ಅಂಡರ್ 19 ರಾಜ್ಯ ತಂಡಕ್ಕೆ ಮಲೆನಾಡ ಹುಡುಗ ಲೋಹಿತ್ ಎಸ್ ಆಯ್ಕೆ.
ಅಶ್ವಸೂರ್ಯ/ಶಿವಮೊಗ್ಗ: ಶಿವಮೊಗ್ಗ ಮಲೆನಾಡಿನ ತವರು ನಗರಿ ಇಲ್ಲಿನ ಕ್ರಿಕೆಟ್ ಅಂಗಳದಲ್ಲಿ ಯುವ ಪ್ರತಿಭೆಗಳು ಒಬ್ಬೊಬ್ಬರಾಗಿ ಹೊರಹೊಮ್ಮುತ್ತಿದ್ದಾರೆ ಈ ಹಾದಿಯಲ್ಲಿ ಲೋಹಿತ್.ಎಸ್ 19 ವರ್ಷದೊಳಗಿನ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿರುವ ಮಲೆನಾಡಿನ ಹುಡುಗ, ತನ್ನ 5ನೇ ವಯಸ್ಸಿನಿಂದಲೇ ಕ್ರಿಕೆಟ್ ಅಂಗಳದಲ್ಲಿ ಬ್ಯಾಟು ಬಾಲು ಹಿಡಿದು ಅಭ್ಯಾಸ ಆರಂಭಿಸಿದ ಬಾಲಕ.ತಾನೊಬ್ಬ ಉತ್ತಮ ಕ್ರಿಕೆಟ್ ಆಟಗಾನಾಗಬೇಕೆಂಬ ಹೆಬ್ಬಯಕೆಯಿಂದ ಶಿವಮೊಗ್ಗದ ಸಹ್ಯಾದ್ರಿ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾನೆ.ಈ ಹುಡುಗ ಶಿವಮೊಗ್ಗದ ಹರಿಗೆ ನಿವಾಸಿಗಳಾದ ಮಾಜಿ ಯೋಧರಾದ ಶಿವಕುಮಾರ್ ಹಾಗೂ ನಾಗರತ್ನ ದಂಪತಿಯ ಪುತ್ರ ಲೋಹಿತ್.
ವಲಯ ಮಟ್ಟದ ಕ್ರಿಕೆಟ್ ಆಡಿರುವ ಅನುಭವ ಹೊಂದಿರುವ ಲೋಹಿತ್ ಅಂಡರ್-14, ಅಂಡರ್-16 ಹಾಗೂ ಅಂಡರ್-19 ವಲಯ ಟೂರ್ನಿಗಳಲ್ಲಿ ಭಾಗಿಯಾಗಿ ಉತ್ತಮ ಆಟ ಆಡುವುದರ ಮುಖೇನಾ ತನ್ನನ್ನು ಗುರುತಿಸಿಕೊಂಡಂತಹ ಹುಡುಗ. ಸ್ಟೇಟ್ ಇಂಟರ್‍ಜೋನ್ ಟೂರ್ನಿಯಲ್ಲಿ 7 ಪಂದ್ಯಗಳಲ್ಲಿ 25 ವಿಕೆಟ್ ಪಡೆದು ಉತ್ತಮ ಬೌಲಿಂಗ್ ಮಾಡುವುದರ ಮೂಲಕ ಆಯ್ಕೆಗಾರರ ಗಮನ ಸೆಳೆದಿದ್ದರು. ಇದು ಇವರ ಇದುವರೆಗಿನ ಉತ್ತಮ ಪ್ರದರ್ಶನ ಕೂಡ ಆಗಿದೆ. ಕಳೆದ ತಿಂಗಳು ಒಡಿಶಾದ ಕಟಕ್‍ನಲ್ಲಿ ನಡೆದ ರಾಷ್ಟ್ರೀಯ ಪಂದ್ಯಾವಳಿಯಲ್ಲಿಯೂ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.
ನವೆಂಬರ್ 13 ರಿಂದ ನವೆಂಬರ್ 21 ರವರೆಗೆ ನಡೆಯಲಿರುವ 19 ವರ್ಷದೊಳಗಿನ ಕ್ರಿಕೆಟ್ ಪಂದ್ಯಾವಳಿಗೆ ಲೋಹಿತ್, ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದು ಇದು ಶಿವಮೊಗ್ಗದ ಹೆಮ್ಮೆಯ ವಿಷಯವಾಗಿದೆ. ನೇಪಾಳದ ಅಂಡರ್-19 ತಂಡ ಏಷ್ಯಾಕಪ್‌ಗೆ ಅರ್ಹತೆ ಪಡೆದುಕೊಂಡಿದೆ. ಈ ತಂಡದೊಂದಿಗೆ ಕರ್ನಾಟಕ ಆಡಲಿದೆ. ಇದು ಆಹ್ವಾನಿತ ಪಂದ್ಯಾವಳಿಯಾಗಿದ್ದು ಲೋಹಿತ್.ಎಸ್ ಮುಂದೆಯೂ ಕೂಡ ಬಿಸಿಸಿಐ ನಡೆಸುವ ವಿವಿಧ ಟ್ರೋಫಿಗಳ ಪಂದ್ಯಗಳಲ್ಲೂ ಭಾಗವಹಿಸಲಿದ್ದಾರೆ. ನಗರದ ಪ್ರಖ್ಯಾತ ಕ್ಲಬ್‍ಗಳ ಪರವಾಗಿ ಪ್ರಥಮ ದರ್ಜೆಯ ಪಂದ್ಯಾವಳಿಗಳಲ್ಲೂ ಇವರು ಭಾಗಿಯಾಗುತ್ತಿದ್ದಾರೆ. ಕೆಎಸ್‍ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರು, ಸಂಚಾಲಕರು, ಸಹ್ಯಾದ್ರಿ ಕ್ರಿಕೆಟ್ ಅಕಾಡೆಮಿಯ ಆಡಳಿತ ವರ್ಗ, ಸಹ್ಯಾದ್ರಿ ಕಾಲೇಜಿನ ಸಿಬ್ಬಂದಿ, ಎಫ್‍ಸಿಸಿ ಕ್ಲಬ್‍ನ ಆಡಳಿತ ವರ್ಗ ನಗರದ ಎಲ್ಲಾ ಹಿರಿಯ ಹಾಗೂ ಕಿರಿಯ ಕ್ರೀಡಾಪಟುಗಳು ಲೋಹಿತ್‍ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಶಿವಮೊಗ್ಗದ ಹೆಸರಾಂತ ತಂಡವಾದ ಭಾರತ್ ತಂಡದ ನಾಯಕರಾದ ಸುಧೀರ್ ಕುಮಾರ್ ಎಸ್ ವೈ, ಬಾಲಕೃಷ್ಣ ಜಿ,ರಾಘವೇಂದ್ರ ಭಟ್ಟ, ಸುನೀಲ್ ಕುಮಾರ್ ಎಸ್,ಅಂಬು ಪ್ರಸಾದ್, ನಿರಂಜನ್ ( ಲೋಡ್ಡಿ ),ಹರೀಶ್ (ITC),ಸತೀಶ್ (ಗೋಪಾಳ) ಶುಭ ಕೋರಿದ್ದಾರೆ