ಶಿವಮೊಗ್ಗ ಕ್ಷೇತ್ರದ ಲೋಕಸಭಾ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರಿಂದ ಸಾಗರದ ಗ್ರಾಮಾಂತರದಲ್ಲಿ ಪಂಚಾಯಿತಿ ಮಟ್ಟದ ಪ್ರಚಾರ ಸಭೆ
ASHWASURYA/SHIVAMOGGA
✍️ ಸುಧೀರ್ ವಿಧಾತ
ಗ್ಯಾರಂಟಿ ಯೋಜನೆಗಳ ಬಗ್ಗೆ ತಪ್ಪು ಸಂದೇಶ: ಗೀತಾ ಶಿವರಾಜಕುಮಾರ್
ಅಶ್ವಸೂರ್ಯ/ಶಿವಮೊಗ್ಗ: ಗ್ಯಾರಂಟಿ ಯೋಜನೆಗಳಿಂದ ಜನರು ದಾರಿ ತಪ್ಪುತ್ತಿದ್ದಾರೆ ಎಂದು ಕೆಲವರು ತಪ್ಪು ಸಂದೇಶ ಹರಡುತ್ತಿದ್ದಾರೆ. ಈ ರೀತಿಯ ವದಂತಿಗಳಿಗೆ ಜನರು ಕಿವಿಕೊಡಬಾರದು ಗ್ಯಾರಂಟಿ ಯೋಜನೆಗಳಿಂದ ಬಡವರ ಬಾಳು ಹಸನಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಹೇಳಿದರು.
ಸಾಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಇಲ್ಲಿನ ಪಡವಗೋಡು ಗ್ರಾಮ ಪಂಚಾಯಿತಿ ಲಿಂಗದಹಳ್ಳಿ ಹಾಗೂ ಭೀಮನೇರಿಯ ಸೂರನಗದ್ದೆ ದೇವಸ್ಥಾನ ವೃತ್ತದಲ್ಲಿ ಬುಧವಾರ ಆಯೋಜಿದ್ದ ಗ್ರಾಮ ಪಂಚಾಯಿತಿ ಮಟ್ಟದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಕೃಪಾಂಕ ಕಲ್ಪಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಅಶಕ್ತ ಕುಟುಂಬಗಳಿಗೆ ಆಶಾಕಿರಣವಾಗಿದ್ದರು. ಅವರ ಮಗಳಾದ ನಾನು ಕೂಡ ಬಂಗಾರಪ್ಪ ಅವರ ಹಾದಿಯಲ್ಲಿ ಸಾಗುತ್ತೇನೆ. ನೊಂದವರ ಕಣ್ಣೀರು ಒರೆಸುತ್ತೇನೆ ಬಡವರ ಧ್ವನಿಯಾಗಿ ನಿಮ್ಮ ಜೋತೆಗೆ ಇರುತ್ತೇನೆ ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ.ಇದರ ಪ್ರಯೋಜನವನ್ನು ಲಕ್ಷಾಂತರ ಮಂದಿ ಅರ್ಹ ಫಲಾನುಭವಿಗಳು ಪಡೆದುಕೊಂಡಿದ್ದಾರೆ ಎಂದರು.
ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದ ಕಾವು ಹೆಚ್ಚಾಗಿದೆ. ಆದ್ದರಿಂದ ಇಲ್ಲಿ ಗೀತಾ ಶಿವರಾಜಕುಮಾರ್ ಅವರನ್ನು ಹೆಚ್ಚಿನ ಮತದಿಂದ ಗೆಲ್ಲಿಸಬೇಕು. ಗೀತಾ ಶಿವರಾಜಕುಮಾರ್ ಅವರು ರಾಜಕೀಯಕ್ಕೆ ಬರಲು ಹಕ್ಕಿದೆ. ಅವರ ರಕ್ತದಲ್ಲಿಯೇ ಸಾಮಾಜಿಕ ಸೇವೆಯ ಗುಣವಿದೆ. ಆದರೆ, ಈ ಬಗ್ಗೆ ಕೆಲವರು ಟೀಕಿಸುತ್ತಿದ್ದಾರೆ. ಇದಕ್ಕೆ ಉತ್ತರವಾಗಿ ಮತ ನೀಡಿ ಅವರನ್ನು ಗೆಲ್ಲಿಸಬೇಕಿದೆ ಎಂದು ಕೋರಿದರು.
ಸಂಸದ ಬಿ.ವೈ. ರಾಘವೇಂದ್ರ ಅವರು ಗ್ರಾಮೀಣ ಮಟ್ಟಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಸೋಗಾನೆ ವಿಮಾನ ನಿಲ್ದಾಣ,ಅವರ ಆಸ್ತಿಯ ಬಳಿ ಮೇಲ್ ಸೇತುವೆ, ರಸ್ತೆ ಮಾಡಿದ್ದಾರೆ ಇದು ಅಭಿವೃದ್ಧಿ ಎನ್ನಲು ಸಾಧ್ಯವಿಲ್ಲ. ಬಡಜನರ ನೋವಿನ ಧ್ವನಿ ಆಲಿಸಬೇಕು. ಈ ಕಾರ್ಯವನ್ನು ಗೀತಾ ಅವರು ಪ್ರಮಾಣಿಕವಾಗಿ ಮಾಡಲಿದ್ದಾರೆ ಎಂದರು.
ನಟ ಶಿವರಾಜಕುಮಾರ್ ಮಾತನಾಡಿ, ಆರೋಗ್ಯ ಸಮಸ್ಯೆ ನಡುವೆಯೂ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ಇದಕ್ಕೆ ಕಾರಣ ಶಿವಮೊಗ್ಗ ಜನರು ಗೀತಾ ಅವರ ( ಪತ್ನಿ) ಮೇಲಿಟ್ಟಿರುವ ನಂಬಿಕೆ. ಆದ್ದರಿಂದ, ನಾನು ಗೀತಾ ಅವರನ್ನು ನಂಬಿದ್ದೇನೆ. ಮತ ನೀಡಿ ಎಂದು ಮನೆ ಬಾಗಿಲಿಗೆ ಬಂದಿದ್ದೇವೆ. ಮತ ನೀಡಿ ಆಶೀರ್ವದಿಸಿ ಎಂದು ಕೋರಿದರು.
ಕೆಪಿಸಿಸಿ ಉಪಾಧ್ಯಕ್ಷ ಅನಿಲ್ ಕುಮಾರ್ ತಡಕಲ್, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ, ಕಲಗೋಡು ರತ್ನಾಕರ್, ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಮೋಹನ್, ಅನಿತಾ ಕುಮಾರಿ, ಸೂರನಗದ್ದೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಅಣ್ಣಪ್ಪ ಉಪಸ್ಥಿತರಿದ್ದರು