ಫಸಲ್ ಬಿಮಾ ಯೋಜನೆ-ಮುಂಗಾರು 2023 ಪ್ರಚಾರ ವಾಹನಕ್ಕೆ ಜಿಲ್ಲಾಧಿಕಾರಿಗಳಿಂದ ಚಾಲನೆ

ಶಿವಮೊಗ್ಗ, ಜುಲೈ 17:
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ-ಮುಂಗಾರು 2023 ರ ಪ್ರಚಾರ ವಾಹನಕ್ಕೆ ಜಿಲ್ಲಾಧಿಕಾರಿಗಳಾದ ಡಾ.ಸೆಲ್ವಮಣಿ ಆರ್ ಇಂದು ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಕೃಷಿ ಇಲಾಖೆ ಹಾಗೂ ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ವತಿಯಿಂದ ಈ ವಾಹನ ಜಿಲ್ಲೆಯಲ್ಲಿ ಇಂದಿನಿಂದ 15 ದಿನಗಳ ಕಾಲ ಬೆಳೆ ವಿಮೆ ಕುರಿತು ಪ್ರಚಾರ ಕೈಗೊಳ್ಳಲಿದೆ. ಇಂದು ಶಿವಮೊಗ್ಗ ತಾಲ್ಲೂಕಿನಾದ್ಯಂತ ಪ್ರಚಾರ ಕೈಗೊಂಡಿದ್ದು, ನಾಳೆಯಿಂದ ಭದ್ರಾವತಿ, ಶಿಕಾರಿಪುರ, ಸೊರಬ, ಹೊಸನಗರ, ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಸಂಚರಿಸಿ ಬೆಳೆ ವಿಮೆ ಕುರಿತು ರೈತರಿಗೆ ಮಾಹಿತಿ ನೀಡಲಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಅಗ್ರಿಕಲ್ಚರಲ್ ಇನ್ಶೂರೆನ್ಸ್ ಕಂಪೆನಿ ಆಫ್ ಇಂಡಿಯಾ ಲಿ.ಸಂಸ್ಥೆ ವತಿಯಿಂದ 2023 ರ ಮುಂಗಾರು ಹಂಗಾಮಿನಲ್ಲಿ ರಾಜ್ಯದ 9 ಜಿಲ್ಲೆಗಳಲ್ಲಿ ಅನುಷ್ಟಾನಗೊಳಿಸುತ್ತಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಮುಸಿಕಿನ ಜೋಳ(ನೀರಾವರಿ)ಕ್ಕೆ ವಿಮಾ ಮೊತ್ತ ಪ್ರತಿ ಹೆಕ್ಟೇರ್‍ಗೆ ರೂ.64500 ಹಾಗೂ ಮುಸುಕಿನ ಜೋಳ(ಮಳೆಯಾಶ್ರಿತ) ವಿಮಾ ಮೊತ್ತ ರೂ.56500 ಆಗಿದ್ದು ನೋಂದಣಿಗೆ ಜುಲೈ 31 ಕಡೆಯ ದಿನವಾಗಿರುತ್ತದೆ. ಭತ್ತ (ನೀರಾವರಿ)ಕ್ಕೆ ವಿಮಾ ಮೊತ್ತ ರೂ.93250, ಭತ್ತ(ಮಳೆಯಾಶ್ರಿತ) ವಿಮಾ ಮೊತ್ತ ರೂ.63750, ರಾಗಿ(ಮಳೆಯಾಶ್ರಿತ) ರೂ.42500 ಮತ್ತು ಜೋಳ(ಮಳೆಯಾಶ್ರಿತ)ಕ್ಕೆ ವಿಮಾ ಮೊತ್ತ ರೂ.38250 ಆಗಿದ್ದು ಪ್ರತಿ ಬೆಳೆಗೆ ರೈತರ ವಿಮಾ ಕಂತು ಶೇ.2.00 ಆಗಿರುತ್ತದೆ.
ಈ ಯೋಜನೆಯಡಿ ಬೆಳೆ ಸಾಲ ಪಡೆದ ರೈತರು ತಮಗೆ ಪಾಲ್ಗೊಳ್ಳಲು ಇಷ್ಟವಿದ್ದಲ್ಲಿ ಅಥವಾ ಇಷ್ಟವಿಲ್ಲದಿದ್ದಲ್ಲಿ ನಿರ್ಧಿಷ್ಟವಾದ ನಮೂನೆಯಲ್ಲಿ ಸಲ್ಲಿಸತಕ್ಕದ್ದು. ಬೆಳೆ ಸಾಲ ಪಡೆಯದ ರೈತರಿಗೆ ಐಚ್ಚಿಕ. ಬೆಳೆ ಸಾಲ ಪಡೆಯದ ರೈತರು ವಿಮಾ ಕಂತನ್ನು ಕಟ್ಟಿ ಪಾಲ್ಗೊಳ್ಳಲು ತಮ್ಮ ಖಾತೆ ಇರುವ ಹತ್ತಿರವಿರುವ ವಾಣಿಜ್ಯ, ಗ್ರಾಮೀಣ, ಸಹಕಾರ ಬ್ಯಾಂಕ್‍ನ್ನು ಅಥವಾ ಸಿಎಸ್‍ಸಿ/ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಸಂಪರ್ಕಿಸಬಹುದು. ರೈತರು ನಿಗದಿತ ಅರ್ಜಿಯನ್ನು ಪೂರ್ಣವಾಗಿ ತುಂಬಬೇಕು. ಜಮೀನು ಹೊಂದಿರುವುದಕ್ಕೆ ದಾಖಲಾತಿಗಳಾದ ಪಹಣಿ, ಪಾಸ್ ಪುಸ್ತಕ, ಕಂದಾಯ ರಶೀದಿ ಅಥವಾ ಖಾತೆ ಪತ್ರ ಇತ್ಯಾದಿ ನೀಡಬೇಕು.
ಬೆಳೆಗೆ ನಿಗದಿಪಡಿಸಿದ ವಿಮಾ ಕಂತನ್ನು ತುಮಬಿ ‘ಸಂರಕ್ಷಣೆ ಪೋರ್ಟಲ್’ ಮೂಲಕ ಪಾಲ್ಗೊಳ್ಳಬಹುದು.
ಕಾರ್ಯಕ್ರಮದಲ್ಲಿ ಫಸಲ್ ಬಿಮಾ ಯೋಜನೆ ಕುರಿತಾದ ಮಾಹಿತಿಯುಳ್ಳ ಪೋಸ್ಟರ್‍ಗಳನ್ನು ಬಿಡುಗಡೆಗೊಳಿಸಲಾಯಿತು.
ಜಿ.ಪಂ. ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಕೃಷಿ ಜಂಟಿ ನಿರ್ದೇಶಕಿ ಪೂರ್ಣಿಮಾ, ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್‍ನ ಶಿವಮೊಗ್ಗ ಜಿಲ್ಲಾ ಸಂಯೋಜಕಿ ಭೂಮಿಕಾ, ತಾಲ್ಲೂಕು ಸಂಯೋಜಕರು, ಇತರೆ ಅಧಿಕಾರಿಗಳು ಹಾಜರಿದ್ದರು.



ಗುರು, ಕಮ್ಮರಡಿ

Leave a Reply

Your email address will not be published. Required fields are marked *

Optimized by Optimole
error: Content is protected !!