ಬೆಂಗಳೂರು 74 ರೌಡಿಗಳ ಮನೆ ಮೇಲೆ ಸಿಸಿಬಿ ಪೊಲೀಸ್ ದಾಳಿ.! ಬೆಚ್ಚಿಬಿದ್ದ ಬೆಂಗಳೂರು ಅಂಡರ್ ವರ್ಲ್ಡ್.!
ಅಶ್ವಸೂರ್ಯ/ಬೆಂಗಳೂರು: ನಟೋರಿಯಸ್ ರೌಡಿಯೊಬ್ಬ ಗಡಿಪಾರು ಆದೇಶ ಉಲ್ಲಂಘಿಸಿ ಬೆಂಗಳೂರು ನಗರದಲ್ಲಿಲೆ ನೆಲೆಸಿದ್ದವನನ್ನು ಸೇರಿದಂತೆ ಸರಿಸುಮಾರು 74 ರೌಡಿಗಳ ಮನೆಗಳ ಮೇಲೆ ಕಳೆದ ಹದಿನೈದು ದಿನಗಳಿಂದಲೂ ಸಿಸಿಬಿ ಅಪರಾಧ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದಾಳಿಮಾಡಿ ಕಾರ್ಯಾಚರಣೆ ಕೈಗೊಂಡು ಕೆಲವು ರೌಡಿಗಳಿಗೆ ಪೋಲಿಸ್ ರೈಡ್ ನ ಬಿಸಿ ಮುಟ್ಟಿಸಿದ್ದಾರೆ. ಸಿಸಿಬಿ ಪೊಲೀಸರು ಕಳೆದ 15 ದಿನಗಳಿಂದ,ಸೂರ್ಯ ಉದಯಿಸುವ ಮುನ್ನವೇ ಬೆಂಗಳೂರಿನ ಆಗ್ನೇಯ, ಪೂರ್ವ, ಈಶಾನ್ಯ, ಮತ್ತು ವೈಟ್‌ಫೀಲ್ಡ್ ಏರಿಯಾಗಳಲ್ಲಿನ ನಟೋರಿಯಸ್ ರೌಡಿಗಳ ಮನೆಗಳ ಮೇಲೆ ದಾಳಿ ಮಾಡಿದ್ದು, ಒಟ್ಟು ಸರಿಸುಮಾರು 74 ರೌಡಿಗಳ ಮನೆಗಳನ್ನು ಶೋಧಸಿ 7 ರೌಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.
ರೌಡಿಗಳ ಮನೆಗಳನ್ನು ಶೋಧನೆ ಮಾಡಿದ ಸಮಯದಲ್ಲಿ ಪೂರ್ವ ವಿಭಾಗದ ಡಿ.ಜೆ ಹಳ್ಳಿ ರೌಡಿಶೀಟರ್ ಒಬ್ಬನಿಗೆ ಆಂಧ್ರಪ್ರದೇಶದ ಹಿಂದೂಪುರಕ್ಕೆ ಗಡಿಪಾರು ಆದೇಶವಾಗಿದ್ದರೂ ಸಹ ಆದೇಶ ಉಲ್ಲಂಘನೆ ಮಾಡಿ, ಡಿ ಜೆ ಹಳ್ಳಿಯಲ್ಲಿರುವ ತನ್ನ ಮನೆಯಲ್ಲೆ ವಾಸವಾಗಿರುವುದು ಕಂಡುಬಂದಿದೆ. ಈ ರೌಡಿಯ ವಿರುದ್ಧ ಕ್ರಮ ಕೈಗೊಳ್ಳಲು ಕೋರಿ ಡಿ ಜೆ ಹಳ್ಳಿ ಪೊಲೀಸ್ ಠಾಣೆಗೆ ವರದಿ ನೀಡಲಾಗಿದೆ.
ಆಗ್ನೇಯ ವಿಭಾಗದ ರೌಡಿಗಳ ಮನೆಗಳ ಮೇಲೆ ದಾಳಿಮಾಡಿದಾಗ ಗಿರಿನಗರ ಪೊಲೀಸ್ ಠಾಣೆಯ ರೌಡಿ ವಿರುದ್ದ ನ್ಯಾಯಾಲಯವು ಎನ್.ಬಿ.ಡಬ್ಲ್ಯೂ ವಾರೆಂಟ್ ಮತ್ತು ಪೊಕ್ಲಮೇಷನ್‌ಗಳನ್ನು ಹೊರಡಿಸಿದ್ದು, ಈತನ ಬಗ್ಗೆ ಮಾತಿಯನ್ನು ಕಲೆಹಾಕಿ, ಕೆಂಗೇರಿ ಮೆಟ್ರೋ ನಿಲ್ದಾಣದ ಬಳಿ ವಶಕ್ಕೆ ಪಡೆದು ಠಾಣೆಗೆ ವರದಿಯೊಂದಿಗೆ ಹಾಜರುಪಡಿಸಲಾಗಿದೆ. ಈಶಾನ್ಯ ಭಾಗದಲ್ಲಿ ರೌಡಿಗಳ ಮನೆ ಮೇಲೆ ದಾಳಿ ನಡೆಸಿದಾಗ ಕೊಡಿಗೇಹಳ್ಳಿ ಪೊಲೀಸ್ ಠಾಣೆಯ ರೌಡಿ ವಿರುದ್ದ ನ್ಯಾಯಾಲಯವು 3 ಪ್ರಕರಣಗಳಲ್ಲಿ ಎನ್.ಬಿ.ಡಬ್ಲ್ಯೂ ವಾರೆಂಟ್ ಹೊರಡಿಸಿದ್ದು, ಈತನು ವಾಸವಿರುವ ಸಂಜಯನಗರದ ನಾಗಶೆಟ್ಟಿಹಳ್ಳಿಯಲ್ಲಿ ವಶಕ್ಕೆ ಪಡೆದು, ಠಾಣೆಗೆ ಒಪ್ಪಿಸಲಾಗಿದೆ.
ಕೊಡಿಗೇಹಳ್ಳಿ ಪೊಲೀಸ್ ಠಾಣೆಯ ಮತ್ತೊರ್ವ ರೌಡಿ ವಿರುದ್ದ ನ್ಯಾಯಾಲಯವು 2 ಪ್ರಕರಣಗಳಲ್ಲಿ ಎನ್.ಬಿ.ಡಬ್ಲ್ಯೂ ವಾರೆಂಟ್ ಹೊರಡಿಸಿದ್ದು, ಈತನನ್ನು ಕೊಡಿಗೇಹಳ್ಳಿ ಭದ್ರಪ್ಪ ಲೇಔಟ್‌ನಲ್ಲಿರುವ ಮನೆಯಿಂದ ವಶಕ್ಕೆ ಪಡೆದು, ಠಾಣೆಗೆ ಹಾಜರುಪಡಿಸಲಾಗಿದೆ. ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯ ರೌಡಿ ವಿರುದ್ದ ದಾಖಲಾಗಿದ್ದ 5 ಪ್ರಕರಣಗಳಲ್ಲಿ ಎನ್.ಬಿ.ಡಬ್ಲ್ಯೂ ವಾರೆಂಟ್ ಹೊರಡಿಸಿದ್ದು, ಈತನನ್ನು ನೆಲಮಂಗಲ ತಾಲ್ಲೂಕು ಗೆದ್ದಲಹಳ್ಳ ಗ್ರಾಮದಿಂದ ವಶಕ್ಕೆ ಪಡೆದು, ಯಲಹಂಕ ನ್ಯೂ ಟೌನ್ ಪೊಲೀಸರ ವಶಕ್ಕೆ ನೀಡಲಾಗಿದೆ.
ವಿಲ್ಸನ್‌ಗಾರ್ಡ್‌ನ್ ಪೊಲೀಸ್ ಠಾಣೆಯ ರೌಡಿಯು ಸಾರ್ವಜನಿಕರಿಗೆ ಮತ್ತು ಸ್ಥಳೀಯರಿಗೆ ಶಾಂತಿ ಹಾಗೂ ನೆಮ್ಮದಿಗೆ ಭಂಗವನ್ನುಂಟು ಮಾಡುವ ಅನುಮಾನವಿದ್ದ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ, ಈತನ ವಿರುದ್ಧ ಕ್ರಮ ಜರುಗಿಸಲು ವಿಲ್ಸನ್‌ಗಾರ್ಡ್‌ನ್ ಪೊಲೀಸ್ ಠಾಣೆಗೆ ಹಾಜರುಪಡಿಸಲಾಗಿದೆ.
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ರೌಡಿಯೊಬ್ಬ ಸಾರ್ವಜನಿಕರಿಗೆ ಮತ್ತು ಸ್ಥಳೀಯರಿಗೆ ಶಾಂತಿ ಹಾಗೂ ನೆಮ್ಮದಿಗೆ ಭಂಗವನ್ನುಂಟು ಮಾಡುವ ಅನುಮಾನವಿದ್ಧ ಕಾರಣಕ್ಕೆ ಆತನನ್ನು ಬಂಧಿಸಿ ಮುಂಜಾಗ್ರತಾ ಕ್ರಮವಾಗಿ ಆತನ ವಿರುದ್ಧ ಕ್ರಮ ಜರುಗಿಸಲು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.
ಈ ರೌಡಿಗಳ ಮೇಲಿನ ಕಾರ್ಯಾಚರಣೆಯನ್ನು ನಗರ ಅಪರ ಪೊಲೀಸ್ ಆಯುಕ್ತರ ಮಾರ್ಗದರ್ಶನದಂತೆ, ಉಪ ಪೊಲೀಸ್ ಆಯುಕ್ತರು, ಅಪರಾಧ-1 ರವರ ನೇತೃತ್ವದಲ್ಲಿ, ಸಿಸಿಬಿ ಘಟಕದ ಸಂಘಟಿತ ಅಪರಾಧ ದಳ (ಪೂರ್ವ) ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ಕೈಗೊಂಡಿದ್ದು ಬೆಂಗಳೂರು ಅಂಡರ್ ವರ್ಲ್ಡ್ ಒಂದೊಮ್ಮೆ ಬೆಚ್ಚಿ ಬಿದ್ದಿದೆ.!