ಹಾಸನದ ರೌಡಿಶೀಟರ್ ಹತ್ಯೆ ಪ್ರಕರಣ 9 ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ASHWASURYA/SHIVAMOGGA
✍️ ಸುಧೀರ್ ವಿಧಾತ
ಅಶ್ವಸೂರ್ಯ/ಹಾಸನ: ಹಾಸನದಲ್ಲಿ ಹಾಡಹಗಲೇ ರೌಡಿಶೀಟರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಚನ್ನರಾಯಪಟ್ಟಣದ ಹೆಚ್ಚುವರಿ ಅಪರ ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಈ ಪ್ರಕರಣದಲ್ಲಿ ನಟೋರಿಯಸ್ ರೌಡಿ ಯಾಚೇನಹಳ್ಳಿ ಚೇತು ಸೇರಿದಂತೆ ಒಂಬತ್ತು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಈ ಕೊಲೆ ಪ್ರಕರಣ ದಾಖಲಾಗಿ ಹತ್ತೇ ತಿಂಗಳಲ್ಲಿ ವಿಚಾರಣೆ ಮುಗಿಸಿದ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
2023 ರ ಜುಲೈ 4 ರಂದು ಚನ್ನರಾಯಪಟ್ಟಣದ ಮುಖ್ಯ ರಸ್ತೆಯಲ್ಲಿ ನಟೋರಿಯಸ್ ರೌಡಿ ಯಾಚೇನಹಳ್ಳಿ ಚೇತು & ಗ್ಯಾಂಗ್ ರೌಡಿಶೀಟರ್ ಮಾಸ್ತಿಗೌಡ ಎಂಬಾತನನ್ನು ಆರೋಪಿಗಳು ಹತ್ಯೆಗೈದಿದ್ದರು.ಗುಲ್ಬರ್ಗಾ ಜೈಲಲ್ಲಿ ಇದ್ದುಕೊಂಡೇ ರೌಡಿ ಶೀಟರ್ ಮಾಸ್ತಿಗೌಡ ಎಂಬಾತನಿಗೆ ಯಾಚೇನಹಳ್ಳಿ ಚೇತು ತನ್ನ ಸಹಚರರ ಮೂಲಕ ಸ್ಕೆಚ್ ಹಾಕಿ ಕೊಲೆ ಮಾಡಿಸಿದ್ದ.
ಯಾಚೇನಹಳ್ಳಿ ಚೇತನ್ ಅಲಿಯಾಸ್ ಚೇತು, ಮಂಡ್ಯ ಶಿವು ಅಲಿಯಾಸ್ ಶಿವಕುಮಾರ್, ಉಲಿವಾಲ ಚೇತು, ರಾಕಿ ಅಲಿಯಾಸ್ ರಾಕೇಶ್, ಸುಮಂತ, ಭರತ್, ಹರೀಶ್, ರಾಹುಲ್ ಅಲಿಯಾಸ್ ಮೊಟ್ಟೆ ಮತ್ತು ರಾಘು ಅಲಿಯಾಸ್ ರಾಘವೇಂದ್ರಗೆ ಜೀವವಾಧಿ ಶಿಕ್ಷೆ ವಿಧಿಸಲಾಗಿದೆ.
ಪ್ರಕರಣದಲ್ಲಿ ಹಂತಕರಿಗೆ ಸಾಥ್ ನೀಡಿದ ಹಿನ್ನಲೆಯಲ್ಲಿ ಮತ್ತಿಬ್ಬರು ಆರೋಪಿಗಳಿಗೆ ತಲಾ 2.5 ವರ್ಷ ಜೈಲು ಶಿಕ್ಷೆ . ಈ ಪ್ರಕರಣದಲ್ಲಿ ಇನ್‌ಸ್ಪೆಕ್ಟರ್ ವಸಂತ್‌ಕುಮಾರ್ ಕೆ.ಎಂ. ತನಿಖಾಧಿಕಾರಿಯಾಗಿದ್ದರು. ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿತ್ತು.