ಕೇರಳ :ಹೆಚ್ಚು ಸಿಬಿಲ್ ಸ್ಕೋರ್ ಇರುವಂತವರ ಮಾಹಿತಿ ಕದ್ದು.! 500 ಕ್ಕೂ ಹೆಚ್ಚು ನಕಲಿ ಪ್ಯಾನ್ ಕಾರ್ಡ್.! 27 ಕೋಟಿ ವಂಚಿಸಿದವ ವಂಚಕನ ಬಂಧನ.
news.ashwasurya.in
ಅಶ್ವಸೂರ್ಯ/ಕೊಚ್ಚಿ : ಫೆಡರಲ್ ಬ್ಯಾಂಕ್ಗೆ ಸುಮಾರು 27 ಕೋಟಿ ರೂ. ವಂಚಿಸಿದ ಪ್ರಕರಣದ ಪ್ರಮುಖ ಸೂತ್ರಧಾರನನ್ನು ಕೇರಳ ಪೊಲೀಸರು ಕೊನೆಗೂ ಅಸ್ಸಾಂನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫೆಡರಲ್ ಬ್ಯಾಂಕಿನ ಆ್ಯಪ್ ಬಳಸಿಕೊಂಡು ಸುಮಾರು 500ಕ್ಕೂ ಹೆಚ್ಚು ನಕಲಿ ಪ್ಯಾನ್ ಕಾರ್ಡ್ಗಳನ್ನು ಸೃಷ್ಟಿಸಿ ಹಲವರ ಹೆಸರಿನಲ್ಲಿ ಸಾಲ ಪಡೆದು ವಂಚಿಸಿದ್ದ ಆರೋಪಿಯನ್ನು ಕೇರಳ ಪೊಲೀಸರು ಅಸ್ಸಾಂ ನಲ್ಲಿ ಬಂಧಿಸಿದ್ದಾರೆ.
ಪ್ರಕರಣದ ಪ್ರಮುಖ ಸೂತ್ರಧಾರ ಆರೋಪಿ ಶಿರಾಜುಲ್ ಇಸ್ಲಾಂನನ್ನು ಅಸ್ಸಾಂನ ಬೋವಲ್ಗಿರಿಯಿಂದ ಕ್ರೈಂ ಬ್ರಾಂಚ್ ತಂಡ ಬಂಧಿಸಿದೆ. 500ಕ್ಕೂ ಹೆಚ್ಚು ಜನರ ನಕಲಿ ಪ್ಯಾನ್ ಕಾರ್ಡ್ಗಳನ್ನು ಸಿದ್ಧಪಡಿಸಿ ಈ ವಂಚನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಫೆಡರಲ್ ಬ್ಯಾಂಕ್ನದೇ ಆ್ಯಪ್ ಮೂಲಕ ಆರೋಪಿ ವಂಚಕ ಶಿರಾಜುಲ್ ಇಸ್ಲಾಂ ಈ ವಂಚನೆ ನಡೆಸಿದ್ದಾನೆ. ಬ್ಯಾಂಕ್ ಗ್ರಾಹಕರ ಗುರುತಿನ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಿ ಸಾಲ ಪಡೆಯುವುದೇ ಇವರ ವಂಚನೆಯ ಗುರಿಯಾಗಿತ್ತು.ಇತನ ಟಾರ್ಗೆಟ್ ಉತ್ತಮ ಸಿಬಿಲ್ ಸ್ಕೋರ್ ಇರುವವರ ವೈಯಕ್ತಿಕ ಮಾಹಿತಿಗಳನ್ನು ಕದಿಯುವುದು. ಅವರ ಪ್ಯಾನ್ ಕಾರ್ಡ್ ಅನ್ನು ನಕಲಿಯಾಗಿ ತಯಾರಿಸಿ, ವಿಳಾಸವನ್ನು ಸರಿಯಾಗಿ ನೀಡಿ, ಫೋಟೋವನ್ನು ಮಾತ್ರ ವಂಚಕನ ತಂಡದ ಸದಸ್ಯನೊಬ್ಬನದ್ದು ಹಾಕಲಾಗುತ್ತಿತ್ತು. ಕೆವೈಸಿ ಪರಿಶೀಲನೆಗಾಗಿ ವಿಡಿಯೋ ಕಾಲ್ ಬಂದಾಗ, ಪ್ಯಾನ್ ಕಾರ್ಡ್ನಲ್ಲಿ ಫೋಟೋ ಇರುವ ವಂಚಕನೇ ಹಾಜರಾಗುತ್ತಿದ್ದ. ಈ ರೀತಿ ಸುಮಾರು 27 ಕೋಟಿ ರೂಪಾಯಿ ಸಾಲ ಪಡೆದು ವಂಚಿಸಿದ್ದಾನೆ.
500ಕ್ಕೂ ಹೆಚ್ಚು ನಕಲಿ ಪ್ಯಾನ್ ಕಾರ್ಡ್ ವಶಕ್ಕೆ:
500ಕ್ಕೂ ಹೆಚ್ಚು ನಕಲಿ ಪ್ಯಾನ್ ಕಾರ್ಡ್ಗಳನ್ನು ಈತನಿಂದ ಕ್ರೈಂ ಬ್ರಾಂಚ್ ತಂಡ ವಶಪಡಿಸಿಕೊಂಡಿದೆ. 2023ರಲ್ಲಿ ಕೊಚ್ಚಿ ಸೆಂಟ್ರಲ್ ಪೊಲೀಸರು ದೂರು ದಾಖಲಿಸಿಕೊಂಡಿದ್ದರು,ಈತನ ಬಂಧನಕ್ಕಾಗಿ ಭಲೇ ಬೀಸಿದ್ದ ಕೊಚ್ಚಿ ಪೊಲೀಸರ ತಂಡ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಕೊನೆಗೂ ಸೆರೆಹಿಡಿದಿದ್ದಾರೆ. ವಂಚನೆಯ ಪ್ರಮಾಣ ದೊಡ್ಡದಾಗಿದ್ದರಿಂದ ಕ್ರೈಂ ಬ್ರಾಂಚ್ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಅಸ್ಸಾಂ ಕೇಂದ್ರವಾಗಿ ವಂಚನೆ ನಡೆದಿದೆ ಎಂದು ಪತ್ತೆಹಚ್ಚಿದ ಕ್ರೈಂ ಬ್ರಾಂಚ್ ತಂಡ, ಅಲ್ಲಿಯೇ ಕ್ಯಾಂಪ್ ಮಾಡಿ ಶಿರಾಜುಲ್ ಇಸ್ಲಾಂನನ್ನು ಪತ್ತೆಹಚ್ಚಿದೆ.
ಎರ್ನಾಕುಲಂ ಸಿಜೆಎಂ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರುಪಡಿಸಿದ್ದು, ಶಿರಾಜುಲ್ ಇಸ್ಲಾಂನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಶೀಘ್ರದಲ್ಲೇ ಈತನನ್ನು ಕಸ್ಟಡಿಗೆ ಪಡೆಯಲು ಕ್ರೈಂ ಬ್ರಾಂಚ್ ಅರ್ಜಿ ಸಲ್ಲಿಸಲಿದೆ. ವಿಚಾರಣೆಯ ಸಮಯದಲ್ಲಿ ಈತನ ತಂಡದ ಇತರ ಸದಸ್ಯರ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಿ ವಂಚಕರ ಗ್ಯಾಂಗ್ನನ್ನು ಹೆಡೆಮುರಿಕಟ್ಟಲು ಪೊಲೀಸರು ಮುಂದಾಗಿದ್ದಾರೆ.


