BREAKING ಛತ್ತೀಸ್ಗಢ: ಪತ್ರ ಜನಕಕರ್ತನ ಹತ್ಯೆ ಪ್ರಕರಣ; ಪ್ರಮುಖ ಆರೋಪಿಗಳು ಅರೆಸ್ಟ್.
ASHWASURYA/SHIVAMOGGA
ಅಶ್ವಸೂರ್ಯ/ರಾಯಪುರ: ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಪತ್ರಕರ್ತ ಮುಕೇಶ್ ಚಂದ್ರಕರ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸುರೇಶ್ ಚಂದ್ರಕರ್ ಎಂಬಾತನನ್ನು ಪೊಲೀಸ್ ವಿಶೇಷ ತನಿಖಾ ತಂಡವು ಹೈದರಾಬಾದ್ ನಲ್ಲಿ ಬಂಧಿಸಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಗುತ್ತಿಗೆದಾರನಾಗಿರುವ ಆರೋಪಿ ಸುರೇಶ್ ಚಂದ್ರಕರ್, ಜನವರಿ 3 ರಂದು ಪತ್ರಕರ್ತ ಮುಕೇಶ್ ಚಂದ್ರಕರ್ ಅವರ ಹತ್ಯೆ ಬೆಳಕಿಗೆ ಬಂದಾಗಿನಿಂದ ತಲೆಮರೆಸಿಕೊಂಡಿದ್ದ.
ಈ ಪ್ರಕರಣದ ತನಿಖೆ ನಡೆಸಲು ರಚಿಸಲಾದ ವಿಶೇಷ ತನಿಖಾ ತಂಡವು ಭಾನುವಾರ ರಾತ್ರಿ ಹೈದರಾಬಾದ್ ನಲ್ಲಿ ಸುರೇಶ್ ಚಂದ್ರಕರ್ ಅವರನ್ನು ಬಂಧಿಸಿದೆ ಎಂದು ಅಧಿಕಾರಿಗಳ ವಲಯ ತಿಳಿಸಿದೆ.
ಈ ಪ್ರಕರಣದಲ್ಲಿ ಅವನ ಸಹೋದರರಾದ ರೀತೇಶ್ ಚಂದ್ರಕರ್ ಮತ್ತು ದಿನೇಶ್ ಚಂದ್ರಕರ್ ಹಾಗೂ ಸೂಪರ್ವೈಸರ್ ಮಹೇಂದ್ರ ರಾಮ್ಟೇಕೆ ಅವರನ್ನು ಈಗಾಗಲೇ ಬಂಧಿಸಲಾಗಿತ್ತು.
ಫ್ರೀ ಲಾನ್ಸ್ ಪತ್ರಕರ್ತ ಮುಕೇಶ್ ಚಂದ್ರಕರ್ (33) ಜನವರಿ 1 ರಂದು ನಾಪತ್ತೆಯಾಗಿದ್ದರು. ಬಿಜಾಪುರ ಪಟ್ಟಣದ ಚಟ್ಟನ್ಪಾರ ಬಸ್ತಿಯಲ್ಲಿ ಸುರೇಶ್ ಚಂದ್ರಕರ್ ಅವರ ಅಸ್ತಿತ್ವದಲ್ಲಿರುವ ಜಾಗದಲ್ಲಿದ್ದ ಸೆಪ್ಟಿಕ್ ಟ್ಯಾಂಕ್ನಲ್ಲಿ ಜನವರಿ 3 ರಂದು ಅವರ ಮೃತದೇಹ ಪತ್ತೆಯಾಗಿತ್ತು.
ಬಿಜಾಪುರದ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಡಿಸೆಂಬರ್ 25 ರಂದು ಎನ್ಡಿ ಟಿವಿಯಲ್ಲಿ ಪ್ರಸಾರವಾದ ವರದಿ ಕಾರಣಕ್ಕೆ ಮುಕೇಶ್ ಚಂದ್ರಕರ್ ಅವರ ಹತ್ಯೆ ನಡೆದಿರಬಹುದು ಎಂದು ಹೇಳಲಾಗಿತ್ತು. ಈ ನಿರ್ಮಾಣ ಕೆಲಸವನ್ನು ಗುತ್ತಿಗೆದಾರ ಸುರೇಶ್ ಚಂದ್ರಕರ್ ನಿರ್ವಹಿಸುತ್ತಿದ್ದರು.
ಛತ್ತೀಸ್ಗಢದ ಉಪ ಮುಖ್ಯಮಂತ್ರಿ ವಿಜಯ್ ಶರ್ಮಾ, ಸುರೇಶ್ ಚಂದ್ರಕರ್ ಕಾಂಗ್ರೆಸ್ ನಾಯಕ ಎಂದು ಆರೋಪಿಸಿದ್ದರು. ಆದರೆ ಕಾಂಗ್ರೆಸ್ ನಾಯಕರು, ಆರೋಪಿ ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದ ಎಂದು ಹೇಳಿದ್ದರು. ವಿಶೇಷ ತನಿಖಾ ತಂಡ ಈ ಪ್ರಕರಣದ ಬಗ್ಗೆ ಮತ್ತಷ್ಟು ತನಿಖೆ ಮುಂದಾಗಿದೆ.