ಈ ಸಾವು ನ್ಯಾಯವೆ?
ಅಶ್ವಸೂರ್ಯ/ಶಿವಮೊಗ್ಗ: ದುರಂತ ಸಾವುಗಳು ತರುವ ನೋವು ಅತ್ಯಂತ ಕೆಟ್ಟ ಅನುಭವ,ನನ್ನ ಜೂನಿಯರ್ ಗಿರೀಶ್ ಎಂಬುವ ಯುವಕ ಸೊರಬ ತಾಲ್ಲೂಕಿನ ಆನವಟ್ಟಿ ಬಳಿಯ ಲಕ್ಕವಳ್ಳಿಯವನು,ವೀರಶೈವ ಲಿಂಗಾಯತ ಜನಾಂಗದ ಮಲ್ಲೇಶಪ್ಪ ಎಂಬುವವರು ಇವರ ತಂದೆ, ಈ ಮಲ್ಲೆಶಪ್ಪ ನವರಿಗೆ ಎರಡು ಜನ ಮಕ್ಕಳು ದೊಡ್ಡವನು ಮಹೇಶ್ ಹೆಚ್.ಚಿಕ್ಕವನು ನನ್ನ ಜೂನಿಯರ್ ಗಿರೀಶ್ ಹೆಚ್.ಇವರಿಬ್ಬರು ಅಣ್ಣ ತಮ್ಮ ನೋಡಲು ಒಂದೇ ರೀತಿ. ತುಂಬಾ ಪ್ರಾಮಾಣಿಕ ಯುವಕರು. ಇವರದು ಬಡತನದ ಕುಟುಂಬ,ಅಣ್ಣ ಮಹೇಶ್ ಅಷ್ಟೇನು ಓದಿಲ್ಲ ಆದರೆ ತಮ್ಮ ಗಿರೀಶನಿಗೆ ಓದಲು ಬೆನ್ನೆಲುಬಾಗಿ ನಿಂತವನು ಅಣ್ಣ ಮಹೇಶ್ ಎರಡರಿಂದ ಮೂರು ಎಕರೆ ತರಿ ಜಮೀನು ಇರುವುದು ಅಷ್ಟೇ. ಆದರೆ ಮಹೇಶ್ ಶ್ರಮ ಜೀವಿ. ಒಳ್ಳೆಯ ಕೆಲಸಗಾರ ಕೃಷಿಕ, ತಮ್ಮ ಮೂರು ಎಕರೆ ಜಮೀನಿನೊಂದಿಗೆ ಅಕ್ಕಪಕ್ಕದ ಜಮೀನುಗಳನ್ನು ಗೇಣಿಗೆ ಪಡೆದು ಹಗಲಿರುಳೆನ್ನದೆ ದುಡಿದು ತಮ್ಮನಿಗೆ LLB ಮಾಡಿಸಿ ಲಾಯರ್ ಆದಮೇಲು ಪ್ರತ ತಿಂಗಳು ತಪ್ಪದೆ ಹಣ ಕಳುಹಿಸಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ಇತ್ತಿಚೆಗೆ ತಮ್ಮನಿಗೆ ಒಂದು ಲ್ಯಾಪ್ ಟಾಪ್ ಕೂಡ ಕೊಡಿಸಿದ್ದ.ಅಣ್ಣನ ಪ್ರೀತಿಯ ತಮ್ಮನಾಗಿದ್ದ ಗಿರೀಶ್ ಇದು ನಮ್ಮ ಅಣ್ಣ ಕೊಡಿಸಿದ್ದು ಎಂದು ಖುಷಿಯಿಂದ ನನಗೆ ತೋರಿಸಿದ್ದ. ಮಹೇಶ್ 27 ವರ್ಷ ಕಡು ಬಡತನವನ್ನು ಮೆಟ್ಟಿ ನಿಂತು ನಿತ್ಯ ಕಷ್ಟಪಟ್ಟು ಒಂದು ಚಿಕ್ಕ RCC ಮನೆಯನ್ನು ಕಟ್ಟಿಸಿದ್ದ, ಮನೆಗೆ ಟ್ರ್ಯಾಕ್ಟರ್ ಒಂದನ್ನು ತಂದಿದ್ದ, ಈ ವರ್ಷ ಮದುವೆ ಆಗಬೇಕೆಂದು ಕನಸು ಕಂಡ ಮಹೇಶ್ ಒಂದು ದಿನದ ಹಿಂದೆ ಒಂದು ಸೆಕೆಂಡ್ ಹ್ಯಾಂಡ್ ಮಾರುತಿ ಕಂಪನಿ ಕಾರು ಖರೀದಿ ಮಾಡಿದ್ದ.
ಈ ದಿನ ಅಂದರೆ 28-10-24 ರಂದು ಬೆಳಿಗ್ಗೆ ಖುಷಿಯಿಂದ ಬೆಳಗಿನ ಜಾವ ಎದ್ದ ಮಹೇಶ್ ತಮ್ಮ ಬತ್ತದ ಗದ್ದೆಗೆ ಜೌಷದಿ ಹೊಡೆಯಲು ಬೆಳಿಗ್ಗೆ 10 ಗಂಟೆಗೆ ಹೊಗಿದ್ದಾನೆ. ಅಲ್ಲಿ ತುಂಡಾದ ವಿದ್ಯುತ್ ತಂತಿಗಳು ಗದ್ದೆಗೆ ಬಿದ್ದಿತ್ತು ಸಮೃದ್ದವಾಗಿ ಬೆಳೆದಿದ್ದ ಬತ್ತದ ಪೈರಿನ ಮರೆಯಲ್ಲಿ ಈ ತಂತಿಗಳು ಕಾಣದೆ ಹೋಗಿದೆ. ಗದ್ದೆಯಲ್ಲಿ ಜೌಷದಿ ಹೊಡೆಯುತ್ತಿದ್ದ ಮಹೇಶ್ ಕಾಲಿಗೆ ತಗುಲಿ ಮಹೇಶ್ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ಮನೆಯಿಂದ ಬರುವಾಗ ತಿಂಡಿಯು ತಿನ್ನದೆ ಗದ್ದೆಗೆ ಹೊದ ಮಗ ಮನೆಗೆ ಬಾರದೆ ಇರುವ ಕಾರಣಕ್ಕೆ ತಂದೆ ಮಗ ಮಹೇಶನಿಗೆ ಪೋನ್ ಮಾಡಿದ್ದಾರೆ.ಎಷ್ಟೇ ಫೋನ್ ಮಾಡಿದರು ಎತ್ತದೆ ಇದ್ದಾಗ ತಂದೆ ಮಗನನ್ನು ಹುಡುಕುತ್ತ ಗದ್ದೆಯ ಕಡೆಗೆ ಹೋಗಿದ್ದಾರೆ ಆಗ ನೆಲಕ್ಕೆ ತಾಗಿದ್ದ ವಿದ್ಯುತ್ ತಂತಿಯಿಂದ ದೂರಕ್ಕೆ ಶಾಕ್ ಹೊಡೆದಿದೆ ಕೂಡಲೆ ಎಚ್ಚರವಹಿಸಿದ ತಂದೆ ಕೂಗಿಕೊಂಡು ಅಕ್ಕಪಕ್ಕದವರನ್ನು ಕರೆದಿದ್ದಾರೆ, ಅಲ್ಲಿ ನೋಡಿದಾಗಲೆ ಗೊತ್ತಾಗಿದ್ದು ಮೆಸ್ಕಂರವರ ನಿರ್ಲಕ್ಷ್ಯ ದಿಂದ ತಂತಿಕಟ್ಟಾಗಿ ನೆಲದ ಮೇಲೆ ಬಿದ್ದು ಅಮಾಯಕ ಮಹೇಶನ ಜೀವ ತೆಗೆದಿದೆ ಎಂದು.!
ನಮ್ಮ ಜೂನಿಯರ್ ಗಿರೀಶನಿಗೆ ಅದೇ ದಿನ ಜೂನಿಯರ್ ವಕೀಲರಿಗೆ ನೀಡುವ ಸ್ಟೈಪಂಡ್ ಬಗ್ಗೆ ಸಂಜೆ 5 ಗಂಟೆಗೆ ಸಂದರ್ಶನ ವಿತ್ತು.ಪಾಪ ಕಳೆದ ವರ್ಷ ಸ್ಟೈಪಂಡ್ ಪಡೆಯಲು ಸೆಲ್ಕೆಟ್ ಆದ ನಂತರ ಕುತಂತ್ರದಿಂದ ಅವಕಾಶ ತಪ್ಪಿತ್ತು ಅ ಸಮಯದಲ್ಲಿ ನಮಗು ತುಂಬಾ ನೋವಾಗಿತ್ತು ಒಬ್ಬ ಬಡ ಕುಟುಂಬದ ಪ್ರಾಮಾಣಿಕ ಯುವ ವಕೀಲರಿಗೆ ಸಿಗಬೇಕಾದ ಸ್ಟೈಪಂಡ್ ಸಿಗಲಿಲ್ಲವೆಂದು , ಈ ಬಾರಿ ಇನ್ನೇನು ಸಂದರ್ಶನಕ್ಕೆ ಹೋಗಬೇಕು ಎಂದು ಕಾಯುತ್ತಿರುವಾಗಲೆ ಒಡ ಹುಟ್ಟಿದ ಅಣ್ಣನ ಸಾವೀನ ಸುದ್ದಿ ಒಮ್ಮೆ ತಮ್ಮನ ಎದೆಬಡಿತವೆ ನಿಲ್ಲುವಂತಾಗಿದೆ.
ಅಣ್ಣ ತಮ್ಮನ ಬಾಂದವ್ಯವೆ ಅ ಮಟ್ಟದಲ್ಲಿತರತು. ಗಿರೀಶ್ ತನ್ನ ಮೈಲ್ ಐಡಿಯನ್ನು ಕೂಡ ಗಿರಿಶ್ ಅಂಡ್ ಮಹೇಶ್ @ ಜಿ ಮೈಲ್ .ಕಾಮ್ ಅಂತ ಕ್ರೀಯೆಟ್ ಮಾಡಿದ್ದ.
ಒಂದು ಬಡ ಪುಟ್ಟ ಕುಟುಂಬ ಮಗನ ನಿರಂತ ಪರಿಶ್ರಮದ ಫಲವಾಗಿ ಹಂತ ಹಂತವಾಗಿ ಮೇಲೆಬಂದು ಪುಟ್ಟದೊಂದು ಗೂಡುಕಟ್ಟಿಕೊಂಡು ತಮ್ಮನನ್ನು ಓದಿಸಿ , ಅನಾರೋಗ್ಯದ ತಾಯಿಯನ್ನು ತಂದೆಯನ್ನು ಪ್ರೀತಿಯಿಂದ ನೋಡಿಕೊಂಡು ಇನ್ನು ವಕೀಲ ವೃತ್ತಿಯ ಹೊಸ್ತಿಲಲ್ಲಿ ಇರುವ ತಮ್ಮನಿಗೂ ಆಸರೆಯಾಗಿ ಮನೆಯ ಸೂತ್ರದಾರಿಯಾಗಿದ್ದ ಮಗ ಅಕಾಲಿಕ ದರ್ಮರಣಕ್ಕೆ ಈಡಾದರೆ ಆ ಕುಟುಂಬಕ್ಕೆ ಸುನಾಮಿ ಬಡಿದಂತೆ.ಮನೆಗೆ ಆಧಾರವಾಗಿದ್ದ ಮಗನನ್ನೆ ಕಳೆದುಕೊಂಡು ಹೇಗೆ ಸಹಿಸಿಕೊಳ್ಳಲು ಸಾಧ್ಯ?
ಇದರ ನಡುವೆಯೆ ಮೇಸ್ಕಂ ನವರು ದೂರು ದಾಖಲಾಗದಂತೆ ಪ್ರಕರಣ ಮುಚ್ಚಹಾಕಿ ಅಮಾಯಕ ಬಡ ಕುಟುಂಬವನ್ನು ದಾರಿ ತಪ್ಪಿಸಲು ಹೊರಟಿದ್ದರು,ಸಮಯಕ್ಕೆ ಸರಿಯಾಗಿ ಆನವಟ್ಟಿ ತಲುಪಿದ ನಾವು ಮೇಸ್ಕಂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ದ ದೂರು ದಾಖಲಿಸಿದೆವು.
ಮೇಸ್ಕಂ ನಿರ್ಲಕ್ಷ್ಯಕ್ಕೆ ಬಡ ಯುವಕ ಸಾವಾಗಿದ್ದರು ಅಲ್ಲಿ ಯಾವೊಬ್ಬ ಜನಪ್ರತಿನಿದಿಯು ಇರಲಿಲ್ಲ ,ಯಾವ ರಾಜಕೀಯ ಮುಖಂಡರು, ಮಠಾದೀಶರು ಬಂದಿರಲಿಲ್ಲ , ಅಲ್ಲಿದ್ದವರೆಲ್ಲ ಸಾವಿನ ನೋವಿನಲ್ಲಿದ್ದಂತ ಊರಿನ ಬಡ ಕುಟುಂಬಗಳ ಜನರು ಅಲ್ಲಿ ಸೇರಿದ್ದರು, ಅಮಾಯಕ ಜನರ ಗುಂಪು ಎನು ತೋಚದೆ ಮೌನಕ್ಕೆ ಶರಣಾಗಿದ್ದರು.
ಬಾಳಿ ಬದುಕಬೇಕಾಗಿದ್ದ ಯುವಕ ಮಹೇಶನ ಸಾವು ನನ್ನ ಮನಸನ್ನು ಘಾಸಿಗೊಳಿಸಿತು. ಮೇಸ್ಕಂನ ಬೇಜವಬ್ದಾರಿತನದಿಂದ ಮನೆಯನ್ನು ಬೆಳಗಬೇಕಾಗಿದ್ದ ಮನೆಯ ದೀಪವೆ ಆರಿಹೊಗಿದೆ.ಈ ಬೇಜವಬ್ದಾರಿಗೆ ಮೇಸ್ಕಂ ಅಧಿಕಾರಿಗಳಷ್ಟೇ ಅಲ್ಲಾ ಸರ್ಕಾರವು ಕೂಡ ಅಪರಾದಿಯೇ. ಇನ್ನಾದರೂ ಸರ್ಕಾರ ಮತ್ತು ಇಲಾಖೆ ಎಚ್ಚೆತ್ತುಕೊಳ್ಳಲಿ, ಅಮಾಯಕರ ಜೀವಗಳು ಉಳಿಯಲಿ.
– ಕೆ ಪಿ ಶ್ರೀಪಾಲ್