ಹುಟ್ಟು ಹಬ್ಬದ ಸಂಭ್ರಮದಲ್ಲಿ ಯಶ್.ಟ್ಯಾಕ್ಸಿಕ್ ಚಿತ್ರದ ಟೀಸರ್ ಬಿಡುಗಡೆ.
ಅಶ್ವಸೂರ್ಯ/ ಬೆಂಗಳೂರು : ಕೆಜಿಎಫ್ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಸ್ಟಾರ್ ನಟರಾದ ಕನ್ನಡದ ಹೆಮ್ಮೆಯ ನಟ ರಾಕಿಂಗ್ ಸ್ಟಾರ್ ಯಶ್ ಇಂದು (ಜನವರಿ,08),ತಮ್ಮ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಬೆಂಗಳೂರಿಗೆ ಬರಿಗೈಯಲ್ಲಿ ಬಂದು, ಒಂದು ಕಾಲದಲ್ಲಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಮಲಗಿ, ಊಟಕ್ಕೂ ಪರದಾಡಿದ್ದ ಯುವಕನೊಬ್ಬ ಈಗ ಒಂದು ಸಿನಿಮಾದ ನಟನೆಗಾಗಿ ನೂರಾರು ಕೋಟಿ ಸಂಭಾವನೆ ಪಡೆಯುವಷ್ಟು ಎತ್ತರಕ್ಕೆ ಬೆಳೆದಿದ್ದಾರೆ ಎಂದರೆ ನಂಬಲೆಬೇಕು.! ಅಷ್ಟೇ ಅಲ್ಲ ಬಾಲಿವುಡ್ ಸಿನಿಮಾಗಳ ನಿರ್ಮಾಣಕ್ಕೂ ಕೈ ಹಾಕಿದ್ದಾರೆ.
ಪ್ರತಿ ವರ್ಷ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬವನ್ನು ತುಂಬಾ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದರು.ಯಶ್ ಅವರ ಮನೆಯ ಬಳಿ ಬಂದು ಸಾಲಾಗಿ ನಿಂತು ತಮ್ಮ ನಟನನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ ಕಳೆದ ಬಾರಿ ಗದಗ್ನಲ್ಲಿ ಬ್ಯಾನರ್ ಕಟ್ಟುವ ವೇಳೆ ವಿದ್ಯುತ್ ಸ್ಪರ್ಶವಾಗಿ ಅಭಿಮಾನಿಗಳು ಮೃತಪಟ್ಟಿದ್ದರು. ಆಗ ಯಶ್ ತುಂಬಾ ಮನನೊಂದು ಅಲ್ಲಿಗೆ ಹೋಗಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿ ಪರಿಹಾರ ಕೊಟ್ಟಿದ್ದರು.ಇದನ್ನು ಅರಿತ ಯಶ್ ತಮ್ಮ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ.
ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ…
ನಿಮ್ಮ ಅಭಿಮಾನದ ಅಪ್ಪುಗೆ ಮತ್ತೊಂದು ವರ್ಷವನ್ನು ಸಾರ್ಥಕಗೊಳಿಸಿದೆ. ಹೊಸ ವರ್ಷ ಹೊಸ ಭರವಸೆಗಳೊಂದಿಗೆ ನಗು ನಗುತ್ತಾ ಬದುಕೋಣ. ಬದುಕನ್ನು ಮೆರಗುಗೊಳಿಸುವಂತಹ ಹೊಸ ಯೋಜನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ. ಸಿನಿಮಾ ಕೆಲಸದ ನಿಮಿತ್ತ ನಾನು ಹುಟ್ಟುಹಬ್ಬದಂದು ಊರಿನಲ್ಲಿ ಇರುವುದಿಲ್ಲ. ನನ್ನ ಹುಟ್ಟುಹಬ್ಬಕ್ಕೆ ನೀವು ತೋರುವ ಅಭಿಮಾನ ಜವಾಬ್ದಾರಿಯುತವಾಗಿರಲಿ ಎಂಬುದು ನನ್ನ ಪ್ರೀತಿಯ ಮನವಿ. ಹಾಗಾಗಿ ಪ್ಲೆಕ್ಸ್ , ಬ್ಯಾನರ್ಗಳ ಯಾವುದೇ ಆಡಂಬರ ಮಾಡದೆ ನನ್ನ ಮನಸ್ಸಿಗೆ ನೋವಾಗುವ ನಡವಳಿಕೆ ತೋರದೆ ನೀವು ಇದ್ದಲ್ಲಿಂದಲೇ ನಿಮ ಕುಟುಂಬದವರು ಹೆಮ್ಮೆಪಡುವ ಕೆಲಸ ನಿಮ್ಮಿಂದ ಆದರೆ ಅದಕ್ಕಿಂತ ದೊಡ್ಡ ಉಡುಗೊರೆ ನನಗೆ ಮತ್ತೊಂದಿಲ್ಲ. ಆದಷ್ಟು ಬೇಗ ನಿಮನ್ನೆಲ್ಲಾ ಭೇಟಿ ಆಗುತ್ತೇನೆ. ಎಲ್ಲರಿಗೂ ಹೊಸ ವರ್ಷ ಒಳಿತನ್ನು ತರಲಿ ಎಂದು ಅಭಿಮಾನಿಗಳಿಗೆ ಪ್ರೀತಿಯ ಹಾರೈಕೆ ಮತ್ತು ಜಾಗೃತಿ ಮಾತುಗಳನ್ನು ಆಡಿದ್ದರು.
ಸದ್ಯ ಯಶ್ ಟ್ಯಾಕ್ಸಿಕ್ ಚಿತ್ರದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದಾರೆ. ಕೆವಿಎನ್ ಪೊಡಕ್ಷನ್ಸ್ ಮತ್ತು ಮಾನ್ ಸ್ಟಾರ್ ಮೈಂಡ್ ಕ್ರಿಯೇಷನ್ಸ್ ನಡಿ ವೆಂಕಟ್.ಕೆ ನಾರಾಯಣ ಮತ್ತು ಯಶ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರ, ಚಿತ್ರಪ್ರೇಮಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ.
ಬೆಂಗಳೂರಿನ ಎಚ್ಎಮ್ಟಿ ಬಳಿ ನೂರಾರು ಕೋಟಿ ಬೆಲೆಬಾಳುವ ಸೆಟ್ ಹಾಕಿ ಮೊದಲ ಹಂತದ ಚಿತ್ರೀಕರಣ ಮಾಡಲಾಗಿದೆ. ಈಗ ಎರಡನೇ ಹಂತದ ಚಿತ್ರೀಕರಣ ತುಂಬಾ ಜೋರಾಗಿ ನಡೆಯುತ್ತಿದೆ.
ಇದೇ ಸಂದರ್ಭದಲ್ಲಿ ಚಿತ್ರತಂಡ ಚಿತ್ರದ ಒಂದು ಟೀಸರ್ ಅನ್ನು ಬಿಡುಗಡೆ ಮಾಡವ ಮೂಲಕ ಯಶ್ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ. ನಟ ಯಶ್ ವಿಂಟೇಜ್ ಕಾರಿನ ಮುಂದೆ ಸಿಗರೇಟ್ ಸೇದುತ್ತಾ ರೆಟ್ರೋ ಸ್ಟೈಲಲ್ಲಿ ಸ್ಟೈಲಿಶ್ ಆಗಿ ನಿಂತಿರುವುದು ಎಲ್ಲರ ಗಮನ ಸೆಳೆದಿದೆ.ಯಶ್ ಅಭಿಮಾನಿಗಳಂತು ಚಿತ್ರದ ಟೀಸರ್ ನೋಡಿ ಖುಷಿ ಆಗಿದ್ದಾರೆ ಎನ್ನುವುದಂತು ಸತ್ಯ.