ರೈತ ಸಮುದಾಯಕ್ಕೆ 5 ಲಕ್ಷ ರೂಪಾಯಿ ವರೆಗೆ‌‌ ಶೂನ್ಯ ಬಡ್ಡಿ ಸಾಲ : ಸಿ ಎಂ ಸಿದ್ಧರಾಮಯ್ಯ

ಸಿ ಎಂ ಸಿದ್ಧರಾಮಯ್ಯನವರು

ರೈತ ಸಮುದಾಯಕ್ಕೆ 5 ಲಕ್ಷ ರೂ ವರೆಗೆ ಶೂನ್ಯ ಬಡ್ಡಿ ಸಾಲ : ಸಿ ಎಂ ಸಿದ್ಧರಾಮಯ್ಯ

ಧಾರವಾಡ : ರಾಜ್ಯ ಸರಕಾರ ಈ ವರ್ಷದಿಂದ ರೈತರಿಗೆ ರೂ ಐದು ಲಕ್ಷದವರೆಗೆ ಶೂನ್ಯ ಬಡ್ಡಿ ಸಾಲ ಮತ್ತು ರೂ.15 ಲಕ್ಷದವರೆಗೆ ಕೇವಲ ಶೇ. 3% ರಷ್ಟು ಬಡ್ಡಿ ನಿಗದಿಗೊಳಿಸಿ,ಸಾಲ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಲಾಗಿದ್ದ ಕೃಷಿಮೇಳ- 2023 ಉದ್ಘಾಟಿಸಿ, ಮಾತನಾಡಿದ ಮುಖ್ಯಮಂತ್ರಿಗಳು ಬಡವರ ವಿರೋಧಿಗಳು ಪಂಚ ಗ್ಯಾರಂಟಿ ಅನುಷ್ಠಾನ ವಿಷಯದಲ್ಲಿ ಸರಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ, ಆದರೆ ಸರಕಾರ ಆರ್ಥಿಕವಾಗಿ ಸುಸ್ಥಿತಿಯಲ್ಲಿಗದೆ. ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಲಾಗಿದೆ.  ಪಂಚಗ್ಯಾರಂಟಿಗಳು ಸೇರಿ ರಾಜ್ಯದ ಅಭಿವೃದ್ಧಿಗಾಗಿ ಮುಂದಿನ ವರ್ಷ ಸುಮಾರು 3 ಲಕ್ಷ 80 ಸಾವಿರ ಕೋಟಿ ರೂಪಾಯಿಗಳ ಬಜೆಟ್ ಮಂಡಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪಂಚಗ್ಯಾರಂಟಿ ಯೋಜನೆಗಳ ಜಾರಿಯಿಂದ ಅಭಿವೃದ್ಧಿಗೆ ಹಣದ ಕೊರತೆ ಆಗಿದೆ ಎಂದು ನಮ್ಮ ವಿರೋಧಿಗಳಿಂದ ಅಪಪ್ರಚಾರ ಮಾಡಲಾಗುತ್ತಿದೆ. ಸರಕಾರಕ್ಕೆ ಯಾವುದೇ ರೀತಿಯ ಆರ್ಥಿಕ ತೊಂದರೆ ಇಲ್ಲ. ಸರಕಾರದ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳು ಮುಂದುವರೆಯಲಿವೆ. ಪ್ರಸಕ್ತ ವರ್ಷ ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕೆ ಸುಮಾರು 32 ಸಾವಿರ ಕೋಟಿ ರೂ.ಗಳ ಅಗತ್ಯವಿದೆ. ಮುಂದಿನ ವರ್ಷದಿಂದ ಪ್ರತಿವರ್ಷ ಪಂಚ ಗ್ಯಾರಂಟಿಗಳ ಜಾರಿಗೆ ಸುಮಾರು 56 ಸಾವಿರ ಕೋಟಿ ರೂ.ಗಳು ಬೇಕಾಗುತ್ತದೆ. ಈ ಎಲ್ಲಾ ಅಗತ್ಯ ಹಣ ಹೊಂದಿಸಲು ಸರಕಾರ ಸಶಕ್ತವಾಗಿದೆ. ಯಾರಿಗೂ ಭಯಬೇಡ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಪಂಚ ಗ್ಯಾರಂಟಿಗಳ ವೆಚ್ಚ ಸೇರಿ ಮುಂದಿನ ವರ್ಷದ ಬಜೆಟ್ ಸುಮಾರು 380 ಲಕ್ಷ ಕೋಟಿಗಳಾಗುವ ಅಂದಾಜಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಇಂದು ಶೇ.60 ರಷ್ಟು ಜನ ಕೃಷಿ ಮಾಡುತ್ತಿದ್ದಾರೆ. ಭಾರತವು ಕೃಷಿ ಪ್ರಧಾನ ದೇಶವಾಗಿದ್ದರೂ ಸಾಕಷ್ಟು ಜನ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಮಳೆ ಆಧಾರಿತ ಕೃಷಿ ಭೂಮಿ ಇರುವುದರಿಂದ ಮಳೆ ಕೊರತೆಯಾಗಿ ಸಮಸ್ಯೆ ಆಗುತ್ತಿದೆ. ಕೃಷಿ ವಿವಿಗಳು ಒಣಭೂಮಿಯಲ್ಲಿ ಕೃಷಿ ಅಭಿವೃದ್ಧಿ ಪಡಿಸುವ ಕುರಿತು ಹೆಚ್ಚು ಸಂಶೋಧನೆ ಕೈಗೊಳ್ಳಬೇಕು ಎಂದರು
.

ಯುವಕರು, ಹೆಚ್ಚುಜನ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಕೃಷಿ ವಿವಿಗಳು ಕಾರ್ಯ ಮಾಡಬೇಕು. ವಿಶ್ವವಿದ್ಯಾಲಯದ ಸಂಶೋಧನೆ, ತಾಂತ್ರಿಕತೆಗಳು ರೈತರ ಜಮೀನುಗಳಿಗೆ ತಲುಪಿದರೆ ಮಾತ್ರ ಸಾರ್ಥಕವಾಗುತ್ತದೆ.  ಕೃಷಿ ಮೇಳಗಳು ಜಾತ್ರೆಗಳಾಗದೇ ಕೃಷಿ ಕ್ಷೇತ್ರಕ್ಕೆ ಯುವಕರನ್ನು, ಹೊಸಬರನ್ನು ಸೆಳೆಯುವಂತೆ ಆಕರ್ಷಕವಾಗಿ ಸಂಘಟಿಸಬೇಕು ಎಂದರು.
ಒಣ ಬೇಸಾಯ ಮಾಡುವ ರೈತರ ಬಗ್ಗೆ ವಿಶೇಷ ಕಾಳಜಿ ಇದೆ. ಒಣಬೇಸಾಯ ಮಾಡಲು ಅಗತ್ಯ ಸುಧಾರಿತ ಹೊಸ ತಳಿಗಳ ಸಂಶೋಧನೆ ಮಾಡಬೇಕು. ಬಿತ್ತಿದ ಯಾವುದೇ ಮುಖ್ಯ ಬೆಳೆ ಹಾಳಾದರೆ, ಅದಕ್ಕೆ ಪರ್ಯಾಯವಾದ ತಕ್ಷಣದ ಬೆಳೆಗಳನ್ನು ಮಾಡಬೇಕು ಎಂಬುದರ ಬಗ್ಗೆ ವಿಜ್ಞಾನಿಗಳು ಆಸಕ್ತಿ ವಹಿಸಿ, ಸಂಶೋಧನೆ ಮಾಡಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಲ್ಯಾಬ್ ಟು ಲ್ಯಾಂಡ್ ಅಂದರೆ ಪ್ರಯೋಗಾಲಯದ ಸಂಶೋಧನೆಗಳು ರೈತರ ಭೂಮಿಗೆ ತಲುಪಬೇಕು. ಅಂದಾಗ ಮಾತ್ರ ವಿಜ್ಞಾನಿಗಳ ಸಂಶೋಧನೆಗಳು ಫಲಪ್ರದವಾಗುತ್ತದೆ ಎಂದು ಅವರು ಹೇಳಿದರು.

ಕೃಷಿ ಭಾಗ್ಯ, ಕೃಷಿ ಯಂತ್ರಧಾರೆ ಯೊಜನೆಗಳ ಮರುಜಾರಿ ಘೋಷಿಸಲಾಗಿದೆ. ರಾಜ್ಯದಲ್ಲಿ ಸಣ್ಣ ರೈತರು ಹೆಚ್ಚಿಗೆ ಇರುವುದರಿಂದ ಉನ್ನತ ತಾಂತ್ರಿಕತೆ ಇರುವ ಕಟಾವು ಯಂತ್ರಗಳನ್ನು ರೈತರಿಗೆ ನೀಡಲು ಕ್ರಮವಹಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ರಾಜ್ಯ ಸರಕಾರ ಈ ವರ್ಷದಿಂದ ರೈತರಿಗೆ ರೂ. 5 ಲಕ್ಷದವರೆಗೆ ಶೂನ್ಯ ಬಡ್ಡಿ ಸಾಲ ಮತ್ತು ರೂ.15 ಲಕ್ಷದವರೆಗೆ ಕೇವಲ ಶೇ.3% ರಷ್ಟು ಬಡ್ಡಿ ನಿಗದಿಗೊಳಿಸಿ ಸಾಲ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಮಹಾದಾಯಿ ಯೋಜನೆ ಜಾರಿಗೊಳಿಸಲು ಸರಕಾರ ಬದ್ದವಾಗಿದೆ. ಕೇಂದ್ರ ಸರಕಾರ ಶೀಘ್ರವಾಗಿ ಸ್ಪಂದಿಸಿ, ಸಮಸ್ಯೆ ಬಗೆಹರಿಸಿದರೆ ಯೋಜನೆ ಅನುಷ್ಠಾನ ಸುಲಭ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕೇಂದ್ರ ಸರಕಾರ ಗೋವಾ ಸರಕಾರದೊಂದಿಗೆ ಸಮಾಲೋಚಿಸಿ, ಪರಿಸರ ಮತ್ತು ಅರಣ್ಯ ಸಂಬಂಧಿಸಿದ ತಕರಾರು ಪರಿಹರಿಸಿದರೆ ರಾಜ್ಯ ಸರಕಾರ ತಕ್ಷಣ ಕ್ರಮ ವಹಿಸಲಿದೆ. ರಾಜ್ಯ ಸರಕಾರಕ್ಕೆ ಹಣಕಾಸಿನ ಕೊರತೆ ಇಲ್ಲ ಎಂದು ಅವರು ಹೇಳಿದರು.
ಬೆಣ್ಣಿಹಳ್ಳ ಯೋಜನೆಯನ್ನು ಡಿಪಿಆರ್ ಮಾಡಿಸಿ, ಶೀಘ್ರವಾಗಿ ಜಾರಿಗೊಳಿಸಲಾಗುವುದು. ಧಾರವಾಡ ಜಿಲ್ಲೆಯ ಹಾಗೂ ಉತ್ತರ ಕರ್ನಾಟಕದ ರೈತರ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಿ, ಕ್ರಮವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು

ಸುಧೀರ್ ವಿಧಾತ ,ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!