ಶಿವಮೊಗ್ಗ : ಜುಲೈ 05 :ತೀರ್ಥಹಳ್ಳಿ ತಾಲೂಕಿನ ಮಹಿಷಿ ಮತ್ತು ಮಂಡಗದ್ದೆ ಸೇರಿದಂತೆ ಜಿಲ್ಲೆಯ ಹಲವು ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿ ಬರುತ್ತಿದ್ದು, ಅರಣ್ಯಾಧಿಕಾರಿಗಳು ತಕ್ಷಣದಿಂದಲೇ ನಿಯಂತ್ರಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ ಅವರು ವಲಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವತಿಯಿಂದ ಏರ್ಪಡಿಸಲಾಗಿದ್ದ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿನ ಮರಳು ಗುತ್ತಿಗೆಗಳಲ್ಲಿ ಮರಳು ಗಣಿಗಾರಿಕೆಯನ್ನು ಮಾನ್ಸೂನ್ ಮುಕ್ತಾಯಗೊಳ್ಳುವವರೆಗೆ ಸ್ಥಗಿತಗೊಳಿಸುವಂತೆ ಎಲ್ಲಾ ಗುತ್ತಿಗೆದಾರರಿಗೆ ಸೂಚಿಸಲಾಗಿದ್ದು, ಆದೇಶದ ಅನುಷ್ಠಾನಕ್ಕೆ ಸಮಿತಿ ಸದಸ್ಯರು ಕಟ್ಟುನಿಟ್ಟಿನ ಕ್ರಮ ವಹಿಸುವಂತೆಯೂ ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲೆಯ ಸಾಗರ ತಾಲೂಕಿನ ಕೆಲವು ಆಯ್ದ ಅರಣ್ಯ ಪ್ರದೇಶಗಳ ಮಧ್ಯ ಭಾಗದಲ್ಲಿ ಅನಧಿಕೃತ ಜಂಬಿಟ್ಟಿಗೆ ಕ್ವಾರಿಗಳು ಸಕ್ರಿಯವಾಗಿರುವ ಬಗ್ಗೆ ದೂರುಗಳು ಬಂದಿವೆ. ವಿಶೇಷವಾಗಿ ಕೋಗಾರು, ಚನ್ನಗೊಂಡ ಮತ್ತು ಬೆಳ್ಳಂದೂರುಗಳಲ್ಲಿ ಜಂಬಿಟ್ಟಿಗೆ ಕ್ವಾರಿಗಳಿರುವ ಬಗ್ಗೆ ಅಧಿಕೃತ ಅಧಿಕಾರಿಗಳಿಂದ ಮಾಹಿತಿ ಪಡೆದಿರುವುದಾಗಿ ತಿಳಿಸಿದ ಅವರು, ಈ ಕೂಡಲೇ ಅಕ್ರಮಗಳಲ್ಲಿ ತೊಡಗಿರುವ ವ್ಯಕ್ತಿಗಳು ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದ ಅವರು ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಅನಿವಾರ್ಯವಾಗಲಿದೆ ಎಂದವರು ಎಚ್ಚರಿಸಿದರು.
ಹೊಸನಗರ ತಾಲೂಕಿನ ಕೆಲವು ಗ್ರಾಮಗಳ ವ್ಯಾಪ್ತಿಯಲ್ಲಿ ಸರ್ಕಾರಿ, ಕಂದಾಯ, ಅರಣ್ಯ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕೆ.ಪಿ.ಸಿ.ಎಲ್ ಪ್ರದೇಶಗಳಲ್ಲಿ ಅನಧಿಕೃತ ಮರಳು ಗಣಿಗಾರಿಕೆ, ಸಾಗಾಣಿಕೆ ಹಾಗೂ ದಾಸ್ತಾನು ಮಾಡಿರುವ ಬಗ್ಗೆ ದೂರುಗಳಿವೆ. ಈ ದೂರುಗಳನ್ನಾಧರಿಸಿ, ನ್ಯಾಯಾಲಯಗಳಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಅಲ್ಲದೆ ಹಲವು ಬಾರಿ ಮರಳು ಜಪ್ತಿ ಮಾಡಿಕೊಂಡು ವಿಲೇವಾರಿ ಮಾಡಲಾಗಿದೆ. ಈ ಎಲ್ಲಾ ಘಟನಾವಳಿಗಳ ನಂತರವೂ ಸಾಮಾನ್ಯ ಮರಳು ಖನಿಜದ ಅಕ್ರಮ ಗಣಿಗಾರಿಕೆ ಮತ್ತು ಸಾಗಾಣಿಕೆ ಮುಂದುವರೆದಿದ್ದು, ಕಂದಾಯ, ಅರಣ್ಯ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು ಎಂದರು.
ಮತ್ತೂರು ಗ್ರಾಮದ ಸರ್ವೇ ನಂ. 6ರಲ್ಲಿ ಕಲ್ಲುಗಣಿ ಗುತ್ತಿಗೆ ಸಂಬಂಧ ಸಾರ್ವಜನಿಕರು ನೀಡಿರುವ ಅರ್ಜಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಯಿಂದ ವರದಿ ಪಡೆದು ನಂತರ ನಿಯಮ ಉಲ್ಲಂಘನೆಯಾಗಿದ್ದಲ್ಲಿ ಕ್ರಮ ಕೈಗೊಳ್ಳುವಂತೆ ಗಣಿ ಮತ್ತು ಭೂವಿಜ್ಞಾನ ಶ್ರೀಮತಿ ವಿಂಧ್ಯಾ ಅವರಿಗೆ ಸೂಚಿಸಿದರು.
ಗೆಜ್ಜೇನಹಳ್ಳಿಯ ವಿವಿಧ ಸರ್ವೇ ನಂಬರ್‍ಗಳಲ್ಲಿನ ಖಾಸಗಿ ಜಮೀನುಗಳಲ್ಲಿ ಭೂ ಪರಿವರ್ತನೆ ದಾಖಲೆಗಳನ್ನು ಸಲ್ಲಿಸಿರುವ ಕಲ್ಲುಪುಡಿ ಮಾಡುವ ಘಟಕಗಳಿಗೆ ಪರವಾನಿಗೆ ಅವಧಿಯನ್ನು ವಿಸ್ತರಿಸುವ ಬಗ್ಗೆ ಚರ್ಚಿಸಲಾಗಿ, ಪರಿಶೀಲಿಸಿ ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳು ಹಿರಿಯ ಭೂವಿಜ್ಞಾನಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‍ಕುಮಾರ್, ಡಿ.ಎಫ್.ಒ. ಶಿವಶಂಕರ್, ಆಶಿಸ್‍ರೆಡ್ಡಿ, ಆರ್.ಟಿ.ಒ. ಶಂಕರಪ್ಪ, ಗಣಿ ಮತ್ತು ಭೂವಿಜ್ಞಾನಿ ಶ್ರೀಮತಿ ವಿಂಧ್ಯಾ, ಉಪವಿಭಾಗಾಧಿಕಾರಿ ರವಿಚಂದ್ರನಾಯ್ಕ, ಕು.ಪಲ್ಲವಿ ಸಾತೇನಹಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.ಸುಧೀರ್ ವಿಧಾತ, ಶಿವಮೊಗ್ಗದ
Voice of common man in words