ಕೊಲ್ಲೂರು : ಬೆಂಗಳೂರು ಮೂಲದ ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ.!ಆಕೆಯ ಕೊನೆಯಾಸೆಯಂತೆ ಕೊಲ್ಲೂರಿನಲ್ಲಿ ಅಂತ್ಯಕ್ರಿಯೆ | ಮಾನವೀಯತೆ ಮೆರೆದ ಸ್ಥಳೀಯ ನಾಗರಿಕರು.
news.ashwasurya.in
ಅಶ್ವಸೂರ್ಯ/ ಕುಂದಾಪುರ : ಕಳೆದೆರಡು ದಿನಗಳ ಹಿಂದೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಸರಹದ್ದಿನಲ್ಲಿರುವ ಸೌರ್ಪಣಿಕಾ ನದಿ ಬಳಿ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಮಹಿಳೆಯ ಮೃತದೇಹ ಶನಿವಾರ ಪತ್ತೆಯಾಗಿದ್ದು ಆಕೆಯು ಕೊಲ್ಲೂರಿನಲ್ಲಿ ಅಂತ್ಯಕ್ರಿಯೆ ಬಯಸಿದ್ದಾರೆಂಬ ಕುಟುಂಬಸ್ಥರು ತಿಳಿಸಿದ್ದರಿಂದ ಆಕೆಯ ಇಚ್ಚೆಯಂತೆ ಶಾಸ್ತ್ರೋಕ್ತವಾಗಿ ಕೊಲ್ಲೂರಿನಲ್ಲಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.

ಬೆಂಗಳೂರಿನ ವಸುಧಾ ಚಕ್ರವರ್ತಿ(46) ಮೃತ ಮಹಿಳೆಯಾಗಿದ್ದು ಅವರು ಕೊಲ್ಲೂರು ಮೂಕಾಂಬಿಕೆಯ ಪರಮಭಕ್ತರಾಗಿದ್ದರು. ವಸುಧಾ ಆ.27 ರಂದು ಕೊಲ್ಲೂರು ದೇವಸ್ಥಾನಕ್ಕೆ ಆಗಮಿಸಿದ್ದು ಸಮೀಪದ ವಸತಿಗೃಹವೊಂದರ ಸಮೀಪ ಕಾರು ನಿಲ್ಲಿಸಿ ಸೌರ್ಪಣಿಕ ನದಿ ಬಳಿ ನಾಪತ್ತೆಯಾಗಿದ್ದರು. ಈ ಬಗ್ಗೆ ಕುಟುಂಬಸ್ಥರು ಕೊಲ್ಲೂರಿಗೆ ಆಗಮಿಸಿ ಆಕೆಗಾಗಿ ಹುಡುಕಾಟಕ್ಕೆ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿದ್ದರು. ನಾಪತ್ತೆಯಾದ ಮಹಿಳೆಗಾಗಿ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಹಾಗೂ ಅಗ್ನಿಶಾಮಕದಳ ತೀವ್ರ ಹುಡುಕಾಟ ನಡೆಸಿದ್ದು ಸತತ 72 ಗಂಟೆಗಳ ಕಾರ್ಯಾಚರಣೆ ಬಳಿಕ ವಸುಧಾ ಅವರ ಮೃತದೇಹ ಕೊಲ್ಲೂರು ದೇವಸ್ಥಾನದ ಸೌಪರ್ಣಿಕಾ ತಟದಿಂದ ಸುಮಾರು ಮೂರು ಕಿ.ಮೀ.ದೂರದಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆಗೆ ಶರಣಾಗಿರುವುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

72 ಗಂಟೆಯ ಶೋಧದ ಬಳಿಕ ಮೃತದೇಹ ಪತ್ತೆ:

ವಸುಧಾ ಅವರು ನೀರಿನಲ್ಲಿ ಬಿದ್ದಿರುವ ಖಚಿತ ಮಾಹಿತಿ ಆಧರಿಸಿ ಮುಳುಗುತಜ್ಞ ಈಶ್ವರ್ ಮಲ್ಪೆ, ಹರೀಶ್ ಪೂಜಾರಿ, ಬೈಂದೂರು ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಸಚಿನ್ ಜಿ., ರವಿ ಮಂಜುನಾಥ್ ಗೌಡ ಮೊದಲಾದವರು ತೀವ್ರ ಶೋಧ ಕಾರ್ಯ ನಡೆಸಿದ್ದು ಶನಿವಾರ ನದಿಯ ಮದ್ಯೆ ಮರದ ಕೊಂಬೆಗೆ ಸಿಲುಕಿ ಮೃತದೇಹ ಪತ್ತೆಯಾಗಿದೆ. ಮಳೆಯ ನಡುವೆಯೆ ಸುಮಾರು 3 ಕಿ.ಮೀ ಕಾಡು ಹಾದಿಯಲ್ಲಿ ಮೃತದೇಹವನ್ನು ಹೊತ್ತು ತರಲಾಯಿತು. ಈ ಮಾನವೀಯ ಕಾರ್ಯದಲ್ಲಿ ಕುಂದಾಪುರ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ, ಕೊಲ್ಲೂರು ಠಾಣೆ ಪಿಎಸ್ಐ ವಿನಯ್ ಎಂ. ಕೊರ್ಲಹಳ್ಳಿ, ಸಿಬ್ಬಂದಿಗಳಾದ ನಾಗೇಂದ್ರ, ಲಕ್ಷ್ಮಣ್ ಗಾಣಿಗ, ಅಣ್ಣಪ್ಪ ನಾಯ್ಕ್, ಸುರೇಶ್, ಗಂಗೊಳ್ಳಿ ಆಪತ್ಬಾಂಧವ 24*7 ಇಬ್ರಾಹಿಂ ಗಂಗೊಳ್ಳಿ, ಸ್ಥಳೀಯರಾದ ಪ್ರದೀಪ್ ಭಟ್ ಸಂಪ್ರೆ, ನಾಗರಾಜ್ ನಾಯ್ಕ್ ಬಾವಡಿ, ಉಮೇಶ್ ಭಟ್ ಗೊಳಿಗುಡ್ಡೆ ಮೊದಲಾದವರಿದ್ದರು.

ಆಕೆಯ ಕೊನೆಯಾಸೆಗೆ ಕೈಜೋಡಿಸಿದ ಸ್ಥಳೀಯರು:
ಮೃತ ಮಹಿಳೆಯ ಕೊನೆಯಾಸೆಯಂತೆ ಕೊಲ್ಲೂರಿನಲ್ಲಿ ಅಂತ್ಯಸಂಸ್ಕಾರ ನಡೆಸುವ ಸಲುವಾಗಿ ಕುಂದಾಪುರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕೊಲ್ಲೂರಿಗೆ ಮೃತದೇಹ ಕೊಂಡೊಯ್ದು ಕುಟುಂಬಸ್ಥರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ಸಂದರ್ಭ ಗ್ರಾ.ಪಂ ಸದಸ್ಯರಾದ ಸಂತೋಷ್ ಭಟ್, ಪ್ರಕಾಶ್ ಗೆದ್ದೆಮನೆ, ಪ್ರಮುಖರಾದ ಪ್ರದೀಪ್ ಭಟ್, ವೆಂಕಟ ಕೃಷ್ಣ ಭಟ್, ರವೀಂದ್ರ ಗೆದ್ದೆಮನೆ ಹಾಗೂ ಸ್ಥಳೀಯರು ಸಹಕರಿಸಿದರು ಎಂದು ತಿಳಿದುಬಂದಿದೆ.
ಎಲ್ಲೊ ಹುಟ್ಟಿ…ಎಲ್ಲೊ ಬದುಕಿ…ಇನ್ನೇಲ್ಲೊ ಉಸಿರು ಚೆಲ್ಲಿ….ಮತ್ತೇಲ್ಲೊ ಪಂಚಭೂತಗಳಲ್ಲಿ ಲೀನವಾಗಿದ್ದು ಮಾತ್ರ ವಿಧಿ ಆಟವೆ ಹೌದು.!?


