ಜನಮೆಚ್ಚೆಗೆಯ ಹಿರಿಯ ರಾಜಕಾರಣಿ ಕೆ.ಹೆಚ್.ಶ್ರೀನಿವಾಸ್ ನಿಧನ
ಅಶ್ವಸೂರ್ಯ/ಶಿವಮೊಗ್ಗ:ಶಿವಮೊಗ್ಗ ಹಾಗೂ ಸಾಗರ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ, ಹಿರಿಯ ಜನಮೆಚ್ಚಿದ ರಾಜಕಾರಣಿ, ಕೆ.ಹೆಚ್.ಶ್ರೀನಿವಾಸ್ (85) ಅವರು ಶುಕ್ರವಾರ ಬೆಳಗ್ಗೆ ಸುಮಾರು 11 ಗಂಟೆಗೆ ಬೆಂಗಳೂರಿನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
1939ರಲ್ಲಿ ಜನಿಸಿದ ಕೆ.ಎಚ್. ಶ್ರೀನಿವಾಸ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಾನುಗೋಡು ಗ್ರಾಮದವರು. ಶ್ರೀನಿವಾಸ್ ಜನತಾಪರಿವಾರದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು. ಬಳಿಕ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.
ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರ ಆಪ್ತರಾಗಿದ್ದ ಕೆ ಹೆಚ್ ಶ್ರೀನಿವಾಸ್ ಸಾಂಸ್ಕೃತಿಕ ವಲಯದಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದರು. ವಕೀಲರಾಗಿ. ಕೃಷಿಕರರಾಗಿ ಹಲವು ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು. ಕವನ ಸಂಕಲನಗಳನ್ನೂ ರಚಿಸಿದ್ದ ಇವರು ಸಿನಿಮಾದಲ್ಲೂ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದರು.
ಡಿ ದೇವರಾಜ ಅರಸು ಸರ್ಕಾರದಲ್ಲಿ ಸಚಿವರಾಗಿ ಇಂಧನ, ವಾರ್ತಾ, ಯುವಜನ ಸೇವೆ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಯೋಜನಾ ಖಾತೆಗಳನ್ನು ನಿರ್ವಹಿಸಿದ್ದ ಕೆ.ಎಚ್. ಶ್ರೀನಿವಾಸ್ ಅವರು ಮೂರು ಬಾರಿ ಶಾಸಕರಾಗಿ ಗೆದ್ದು, ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು.
ಶ್ರೀನಿವಾಸ್ ಗೆ ಇಬ್ಬರು ಪುತ್ರಿಯರು. ಈ ಪೈಕಿ ಒರ್ವ ಪುತ್ರಿ ʼಹೂವು-ಹಣ್ಣುʼ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರೆ, ಮತ್ತೊರ್ವ ಪುತ್ರಿ ಆಂಗ್ಲ ಪತ್ರಿಕೆ ಪತ್ರಕರ್ತೆಯಾಗಿ ಗುರುತಿಸಿಕೊಂಡಿದ್ದಾರೆ.
ಕವಿ ಹೃದಯದ ಕೆ.ಹೆಚ್.ಶ್ರೀನಿವಾಸ್ ನಿಧನ; ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಂಬನಿ
ಶಿವಮೊಗ್ಗ; ಕವಿ ಹೃದಯದ ಮಲೆನಾಡಿನ ಮಾತುಗಾರ ಕರ್ನಾಟಕ ಕಂಡ ವರ್ಣರಂಜಿತ ರಾಜಕಾರಣಿ ಶ್ರೀ. ಕೆ.ಹೆಚ್.ಶ್ರೀನಿವಾಸ್ ರವರ ನಿಧನರಾದ ಸುದ್ದಿ ಕೇಳಿ ಅವರ ಅಭಿಮಾನಿಗಳಿಗೆ ಅಘಾತಕಾರಿಯಾಗಿದೆ. ಶ್ರೀಯುತರು ಶಿವಮೊಗ್ಗ ಜಿಲ್ಲೆಯ ಸಾಗರದ ಕಾನುಗೂಡು ಇವರ ಜನ್ಮ ಸ್ಥಳವಾಗಿದ್ದು ಶ್ರೀಯುತರು 1967ರಲ್ಲಿ ಸಾಗರ ಕ್ಷೇತ್ರದಿಂದ 26 ವರ್ಷಕ್ಕೆ ವಿಧಾನಸಭಾ ಸದಸ್ಯರಾಗಿದ್ದರು. ನಂತರ ಶ್ರೀ.ದೇವರಾಜ್ ಅರಸುರವರ ರಾಜಕೀಯ ಕಾರ್ಯದರ್ಶೀ ಆಗಿದ್ದಲ್ಲದೆ ಅವರ ಸಂಪುಟದಲ್ಲಿ ವಾರ್ತ ಮತ್ತು ಪ್ರಚಾರ ಖಾತೆ ಸಚಿವರಾಗಿದ್ದರು. ಶ್ರೀಮತಿ ಇಂದಿರಾಗಾಂಧಿ ಹಾಗೂ ಶ್ರೀ ರಾಜೀವಗಾಂಧಿ ಅವರ ಭಾಷಣಗಳ ಕನ್ನಡ ಭಾಷಂತರಕಾರರಾಗಿ, ಕನ್ನಡದಲ್ಲಿ ಕವನ ಸಂಕಲನ ಮತ್ತು ನಾಟಕಗಳನ್ನು ರಚಿಸಿರುವ ಇವರ ಸಂಸದಿಯ ಸೇವಾ ಅವದಿ ಆದರ್ಶಮಯವಾಗಿದ್ದು ಇವರ ಆಕಾಲಿಕ ನಿಧನ ನಮಗೆ ನೋವು ತಂದಿದೆ.ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಅವರ ಕುಟುಂಬ ವರ್ಗಕ್ಕೆ ದುಃಖ ಬರಿಸುವ ಶಕ್ತಿ ನೀಡಲೆಂದು, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಪ್ರಸನ್ನಕುಮಾರ್ ರವರು ಸಂತಾಪ ಸೂಚಕ ಸಭೆಯಲ್ಲಿ ತಿಳಿಸಿದರು. ಈ ಸಂತಾಪ ಸೂಚಕ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಎಸ್.ಟಿ.ಹಾಲಪ್ಪ , ಯು.ಶಿವಾನಂದ , ಬ್ಲಾಕ್ ಅಧ್ಯಕ್ಷರುಗಳಾದ ಕಲೀಂ ಪಾಷ , ಇಕ್ಕೇರಿ ರಮೇಶ್, ಡಾ.ಶ್ರೀನಿವಾಸ್ , ಕರಿಯಣ್ಣ, ಹನುಮಂತು,ರಮೇಶ್ ಹೆಗ್ಡೆ, ಶಿ.ಜು.ಪಾಶ ಮುಂತಾದ ನಾಯಕರುಗಳು ಭಾಗವಹಿಸಿದ್ದರು.