಬಗ್ಗೆ ಚರ್ಚಿಸಲಾಯಿತು ಎನ್ನಲಾಗಿದೆ. ನಿಗಮ-ಮಂಡಳಿ ನೇಮಕದ ವಿಚಾರದಲ್ಲಿ ಪರಮೇಶ್ವರ್ ಅವರೊಂದಿಗೆ ಯಾವುದೇ ಚರ್ಚೆ ನಡೆಯಲಿಲ್ಲ ಎಂದು ಮೂಲಗಳು ತಿಳಿಸಿವೆ.
ಸುಧೀರ್ ವಿಧಾತ ,ಶಿವಮೊಗ್ಗ