ದರ್ಶನ್‌ಗೆ ಮಧ್ಯಂತರ ಜಾಮೀನು. ಹೈಕೋರ್ಟ್ ವಿಧಿಸಿದ ಷರತ್ತುಗಳೇನು?
ಅಶ್ವಸೂರ್ಯ/ಬೆಂಗಳೂರು: ಬರೋಬ್ಬರಿ 140 ದಿನಗಳ ಬಳಿಕ ಆರೋಪಿ ನಟ ದರ್ಶನ್‌ಗೆ ಹೈಕೋರ್ಟ್ 6 ವಾರಗಳ ಕಾಲ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ದರ್ಶನ್ ಇಂದೇ (ಬುಧವಾರ) ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈ ನಡುವೆ ದರ್ಶನ್‌ಗೆ ಕೋರ್ಟ್ ವಿಧಿಸಿರುವ ಷರತ್ತುಗಳ ಮಾಹಿತಿ ಲಭ್ಯವಾಗಿದೆ.
ಕೋರ್ಟ್ ವಿಧಿಸಿರುವ ಷರತ್ತುಗಳೇನು?
- ಒಂದು ವಾರದಲ್ಲಿ ವೈದ್ಯಕೀಯ ಶಿಫಾರಸು ವರದಿ ಸಲ್ಲಿಸಬೇಕು
- ಸಾಕ್ಷಿ ನಾಶಕ್ಕೆ ಪ್ರಯತ್ನ ಪಡಬಾರದು
- ಸಾಕ್ಷಿಗಳ ಸಂಪರ್ಕ ಮಾಡಬಾರದು
- ಜಾಮೀನಿನ ದುರುಪಯೋಗ ಮಾಡಿಕೊಳ್ಳಬಾರದು
- ಪಾಸ್ ಪೋರ್ಟ್ ಸರಂಡರ್
- 2 ಲಕ್ಷ ರೂಪಾಯಿ ಬಾಂಡ್
- ಇಬ್ಬರ ಶ್ಯೂರಿಟಿ
- ಸಾಕ್ಷಿ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷ ಬೆದರಿಕೆ ಹಾಕಬಾರದು.
ದರ್ಶನ್‌ಗೆ 6 ವಾರಗಳ ಕಾಲ ಮೆಡಿಕಲ್ ಬೇಲ್ ಮಂಜೂರು ಮಾಡಿರುವ ಕೋರ್ಟ್ ಪಾಸ್‌ಪೋರ್ಟ್ ಸರೆಂಡರ್ ಮಾಡುವಂತೆ ಸೂಚಿಸಿದೆ. ಚಿಕಿತ್ಸೆಯನ್ನು ಎಲ್ಲಿ ಪಡೆಯಬೇಕು ಎಂದು ಕೋರ್ಟ್ ನಿರ್ದಿಷ್ಟವಾಗಿ ಸೂಚಿಸಿಲ್ಲ. ಜಾಮೀನು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ವಿದೇಶದಲ್ಲಿ ಚಿಕಿತ್ಸೆ ಪಡೆಯುವ ಸಾಧ್ಯತೆ ಇರುವ ಕಾರಣ ಒಂದು ವೇಳೆ ಜಾಮೀನು ಮಂಜೂರು ಮಾಡಿದರೂ ಪಾಸ್‌ಪೋರ್ಟ್ ನ್ಯಾಯಾಲಯಕ್ಕೆ ಒಪ್ಪಿಸಬೇಕೆಂದು ಎಸ್‌ಪಿಪಿ ಪ್ರಸನ್ನ ಕುಮಾರ್ ಮನವಿ ಮಾಡಿದ್ದರು. ಈ ಮನವಿಗೆ ಕೋರ್ಟ್ ಸ್ಪಂದಿಸಿ ಪಾಸ್‌ಪೋರ್ಟ್ ಅನ್ನು ತನಗೆ ಒಪ್ಪಿಸುವಂತೆ ಷರತ್ತು ವಿಧಿಸಿದೆ. ಅಷ್ಟೇ ಅಲ್ಲದೇ ಆಸ್ಪತೆಗೆ ದಾಖಲಾಗುತ್ತಿದ್ದಂತೆ 1 ವಾರದೊಳಗೆ ಪ್ರಾಥಮಿಕ ವೈದ್ಯಕೀಯ ವರದಿ ಸಲ್ಲಿಸಬೇಕು ಎಂದು ಸೂಚಿಸಿದೆ.
ದರ್ಶನ್ ಪರ ವಕೀಲರು ಹೇಳಿದ್ದೇನು?
ದರ್ಶನ್ ಜಾಮೀನು ವಿಚಾರ ಕುರಿತು ಮಾತನಾಡಿರುವ ದರ್ಶನ್ ಪರ ವಕೀಲ ಸುನೀಲ್, ದರ್ಶನ್ ಅವರಿಗೆ ಬೆನ್ನುಮೂಳೆ ಶಸ್ತ್ರಚಿಕಿತ್ಸೆ ಆಗಬೇಕು ಅನ್ನೋ ವಾದವನ್ನು ಸಿ.ವಿ ನಾಗೇಶ್ ಕೋರ್ಟ್ ಮುಂದಿಟ್ಟರು. ಏಕೆಂದರೆ L5 ಮತ್ತು S1 ನರದಲ್ಲಿ ದರ್ಶನ್‌ಗೆ ಸಮಸ್ಯೆ ಇದೆ. 2022-23ರಿಂದಲೂ ಈ ಸಮಸ್ಯೆ ಇತ್ತು. ಆದ್ದರಿಂದ ಅದೇ ವಾದದಲ್ಲಿ ನಾವು ಮುಂದುವರಿದ್ವಿ. ಅದಕ್ಕೆ ಕೋರ್ಟ್ ಬಳ್ಳಾರಿ ಜೈಲರ್ ಅವರಿಂದ ವೈದ್ಯಕೀಯ ವರದಿಗಳನ್ನ ಕೇಳಿತ್ತು. ಸೀಲ್ಡ್ ಕವರ್‌ನಲ್ಲಿ ವೈದ್ಯಕೀಯ ವರದಿ ಸ್ವೀಕರಿಸಿದ ನಂತರ ಇಂದು 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಆಸ್ಪತ್ರೆಗೆ ದಾಖಲದ ಮೊದಲ ವಾರದ ಪ್ರಾಥಮಿಕ ವೈದ್ಯಕೀಯ ವರದಿಯನ್ನ ಸಲ್ಲಿಕೆ ಮಾಡುವಂತೆ ಸೂಚಿಸಿದೆ. ನಾವೂ ಒಪ್ಪಿದ್ದೇವೆ, ಜೊತೆಗೆ ಪಾಸ್‌ಪೋರ್ಟ್ ರದ್ದು ಮಾಡುವಂತೆ ಸೂಚಿಸಿದೆ. ಕೋರ್ಟ್‌ನ ಷರತ್ತುಗಳನ್ನ ಫುಲ್‌ಫಿಲ್ ಮಾಡುತ್ತೇವೆ ಎಂದಿದ್ದಾರೆ.
ಹೈಕೋರ್ಟ್ ದೃಢೀಕೃತ ಆದೇಶ ಕೊಟ್ಟ ನಂತರ ಸೆಷನ್ಸ್ ನ್ಯಾಯಾಲಯದಲ್ಲಿ ಅಡ್ವಾನ್ಸ್‌ಮೆಂಟ್ ಅಪ್ಲಿಕೇಷನ್ ಹಾಕಬೇಕು. ಸೆಷನ್ ಕೋರ್ಟ್ ಅರ್ಜಿಯನ್ನು ಸ್ವೀಕಾರ ಮಾಡಬೇಕು. ಆ ಬಳಿಕ ಶೂರಿಟಿ ದಾಖಲಾತಿ ನೀಡಿ, ಪಾಸ್‌ಪೋರ್ಟ್ ಸರೆಂಡರ್ ಮಾಡಿದ ನಂತರವೇ ದರ್ಶನ್ ರಿಲೀಸ್ ಆಗಲಿದ್ದಾರೆ.
ಮೈಸೂರು ಅಪೋಲೋ ಆಸ್ಪತ್ರೆಯಲ್ಲಿ ದರ್ಶನ್ ರೆಗ್ಯುಲರ್ ಟ್ರೀಟ್ಮೆಂಟ್ ಪಡೆಯುತ್ತಿದ್ದರು. ಅವರು ರಿಲೀಸ್ ಆದ ಬಳಿಕ ಕುಟುಂಬದೊಂದಿಗೆ ಚರ್ಚೆ ಮಾಡಿ ಅವರಿಷ್ಟದ ಆಸ್ಪತ್ರೆಗೆ ದಾಖಲು ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.