ತೀರ್ಥಹಳ್ಳಿ: ಕೇಸಲೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮು ನಿರ್ಮಾಣ ಕಾರ್ಯಕ್ಕೆ ಸಚಿವರಿಗೆ ಶಿಫಾರಸ್ಸು ಮಾಡಿ 5,00000 ಸಹಾಯಧನ ಕೂಡಿಸಿದ ಡಾಕ್ಟರ್ ಆರತಿ ಕೃಷ್ಣ
ಅಶ್ವಸೂರ್ಯ/ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಕೇಸಲೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ದವರು ಗೋದಮು ನಿರ್ಮಿಸಲು ಸರ್ಕಾರದ ವತಿಯಿಂದ 5:00 ಲಕ್ಷ ಸಹಾಯ ಧನವನ್ನು ಸಹಕಾರಿ ಸಚಿವರು ಮಂಜೂರು ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು, ಆಗುಂಬೆ ಹೋಬಳಿ ಕೇಸಲೂರು ಗ್ರಾಮದ ಒಂದು ಸಣ್ಣ ಹಳ್ಳಿಯಾದ ಕೆಸ್ತೂರಿಗೆ ಮಾನ್ಯ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣರವರು ಅನ್ಯ ಕಾರ್ಯಕ್ರಮಕ್ಕೆ ತೆರಳಿದ್ದ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗೋದಾಮು ನಿರ್ಮಾಣ ಮಾಡಲು ಸರ್ಕಾರದ ವತಿಯಿಂದ ಧನ ಸಹಾಯ ಕೋರಿರುತ್ತಾರೆ.
ಗೋದಾಮು ನಿರ್ಮಾಣಕ್ಕೆ ಸುಮಾರು ಐವತ್ತು ಲಕ್ಷ (50,00,000.00) ರೂ ಗಳ ಅಗತ್ಯವಿದ್ದು ಸಂಘದ ಸದಸ್ಯರಿಂದ ಸುಮಾರು 25 ಲಕ್ಷ ದೇಣಿಗೆ ಸಂಗ್ರಹ ಮಾಡಿ ಕೆಲಸ ಪ್ರಾರಂಭಿಸಿತ್ತಾದರೂ ಹಣದ ಕೊರತೆಯಿಂದ ಗೋದಾಮು ನಿರ್ಮಾಣ ಸಧ್ಯಕ್ಕೆ ಸ್ಥಗಿತಗೊಂಡಿತ್ತು.ಈ ಸಹಕಾರಿ ಸಂಘದ ಸದಸ್ಯರ ಕೋರಿಕೆಗೆ ಸ್ಪಂದಿಸಿದ ಡಾ. ಆರತಿ ಕೃಷ್ಣ ರವರು ಮಾನ್ಯ ಸಹಕಾರಿ ಸಚಿವರಾದ ಶ್ರೀ ಕೆ.ಎನ್ ರಾಜಣ್ಣ ರವರಿಗೆ ಸದರಿ ಗೋದಾಮು ನಿರ್ಮಾಣಕ್ಕೆ ಅನುದಾನ ನೀಡಲು ಕೋರಿದ್ದು ಸಹಕಾರಿ ಇಲಾಖೆ ವತಿಯಿಂದ ಐದು ಲಕ್ಷ(5,00,000.00) ರೂ ಗಳನ್ನು ಮಂಜೂರು ಮಾಡಿರುತ್ತಾರೆ.
ಕಾಕತಾಳಿಯವೇನೆಂದರೆ ಸದರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಮಾನ್ಯ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣ ರವರ ತಂದೆಯವರಾದ ಶ್ರೀ ಬೇಗಾನೆ ರಾಮಯ್ಯ ನವರು ಈ ಹಿಂದೆ ಸಚಿವರಾಗಿದ್ದ ಸಂದರ್ಭದಲ್ಲಿ ಸ್ಥಾಪನೆಯಾಗಿತ್ತು. ಇದರ ಮೂಲಕ ನ್ಯಾಯ ಬೆಲೆ ಅಂಗಡಿ ನಡೆಸಿದ್ದು, ಈ ನ್ಯಾಯ ಬೆಲೆ ಅಂಗಡಿಯು ಸುಮಾರು 4 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದ್ದು, ಸುಮಾರು 2000 ಪಡಿತರ ಕಾರ್ಡುದಾರರು ಇರುತ್ತಾರೆ. ಈ ಪಡಿತರ ಕಾರ್ಡುದಾರರಿಗೆ ಈ ನ್ಯಾಯ ಬೆಲೆ ಅಂಗಡಿಯ ಮೂಲಕ ಪಡಿತರ ಸಾಮಾಗ್ರಿಗಳನ್ನು ವಿತರಿಸುತ್ತಿದ್ದು ಜೊತೆಗೆ ರೈತರಿಗೆ ಗೊಬ್ಬರ ಹಾಗೂ ಇತರ ಪರಿಕರಗಳನ್ನು ವಿತರಣೆ ಮಾಡುತ್ತಾ ಬಂದಿರುತ್ತಾರೆ.