ಮಗ ಕಾಂತೇಶನಿಗೆ ಟಿಕೆಟ್ ಸಿಕ್ಕಿಲ್ಲ ಎಂದು ನಮ್ಮ ಕುಟುಂಬದ ವಿರುದ್ಧ ಟೀಕಾಪ್ರಹಾರ; ಈಶ್ವರಪ್ಪರಿಗೆ ಖಡಕ್ ಉತ್ತರ ಕೊಟ್ಟ ಬಿ.ವೈ. ರಾಘವೇಂದ್ರ
ASHWASURYA/SHIVAMOGGA
✍️ ಸುಧೀರ್ ವಿಧಾತ
ಅಶ್ವಸೂರ್ಯ/ಶಿವಮೊಗ್ಗ ; ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಬಂಡಾಯವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಎಸ್.ಈಶ್ವರಪ್ಪನವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈಶ್ವರಪ್ಪ ವಾಕ್ ಪ್ರಹಾರಕ್ಕೆ ಬಿಜೆಪಿಯ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ರಾಘವೇಂದ್ರ ಅವರು ನಾನು ಈಶ್ವರಪ್ಪನವರ ಬಗ್ಗೆ ಮಾತನಾಡುವುದು ಬೇಡ ಎಂದುಕೊಂಡಿದ್ದೆ. ಆದರೆ ಈಗ ಮಾತನಾಡುವುದು ಅನಿವಾರ್ಯವಾಗಿದೆ. ಅನಗತ್ಯವಾಗಿ ಯಡಿಯೂರಪ್ಪ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಬಿಎಸ್ ವೈ ಹಲವು ಸವಾಲು ಹೋರಾಟಗಳಿಂದ ಮೇಲೆ ಬಂದವರು ಎಂದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಪಾಪ…. ಕಳೆದ ಹದಿನೈದುದಿನಗಳಿಂದ ಈ ರೀತಿ ಅನಿಸಿದೆ ಅವರಿಗೆ. ಮೊದಲು ಹೀಗೆ ಅನಿಸಿರಲಿಲ್ಲ ಅವರಿಗೆ. ಪುತ್ರ ಕಾಂತೇಶನಿಗೆ ಟಿಕೆಟ್ ಸಿಕ್ಕಿಲ್ಲ.ಅವರ ಕುಟುಂಬದವರಿಗೆ ಟಿಕೆಟ್ ಸಿಕ್ಕಿಲ್ಲ ಹೀಗಾಗಿ ನಮ್ಮ ಕುಟುಂಬದ ಬಗ್ಗೆ ಟೀಕಾಪ್ರಹಾರ ನಡೆಸುತ್ತಿದ್ದಾರೆ.ಕಾಂತೇಶನಿಗೆ ಟಿಕೆಟ್ ಕೊಡದಿರುವುದು ಹೈಕಮಾಂಡ್ ನಿರ್ಧಾರ. ಹೈಕಮಾಂಡ್ ತೀರ್ಮಾನವನ್ನು ಈಶ್ವರಪ್ಪ ಗೌರವಿಸಬೇಕಿತ್ತು ಎಂದು ತಿರಿಗೇಟು ನೀಡಿದ್ದಾರೆ.
ನಮ್ಮ ಕುಟುಂಬದ ವಿರುದ್ಧ ಈಶ್ವರಪ್ಪ ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ. ಈಶ್ವರಪ್ಪನವರು ಏನೇ ಮಾತನಾಡಿದರೂ ಆಶಿರ್ವಾದ ಅಂದುಕೊಳ್ಳುತ್ತೇನೆ. ಜನರೆ ಮತದಾನದ ಮೂಲಕ ಅವರಿಗೆ ತಕ್ಕ ಉತ್ತರ ಕೊಡುತ್ತಾರೆ.ನಾನು ಕೊಡುವ ಆವಶ್ಯಕತೆ ಇಲ್ಲ ಎಂದು ಹೇಳಿದರು.