ಮೂವರು ಹೆಣ್ಣು ಮಕ್ಕಳ ಮೃತದೇಹ ಪೋಷಕರಿಗೆ ಹಸ್ತಾಂತರ : ರೆಸಾರ್ಟ್ ಮಾಲೀಕ ಮತ್ತು ಮೆನೇಜರ್ ಬಂಧನ
ಅಶ್ವಸೂರ್ಯ/ಉಳ್ಳಾಲ,ನವೆಂಬರ್,18: ಉಳ್ಳಾಲದ ವಾಸ್ಕೊ ರೆಸಾರ್ಟ್ ನ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಲು ತೆರಳಿ ಮೂವರು ವಿಧ್ಯಾರ್ಥಿನಿಯರು ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ರೆಸಾರ್ಟ್ ಮಾಲೀಕ ಮನೋಹರ್ ವಿ.ಪುತ್ರನ್ ಮತ್ತು ರೆಸಾರ್ಟ್ ವ್ಯವಸ್ಥಾಪಕ ಭರತ್ ಎಂದು ಗುರುತಿಸಲಾಗಿದೆ. ನಗರದ ಹೊರವಲಯ ಸೋಮೇಶ್ವರದ ಪೆರಿಬೈಲ್ ಬೆಟ್ಟಪ್ಪಾಡಿ ಕ್ರಾಸ್ ನಲ್ಲಿರುವ ರೆಸಾರ್ಟ್ ನಲ್ಲಿ ತಂಗಿದ್ದ ಮೈಸೂರು ವಿಜಯನಗರದ ನವೀನ್ ಕುಮಾರ್ ಅವರ ಪುತ್ರಿ ಕೀರ್ತನಾ ಎನ್ (21), ಕುರುಬರ ಹಳ್ಳಿ 4ನೇ ಕ್ರಾಸ್ ನಿವಾಸಿ ಮಲ್ಲೇಶ್ ಅವರ ಪುತ್ರಿ ನಿಶಿತಾ ಎಂ.ಡಿ (21) ಹಾಗೂ ರಾಮಾನುಜ ರಸ್ತೆ 11ನೇ ಕ್ರಾಸ್ ನಿವಾಸಿ ಎಂ.ಎನ್ ಶ್ರೀನಿವಾಸ್ ಅವರ ಪುತ್ರಿ ಪಾರ್ವತಿ ಎಸ್ (20) ರೆಸಾರ್ಟ್ ನ ಈಜುಕೊಳದಲ್ಲಿ ಭಾನುವಾರ ಬೆಳಿಗ್ಗೆ ಸಾವಿಗೀಡಾಗಿದ್ದರು.
ಮೈಸೂರಿನ ಜಿಎಸ್ ಎಸ್ ಎಸ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದ ವಿದ್ಯಾರ್ಥಿನಿಯರಾಗಿದ್ದ ಮೂವರು ಕಳೆದ ಶನಿವಾರ ಮಂಗಳೂರಿಗೆ ಬಂದು ರೆಸಾರ್ಟ್ ನಲ್ಲಿ ರೂಮ್ ಬಾಡಿಗೆಗೆ ಪಡೆದುಕೊಂಡಿದ್ದರು. ಭಾನುವಾರ ಬೆಳಿಗ್ಗೆ ವಿಡಿಯೊ ಮಾಡುವುದಕ್ಕಾಗಿ ಮೊಬೈಲ್ ಫೋನ್‌ನಲ್ಲಿ ಕ್ಯಾಮೆರಾ ಆನ್ ಮಾಡಿಟ್ಟು ಈಜುಕೊಳಕ್ಕೆ ಇಳಿದಿದ್ದರು.
ಆಳವಿರುವ ಕಡೆ ತೆರಳಿದ ಒಬ್ಬಳು ಯುವತಿ ಈಜು ಬಾರದೆ ಮುಳುಗಿದ್ದಾಳೆ ಇವಳನ್ನು ಕಾಪಾಡಲು ಮುಂದಾದ ಇನ್ನಿಬ್ಬರು ಒಬ್ಬರಿಗೊಬ್ಬರು ಗಟ್ಟಿಯಾಗಿ ಹಿಡಿದುಕೊಂಡು ಮುಳುಗಿ ಮೃತಪಟ್ಟಿರುವ ಸಾಧ್ಯತೆ ಇದೆ’ ಎಂದು ಪೊಲೀಸರು ತಿಳಿಸಿದ್ದಾರೆ.ರೆಸಾರ್ಟ್ ಮಾಲೀಕರು ಸ್ಥಳದಲ್ಲಿ ಸಿಬ್ಬಂದಿಯನ್ನು ನಿಯೋಜಿಸದೆ ಮತ್ತು ನೀರಿನ ಆಳದ ಬಗ್ಗೆ ಮಾಹಿತಿ ಫಲಕ ಅಳವಡಿಸದೆ ಸುರಕ್ಷತಾ ಲೋಪ ಎಸಗಿದ್ದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ತಿಳಿಸಿದರು. ಮಾಲೀಕ ಮತ್ತು ವ್ಯವಸ್ಥಾಪಕರನ್ನು ಭಾನುವಾರ ಸಂಜೆ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಸೋಮವಾರ ಬೆಳಿಗ್ಗೆ ಬಂಧಿಸಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಉಳ್ಳಾಲ ಪೊಲೀಸರು ತಿಳಿಸಿದ್ದಾರೆ. ಯುವತಿಯರ ಮೃತದೇಹಗಳನ್ನು ಪೋಷಕರಿಗೆ ಹಸ್ತಾಂತರ ಮಾಡಲಾಗಿದೆ ಎಂದೂ ತಿಳಿಸಿದ್ದಾರೆ.
ಈಜು ಕೊಳದಲ್ಲಿ ಮೃತಪಟ್ಟ ಕೀರ್ತನ, ನಿಶಿತಾ ಹಾಗೂ ಪಾರ್ವತಿ ಅವರ ಪೋಷಕರು ರವಿವಾರ ತಡರಾತ್ರಿ ಮಂಗಳೂರಿಗೆ ಆಗಮಿಸಿದ್ದು, ಮೂವರ ಮೃತದೇಹ ವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ. ಮೂವರ ಮೃತದೇಹವನ್ನು ರಾತ್ರಿಯೇ ಮೈಸೂರಿಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.