ಅನೈತಿಕ ಸಂಬಂಧದ ಅನುಮಾನಕ್ಕೆ ಹದಿನೇಳರ ಬಾಲಕನ ಹತ್ಯೆ !! ಪ್ರಕರಣದ ದಿಕ್ಕು ತಪ್ಪಿಸಲು ಹಂತಕನ ಪ್ಲಾನ್ ಏನು?
ಹದಿನೇಳು ವರ್ಷದ ಶಾಲಾ ಬಾಲಕನನ್ನು ಆತನ ಶಿಕ್ಷಕಿಯೊಬ್ಬಳ ಗೆಳೆಯನೊಬ್ಬ ಕೊಲೆ ಮಾಡಿರುವ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನೆಡೆದಿದೆ. ಈ ಒಂದು ಕೃತ್ಯವು ಅಪಹರಣದ ಪ್ರಕರಣದಂತೆ ಕಾಣಬೇಕು ಎಂಬ ದುರುದ್ದೇಶದಿಂದ ಆರೋಪಿಯು ಹತ್ಯೆಯಾದ ಬಾಲಕನ ಮನೆಗೆ ಬೆದರಿಕೆ ಪತ್ರವನ್ನೂ ಕಳಿಸಿದ್ದ ಎನ್ನಲಾಗಿದೆ. ಆರೋಪಿ ಪ್ರಭಾತ್ ಶುಕ್ಲಾ ನಿವಾಸದಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
ಮೃತ ಬಾಲಕನ ಟ್ಯೂಷನ್ ಶಿಕ್ಷಕಿ ರಚಿತಾ ಹಾಗೂ ಆಕೆಯ ಗೆಳೆಯ ಪ್ರಭಾತ್ ಶುಕ್ಲಾರನ್ನು ಪೊಲೀಸರು ಬಂಧಿಸಿದ್ದಾರೆ. ಇವರ ಜೊತೆಯಲ್ಲಿ ಆರ್ಯನ್ ಎಂಬಾತನ ಬಂಧನ ಕೂಡ ಆಗಿದೆ. ಆರೋಪಿಯು ತನ್ನ ಗೆಳತಿಯ ಜೊತೆಯಲ್ಲಿ ಮೃತ ಬಾಲಕ ದೈಹಿಕ ಸಂಬಂಧ ಹೊಂದಿದ್ದಾನೆ ಎಂಬ ಶಂಕೆಯ ಮೇಲೆ ಈ ಕೃತ್ಯ ಮಾಡಿದ್ದಾನೆಂದು ತಿಳಿದುಬಂದಿದೆ.
ಹತ್ಯೆಯಾದ ಹದಿನೇಳರ ಬಾಲಕ ಕಾನ್ಪುರದ ಪ್ರಮುಖ ಬಟ್ಟೆ ಅಂಗಡಿಯೊಂದರ ಮಾಲೀಕನ ಪುತ್ರನೆಂದು ತಿಳಿದು ಬಂದಿದೆ. ಈತ ಎಂದಿನಂತೆ ಹತ್ಯೆಯಾಗುವ ದಿನ ಟ್ಯುಷನ್ ಹೊಗಲು ಸ್ಕೂಟರ್ನಲ್ಲಿ ಮನೆಯಿಂದ ಹೊದವನು ತಿರುಗಿ ಮನೆಗೆ ಬಂದಿರಲಿಲ್ಲ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸ್ಕೂಟರ್ನಲ್ಲಿ ಬಂದ ವ್ಯಕ್ತಿಯೊಬ್ಬ ನಿಮ್ಮ ಮಗ ಸುರಕ್ಷಿತವಾಗಿ ನಿಮಗೆ ಸಿಗಬೇಕು ಅಂದ್ರೆ 30 ಲಕ್ಷ ರೂಪಾಯಿ ನೀಡಬೇಕು ಎಂಬ ಪತ್ರವನ್ನು ನೀಡಿದ್ದನಂತೆ ಅಲ್ಲದೇ ಈ ಪ್ರಕರಣದ ದಾರಿಯನ್ನು ತಪ್ಪಿಸಲು ಆ ಪತ್ರದ ಮೇಲೆ ʼಅಲ್ಲಾ ಹು ಅಕ್ಬರ್ʼ ಹಾಗೂ ಅಲ್ಲಾನ ಮೇಲೆ ವಿಶ್ವಾಸ ಇಡಿ ಎಂದೂ ಸಹ ಬರೆದಿದ್ದನಂತೆ!!
ಪೋಲಿಸರು ತನಿಖೆ ವೇಳೆ ಕೆಲವೊಂದು ಸಿಸಿಟಿವಿ ಫೂಟೇಜ್ ಪರಿಶೀಲನೆ ಮಾಡಿದಾಗ ಬಾಲಕ ಶುಕ್ಲಾನೊಂದಿಗೆ ಸ್ಟೋರ್ ರೂಮ್ ಒಳಗೆ ಹೋಗುತ್ತಿರುವುದು ಕಾಣಬಹುದಾಗಿದೆಯಂತೆ? ನಿನ್ನ ಟೀಚರ್ ನಿನ್ನನ್ನು ಒಳಗೆ ಕರೆಯುತ್ತಿದ್ದಾರೆ ಬಾ ಎಂದು ನಂಬಿಸಿ ಬಾಲಕನನ್ನು ಒಳಗೆ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. ಶುಕ್ಲಾ ಹಾಗೂ ಕೊಲೆಯಾದ ಬಾಲಕ ಇಬ್ಬರೂ ಒಟ್ಟಿಗೆ ಸ್ಟೋರ್ ರೂಮ್ ಒಳಗೆ ಪ್ರವೇಶಿಸಿದ್ದರು. ಆದರೆ ಶುಕ್ಲಾ ಮಾತ್ರ ಕೋಣೆಯಿಂದ ಹೊರಬಂದಿದ್ದಾನೆ. ಆದರೆ ಬಾಲಕ ಹೊರಬಂದಿರಲಿಲ್ಲ. ಇದಾದ ಬಳಿಕ ಆರೋಪಿ ಶುಕ್ಲಾ ಬಟ್ಟೆ ಬದಲಾಯಿಸಿ ಸ್ಕೂಟರ್ನಲ್ಲಿ ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ಶಿಕ್ಷಕಿ ರಚಿತಾ ಕೂಡ ಆರೋಪದಲ್ಲಿ ಭಾಗಿಯಾಗಿದ್ದನ್ನು ಒಪ್ಪಿಕೊಂಡಿದ್ದಾಳಂತೆ.! ಇನ್ನು ಬೆದರಿಕೆ ಪತ್ರದಲ್ಲಿರುವ ಕೈ ಬರಹವು ತನ್ನ ಗೆಳೆಯ ಪ್ರಭಾತ್ ಶುಕ್ಲಾನದ್ದು ಎಂದು ರಚಿತಾ ಒಪ್ಪಿಕೊಂಡಿದ್ದಾಳಂತೆ.
ತನ್ನ ಅನುಮಾನದ ಬುದ್ಧಿಗೆ ಅಮಾಯಕ ಶಾಲಾ ಬಾಲಕನನ್ನು ಹತ್ಯೆಮಾಡಿದ ಹಂತಕ ಶುಕ್ಲಾ ಇತನ ಗೆಳತಿ ಜೈಲು ಪಾಲಾಗಿದ್ದಾರೆ. ಮುದ್ದಾದ
ಹೆತ್ತ ಮಗನನ್ನು ಕಳೆದುಕೊಂಡ ಹೆತ್ತವರ ಬಂದು ಬಳಗದವರ ದುಃಖಕ್ಕೆ ಕೊನೆ ಇಲ್ಲದಾಗಿದೆ…
ಸುಧೀರ್ ವಿಧಾತ ,ಶಿವಮೊಗ್ಗ