ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
ಲೋಕಸಭಾ ಚುನಾವಣೆಗೆ ಮತ್ತೆ ಫುಲ್ ಆಕ್ಟಿವ್ ಅದ ಬಿ ಎಸ್ ಯಡಿಯೂರಪ್ಪ, ಅಸಮಾಧಾನಿತರನ್ನು ಓಲೈಸಲು ಸಭೆ
ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಮೇಲೆ ಪಕ್ಷದೊಳಗೆ ಬಹುತೇಕ ನಿಷ್ಕ್ರಿಯಗೊಂಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೀಗ ಮತ್ತೆ ಕರ್ನಾಟಕದಲ್ಲಿ ತಮ್ಮ ಶಕ್ತಿ ಎನೆನ್ನುವುದನ್ನು ತೋರಿಸಲು ಮುಂದಾಗಿದ್ದಾರೆ. ಅಸಮಾಧಾನಿತರನ್ನು ಓಲೈಸಲು ಬಿಎಸ್‍ವೈ ಮುಂದಾಗಿದ್ದಾರೆ. ಬಿಜೆಪಿ ಬಿಡಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದ ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ ಹಾಗೂ ಶಂಕರ್ ಪಟೇಲ್ ಮುನೇನಕೊಪ್ಪ ಅವರ ಜೊತೆ ಗುಪ್ತವಾಗಿ ಕೇಲವು ಸಮಯ ಮಾತುಕತೆ ನಡೆಸಿ ಪಕ್ಷ ಬಿಡುವ ತೀರ್ಮಾನದಿಂದ ಹಿಂದೆ ಸರಿಯುವಂತೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ.
ಡಾಲರ್ಸ್ ಕಾಲೊನಿಯ ತಮ್ಮ ನಿವಾಸದಲ್ಲಿ ರೇಣುಕಾಚಾರ್ಯ ಮತ್ತು ಮುನೇನಕೊಪ್ಪ ಜೊತೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ ಯಡಿಯೂರಪ್ಪ ಬಿಜೆಪಿ ಬಿಟ್ಟು ಹೋಗಬಾರದು. ಕಾಂಗ್ರೆಸ್‍ನಲ್ಲಿ ನಿಮಗೆ ಭವಿಷ್ಯವಿಲ್ಲ ಎಂಬ ಸಲಹೆಯನ್ನು ಕೊಟ್ಟಿದ್ದಾರಂತೆ. ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ನಾನೇ ಪರಿಹರಿಸಿಕೊಡುತ್ತೇನೆ. ನಿಮಗೆ ಕೆಲವರಿಂದ ಅನ್ಯಾಯವಾಗಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಆದರೆ ಬಿಜೆಪಿ ಬಿಡುವಂತಹ ತೀರ್ಮಾನವನ್ನು ತೆಗೆದುಕೊಳ್ಳಬೇಡಿ. ಪಕ್ಷಕ್ಕಾಗಿ ದುಡಿದಿದ್ದಿರಾ. ಪಕ್ಷ ನಿಮಗೂ ಸ್ಥಾನಮಾನ ನೀಡಿದೆ. ಈ ಸಮಯದಲ್ಲಿ ನೀವು ಪಕ್ಷ ತೋರಿದರೆ ಇದರಿಂದ ನಿಮ್ಮ ರಾಜಕೀಯ ಭವಿಷ್ಯ ಹಾಳಾಗಲಿದೆ ಎಂಬ ಎಚ್ಚರಿಕೆಯನ್ನು ಕೊಟ್ಟಿದ್ದಾರಂತೆ.
ಕಾಂಗ್ರೆಸ್‍ಗೆ ರಾಜ್ಯದಲ್ಲಿ ಸ್ಪಷ್ಟ ಬಹುಮತ ಕೊಟ್ಟಿದ್ದಾರೆ. ಈಗಾಗಲೇ ಅಲ್ಲಿರುವವರಿಗೆ ಅಧಿಕಾರ ಸಿಕ್ಕಿಲ್ಲ ಎಂದು ಕಿತ್ತಾಟ ಆರಂಭವಾಗಿದೆ. ಸಚಿವರು ನಮ್ಮ ಮಾತು ಕೇಳುತ್ತಿಲ್ಲ ಎಂದು ಶಾಸಕರು ಪತ್ರ ಬರೆಯುತ್ತಿದ್ದಾರೆ. ಶಾಸಕರನ್ನು ನಿಯಂತ್ರಣದಲ್ಲಿಡಿ ಎಂದು ಸಚಿವರು ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷರಿಗೆ ಮನವಿ ಮಾಡುತ್ತಾರೆ.
ಮೇಲ್ನೋಟಕ್ಕೆ ಕಾಂಗ್ರೆಸ್‍ನಲ್ಲಿ ಎಲ್ಲವೂ ಸರಿಯಿದೆ ಎಂದು ಕೊಂಡರು ಒಳಗೊಳಗೇ ಆಕ್ರೋಶ ಕುದಿಯುತ್ತಿದೆ. ಆಂತರಿಕವಾಗಿ ಪರಿಸ್ಥಿತಿಯೇ ಬೇರೆ ಇದೆ ಎಂದು ಬಿ.ಎಸ್.ವೈ ಹೇಳಿದ್ದಾರಂತೆ. ಲೋಕಸಭೆ ಚುನಾವಣೆ ಇರುವುದರಿಂದ ನಿಮ್ಮನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ. ಜಗದೀಶ್ ಶೆಟ್ಟರ್ ಪರಿಸ್ಥಿತಿ ಏನಾಗಿದೆ ಎಂದು ನೀವೆ ನೋಡಿದ್ದಿರಾ. ನಮ್ಮ ಪಕ್ಷದಲ್ಲಿದ್ದಾಗ ಅವರು ಮೊದಲ ಸಾಲಿನಲ್ಲಿ ಇರುತ್ತಿದ್ದರು. ಈಗ ಪರಿಷತ್‍ನಲ್ಲಿ ಕೊನೆಯ ಬೆಂಚಿನಲ್ಲಿ ಕೂರುತ್ತಿದ್ದಾರೆ
ಏನೇ ಹೇಳಿದರು ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿ ಸೇರಿದಂತೆ ಕಾಂಗ್ರೆಸ್‍ಗೆ ಸೇರ್ಪಡೆಯಾಗಿರುವವರನ್ನು ಲೋಕಸಭೆ ಚುನಾವಣೆವರೆಗೆ ಮಾತ್ರ ಬಳಸಿಕೊಳ್ಳುತ್ತಾರೆ. ನಂತರ ಪಕ್ಷದಲ್ಲಿ ಇದ್ದರೂ ಅಷ್ಟೇ, ಬಿಟ್ಟರೂ ಅಷ್ಟೇ ಎಂಬ ತೀರ್ಮಾನಕ್ಕೆ ಬರುತ್ತಾರೆ. ನೀವೂ ಸಹ ಅಂತಹ ಸ್ಥಿತಿಗೆ ಹೋಗುವ ಮನಸ್ಸು ಮಾಡಬೇಡಿ ಎಂದು ಎಂ ಪಿ ರೇಣುಕಾಚಾರ್ಯ ಮತ್ತು ಮುನೇನಕೊಪ್ಪಗೆ ಬಿಎಸ್‍ವೈ ಮನವರಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ನಿಮಗೆ ಏನೇ ಸಮಸ್ಯೆಗಳಿದ್ದರೂ ನೇರವಾಗಿ ನನ್ನ ಬಳಿ ಹೇಳಿಕೊಳ್ಳಿ. ವರಿಷ್ಠರ ಜೊತೆ ಚರ್ಚಿಸಿ ನಾನು ಪರಿಹರಿಸುತ್ತೇನೆ. ಬಿಜೆಪಿ ನಿಮಗೆ ಸ್ಥಾನಮಾನ ನೀಡಿದೆ. ಕಷ್ಟಕಾಲದಲ್ಲಿದ್ದಾಗ ಪಕ್ಷದಲ್ಲಿದ್ದು, ಸಂಘಟನೆ ಮಾಡಿ ಅಧಿಕಾರಕ್ಕೆ ತರುವ ಪ್ರಯತ್ನ ಮಾಡಬೇಕು. ಬಿಜೆಪಿ ಬಿಡುವ ತೀರ್ಮಾನವನ್ನು ಎಂದಿಗೂ ಮಾಡಬೇಡಿ ಎಂದು ತಿಳಿ ಹೇಳಿದ್ದಾರಾಂತೆ.
ಯಾವುದೇ ಕಾರಣಕ್ಕೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರುವುದಿಲ್ಲ. ಎಷ್ಟೇ ವ್ಯತ್ಯಾಸಗಳಾದರೂ ಬಿಜೆಪಿ ನೇತೃತ್ವದ ಎನ್‍ಡಿಎ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ. ಒಂದು ವೇಳೆ ನೀವು ಬಿಜೆಪಿ ಬಿಟ್ಟು ಹೋದರೆ ಬರುವ ದಿನಗಳಲ್ಲಿ ಕಾನೂನಿನ ಸಂಕಷ್ಟಗಳು ಎದುರಾದರೂ ಅಚ್ಚರಿಯಿಲ್ಲ. ಅವರಿವರ ಮಾತನ್ನು ಕೇಳಿ ರಾಜಕೀಯ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ. ಬಿಜೆಪಿಯಲ್ಲಿ ಇರುವವರೆಗೂ ನಿಮ್ಮ ಹಿತಕಾಪಾಡಲು ನಾನು ನಿಮ್ಮ ಜೋತೆಗೆ ಇರುತ್ತೇನೆ ಎಂದು ಬಿಎಸ್‍ವೈ ಹೇಳಿದ್ದಾರಂತೆ.
ಇತ್ತೀಚೆಗೆ ಯಡಿಯೂರಪ್ಪ ಪಕ್ಷದೊಳಗೆ ಪುನಃ ಸಕ್ರಿಯರಾಗುತ್ತಿದ್ದು, ಅವರ ರಾಜಕೀಯ ಮುಗಿದೇ ಹೋಯಿತು ಎಂದು ಭಾವಿಸಿದಂತವರಿಗೆ ಬಿಸಿ ತುಪ್ಪವಾಗುತ್ತಿದ್ದಾರೆ. ಬಿಎಸ್‍ವೈ ವಿರುದ್ಧ ತೋಡೆ ತಟ್ಟಿದ ಸ್ವಪಕ್ಷದ ಕೆಲವು ನಾಯಕರಿಗೂ ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಯಡಿಯೂರಪ್ಪ ಶಕ್ತಿ ಎನು ಎನ್ನುವುದು ಅರಿವಾಗಿದೆ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲು ಹೋಗಿ ಪಕ್ಷವೆ ಅಧಿಕಾರ ಕಳೆದುಕೊಂಡು ಮೂಲೆಗೆ ಸರಿದಿದೆ.
ಇತ್ತೀಚೆಗೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಯಡಿಯೂರಪ್ಪ ಭಾಗವಹಿಸಿದ್ದರಿಂದಲೇ ಅದಕ್ಕೊಂದು ಹೊಸ ಖದರ್ ಬಂದಿತ್ತು ಎಂದು ಪಕ್ಷದ ಮುಖಂಡರೇ ಮಾತನಾಡಿಕೊಳ್ಳುತ್ತಿದ್ದಾರೆ.ಇನ್ನೂ ಒಂದು ಕ್ಷಣವೂ ನಾನು ಮನೆಯಲ್ಲಿ ಇರಲಾರೆ. ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿರುವುದು ಬಿಜೆಪಿಯೊಳಗೆ ಕೆಲವು ನಾಯಕರಿಗೆ ತಳಮಳ ಸೃಷ್ಟಿಸಿದೆ.ಮೂಲಗಳ ಪ್ರಕಾರ, ದೆಹಲಿ ನಾಯಕರು ಪಕ್ಷದಲ್ಲಿ ಸಕ್ರಿಯರಾಗುವಂತೆ ಬಿಎಸ್‍ವೈ ಅವರಿಗೆ ಮನವಿ ಮಾಡಿದ್ದರಿಂದಲೇ ಈ ಚಟುವಟಿಕೆಗಳು ಆರಂಭವಾಗಿವೆ. ತಮ್ಮ ಪುತ್ರ ವಿಜಯೇಂದ್ರಗೆ ಪಕ್ಷದೊಳಗೆ ಸೂಕ್ತ ಸ್ಥಾನಮಾನ ನೀಡಬಹುದೆಂಬ ಲೆಕ್ಕಾಚಾರದಿಂದಲೇ ಯಡಿಯೂರಪ್ಪ ಪುನಃ ಸಕ್ರಿಯರಾಗಿರಬಹುದೆಂಬ ಚರ್ಚೆಗಳು ಬಿಜೆಪಿಯಲ್ಲಿ ಆರಂಭವಾಗಿವೆ. ಒಟ್ಟಿನಲ್ಲಿ ಯಾರು ಯಾರನ್ನು ಆಪರೇಷನ್ ಮಾಡುತ್ತಾರೆ ಮತ್ತು ಯಾರು ಯಾವ ಪಕ್ಷ ತೊರೆದು ಯಾವ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಸುಧೀರ್ ವಿಷಯ ,ಶಿವಮೊಗ್ಗ