ಕನಕಪುರ: ದಲಿತ ಯುವಕನ ಕೈ ಕಡಿದ ಕಿರಾತಕರು.!
ಅಶ್ವಸೂರ್ಯ/ಕನಕಪುರ: ರಸ್ತೆಯಲ್ಲಿ ನಿಂತಿದ್ದಕ್ಕೆ ಗಲಾಟೆಮಾಡಿ ಯುವಕನ ಮೇಲೆ ಮನಬಂದಂತೆ ದಾಳಿಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದ ಗ್ಯಾಂಗ್ ನಲ್ಲಿದ್ದ ಒಕ್ಕಲಿಗ ಸಮುದಾಯದ ಏಳು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಮನಗರ ಜಿಲ್ಲೆಯ ಕನಕಪುರದ ಮಾಳಗಾಳು ಗ್ರಾಮದಲ್ಲಿ ಒಕ್ಕಲಿಗ ಸಮುದಾಯದ ಯುವಕರ ಗುಂಪೊಂದು ಭಾನುವಾರ ರಾತ್ರಿ ಪರಿಶಿಷ್ಟ ಜಾತಿಯ ಯುವಕನೊಬ್ಬನ ಮುಂಗೈ ಕತ್ತರಿಸಿ ಹಾಕಿದೆ.! ದಲಿತರ ಕಾಲೊನಿಗೆ ನುಗ್ಗಿದ ಗುಂಪು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ವೈರಮುಡಿ ಅವರ ಪುತ್ರ ಅನೀಶ್ ಮೇಲೆ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿದೆ. ಅನೀಶ್ ಎಡಗೈ ತುಂಡಾಗಿದ್ದು ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲ್ಲೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಅವರ ಮಾವ, ಪಿಎಲ್‌ಡಿ ಬ್ಯಾಂಕ್ ಉದ್ಯೋಗಿ ಲಕ್ಷ್ಮಣ್ ಹಾಗೂ ಗೋವಿಂದರಾಜು ಕನಕಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಏಳು ಜನರ ಗ್ಯಾಂಗ್ ಸ್ಥಳದಲ್ಲಿದ್ದ ಮಹಿಳೆಯರು ಸೇರಿದಂತೆ ಐದಾರು ಮಂದಿಯ ಮೇಲೆ ಹಲ್ಲೆ ನಡೆಸಿದೆ. ಸಾಲದ್ದಕ್ಕೆ ಮನೆಯ ಮುಂದೆ ನಿಲ್ಲಿಸಿದ್ದ ಎರಡು ಆಟೊಗಳನ್ನು ಕೂಡ ಜಖಂಗೊಳಿಸಿದ್ದಾರೆ.!
ಒಕ್ಕಲಿಗ ಸಮುದಾಯದ ಶಿವ, ಶಶಾಂಕ, ಸುಬ್ಬ, ಹರ್ಷ ಅಲಿಯಾಸ್ ಕೈಮ, ಕರುಣೇಶ, ರಾಹುಲ್,ದರ್ಶನ್ ಹಾಗೂ ಇತರರ ವಿರುದ್ಧ ಎಸ್‌ಸಿ/ಎಸ್‌ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಹಾಗೂ ಕೊಲೆ ಯತ್ನ ಆರೋಪದಡಿ ಕನಕಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಭಲೇ ಬಿಸಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ನಡೆದ ಮಾಳಗಾಳು ಗ್ರಾಮ ಹಾಲಿ ವಿಧಾನ ಪರಿಷತ್ ಸದಸ್ಯ ಎಸ್. ರವಿ ಅವರ ಸ್ವಗ್ರಾಮವಾಗಿದೆ. ಗ್ರಾಮದಲ್ಲಿ ಆತಂಕ ಮನೆ ಮಾಡಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಸಾಕಷ್ಟು ಮಾಹಿತಿ ಕಲೆಹಾಕಿದ್ದಾರೆ.
ಘಟನೆಯ ಹಿನ್ನಲೆ:
ದಲಿತ ಸಮುದಾಯದ ಯುವಕರಿಬ್ಬರು ರಸ್ತೆಯಲ್ಲಿ ಮಾತನಾಡುತ್ತಾ ನಿಂತಿದ್ದರಂತೆ ಅದೇ ಸಮಯದಲ್ಲಿ ಅದೇ ರಸ್ತೆಯಲ್ಲಿ ಹೊರಟಿದ್ದ ಒಕ್ಕಲಿಗ ಸಮುದಾಯದ ಸುಮಾರು ಏಳು ಜನ ಯುವಕರ ಗ್ಯಾಂಗ್ ಯುಕರು ಮಾತನಾಡುತ್ತ ನಿಂತಿದ್ದ ಸ್ಥಳದಲ್ಲಿ ನಿಂತು ರಸ್ತೆಯಲ್ಲಿ ಏಕೆ ನಿಂತಿರುವಿರಿ ಎಂದು ಖ್ಯಾತೆ ತೆಗೆದಿದ್ದಾರೆ.
ಭಾನುವಾರ ರಾತ್ರಿ ದಲಿತರ ಕಾಲೊನಿಗೆ (ಎನ್.ಕೆ. ಕಾಲೊನಿ) ನುಗ್ಗಿದ ಒಕ್ಕಲಿಗ ಸಮುದಾಯದ ಯುವಕರ ಗುಂಪು ಮನಬಂದಂತೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ.ಈ ಗ್ಯಾಂಗಿನ ಪ್ರಮುಖ ಆರೋಪಿ ಹರ್ಷ ರೌಡಿಶೀಟರ್ ಆಗಿದ್ದು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯಿಂದ ಆತನನ್ನು ತುಮಕೂರಿಗೆ ಗಡಿಪಾರು ಮಾಡಲಾಗಿತ್ತು. ಆದರೂ, ಆಗಾಗ ಊರಿಗೆ ಬಂದು ಹೋಗುತ್ತಿದ್ದ ಆತನೇ ತನ್ನ ಸಹಚರರೊಂದಿಗೆ ಈ ಕೃತ್ಯ ಎಸಗಿದ್ದಾನೆ ಎಂದು ಲಕ್ಷ್ಮಣ್ ಎಂಬವರು ದೂರಿನಲ್ಲಿ ತಿಳಿಸಿದ್ದಾರೆ.ಈ ಒಂದು ಘಟನೆಯಿಂದ
ದಲಿತರ ಕಾಲೊನಿಯಲ್ಲಿ ಆತಂಕ ಮಡುಗಟ್ಟಿದೆ.
ಕಾಲೊನಿ ನಿವಾಸಿಗಳು ಹಾಗೂ ಪರಿಶಿಷ್ಟ ಸಮುದಾಯದ ಕುಟುಂಬಗಳು ಈ ಹಲ್ಲೆಯಿಂದಾಗಿ ಹೆದರಿ ಹೊಗಿದ್ದಾರೆ. ನಗರಸಭೆಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಬಳಿ ತೆರಳಿದ ದಲಿತ ಮುಖಂಡರು ‘ದಲಿತರಿಗೆ ರಕ್ಷಣೆ ಕೊಡಿ’ ಎಂದು ಮನವಿ ಮಾಡಿದರು.
ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ನಗರಸಭೆ ಎದುರು ಕೆಲ ಹೊತ್ತು ಪ್ರತಿಭಟನೆ ನಡೆಸಿದ್ದಾರೆ. ಸ್ದಳದಲ್ಲೇ ಪೊಲೀಸರಿಗೆ ಕರೆ ಮಾಡಿದ ಜಿಲ್ಲಾಧಿಕಾರಿ ಕೂಡಲೇ ಆರೋಪಿಗಳನ್ನು ಬಂಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದರು.
ಕಳೆದ ಒಂದು ವಾರದ ಹಿಂದೆ (ಜುಲೈ 17) ತಾಲ್ಲೂಕಿನ ತಾಮಸಂದ್ರ ವೃತ್ತದಲ್ಲಿ ಮನೆ ಮುಂದೆ ಶಾಮಿಯಾನ ಹಾಕಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಭೋವಿ ಸಮುದಾಯದವರ ಮನೆಗಳಿಗೆ ನುಗ್ಗಿದ್ದ ತಿಗಳ ಸಮುದಾಯದವರು ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆ ಮಾಸುವ ಮುನ್ನ ಇನ್ನೊಂದು ಘಟನೆ ನೆಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿದೆ.!