ಹುಬ್ಬಳ್ಳಿ ಎನ್ಕೌಂಟರ್ : ಬಾಲಕಿ ಹಂತಕನ ಎನ್ಕೌಂಟರ್:, ದೇಹದ ಮರಣೋತ್ತರ ಪರೀಕ್ಷೆಗೆ ಹೈಕೋರ್ಟ್ ಆದೇಶ.
ASHWASURYA/SHIVAMOGGA
news.ashwasurya.in
ಹುಬ್ಬಳ್ಳಿ ನಗರದ ಬಾಲಕಿ ಕೊಲೆಗಾರ ಪೊಲೀಸರ ಎನ್ಕೌಂಟರ್ಗೆ ಬಲಿಯಾಗಿದ್ದ ಆತನ ಮೃತದೇಹದ ಮರಣೋತ್ತರ ಪರೀಕ್ಷೆಗೆ ಹೈಕೋರ್ಟ್ ಆದೇಶ ಮಾಡಿದೆ
ಅಶ್ವಸೂರ್ಯ/ಬೆಂಗಳೂರು: ಹುಬ್ಬಳ್ಳಿಯಲ್ಲಿ ನಗರದಲ್ಲಿ ಐದು ವರ್ಷದ ಬಾಲಕಿಯ ಹತ್ಯೆಗೈದು, ಪೊಲೀಸರ ಕೈಯಲ್ಲಿ ಹತನಾದ ಬಿಹಾರದ ವಲಸೆ ಕಾರ್ಮಿಕನ ದೇಹದ ಮರಣೋತ್ತರ ಪರೀಕ್ಷೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ಮಂಗಳವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈತ ಐದು ವರ್ಷದ ಬಾಲಕಿಯ ಅತ್ಯಾಚಾರಗೈದು ಹತ್ಯೆ ಮಾಡಿ ಕೇರಳಕ್ಕೆ ಪರಾರಿಯಾಗಿ ತಲೆಮರೆಸಿಕೊಂಡಿದ್ದ. ಏಪ್ರಿಲ್ 13ರಂದು ಹುಬ್ಬಳ್ಳಿಯಲ್ಲಿ ಎನ್ಕೌಂಟರ್ನಲ್ಲಿ ಪೊಲೀಸರ ಗುಂಡಿಗೆ ಈತ ಕೂಡ ಬಲಿಯಾಗಿದ್ದ.
ಬಿಹಾರ ಮೂಲದ ಕೂಲಿ ಕಾರ್ಮಿಕ ರಿತೇಶ್ ಕುಮಾರ್ ಹುಬ್ಬಳ್ಳಿಯಲ್ಲಿ ನಡೆದ ಅತ್ಯಾಚಾರ- ಕೊಲೆ ಆರೋಪಿಯಾಗಿದ್ದು, ಈತನ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಈತನನ್ನು ಕೃತ್ಯ ನೆಡೆದ ಸ್ಥಳಕ್ಕೆ ಮಹಜರು ಮಾಡಲು ಪೊಲೀಸರು ಕರೆದುಕೊಂಡು ಹೋದಾಗ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಪೊಲೀಸರ ಮೇಲೆ ಹಲ್ಲೆ ಮಾಡಿದಾಗ ಪೊಲೀಸರು ಗುಂಡು ಹಾರಿಸಿದ್ದರು,
ಗುಂಡು ಆತನ ದೇಹಕ್ಕೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಕರ್ನಾಟಕದ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಇದನ್ನು ಪ್ರಶ್ನೆ ಮಾಡಿದ್ದು, ಆತನ ಮರಣೋತ್ತರ ಪರೀಕ್ಷೆ ಮಾಡಬೇಕು ಎಂದು ಅರ್ಜಿ ಸಲ್ಲಿಸಿತ್ತು.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಆದೇಶ ನೀಡಿದೆ. ಪೊಲೀಸ್ ಕ್ರಮದಿಂದ ಉಂಟಾಗುವ ಸಾವುಗಳ ಕುರಿತು ಸುಪ್ರೀಂ ಕೋರ್ಟ್ನ 2014 ರ ಮಾರ್ಗಸೂಚಿಗಳನ್ನು ಪಾಲಿಸುವ ಅಗತ್ಯವನ್ನು ನ್ಯಾಯಾಲಯ ಒತ್ತಿ ಹೇಳಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ಪೀಠ ಆದೇಶಿಸಿದೆ. ಮರಣೋತ್ತರ ಪರೀಕ್ಷೆಯನ್ನು ವೀಡಿಯೊಗ್ರಫಿ ಮಾಡಬೇಕು ಮತ್ತು ಮುಂದಿನ ತನಿಖೆಗಳಲ್ಲಿ ಸಂಭಾವ್ಯ ಬಳಕೆಗಾಗಿ ದೇಹದ ಮಾದರಿಗಳನ್ನು ಸಂರಕ್ಷಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಪಿಯುಸಿಎಲ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಆದಿತ್ಯ ಸೋಂಧಿ, ಮೃತನ ವಿರುದ್ಧದ ಆರೋಪಗಳ ಸ್ವರೂಪ ಮತ್ತು ಆಪಾದಿತ ಎನ್ಕೌಂಟರ್ ಸುತ್ತಲಿನ ಸಂದರ್ಭಗಳ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಈ ಹಂತದಲ್ಲಿ ನಾವು ಯಾವುದೇ ಪ್ರತಿಕೂಲ ಹೇಳಿಕೆಗಳನ್ನು ನೀಡುತ್ತಿಲ್ಲ. ಕಡ್ಡಾಯ ಮಾರ್ಗಸೂಚಿಗಳ ಅನುಸರಿಸಿರುವುದನ್ನು ಖಚಿತಪಡಿಸಿಕೊಳ್ಳುವುದು ಮಾತ್ರ ನಮ್ಮ ವಿನಂತಿಯಾಗಿದೆ ಎಂದು ಅವರು ನುಡಿದರು.
ದೇಹದ ದಹನದ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ದೇಹವನ್ನು ಸಂರಕ್ಷಿಸಲು ಮಧ್ಯಂತರ ಪರಿಹಾರವನ್ನು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಈಗಾಗಲೇ ಎಫ್ಐಆರ್ ದಾಖಲಿಸಲಾಗಿದೆ ಮತ್ತು ಅಪರಾಧ ತನಿಖಾ ಇಲಾಖೆ (ಸಿಐಡಿ) ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ಹೇಳಿದರು. ಶವವನ್ನು ಅಂತ್ಯಕ್ರಿಯೆ ಮಾಡುವ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇಂತಹ ಸಂದರ್ಭಗಳಲ್ಲಿ ಶವವನ್ನು ಹೂಳಲಾಗುತ್ತದೆ. ದಹನವಲ್ಲ. ಆದ್ದರಿಂದ ಅಗತ್ಯವಿದ್ದರೆ ದೇಹವನ್ನು ನಂತರ ಹೊರತೆಗೆಯಬಹುದು. ಗುರುತಿಸುವಿಕೆಯ ನಂತರವಷ್ಟೇ ಶವವನ್ನು ಅಂತ್ಯಕ್ರಿಯೆಗಾಗಿ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ ಎಂದು ಅವರು ಹೇಳಿದರು. ಈ ಭರವಸೆಯನ್ನು ಗಮನಿಸಿದ ಪೀಠವು, ಶವಸಂಸ್ಕಾರದ ಬಗ್ಗೆ ಅರ್ಜಿದಾರರ ಕಳವಳ ಆಧಾರರಹಿತವಾಗಿದೆ ಎಂದಿತು. ನ್ಯಾಯಾಲಯವು ಪ್ರತಿವಾದಿಗಳಿಗೆ ನೋಟಿಸ್ಗಳನ್ನು ಜಾರಿ ಮಾಡಿದ್ದು, ಏಪ್ರಿಲ್ 24 ರೊಳಗೆ ಉತ್ತರಿಸಲು ತಿಳಿಸಿದೆ.
ಹುಬ್ಬಳ್ಳಿಯಲ್ಲಿ ಬಾಲಕಿಯ ಕೊಲೆ, ಆರೋಪಿಯ ಎನ್ಕೌಂಟರ್: ಪ್ರಕರಣದ ಸಮಗ್ರ ತನಿಖೆಗೆ WIM ಒತ್ತಾಯ.
ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಹೇಳೊದು ಏನೂ.?
ಬೆಂಗಳೂರು|| ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಗೈದು ಕೊಲೆಗೈದಿರುವ ಪೈಶಾಚಿಕ ಕೃತ್ಯವು ಅತ್ಯಂತ ಹೇಯವಾಗಿದ್ದು, ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ.ಇಂತಹ ಘಟನೆಗಳು ನಿರಂತರ ಮರುಕಳಿಸುತ್ತಿದ್ದು ಮಹಿಳೆಯರು ಮತ್ತು ಮಕ್ಕಳು ರಾಜ್ಯದಲ್ಲಿ ಸುರಕ್ಷಿತರಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅತ್ಯಾಚಾರ ಪ್ರಕರಣಗಳ ಸೂಕ್ತ ತನಿಖೆ ನಡೆದು ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗದಿರುವುದೇ ಇಂತಹ ಘಟನೆಗಳು ಮರುಕಳಿಸಲು ಪ್ರಮುಖ ಕಾರಣ. ಆದರೆ ಈ ಪ್ರಕರಣದಲ್ಲಿ ಆರೋಪಿಯನ್ನು ಪೋಲೀಸರು ಎನ್ಕೌಂಟರ್ ಮಾಡಿ ಹತ್ಯೆಗೈದಿರುವುದು ಅಸಾಂವಿಧಾನಿಕವಾಗಿದೆ.
ಈ ದೇಶದಲ್ಲಿ ಪ್ರತಿರೋಧವನ್ನು ಹತ್ತಿಕ್ಕಲು ಪೊಲೀಸ್ ಎನ್ಕಂಟರ್ ದೊಡ್ಡ ಅಸ್ತ್ರವಾಗಿ ಬಳಕೆಯಾಗುತ್ತಾ ಬರುತ್ತಿದೆ.
ಎನ್ಕೌಂಟರ್ ಎಂದಿಗೂ ಸಮರ್ಥನಿಯವಲ್ಲ. ಆರೋಪಿ ತಪ್ಪಿಸಲು ಅಥವಾ ದಾಳಿ ಮಾಡಲು ಯತ್ನಿಸುವಾಗ ಸೊಂಟದ ಕೆಳಗೆ ಗುಂಡು ಹಾರಿಸಲು ಕಾನೂನಾತ್ಮಕವಾಗಿ ಪೋಲೀಸರಿಗೆ ಹಕ್ಕಿದೆ. ಆದರೆ ಈ ಪ್ರಕರಣದಲ್ಲಿ ಆರೋಪಿಯ ಬೆನ್ನಿಗೆ ಗುಂಡು ತಗುಲಿ ಸತ್ತಿರುವುದರಿಂದ ಪೋಲೀಸರ ನಡೆಯು ಅನುಮಾನಕ್ಕೆಡೆಮಾಡಿದೆ. ಸಚಿವ ಸಂಪುಟ ಸದಸ್ಯರು ಪೋಲೀಸರನ್ನು ಬೆಂಬಲಿಸಿ ನೀಡಿರುವ ಬಾಲಿಶ ಹೇಳಿಕೆಗಳು ಪೋಲೀಸರನ್ನು ರಕ್ಷಿಸುವ ತಂತ್ರವಾಗಿದೆ.
ಆದ್ದರಿಂದ ರಾಜ್ಯ ಸರ್ಕಾರವು ಎನ್ಕೌಂಟರ್ ಪ್ರಕರಣವನ್ನು ನಿಷ್ಪಕ್ಷಪಾತವಾದ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ರಾಜ್ಯದಲ್ಲಿ ಮುಂದಕ್ಕೆ ಇಂತಹ ಘಟನೆಗಳು ಮರುಕಳಿಸದಂತೆ ಮಹಿಳೆಯರು ಮತ್ತು ಮಕ್ಕಳಿಗೆ ಭದ್ರತೆಯನ್ನು ಖಾತ್ರಿ ಪಡಿಸಬೇಕೆಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಒತ್ತಾಯಿಸುತ್ತದೆ ಎಂದು ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.