Headlines

ವಿಶೇಷ ಲೇಖನ – ಮಹಿಳೆಯರ ಆರ್ಥಿಕ ಸ್ವಾವಲಂಬನೆ ಬದುಕಿಗೆ ‘ಸಂಜೀವಿನಿ’ ಯೋಜನೆಯ ಬೆಳಕು

ವಿಶೇಷ ಲೇಖನ –
ಮಹಿಳೆಯರ ಆರ್ಥಿಕ ಸ್ವಾವಲಂಬನೆ ಬದುಕಿಗೆ ‘ಸಂಜೀವಿನಿ’ ಯೋಜನೆಯ ಬೆಳಕು

ಅಶ್ವಸೂರ್ಯ/ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲಾದ ಶಿವಮೊಗ್ಗದ ಸಂಸ್ಕೃತಿ, ಸಾಂಪ್ರದಾಯಗಳು ವಿಶೇಷವಾಗಿದ್ದು ಮಲೆನಾಡಿನ ಸಾಂಪ್ರದಾಯಿಕ ಕರಕುಶಲತೆಯಾದ ಮಣ್ಣಿನ ಅಲಂಕಾರಿಕ ವಸ್ತು ತಯಾರಿಕೆಗೆ ಜೀವ ನೀಡುವ ಮೂಲಕ ಮಹಿಳೆಯರ ಸ್ವಾವಲಂಬಿ ಬದಕನ್ನು ಕಟ್ಟಿಕೊಳ್ಳಲು ಸರ್ಕಾರದ ‘ಸಂಜೀವಿನಿ’ ಯೋಜನೆ ಗ್ರಾಮೀಣ ಮಹಿಳೆಯರ ಬದುಕಲ್ಲಿ ಹೊಸ ಬೆಳಕು ಮೂಡಿಸಿದೆ.

ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ 13 ಜನ ಮಹಿಳೆಯರು ಗುಂಪು ‘ಪ್ರಗತಿ’ ಸ್ವಸಹಾಯ ಸಂಘ ಮತ್ತು ಹೊಂಬೆಳಕು ಸಂಜೀವಿನಿ ಒಕ್ಕೂಟ ಸೇರಿ ಅಳಿವಿನಂಚಿನಲ್ಲಿರುವ ಗುಡಿ ಕೈಗಾರಿಕೆ ಮೂಲಕ ಮಣ್ಣಿನ ಮಣ್ಣಿನ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ತೊಡಗಿಕೊಂಡು ಸ್ವಾವಲಂಬಿ ಬದುಕು ನಡೆಸುತ್ತಿರುವುದು ನಿಜಕ್ಕೂ ಸ್ಪೂರ್ತಿದಾಯಕವಾಗಿದೆ.

ಮಹಿಳೆಯರು ತಮ್ಮ ಕ್ರಿಯಾಶೀಲತೆಯಿಂದ ಸಿದ್ಧಪಡಿಸಿದ “ಸಾಂಪ್ರದಾಯಿಕ ದೀಪಗಳು, ಹಸೆ-ಚಿತ್ತಾರಗಳು, ಟೆರಕೋಟ ಆಭರಣಗಳು, ಸಾಗರದ ಕುಕೀಸ್‌ಗಳು ಹಾಗೂ ಮಲೆನಾಡಿನ ಸಿಹಿತಿಂಡಿ ತೊಡೆದೇವು” ಸೇರಿದಂತೆ ಇನ್ನೂ ಅನೇಕ ವಿವಿಧ ಮನಮೋಹಕ ಮಲೆನಾಡಿನ ಗೃಹೋತ್ಪನ್ನ ಸಾಮಗ್ರಿಗಳ ಮಾರಾಟವನ್ನು ರಾಜ್ಯದಾದ್ಯಂತ ವಿಸ್ತರಿಸಿದ್ದಾರೆ.
ಈ ಗುಡಿ ಕೈಗಾರಿಕೆಯ ಮುಖ್ಯ ಆಧಾರಸ್ತಂಭ ಶ್ರೀಮತಿ ಜ್ಯೋತಿ ಶಿವರಾಜ್ ಎಂಬ ಮಹಿಳೆ. ಕೆನರಾ ಬ್ಯಾಂಕ್ ಸಹಯೋಗದೊಂದಿಗೆ ಸರ್ಕಾರ ನೀಡುವ 6 ತಿಂಗಳ ಉಚಿತ ಕರಕುಶಲ ಗುಡಿ ಕೈಗಾರಿಕೆ ತರಬೇತಿಯನ್ನು ಪಡೆದುಕೊಂಡು ತಮ್ಮ ಗ್ರಾಮವಾದ ಹಾರನಹಳ್ಳಿಯಲ್ಲಿ ಸಣ್ಣ ಪ್ರಮಾಣದಲ್ಲಿ ಮಣ್ಣಿನ ವಸ್ತುಗಳನ್ನು ತಯಾರಿಸಲು ಆರಂಭಿಸಿದರು. ಈಗ ವರ್ಷಕ್ಕೆ 6 ಲಕ್ಷಕ್ಕೂ ಅಧಿಕ ಆದಾಯವನ್ನು ಗಳಿಸುತ್ತಿದ್ದಾರೆ. ಇವರಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ವತಿಯಿಂದ 2023ರ ಮಹಿಳಾ ಸಾಧಕಿ ಪ್ರಶಸ್ತಿ ಹಾಗೂ ಗುಡಿ ಕೈಗಾರಿಕೆಯಲ್ಲಿ ರಾಜ್ಯಮಟ್ಟದ ಅತ್ಯುತ್ತಮ ಪ್ರಶಸ್ತಿ ಲಭಿಸಿದೆ.

ಕೈಯಲ್ಲಿ ತಯಾರಾಗುವ ಮಣ್ಣಿನ ಅಲಂಕಾರಿಕ ವಸ್ತುಗಳು:
ಮಹಿಳೆಯರು ಸ್ವತಃ ಕೈಯಲ್ಲಿ ಮಣ್ಣಿನಿಂದ ಮನೆಯಲ್ಲಿ ಸಿದ್ದಪಡಿಸಿದ ಮಣ್ಣಿನ ದೀಪ, ಮ್ಯಾಜಿಕ್ ದೀಪ,ಲಿಂಗು, ಗಣೇಶ ದೀಪ, ತುಳಸಿದೀಪ, ಬೋಟಿಂಗ್ ಗಣೇಶ ದೀಪ, ಹೂವಿನ್ಯಾಸದ ದೀಪ, ಅಷ್ಟಲಕ್ಷ್ಮೀಯರ ದೀಪ, ಪಂಚದೀಪ, ಆರಾಮ್ ಗಣೇಶ ದೀಪ, ಹಂಸದೀಪ,ವಾಸ್ತು ದೀಪ, ಗೃಹ ಅಲಂಕಾರಿಕ ದೀಪ, ಹಾಗೂ ಗೊಂಬೆಗಳು, ಮನೆ ಆಲಂಕಾರಿಕ ವಸ್ತುಗಗಳು, ಮಣ್ಣಿನ ಗಂಟೆ, ಈ ರೀತಿ ಅನೇಕ ವಸ್ತುಗಳನ್ನು ತಯಾರಿಸುತ್ತಾರೆ.
ಗುಡಿ ಕೈಗಾರಿಕೆಗೆ ಸಹಕಾರಿಯಾದ ಸಂಜೀವಿನಿ ಯೋಜನೆ:
ನಂತರ ಮಹಿಳೆಯರು ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಗ್ರಾಮದ ಇತರೆ ಮಹಿಳೆಯರನ್ನು ಜೊತೆಗೂಡಿಸಿಕೊಂಡು ಗುಡಿ ಕೈಗಾರಿಯನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಿಸ್ತರಿಸಲು ಪ್ರಯತ್ನಿಸಿದರು. ಗ್ರಾಮ ಪಂಚಾಯತ್ ವತಿಯಿಂದ ಎನ್‌ಆರ್‌ಎಲ್‌ಎಂ ಸಂಜೀವಿನಿ ಯೋಜನೆಯಡಿಯಲ್ಲಿ ಪ್ರಾಥಮಿಕವಾಗಿ ರೂ.50 ಸಾವಿರಗಳ ಸಾಲವನ್ನು ಪಡೆದುಕೊಂಡು ಕರಕುಶಲ ಕಲೆಗೆ ಬೇಕಾದ ಮಣ್ಣನ್ನು ಹದಗೊಳಿಸುವ ಯಂತ್ರವನ್ನು ಪಡೆದುಕೊಂಡು ಈ ಮೂಲಕ ತಯಾರಿಕೆ ಪ್ರಮಾಣವನ್ನು ಹೆಚ್ಚಿಸಿಕೊಂಡರು. ನಂತರ ಇದೇ ಯೋಜನೆಯಡಿ ರೂ. 1.50 ಲಕ್ಷ ಸಾಲವನ್ನು ಪಡೆಕೊಂಡು ಗೊಂಬೆಗಳನ್ನು ಹಾಗೂ ಮಣ್ಣಿನ ವಿವಿಧ ಕರಕುಶಲ ವಸ್ತುಗಳನ್ನು ಸಿದ್ದಪಡಿಸಲು ಸಹಕಾರಿಯಾಗುವ ಅಧುನಿಕ ಯಂತ್ರವನ್ನು ಖರೀದಿಸಿದರು.

ಜಿಲ್ಲಾ ಪಂಚಾಯತ್ ಸಹಕಾರದಿಂದ ಉತ್ತಮ ಮಾರುಕಟ್ಟೆ:
ಗುಡಿ ಮತ್ತು ಸಣ್ಣ ಕೈಗಾರಿಕೆಗಳು ತಯಾರಿಸುವ ವಸ್ತುಗಳಿಗೆ ಮಾರುಕಟ್ಟೆಯ ಸೌಲಭ್ಯಗಳು ಇಲದೇ ಅನೇಕ ಸಣ್ಣ ಮತ್ತು ಗುಡಿ ಕೈಗಾರಿಕೆಗಳು ಮುಚ್ಚಲಾಗಿದೆ. ಅದರೆ ಜಿಲ್ಲಾ ಪಂಚಾಯತ್ ಶಿವಮೊಗ್ಗವು ಈ ಗುಡಿ ಕೈಗಾರಿಕೆಯನ್ನು ಗುರುತಿಸಿ ರಾಷ್ಟ್ರಮಟ್ಟದಲ್ಲಿ ಕರಕುಶಲ ಕಲೆಗೆ ಮಾನ್ಯತೆ ದೊರೆಯುವಂತೆ ಮಾಡಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ಗುಡಿ ಕೈಗಾರಿಕೆ ವಸ್ತುಗಳ ಮಾರಾಟ ಮಳಿಗೆ ತೆರೆದು ಪ್ರಧಾನಿ ಮೋದಿ ಅವರೊಂದಿಗೆ 2 ನಿಮಿಷಗಳ ಕಾಲ ಕರಕುಶಲ ಗುಡಿ ಕೈಗಾರಿಕೆ ಕುರಿತು ಚರ್ಚಿಸಲು ಅವಕಾಶವನ್ನು ಜಿಲ್ಲಾ ಪಂಚಾಯತ್ ವತಿಯಿಂದ ಕಲ್ಪಿಸಲಾಗಿತ್ತು.
ರಾಷ್ಟçಮಟ್ಟಣ ವಸ್ತು ಪ್ರದರ್ಶನಕ್ಕೆ ಆಯ್ಕೆ:
ಎನ್.ಆರ್.ಎಲ್.ಎಂ ಯೋಜನೆಯ ಸಂಜೀವಿನಿ ಕಾರ್ಯಕ್ರಮದಡಿ ರಾಜ್ಯಾದ್ಯಂತ ವಿವಿಧ ಸಭೆ ಸಮಾರಂಭ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಪ್ರದರ್ಶನ ಮತ್ತು ಮಾರಾಟವನ್ನು ಮಾಡಲು ಸಹಕರಿಸಿದೆ. ಕೇಂದ್ರ ಸರ್ಕಾರದ ಪಿಎಂ-ವಿಶ್ವಕರ್ಮ ಯೋಜನೆ, ಲಕ್‌ಪತಿ ದೀದಿ ಯೋಜನೆಗಳಿಗೆ ಈ ಮಹಿಳಾ ಸಂಘ ಆಯ್ಕೆಯಾಗಿದ್ದು 2023 ನೇ ಸಾಲಿನಲ್ಲಿ ನಡೆದ ರಾಷ್ಟçಮಟ್ಟದ ವಸ್ತುಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ.
ಪ್ರಧಾನ ಮಂತ್ರಿಯವರ ಮನ್ ಕೀ ಬಾತ್‌ನಲ್ಲಿ ಕರಕುಶಲತೆ ಕುರಿತು ಪ್ರಸ್ತಾಪ
ದೇಶದ ಪ್ರಧಾನ ಮಂತ್ರಿಯವರಾದ ನರೇಂದ್ರ ಮೋದಿ ಅವರು ನಡೆಸಿಕೊಡುವ ಆಕಾಶವಾಣಿಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿಯ ಜ್ಯೋತಿಯವರು ತಯಾರಿಸುವ ಮ್ಯಾಜಿಕ್ ದೀಪದ ಹಾಗೂ ಮಣ್ಣಿನ ಕರಕುಶಲ ವಸ್ತುಗಳ ಕುರಿತು ಮೋದಿ ಅವರು ಉಲ್ಲೇಖಿಸಿದ್ದು ಮಹಿಳೆಯರ ಸ್ವಾವಲಂಬನೆ ಜೀವನದ ಕುರಿತು ಮಾತನಾಡಿದರು.
ದೀಪಾವತಿ ಹಬ್ಬದ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪನವರು ಮಲೆನಾಡಿನ ಕರೆಕುಶಲ ವಸ್ತುಗಳ ತಯಾರಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರು, ಜನಪ್ರತಿನಿಧಿಗಳಿಗೆ ಪ್ರಗತಿ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ವಿಶೇಷ ದೀಪಗಳು ಹಾಗೂ ಗೃಹ ಉತ್ಪನ್ನಗಳನ್ನು ಜಿ.ಪಂ ವತಿಯಿಂದ ಉಡುಗೊರೆಯಾಗಿ ನೀಡಿ, ಮಹಿಳೆಯರ ಗುಡಿ ಕೈಗಾರಿಕೆ ಕೌಶಲ್ಯವನ್ನು ಉತ್ತೇಜಿಸುವಂತೆ ಎಲ್ಲರಲ್ಲಿ ಮನವಿ ಮಾಡಿದ್ದಾರೆ.

ಮಹಿಳೆಯರು ಕೌಟುಂಬಿಕ ಜವಾಬ್ದಾರಿಯೊಂದಿಗೆ ಗುಡಿ ಕೈಗಾರಿಕೆಯಲ್ಲಿಯೂ ತೊಡಗಿಕೊಂಡು ಆದಾಯ ಪಡೆಯುತ್ತಿದ್ದಾರೆ. ಪ್ರತಿಯೊಂದು ಉತ್ಪನ್ನವು ಆ ನೆಲದ ಸೊಬಗನ್ನು ವರ್ಣಿಸುತ್ತದೆ. ಸ್ವ-ಉದ್ಯೋಗದ ಕನಸನ್ನು ನನಸಾಗಿಸುವಲ್ಲಿ ಸರ್ಕಾರದ ಸಂಜೀವಿನಿ ಸೇರಿದಂತೆ ವಿವಿಧ ಯೋಜನೆಗಳು ಮಹಿಳೆಯರ ಸ್ವಾವಲಂಬಿ ಬದುಕಿಗೆ ಸಹಕಾರಿಯಾಗಿದೆ.

  • ಹೇಮಂತ್ ಎನ್, ಜಿಲ್ಲಾ ಪಂಚಾಯತ್ ಸಿಇಒ

ಮಹಿಳೆಯರು ತಮ್ಮ ಮನೆ ಕೆಲಸ ಮುಗಿದ ನಂತರ, ಆರ್ಥಿಕವಾಗಿ ಸ್ವತಂತ್ರರಾಗಲು ಗುಡಿ ಕೈಗಾರಿಕೆಯಂತಹ ಕೌಶಲ್ಯ ರೂಢಿಸಿಕೊಂಡಿದ್ದೇವೆ. ಜಿಲ್ಲಾ ಪಂಚಾಯತ್ ವತಿಯಿಂದ ನೀಡುವ ಯೋಜನೆಗಳ ಸಹಕಾರದಿಂದ ಮಣ್ಣಿನ ಕರಕುಶಲ ತಯಾರಿಕೆಯಲ್ಲಿ ಉತ್ತಮ ಆದಾಯವನ್ನು ಗಳಿಸುತ್ತಿದ್ದೇವೆ. ರಾಷ್ ನಾವು ತಯಾರಿಸುವ ವಸ್ತುಗಳಿಗೆ ಉತ್ತಮ ಬೇಡಿಕೆ ಇದ್ದು, ಸರ್ಕಾರಿ ಯೋಜನೆಗಳು ಅತ್ಯಂತ ಸಹಕಾರಿಯಾಗಿವೆ.

-ಜ್ಯೋತಿ ಶಿವರಾಜ್ -ಮಹಿಳಾ ಕರಕುಶಲ ತಯಾರಕಿ

  • ರಘು ಆರ್
    ಅಪ್ರೆಂಟಿಸ್, ವಾರ್ತಾ ಇಲಾಖೆ

Leave a Reply

Your email address will not be published. Required fields are marked *

Optimized by Optimole
error: Content is protected !!