ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪನ ವಿರುದ್ದ ಮತ್ತೊಂದು ಲೈಂಗಿಕ ಕಿರುಕುಳದ ಆರೋಪ.!
ಅಶ್ವಸೂರ್ಯ/ಶಿವಮೊಗ್ಗ :ದೂರು ನೀಡಲು ತಮ್ಮ ಕಚೇರಿಗೆ ಬಂದ ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿ ಈಗ ಜೈಲು ಸೇರಿಸಿರುವ ತುಮಕೂರು ಜಿಲ್ಲೆಯ ಮಧುಗಿರಿ ಉಪವಿಭಾಗದ 58 ವರ್ಷದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ಎ. ರಾಮಚಂದ್ರಪ್ಪನ ಮೇಲೆ ಮತ್ತೊಂದು ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥೆ ಮಹಿಳೆಯೊಬ್ಬರು ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿ ಅಳಲು ತೋಡಿಕೊಂಡಿದ್ದಾರೆ.
ದೂರು ನೀಡಲು ಕಚೇರಿಗೆ ಬಂದಾಗ ನನಗೆ ಡಿವೈಎಸ್ಪಿ ರಾಮಚಂದ್ರಪ್ಪ ಲೈಂಗಿಕ ಕಿರುಕುಳ ನೀಡಿದ್ದರೆಂದು ಮಹಿಳೆಯೊಬ್ಬರು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದರು. ಜೊತೆಗೆ ‘ಫೇಸ್ಟುಕ್ ಮೂಲಕ ಪರಿಚಯವಾದ ವ್ಯಕ್ತಿಗೆ ಸಾಲ ನೀಡಿ ಹಣ ಕಳೆದುಕೊಂಡಿದ್ದೇನೆ, ಇದರ ಬಗ್ಗೆ ದೂರು ನೀಡಲು ಠಾಣೆಗೆ ಬಂದಾಗ ರಾಮಚಂದ್ರಪ್ಪ ಅನುಚಿತವಾಗಿ ವರ್ತಿಸಿದ್ದಾರೆ. ಡಿವೈಎಸ್‌ಪಿ ವರ್ತನೆಗೆ ಹೆದರಿ ದೂರು ಕೊಡುವುದನ್ನೇ ಬಿಟ್ಟು ಬಂದೆ ಎಂದು ಮಹಿಳೆ ವಿಡಿಯೋದಲ್ಲಿ ತಿಳಿಸಿದ್ದಾರೆ.
ಮಹಿಳೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಜ್ಯ ಪೊಲೀಸ್ ಮುಖ್ಯಸ್ಥ ಅಲೋಕ್ ಮೋಹನ್ ಅವರು ರಾಮಚಂದ್ರಪ್ಪ ಅವರನ್ನು ಅಮಾನತುಗೊಳಿಸಿ ಇಲಾಖಾ ತನಿಖೆಗೆ ಆದೇಶಿಸಿದ್ದರು. ಈಗ ವಿಡಿಯೋದಲ್ಲಿ ಕಾಣಿಸಿಕೊಂಡಿರುವ 30 ವರ್ಷದ ಮಹಿಳೆ ಕಳೆದ ಶುಕ್ರವಾರ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಡಿವೈಎಸ್‌ಪಿ ವಿರುದ್ಧ ದೂರು ದಾಖಲಿಸಿದ್ದಾರೆ.
ಅಧಿಕಾರದಲ್ಲಿರುವ ವ್ಯಕ್ತಿಯಿಂದ ಲೈಂಗಿಕ ಸಂಭೋಗ (BNS 68), ಲೈಂಗಿಕ ಕಿರುಕುಳ (BNS 75), ಮತ್ತು ಮಹಿಳೆಯನ್ನು ಅವಮಾನಿಸುವಂತಹ ಪದ, ಸನ್ನೆ ಅಥವಾ ಕ್ರಿಯೆಗೆ ಸಂಬಂಧಿಸಿದಂತೆ (BNS 79) ದೂರು ದಾಖಲಿಸಿಕೊಳ್ಳಲಾಗಿದೆ. ತನಿಖೆ ಜಾರಿಯಲ್ಲಿರುವ ಸಂದರ್ಭದಲ್ಲಿ ಇನ್ನೊಬ್ಬ ಮಹಿಳೆ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿ ರಾಮಚಂದ್ರಪ್ಪ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದಾರೆ.