ಸಾಂದರ್ಭಿಕ ಚಿತ್ರ
ತೀರ್ಥಹಳ್ಳಿಯ ಒಡಲಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಯ ಸದ್ದು : ಬಂಡೆಯ ಮೇಲೆ ಬಿತ್ತು ರೌಡಿಗಳ ಹೆಜ್ಜೆ ಗುರುತು, ಗಣಿ ಸಂಪತ್ತನ್ನು ರಕ್ಷಿಸ ಬೇಕಾದ ಭೂ ಮತ್ತು ಗಣಿಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ನಿತ್ಯ ಭೂರಿ ಭೋಜನ!!
ಕಲ್ಲು ಗಣಿಗಾರಿಕೆ ಎಂದ ತಕ್ಷಣ ಎಲ್ಲರ ದೃಷ್ಟಿ ತೀರ್ಥಹಳ್ಳಿಯ ಕಡೆಗೆ ಹರಿಯುತ್ತದೆ. ಅಸಲಿ ಹಕೀಕತ್ತೇನೆಂದರೆ ರಾಜ್ಯದ ಭಯಾನಕವಾದ ಗಣಿ ಮಾಫಿಯಾ ತೀರ್ಥಹಳ್ಳಿಯ ಒಡಲಲ್ಲಿದೆ. ಸರಿಯಾಗಿ ಗಮನಿಸಿದರೆ ರಾಜ್ಯದ ಇತರ ಅಕ್ರಮ ಕಲ್ಲು ಗಣಿಗಾರಿಕೆಯ ಧೂಳು ಅಬ್ಬರ ಇದರ ಮುಂದೆ ಏನೇನೂ ಅಲ್ಲ..! ಯಾಕೆಂದರೆ ಇಲ್ಲಿ ನಿತ್ಯ ಸಿಡಿಯುವ ಬಂಡೆಗಳಿಂದ ಬೃಹತ್ ಹೆಬ್ಬಂಡೆಯ ಒಡಲಲ್ಲಿ ಸಣ್ಣ ಸಣ್ಣ ಗಣಿ ಕಣಿವೆಗಳಿವೆಯಾದ್ದರಿಂದ ಇಲ್ಲಿ ಅಕ್ರಮ ನಿತ್ಯಸತ್ಯ. ಒಂದು ಕಾಲದಲ್ಲಿ ಸುಂದರವಾದ ಪರಿಸರ ಕಾಡು ಪ್ರಾಣಿಗಳ ಸಂಕುಲವಾಗಿದ್ದ ಹಸಿರುವನ ಸುಂದರ ಬೆಟ್ಟ ಗುಡ್ಡಗಳ ಸಾಲು ಸಾಲುಗಳ ನಡುವೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದ ತೀರ್ಥಹಳ್ಳಿ ತಾಲ್ಲೂಕಿನ ಸರಹದ್ದು ಇಂದು ಅಕ್ರಮ ದಂಧೆ ಕೋರರನ್ನು ಕೈಬೀಸಿ ಕರೆಯುವ ಮಟ್ಟಕ್ಕೆ ಬೆಳೆದು ನಿಂತಿದೆ.
ಕೃಷಿಗೂ ಹೆಸರಾಗಿತ್ತು. ರಾಜ್ಯದ ಪವಿತ್ರ ನದಿ ತುಂಗೆಯ ಹರಿವು ತೀರ್ಥಹಳ್ಳಿ ತಾಲ್ಲೂಕಿನ ಒಡಲಿನಲ್ಲಿ ಅಬ್ಬರಿಸಿ ಹರಿಯುತ್ತಿತ್ತು ಅಂತರ್ಜಲವನ್ನು ನಂಬಿಯೆ ಬದುಕುವ ಪರಿ ತೀರ್ಥಹಳ್ಳಿ ತಾಲ್ಲೂಕಿನ ರೈತರಿಗೆ ಇರಲಿಲ್ಲ. ತಾಲ್ಲೂಕಿನ ಉದ್ದಗಲಕ್ಕೂ ಹಳ್ಳ ಕೊಳ್ಳಗಳು ಬೆಟ್ಟ ಗುಡ್ಡದ ಜರಿ ನೀರಿನ ಹರಿವಿನಿಂದ ಇಲ್ಲಿಯ ರೈತ ಚಿನ್ನದ ಫಸಲು ತೆಗೆಯುತ್ತಿದ್ದ. ಆದರೀಗ ಅವೆಲ್ಲ ಗತ ವೈಭವವಷ್ಟೇ..! ಇವತ್ತಿನ ಮಟ್ಟಿಗೆ ಅತ್ಯಂತ ಹೀನ ಕಲ್ಲು ಮತ್ತು ಮರಳು ಗಣಿಗಾರಿಕೆಯ ಮಾಫಿಯಾ ಹೆಡೆ ಎತ್ತಿ ನಿಂತಿದೆ ಸಂಪೂರ್ಣ ತಾಲ್ಲೂಕನ್ನು ಧೂಳಿನ ತಿಪ್ಪೆಗುಂಡಿಯನ್ನಾಗಿ ಮಾಡಿದೆ. ಹಳ್ಳ ಕೊಳ್ಳಗಳ ಜರಿ ನೀರಿನ ಸೇಲೆ ಕಣ್ಮರೆಯಾಗುತ್ತಿದೆ.ಅವಶ್ಯಕತೆ ಇದ್ದಾಗ ಬಳಸಿಕೊಳ್ಳ ಬಹುದಾಗಿದ್ದ ಅಂತರ್ಜಲ ಕೂಡ ಪಾತಾಳ ಮುಟ್ಟಿದೆ. ಹೊಲಗದ್ದೆಗಳು, ಕಾಡು, ದಟ್ಟಡವಿಗಳು ವಿನಾಶದ ಅಂಚಿಗೆ ತಲುಪಿವೆ. ರೈತ ದಿಕ್ಕಾಪಾಲಾಗುತ್ತಿದ್ದಾನೆ. ತೀರ್ಥಹಳ್ಳಿಯ ಒಡಲಲ್ಲಿ ಬಂಗಾರದ ಕಳಶವಿದ್ದಂತಿದ್ದ ತುಂಗಾ ನದಿಯ ಅಬ್ಬರದ ಹರಿವಿನಲ್ಲೂ ಕುಸಿತ ಕಂಡಿದೆ
ಇಷ್ಟಕ್ಕೂ ಇಲ್ಲಿಯ ಸಂಪತ್ತನ್ನು ಅಕ್ರಮವಾಗಿ ಕೊಳ್ಳೆ ಹೊಡೆಯುತ್ತಿರುವವರು ಯಾರೋ ಸ್ಥಳೀಯ ಅಡ್ರೆಸ್, ರೇಷನ್ ಕಾರ್ಡ್ ಇಲ್ಲದ ಅಪರಿಚಿತರು ಮತ್ತು ನಟೋರಿಯಸ್ ರೌಡಿಗಳ ಜೋತೆಗೆ ತೀರ್ಥಹಳ್ಳಿಯ ಮಣ್ಣಲ್ಲೆ ಬೆಳೆದು ಈ ಪವಿತ್ರ ಮಣ್ಣಿನ ಅನ್ನ ತಿಂದುಂಡ ಕೇಲವು ಖದೀಮರ ಗ್ಯಾಂಗ್ ಸರತಿ ಪ್ರಕಾರ ಅಕ್ರಮವಾಗಿ ಉಣ್ಣಲು ಕುಳಿತಿದ್ದಾರೆ. ಅಕ್ರಮ ಕಲ್ಲು ಗಣಿಗಾರಿಕೆಯಿಂದ ತೀರ್ಥಹಳ್ಳಿಯ ಮೇಲಿನ ಕುರುವಳ್ಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಕುರುವಳ್ಳಿಯ ಹೆಬ್ಬಂಡೆಯನ್ನು ಎಕ್ಕಿಳಿಯುತ್ತಿದ್ದಾರೆ. ವೈಯುಕ್ತಿಕ ಸ್ವರ್ಥಕ್ಕಾಗಿ ತಾಲ್ಲೂಕನ್ನು ಬೆಂಗಾಡಾಗಿಸಲು ಹೊರಟಿರುವ ಅಕ್ರಮ ಗಣಿಗಾರಿಕೆಯ ಖದೀಮರನ್ನು ಸ್ಥಳೀಯ ಜನರು ಇನ್ನೂ ಸಹಿಸಿಕೊಂಡಿದ್ದಾರೆಂಬುವುದೇ ದುರಂತ..! ಜಿಲ್ಲೆಯಲ್ಲಿ ಅವ್ಯಾಹತವಾಗಿ ನೆಡೆಯುತ್ತಿರುವ ಕಲ್ಲು ಮತ್ತು ಮರಳು ಗಣಿಗಾರಿಕೆಯ ಅಗಾಧತೆಯನ್ನು ಅರಿಯಬೇಕಾದರೆ ತೀರ್ಥಹಳ್ಳಿ ತಾಲ್ಲೂಕಿನ ಕುರುವಳ್ಳಿ, ಮಂಡಗದ್ದೆ,ತುದೂರು,ಮಹಿಷಿ,ಕಮ್ಮರಡಿ,ಬಾಗೋಡು,ಆಗುಂಬೆ,ಕೊಣಂದೂರು,ಕುಶಾವತಿ,ಮುಡಬ,ಗಬಡಿ,ಮೇಗರವಳ್ಳಿ ಇನ್ನೂ ಹತ್ತು ಹಲವು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಪ್ರದೇಶಗಳನ್ನೊಮ್ಮೆ ಕಣ್ಣಾರೆ ಕಂಡು ಬರಬೇಕು. ಈ ಹಳ್ಳಿಗಳ ತೋಟ ಗದ್ದೆಗಳ ರೋಗಿಷ್ಟ ಬೆಳೆಗಳನ್ನು ಯಾವುದೊ – ಶಾಪಕ್ಕೀಡಾದಂತೆ ಕೆಂದೂಳಿನಿಂದಾವೃತ ವಾಗಿರುವ ಮರಗಳನ್ನು , ಕೆಲವೇ ವರ್ಷಗಳ ಹಿಂದೆ ಹಚ್ಚ ಹಸುರಿನಿಂದ ಕಂಗೊಳಿಸುತ್ತಿದ ಕಾಡುಗಳನ್ನು ಹೇಳ ಹೆಸರಿಲ್ಲದಂತಾಗಿರುವ ಬೆಟ್ಟಗುಡ್ಡಗಳ ಬೋಳು
ಎದೆಯನ್ನು ಪ್ರತ್ಯಕ್ಷವಾಗಿಯೇ ನೋಡಬಹುದು..!
ಇನ್ನೂ ಹೆಸರಿಗಷ್ಟೆ ಇರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಇಲ್ಲಿಯ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಮರಳು ಗಣಿಗಾರಿಕೆ ದಂಧೆಯ ಕೂದಲು ಸೊಂಕಿಸಲು ಸಾಧ್ಯವಾಗಿಲ್ಲ.ತೀರ್ಥಹಳ್ಳಿ ತಾಲ್ಲೂಕಿನ ಸಾಕಷ್ಟು ಸ್ಥಳಗಳು ಹೆಸರಿಗೆ ಗಣಿ ನಿಷೇಧಿತ ಪ್ರದೇಶಗಳಾದರೂ ಈ ಜಾಗದಲ್ಲೂ ಹಾಡಹಗಲೇ ಲೂಟಿ ನಡೆಯುತ್ತಿದ್ದರೂ ಕೇಳುವವರೇ ದಿಕ್ಕಿಲ್ಲದಂತಾಗಿದೆ.ಪ್ರಕೃತಿ ಸಂಪತ್ತನ್ನು ರಕ್ಷಿಸ ಬೇಕಾದ ಅಧಿಕಾರಿಗಳೆ ನಿತ್ಯ ಭೂರಿ ಭೋಜನ ಉಂಡು ಕಾಸಿನ ಕನವರಿಕೆಯಲ್ಲಿ ನಿದ್ರೆಗೆ ಜಾರಿದ್ದಾರೆ.
ಇಲ್ಲಿ ಪ್ರಮುಖವಾಗಿ ಗಮನಿಸಿಬಹುದಾದ ಗಂಭೀರ ಸಂಗತಿ ಏನೆಂದರೆ ಗಣಿ ಮಾಫಿಯಾದ ಜೊತೆಗೆ ಅಷ್ಟೇ ಕರಾಳವಾಗಿ ಗರಿಬಿಚ್ಚಿಕೊಂಡಿರುವ ವಂತಿಕೆ ಮಾಫಿಯಾದ ಬಗ್ಗೆ.! ಇದನ್ನು ರಕ್ಷಿಸ ಬೇಕಾದವರೆ ಭಕ್ಷಿಸಲು ಮುಂದಾಗಿದ್ದಾರೆ. ಕೇಲವು ಗ್ರಾಮ ಪಂಚಾಯತಿಯ ಸದಸ್ಯರು ಕೇಲವು ರೈತರು ಕೇಲವು ಗ್ರಾಮಸ್ಥರು ಗಣಿಲಾರಿಗಳಿಂದ ವಸೂಲಿ ಮಾಡುತ್ತಾರೆ ಇನ್ನೂ ಕೇಲವರು ಈ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಮರಳು ಮಾಫಿಯಾದಲ್ಲಿ ಕೈ ಜೋಡಿಸಿದ್ದಾರೆ. ಇನ್ನೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಖದೀಮರಂತು ಸರತಿ ಸಾಲಿನಲ್ಲಿ ಉಂಡೆದ್ದು ಹೋಗುತ್ತಿದ್ದಾರೆ.
ತೀರ್ಥಹಳ್ಳಿ ತಾಲ್ಲೂಕಿನ ಸುತ್ತಮುತ್ತಲ ಅಕ್ರಮ ಗಣಿಗಾರಿಕೆಯಂತೂ ಕೇಲವು ಮಂದಿ ಸ್ಥಳೀಯ ರಾಜಕಾರಣಿಗಳ ಮತ್ತು ಪ್ರಭಾವಿಗಳ ಬೆಂಬಲ ದಿಂದ ನಡೆಯುತ್ತಿದ್ದು ಯಾರೊಬ್ಬರು ಸೊಲ್ಲೆತ್ತುತ್ತಿಲ್ಲ. ಈ ಅಕ್ರಮ ಗಣಿಗಾರಿಕೆ ದಂಧೆಯಿಂದ ಅದರಲ್ಲೂ ಕಲ್ಲು ಗಣಿಗಾರಿಕೆಯಿಂದ ಉತ್ಪತ್ತಿಯಾಗುವ ಧೂಳು ಸುತ್ತಮುತ್ತಲಿನ ಪ್ರದೇಶಗಳ ಬೆಳೆಗಳನ್ನು ನಾಶ ಮಾಡುತ್ತಿದೆ. ದೊಡ್ಡ ದೊಡ್ಡ ಮರಗಳೇ ಧೂಳಿನಿಂದಾಗಿ ಒಣಗಿ ಹೋಗಿವೆ. ಇದಕ್ಕಿಂತಲೂ ಮುಖ್ಯವಾಗಿ ಬಂಡೆ ಒಡೆಯಲು ಸಿಡಿಸುವ ಬ್ಲಾಸ್ಟ್ ಗಳಿಂದ ಎದ್ದೇಳುವ ಧೂಳು ಸ್ಥಳೀಯ ನಾಗರಿಕರ ಆರೋಗ್ಯಕ್ಕೆ ಕಂಟಕವಾಗಿದೆ.ಈ ದೂಳು ನೇರ ಉಸಿರಾಟದ ಮೂಲಕ ಶ್ವಾಸಕೋಶ ತಲುಪುವುದರಿಂದ ಗಂಭೀರ ಸ್ವರೂಪದ ಅನಾರೋಗ್ಯದ ಸಮಸ್ಯೆ ತಲೆದೋರಿದೆ. ಐದಾರು ವರ್ಷಗಳ ಹಿಂದೆ 300-400 ಅಡಿಗೆ ಸಿಗುತ್ತಿದ್ದ ಅಂತರ್ಜಲ ಇಂದು ಸಾವಿರ ಅಡಿ ತೋಡಿದರೂ ಸಿಗುತ್ತಿಲ್ಲ. ಕೆಲವೆ ಜನರ ಸ್ವಾರ್ಥದ ಬದುಕು ದುರಾಸೆಯ ಫಲವಾಗಿ ಸಂಪೂರ್ಣ ತಾಲ್ಲೂಕಿನ ಜನರೇ ತಲೆದಂಡ ತೆರುವಂತಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ಕೋಟ್ಯಾಂತರ ರೂಪಾಯಿ ವಂಚನೆಯಾಗುತ್ತಿದೆ. ಶೀಘ್ರದಲ್ಲಿ ಇಲ್ಲಿಯ ಅನಾಚಾರಗಳಿಗೆ ಬ್ರೇಕ್ ಹಾಕದಿದ್ದರೆ ತೀರ್ಥಹಳ್ಳಿಯನ್ನು ಗ್ರಾಮ ದೇವತೆ ಮಾರಿಕಾಂಬೆಯು ಕಾಪಾಡಲಾರಳು.ಅಕ್ರಮಕ್ಕೆ ಬ್ರೇಕ್ ಹಾಕುವುದು ಸದ್ಯದ ಪರಿಸ್ಥಿತಿಯಲ್ಲಿ ಅದು ಕನಸಷ್ಟೇ. ಯಾಕೆಂದರೆ ಬ್ರೇಕ್ ಹಾಕಬೇಕಾದ ಬೇಕೂಪರೆಲ್ಲ ಒಂದಿಲ್ಲೊಂದು ರೀತಿಯಲ್ಲಿ ಈ ದಂಧೆಯಲ್ಲಿ ಪಾಲುದಾರರೇ ಎನ್ನುವುದು ಕಟು ಸತ್ಯ..!
ನಿರೀಕ್ಷಿಸಿ ಗಣಿ ಲೂಟಿಯ ಇಂಚಿಂಚು ವರದಿ ” ಅಶ್ವ ಸೂರ್ಯ ” ವಾರಪತ್ರಿಕೆಯಲ್ಲಿ
ಸುದೀರ್ ವಿಧಾತ , ಶಿವಮೊಗ್ಗ