Headlines

ಇದು ತಮ್ಮನ್ನೇ ತಾವು ಕೊಂದು ಕೊಳ್ಳುವ ದೇಶ.!?

ಇದು ತಮ್ಮನ್ನೇ ತಾವು ಕೊಂದುಕೊಳ್ಳುವ ದೇಶ.!?

ಇದು ವಿಸ್ಮಯ ಮತ್ತು ಶೋಚನೀಯ ವಿಚಾರ..! ಜಾಗತೀಕ ಭೂಪಟದಲ್ಲಿ ಭಾರತಕ್ಕೆ ತನ್ನದೇ ಆದ ಹಿರಿಮೆ – ಗರಿಮೆಗಳಿವೆ. ಸಂಸ್ಕೃತಿ, ಸಂಸ್ಕಾರಗಳ ವಿಚಾರದಲ್ಲಿ ವಿಶ್ವದ ಗಮನ ಸೆಳೆದ ಹೆಮ್ಮೆಯ ದೇಶ ನಮ್ಮದು. ಜಗತ್ತು ಬಹು ಎಚ್ಚರಿಕೆಯಿಂದ ನೋಡುತ್ತಿರುವ ದೇಶವೂ ಹೌದು. ಆದರೆ ಇಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆ ಹೇಗಿದೆಯೋ ಹಾಗೆಯೇ ಭ್ರಷ್ಟಾಚಾರ,ಅತ್ಯಾಚಾರ ಪ್ರಕರಣಗಳು, ಬಡತನ, ಹಸಿವು, ಅವಮಾನಗಳು,ಲೈಂಗಿಕ ಕಿರುಕುಳ ಸರಣಿ ಸಾಮಾಜಿಕ ಪಿಡುಗುಗಳೂ ದೇಶವನ್ನು ಜಾಗತಿಕ ಮಟ್ಟದಲ್ಲಿ ಅಸಹ್ಯಿಸುವಂತೆ ಮಾಡಿವೆ. ಎಲ್ಲಿ ಹಸಿವು, ಬಡತನ, ಅನಾರೋಗ್ಯಗಳು ತಾಂಡವವಾಡುತ್ತವೆಯೋ ಅಲ್ಲಿ ಕಲಹ, ಕ್ರೈಮುಗಳೂ ವಿಜೃಂಭಿಸುತ್ತವೆ. ಜಗತ್ತಿನ ಬಹುತೇಕ ದೇಶಗಳ ಚರಿತ್ರೆ ಗಮನಿಸಿದರೆ ಇಂತಹ ಸಾಮಾಜಿಕ ಪಿಡುಗುಗಳೇ ಅನೇಕ ದೇಶಗಳನ್ನು ಕುಖ್ಯಾತವನ್ನಾಗಿಸಿವೆ. ಆಂತರಿಕ ಕಲಹ, ಮಾನವೀಯ ಸಂಬಂಧಗಳ ನಶಿಸುವಿಕೆಯಿಂದಾಗಿ ಬಹಳಷ್ಟು ದೇಶಗಳು ತಮ್ಮ ಅಸ್ಥಿತ್ವಕ್ಕೇ ಕುಂದು ತಂದುಕೊಂಡಿವೆ. ಇಂತಹ ಕರಾಳ ಪಟ್ಟಿಯಲ್ಲಿ ಭಾರತವು ಸೇರಿದೆ ಎನ್ನುವುದು ಆತಂಕಕಾರಿ ವಿಚಾರ. ಹಾಗಾಗಿಯೇ ಈಗ ಭಾರತ ತಮ್ಮನ್ನೇ ತಾವು ಕೊಂದುಕೊಳ್ಳುವವರ ದೇಶ ಎಂಬ ಕುಖ್ಯಾತಿಗೆ ಗುರಿಯಾಗಿದೆ. ಅಂದರೆ ಆತ್ಮಹತ್ಯೆಗಳ ವಿಚಾರದಲ್ಲಿ ಭಾರತ ವಿಶ್ವದ ರಾಜಧಾನಿಯಾಗಿ ವಿಜೃಂಭಿಸುತ್ತಿದೆ..!!

ನಿಮಗೆ ಆಶ್ಚರ್ಯವಾಗಬಹುದು. ದೇಶದಲ್ಲಿ ಪ್ರತಿ ಹತ್ತರಿಂದ ಹದಿನೈದು ನಿಮಿಷಕ್ಕೊಬ್ಬರು ತಮ್ಮ ಕೈಯಾರೆ ತಮ್ಮ ಅಮೂಲ್ಯವಾದ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ.! ರಾತ್ರಿ ಬೆಳಗಾಗುವುದರಲ್ಲಿ ಸರಾಸರಿ ನಾಲ್ಕೈದು ಡಜನ್‌ ಜನ ತಮ್ಮನ್ನೇ ತಾವು ಕೊಂದುಕೊಳ್ಳುತ್ತಿದ್ದಾರೆ.! ಅದರಲ್ಲಿ ರೈತರು ಹಾಗೂ ಆಧುನಿಕ ಮನಸ್ಥಿತಿಯ ಯುವ ಜನರ ಪಾಲು
ಗಣನೀಯ ಎನ್ನುವುದು ವಿಪರ್ಯಾಸ. ಸೋಲು, ಸಾಲ, ಅವಮಾನ, ಮಾನಸಿಕ ಒತ್ತಡ, ಭವಿಷ್ಯದ ಅಭದ್ರತೆ, ಪ್ರೇಮ ವೈಪಲ್ಯ, ದಾಂಪತ್ಯ ವಿರಸ, ದುರಾಸೆ, ನಿರುದ್ಯೋಗ ಹೀಗೆ ಸಾಯುವವರಿಗೆ ಸಾವಿರ ಕಾರಣಗಳಿವೆ. ಎಲ್ಲಾ ಆತ್ಯಹತ್ಯೆಯ ಹಿಂದೆಯೂ ಒಂದೊಂದು ದುರಂತ ಅಡಗಿರುತ್ತದೆ. ಕೆಲವು ಆತ್ಮಹತ್ಯೆಗಳಿಗೆ ಅಸಲಿಗೆ ಕಾರಣಗಳೇ ಇರುವುದಿಲ್ಲ. ಹಾಗಿದ್ದರೂ ಅವರು ತಮ್ಮನ್ನೇ ತಾವು ಕೊಂದುಕೊಂಡು ಬಿಡುತ್ತಾರೆ. ಅಂದರೆ ಆತ್ಮಹತ್ಯೆ ಮಾಡಿಕೊಳ್ಳುವುದೂ ಸಹ ಭಾರತದ ಮಟ್ಟಿಗೆ ಖಾಯಿಲೆ, ಖಯಾಲಿ ಆಗಿ ಬಿಟ್ಟಿದೆ..! ಅಭದ್ರತೆಯ ಮನಸ್ಸಿನವರಿಗೆ ಇದು ಗೀಳು. ಆದರೆ ಯಾವ ಕಾರಣ, ನೆಪವೂ ಇಲ್ಲದೆ ಭೀಕರವಾಗಿ ಸತ್ತು ಹೋಗುವವರನ್ನು ಎನನ್ನಬೇಕು..? ಅವರನ್ನು ಕ್ಷಮಿಸುವುದಾದರೂ ಹೇಗೆ..? ನಮ್ಮ ವ್ಯವಸ್ಥೆ ಮತ್ತು ಸಂವಿಧಾನ ಎಲ್ಲರಿಗೂ ಜೀವಿಸುವ ಹಕ್ಕು ನೀಡಿದೆ. ಅದು ನಾಗರಿಕತೆಯ ಸಂಕೇತವೂ ಹೌದು. ಆದರೆ ವಿಶ್ವದ ಯಾವ ದೇಶದಲ್ಲೂ ಸಾಯುವ ಹಕ್ಕು ಲಭ್ಯವಿಲ್ಲ ಮತ್ತು ಸಾಯಿಸುವ ಅಧಿ ಕಾರವೂ ಇಲ್ಲ, ಈ ನಿಯಮ ಕೇವಲ ಮನುಷ್ಯನಿಗೆ ಮಾತ್ರ . ಅನ್ವಯವಾಗುವುದಿಲ್ಲ. ಸಕಲ ಜೀವ ಸಂಕುಲಕ್ಕೆ ಅನ್ವಯಿಸುತ್ತದೆ. ಆದರೆ ಮನುಷ್ಯನ ದುರಾಸೆ, ದುರ್ಬುದ್ದಿಯಿಂದಾಗಿ ಭೂಮಂಡಲದ ಅನೇಕ ಜೀವಿಗಳು ಬಲಿಯಾಗುತ್ತಿವೆ.

ಇದರಲ್ಲಿ ಮನುಷ್ಯನೂ ಸೇರಿದ್ದಾನೆನ್ನುವುದೇ ಮೈ ನಡುಗಿಸುವ ಸಂಗತಿ. ಮನುಷ್ಯ ಕ್ರೌರ್ಯಕ್ಕೆ ಬಲಿಯಾಗುವ ಜೀವಗಳ ಕತೆ ಒತ್ತಟ್ಟಿಗಿರಲಿ ಆದರೆ ತಮ್ಮನ್ನೇ ತಾವು ಕೊಂದು ಕೊಳ್ಳುವವರ ಕತೆ – ವ್ಯಥೆಗಳೇನಿವೆಯಲ್ಲ ಅವು ಭಯಾನಕ, ಭೀಭತ್ಸ ಅತಿ ಘೋರ ..! ದೇಶದ ಕಾನೂನಿನಲ್ಲಿ ತಮ್ಮನ್ನು ತಾವು ಕೊಂದುಕೊಳ್ಳವುದೂ ಸಹ ಘೋರ ಅಪರಾಧವೆಂದು ಎಷ್ಟೇ ಘಂಟಾಘೋಷವಾಗಿ ಹೇಳಿದರೂ ಆತ್ಮಹತ್ಯೆಯ ಪಿಡುಗು ಭಾರತದಿಂದ ತೊಲಗುತ್ತಿಲ್ಲ. ಪ್ರಾಯಶಃ ಅದು ಸಂಪೂರ್ಣ ನಿರ್ನಾಮವಾಗುವ ಲಕ್ಷಣಗಳೂ ಕಾಣಿಸುತ್ತಿಲ್ಲ.ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ ಹೊರತು ಇಳಿಕೆಯಾಗುತ್ತಿಲ್ಲ.
ಯಾಕೆಂದರೆ ಸಂಪೂರ್ಣ ಭ್ರಷ್ಟವಾಗಿ ಹೋಗಿರುವ ಭಾರತದಲ್ಲಿ ಬದುಕಿನ ಭದ್ರತೆ ಇಲ್ಲ. ದುರಾಸೆ, ಸ್ವಾಭಿಮಾನ, ಪ್ರತಿಷ್ಠೆಗಳ ಬೆನ್ನೇರಿ ಹೋಗುವ ಮನುಷ್ಯ ಕೊನೆಗೆ ಅವುಗಳಿಂದಲೇ ಸಾವು ತಂದು ಕೊಳ್ಳುತ್ತಾನೆ.
ಯುವ ಜನರ ಆತ್ಮಹತ್ಯೆಯನ್ನು ಸ್ವಯಂಕೃತ ಅಪರಾಧವೆಂದು ಸಮರ್ಥಿಸಿಕೊಳ್ಳಬಹುದು.ಪೋಷಕರು, ಸಂಗಾತಿಗಳು ಸ್ವಲ್ಪ ಸ್ವಲ್ಪ ಎಚ್ಚರ ವಹಿಸಿದರೂ ಸಾಕು ಆತ್ಮಹತ್ಯೆಗಳನ್ನು ತಡೆಗಟ್ಟಬಹುದು. ಆದರೆ ರೈತರ ಆತ್ಮಹತ್ಯೆ ವ್ಯವಸ್ಥೆಯ ಬೇರುಗಳನ್ನೇ ಅಲ್ಲಾಡಿಸುವ ಘೋರ ದುರಂತ. ರಾಷ್ಟ್ರೀಯ ಕ್ರೈಮ್ ರೆಕಾರ್ಡ್ಸ್ ಬ್ಯೂರೊ(ಎನ್‌ಸಿಆರ್‌ಬಿ) ವರದಿಯ ಪ್ರಕಾರ ಕಳೆದ ಇಪ್ಪತ್ತು ಹತ್ತು ವರ್ಷಗಳಲ್ಲೆ ಸಾವಿರಾರು ಮಂದಿ ಭಾರತೀಯ ರೈತರು ಆತ್ಮಹತ್ಯೆ ಶರಣಾಗಿದ್ದಾರೆ. ಈ ಸಂಖ್ಯೆಯ ಭಾಗಶಃ ಪಾಲು ದಕ್ಷಿಣ ಭಾರತಕ್ಕೆ ಸೇರಿದೆ.ದಕ್ಷಿಣ ಭಾರತ ರೈತರ ಆತ್ಮಹತ್ಯೆಗೆ ಕುಖ್ಯಾತಿಹೊಂದಿದೆ.! ದುಷ್ಟರಾಜಕಾರಣ, ಭ್ರಷ್ಟ ವ್ಯವಸ್ಥೆಯೇ ರೈತನ ಆತ್ಮಹತ್ಯೆಗೆ ಪ್ರೇರಣೆಯಾಗುತ್ತಿವೆ ಎಂದು ವಿಷೇಶವಾಗಿ ಹೇಳಬೇಕಾಗಿಲ್ಲ. ಸಾಲ, ಬರ, ಅಭದ್ರತೆಯ ಕಾರಣಕ್ಕೆ ನೇಣು ಜೀರುವ ರೈತನನ್ನು ಕಾಪಾಡುವ ಕಳಕಳಿಯೇ ಸರ್ಕಾರಕ್ಕಿಲ್ಲದಿರುವುದು ವಿಶೇಷ ವಿಪರ್ಯಾಸ. ಸಂಪ್ರದಾಯ, ಸಂಸ್ಕೃತಿಗಳಲ್ಲಿ ಗರಿಮೆ ಮೂಡಿಸಿಕೊಂಡ ಭಾರತ ಈಗ ಆತ್ಮಹತ್ಯೆಗಳ ರಾಜಧಾನಿ ಎಂಬ ಅಪಕೀರ್ತಿಗೆ ಗುರಿಯಾಗಿದ್ದು ವಿಸ್ಮಯವೂ ಹೌದು. ಶೋಚನೀಯವೂ ಹೌದು..!

Leave a Reply

Your email address will not be published. Required fields are marked *

Optimized by Optimole
error: Content is protected !!