Headlines

ಶಿವಮೊಗ್ಗ /ಡಾ.ಧನಂಜಯ ಸರ್ಜಿ ಹೆಸರಲ್ಲಿ ಮೂವರಿಗೆ ವಿಷದ ಸ್ವೀಟ್ ಬಾಕ್ಸ್ ಕಳುಹಿಸಿದ ಭಗ್ನ ಪ್ರೇಮಿ.!

ಅಶ್ವಸೂರ್ಯ/ಶಿವಮೊಗ್ಗ: ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ್ ಸರ್ಜಿ ಹೆಸರಿನಲ್ಲಿ ಮೂರು ಮಂದಿ ಗಣ್ಯರಿಗೆ ಹೊಸ ವರ್ಷಕ್ಕೆ ವಿಷಪೂರಿತ ಸ್ವೀಟ್ ಬಾಕ್ಸ್ ಕಳುಹಿಸಿದ್ದ ಪ್ರಕರಣಕ್ಕೆ ತಿರುವು ಸಿಕ್ಕಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿದ್ದು ಆತನ ಹೇಳಿಕೆ ಮಾತ್ರ ವಿಚಿತ್ರವಾಗಿದೆ.! ಆರೋಪಿ ಲವ್ ಬ್ರೇಕಪ್ ಆಗಿದ್ದಕ್ಕೆ ಈ ಕೃತ್ಯ ಎಸಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಭದ್ರಾವತಿ ಮೂಲದ 26 ವರ್ಷ್ ಸೌಹಾರ್ದ ಪಟೇಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ವೈದ್ಯರೊಬ್ಬರ ಪುತ್ರಿಯನ್ನು ಪ್ರೀತಿಸುತ್ತಿದ್ದ.ಇದು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್ ಎಂಬವರಿಗೆ ಗೊತ್ತಾಗಿ ಆತನ ಪೋಷಕರನ್ನು ಕರೆಸಿ ತಿಳುವಳಿಕೆ ಹೇಳಿದ್ದರು. ಬಳಿಕ ಹುಡುಗಿಯ ಸಹವಾಸ ಬಿಡಿಸಿದ್ದರು.
ಇದೇ ವಿಚಾರಕ್ಕೆ ನಾಗರಾಜ್ ಮೇಲೆ ಆರೋಪಿ ಕೋಪಗೊಂಡಿದ್ದ. ಇದಾದ ನಂತರ ಆರೋಪಿ ಮಾನಸಿಕ ರೋಗದಿಂದ ಬಳಲುತ್ತಿದ್ದ. ಆತನ ಪೋಷಕರು ಮಾನಸಿಕ ತಜ್ಞರಾದ ಡಾ.ಅರವಿಂದ್ ಹಾಗೂ ಡಾ.ಪವಿತ್ರ ಬಳಿ ಚಿಕಿತ್ಸೆ ಕೊಡಿಸಿದ್ದರು. ಚಿಕಿತ್ಸೆ ವೇಳೆ ತನಗೆ ಸಾಕಷ್ಟು ಮಾತ್ರೆ ನುಂಗುವಂತೆ ಮಾಡಿದ್ದಾರೆ ಎಂದು ಆರೋಪಿ ಕೋಪಗೊಂಡಿದ್ದ. ಜೊತೆಗೆ ಈ ಮೂವರು ಗಣ್ಯರಿಗೆ ಎಂಎಲ್‍ಸಿ ಡಾ.ಧನಂಜಯ್ ಸರ್ಜಿಯವರು ಆಪ್ತರು ಎಂಬ ವಿಷಯ ಮನಗಂಡು ಅವರ ಹೆಸರಿನಲ್ಲಿ ವಿಷಪೂರಿತ ಸ್ವೀಟ್‍ನ್ನು ಕೊರಿಯರ್ ಮಾಡಿದ್ದಾನೆ ಎಂಬುದು ತಿಳಿದು ಬಂದಿದೆ.

ಏನಿದು ಪ್ರಕರಣ?

ಬಿಜೆಪಿ ಎಂಎಲ್‍ಸಿ ಹಾಗೂ ಖ್ಯಾತ ಮಕ್ಕಳ ವೈದ್ಯ ಡಾ.ಸರ್ಜಿ ಅವರ ಹೆಸರಿನಲ್ಲಿ ಹೊಸ ವರ್ಷಕ್ಕೆ ಶುಭಾಶಯ ಕೋರಿ ಶಿಕ್ಷಣ ಸಂಸ್ಥೆಯೊಂದರ ಕಾರ್ಯದರ್ಶಿ ನಾಗರಾಜ್, ವೈದ್ಯರಾದ ಡಾ.ಅರವಿಂದ್, ಡಾ.ಪವಿತ್ರ ಅವರ ಹೆಸರಿಗೆ ಭದ್ರಾವತಿಯಿಂದ ಸ್ವೀಟ್ ಬಾಕ್ಸ್ ಕೊರಿಯರ್ ಮಾಡಲಾಗಿತ್ತು. ನಾಗರಾಜ್ ಅವರು ಸರ್ಜಿ ಅವರು ಸ್ವೀಟ್ ಕಳುಹಿಸಿದ್ದಾರೆ ಎಂದು ಬಾಕ್ಸ್ ತೆರೆದು ಸ್ವಲ್ಪ ತಿಂದಿದ್ದಾರೆ. ಆದರೆ ಅದು ಪೂರ್ತಿ ಕಹಿಯಾಗಿತ್ತು. ತಕ್ಷಣ ತಮಗಾದ ಅನುಭವವನ್ನು ನಾಗರಾಜ್ ಅವರು ಮತ್ತೊಬ್ಬ ಎಂಎಲ್‍ಸಿ ಡಿ.ಎಸ್.ಅರುಣ್ ಅವರ ಗಮನಕ್ಕೆ ತಂದಿದ್ದರು. ಅರುಣ್ ಅವರು ಸರ್ಜಿ ಅವರಿಗೆ ದೂರವಾಣಿ ಕರೆ ಮಾಡಿ ಯಾವ ಅಂಗಡಿಯಿಂದ ಸ್ವೀಟ್ ಖರೀದಿ ಮಾಡಿದ್ದೀರಿ. ಅದು ಪೂರ್ತಿ ಕಹಿ ಇದೆಯಂತೆ ಎಂದಿದ್ದಾರೆ. ತಕ್ಷಣ ಎಚ್ಚೆತ್ತ ಸರ್ಜಿ ಅವರು ನಾನು ಯಾವುದೇ ಸ್ವೀಟ್ ಕಳುಹಿಸಿಲ್ಲ ಎಂದಿದ್ದರು.
ಸರ್ಜಿಯವರು ತಮ್ಮ ಆಪ್ತ ಕಾರ್ಯದರ್ಶಿ ಅವರಿಂದ ಕೋಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ನೀಡಿದ್ದರು. ಇದೀಗ ಆರೋಪಿಯನ್ನು ಬಂಧಿಸಿದ್ದು, ಆರೋಪಿಯನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!