ಬೆಂಗಳೂರು: ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ಡಾ.ಎಂ.ಎ.ಸಲೀಂ ನೇಮಕ :ಆದೇಶ ಹೊರಡಿಸಿದ ರಾಜ್ಯ ಸರಕಾರ.
ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿ ಹಿರಿಯ ಐಪಿಎಸ್ ಅಧಿಕಾರಿ ಎಂ ಸಲೀಂ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಐಪಿಎಸ್ ಅಧಿಕಾರಿ ಡಾ. ಎಂ. ಎ ಸಲೀಂ ಅವರನ್ನು ರಾಜ್ಯ ಪೊಲೀಸ್ ಮುಖ್ಯಸ್ಥರಾಗಿ ನೇಮಿಸುವ ರಾಜ್ಯ ಸರ್ಕಾರದ ನಡೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿದೆ
news.ashwasurya.in
ಅಶ್ವಸೂರ್ಯ/ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಡಾ.ಎಂ.ಎ.ಸಲೀಂ ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಪೊಲೀಸ್ ಮಹಾ ನಿರ್ದೇಶಕರಾಗಿ (ಡಿಜಿ–ಐಜಿಪಿ) ಹಿರಿಯ ಐಪಿಎಸ್ ಅಧಿಕಾರಿ ಡಾ.ಎಂ.ಎ.ಸಲೀಂ ಅವರನ್ನು ನೇಮಿಸಿ ರಾಜ್ಯ ಸರಕಾರ ಶನಿವಾರ ಆದೇಶ ಹೊರಡಿಸಿದ್ದು.
ಡಾ.ಎಂ.ಎ ಸಲೀಂ ಅವರು ಮೇ 21ರಿಂದ ಪ್ರಭಾರ ಡಿಜಿ–ಐಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
1966ರ ಜೂನ್ 25ರಂದು ಬೆಂಗಳೂರು ಸಮೀಪದ ಚಿಕ್ಕಬಾಣಾವರದಲ್ಲಿ ಜನಿಸಿದ ಡಾ.ಎಂ.ಎ.ಸಲೀಂ ಅವರು, 1989ರಲ್ಲಿ ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1993ರಲ್ಲಿ ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಪೊಲೀಸ್ ನಿರ್ವಹಣೆ ಕುರಿತು ಸ್ನಾತಕೋತ್ತರ ಪದವಿ ಪಡೆದ ಅವರು, 2010ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಟ್ರಾಫಿಕ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ.
ಡಾ.ಎಂ.ಎ.ಸಲೀಂ ಅವರ ಐಪಿಎಸ್ ವೃತ್ತಿಜೀವನವು 1993ರಲ್ಲಿ ಅವರು ಆಲ್ ಇಂಡಿಯಾ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಆಯ್ಕೆಯಾಗುವ ಮೂಲಕ ಪ್ರಾರಂಭವಾಯಿತು. ಡಾ.ಎಂ.ಎ.ಸಲೀಂ ಅವರು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 26 ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಉಡುಪಿ ಮತ್ತು ಹಾಸನ ಜಿಲ್ಲೆಗಳಲ್ಲಿ ಪೊಲೀಸ್ ಅಧೀಕ್ಷಕರಾಗಿ, ಮೈಸೂರು ನಗರದ ಪೊಲೀಸ್ ಆಯುಕ್ತರಾಗಿ, ಬೆಂಗಳೂರು ನಗರದಲ್ಲಿ ವಿಶೇಷ ಪೊಲೀಸ್ ಆಯುಕ್ತರಾಗಿ, ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿರುವ ಡಾ.ಎಂ.ಎ.ಸಲೀಂ ಅವರು, ಭ್ರಷ್ಟಾಚಾರ ನಿಗ್ರಹ ಘಟಕದ, ಕರ್ನಾಟಕ ರಾಜ್ಯ ಪೊಲೀಸ್ನ ಅಪರಾಧ ವಿಭಾಗ ಮತ್ತು ಆಡಳಿತ ವಿಭಾಗಗಳಿಗೆ ಮುಖ್ಯಸ್ಥರಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ.
ಡಾ.ಎಂ.ಎ.ಸಲೀಂ ಅವರು ಕರ್ನಾಟಕ ರಾಜ್ಯದಲ್ಲಿ ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಹಾಗೂ ಮಾನವ ಹಕ್ಕುಗಳ ರಕ್ಷಣೆಯಲ್ಲಿ ಮಹತ್ತರವಾದ ಕೊಡುಗೆಗಳನ್ನು ನೀಡಿದ್ದಾರೆ. ಅವರ ಗಣನೀಯ ಸಾಧನೆಗಳಲ್ಲಿ ಮಹಿಳೆಯರಿಗೆ(ಸ್ಪಂದನ), ಮಕ್ಕಳಿಗೆ(ಮಕ್ಕಳ ಸಹಾಯವಾಣಿ) ಹಾಗೂ ಹಿರಿಯ ನಾಗರಿಕರಿಗೆ(ಆಸರೆ ಮತ್ತು ಅಭಯ) ಸಹಾಯವಾಣಿ ಮತ್ತು ಬೆಂಬಲ ವ್ಯವಸ್ಥೆಗಳ ಸ್ಥಾಪನೆಯು ಸೇರಿವೆ. ಇಷ್ಟೇ ಅಲ್ಲದೇ, ಗರುಡ ಪ್ಯಾಟ್ರೋಲ್ ಪಡೆಯ ಸ್ಥಾಪನೆ, ವಿವಿಧ ಜಿಲ್ಲೆಗಳಲ್ಲಿ ‘ವಿಶೇಷ ಕಾರ್ಯ ಪಡೆ’ಗಳ ಅಭಿವೃದ್ಧಿ ಮತ್ತು ಸಂಚಾರ ನಿಯಮಗಳ ಜಾರಿ ತಂತ್ರಜ್ಞಾನದಲ್ಲಿ ಮಹತ್ವದ ಪ್ರಗತಿ ಸಾಧಿಸಿರುವ ಮತ್ತು ಹಲವಾರು ವಿಭಿನ್ನ ಯೋಜನೆಗನ್ನು ಪ್ರಾರಂಭಿಸಿರುವ ಹೆಗ್ಗಳಿಕೆ ಇವರಿಗಿದೆ.

ಸಂಚಾರ ದಟ್ಟಣೆ ನಿರ್ವಹಣೆಯಲ್ಲಿ ಡಾ.ಎಂ.ಎ.ಸಲೀಂ ಅವರು ಪ್ರವೀಣರೆನಿಸಿಕೊಂಡಿದ್ದು, ರಸ್ತೆಯ ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸಲು ಹಲವು ವಿನೂತನ ಉಪಕ್ರಮಗಳನ್ನು ರೂಪಿಸಿದ್ದಾರೆ. ಅವರ ಪ್ರಯತ್ನಗಳ ಫಲವಾಗಿ ಬೆಂಗಳೂರು ನಗರದಲ್ಲಿ 122 ಏಕಮುಖ ಸಂಚಾರದ ರಸ್ತೆಗಳನ್ನಾಗಿ ಪರಿವರ್ತಿಸಲಾಗಿದೆ.
ರಸ್ತೆಗಳಲ್ಲಿ ಮಕ್ಕಳ ಸುರಕ್ಷತೆಗಾಗಿ ‘ಸೇಫ್ ರೂಟ್ಸ್ ಟು ಸ್ಕೂಲ್’ ಯೋಜನೆ, ಸ್ವಯಂಚಾಲಿತ ಟ್ರಾಫಿಕ್ ದಂಡ ವ್ಯವಸ್ಥೆ, ಲೋಕಲ್ ಏರಿಯಾ ಟ್ರಾಫಿಕ್ ಮ್ಯಾನೇಜ್ಮೆಂಟ್ ಯೋಜನೆಗಳು ಮತ್ತು ಸಂಚಾರ ನಿಯಮ ಜಾರಿಯಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಗಾಗಿ ‘‘Public Eye’’ ಯೋಜನೆ ಮುಂತಾದ ಇನ್ನೂ ಹಲವಾರು ಪ್ರತಿಷ್ಠಿತ ಸಂಚಾರ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಿರುವ ಹಿರಿಮೆ ಡಾ.ಎಂ.ಎ. ಸಲೀಂ ಅವರಿಗೆ ಸಲ್ಲುತ್ತದೆ.

ಟ್ರಾಫಿಕ್ ನಿರ್ವಹಣೆಯಷ್ಟೇ ಅಲ್ಲದೇ, ಕ್ರಿಮಿನಲ್ ಪ್ರಕರಣಗಳ ತನಿಖೆ ಡಾ.ಎಂ.ಎ.ಸಲೀಂ ಅವರ ಅಚ್ಚುಮೆಚ್ಚಿನ ಕ್ಷೇತ್ರವಾಗಿದೆ. ಅತ್ಯುತ್ತಮ ತನಿಖಾ ಸಾಮರ್ಥ್ಯಗಳನ್ನು ಹೊಂದಿರುವ ಇವರು ಹಲವಾರು ಮಹತ್ವದ, ಸೂಕ್ಷ್ಮ ಮತ್ತು ಕ್ಲಿಷ್ಟಕರ ಕ್ರಿಮಿನಲ್ ಪ್ರಕರಣಗಳ ತನಿಖೆಗೆ ರಚಿಸಲಾದ ವಿಶೇಷ ತನಿಖಾ ತಂಡಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.
ಡಾ.ಎಂ.ಎ.ಸಲೀಂ ಅವರ ಉನ್ನತ ಮಟ್ಟದ ಸೇವೆ, ಸಾಧನೆಗಳು, ಸಾರ್ವಜನಿಕ ಸ್ನೇಹಿ ಕಾರ್ಯಕ್ರಮಗಳನ್ನು ಗುರುತಿಸಿ ಅವರಿಗೆ ಹಲವಾರು ಪ್ರತಿಷ್ಠಿತ ಪುರಸ್ಕಾರಗಳಿಂದ ಗೌರವಿಸಲಾಗಿದೆ. ಅವುಗಳಲ್ಲಿ ಪ್ರಮುಖವಾಗಿ 2017ರಲ್ಲಿ ‘ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪೊಲೀಸ್ ಪದಕ’, 2009ರಲ್ಲಿ ನೀಡಲಾದ ‘ರಾಷ್ಟ್ರಪತಿಗಳ ಶ್ಲಾಘನೀಯ ಪೊಲೀಸ್ ಪದಕ’, ಭಾರತ ಸರಕಾರದ ಮಾಹಿತಿ ತಂತ್ರಜ್ಞಾನವನ್ನು ಮಾದರಿಯಾಗಿ ಬಳಸಿಕೊಂಡ ಸಾಧನೆಗೆ ನೀಡಲಾಗುವ ‘ರಾಷ್ಟ್ರೀಯ ಇ-ಗವರ್ನನ್ಸ್ ಪ್ರಶಸ್ತಿ’, ರಸ್ತೆ ಸುರಕ್ಷತೆ ಅಭಿವೃದ್ಧಿಗೆ ಇವರ ಮಹತ್ವದ ಕೊಡುಗೆಗಾಗಿ ಐಆರ್ಟಿಇ ಪ್ರಿನ್ಸ್ ಮೈಕೆಲ್ ಅಂತರರಾಷ್ಟ್ರೀಯ ರಸ್ತೆ ಸುರಕ್ಷತಾ ಪ್ರಶಸ್ತಿ ಪ್ರಶಸ್ತಿ ಮುಂತಾದ ಹಲವು ಗೌರವಗಳು ಇವರ ಮುಡಿಗೇರಿವೆ.
ಡಾ.ಸಲೀಂ ಅವರು ‘ನಗರ ಪ್ರದೇಶಗಳಲ್ಲಿ ಸಂಚಾರ ನಿರ್ವಹಣೆ’ ಎಂಬ ಒಂದು ಗ್ರಂಥವನ್ನೂ ಸಹ ರಚಿಸಿದ್ದಾರೆ.


