ಶಿಕ್ಷಣ ಸಚಿವರಾದ ಮಧು ಬಾಂಗರಪ್ಪನವರನ್ನು ಅಭಿನಂದಿಸಿ ಗೌರವಿಸಿದ ಕ್ಷಣ
ಸಚಿವ ಮಧು ಬಂಗಾರಪ್ಪನವರಿಗೆ ಅಭಿನಂದನಾ ಸಮಾರಂಭ
ಶ್ರೀ ಯಾಗಕ್ಷತ್ರಿಯ ಸಾಧುಶೆಟ್ಟಿ ಸಂಘದ ಸಮುದಾಯ ಭವನಕ್ಕೆ ನಾಲ್ಕು ಕೋಟಿ ರೂ. ನೀಡಿ: ಆರ್. ಮೋಹನ್ ಮನವಿ
ಶಿವಮೊಗ್ಗ: ಅತಿ ಹಿಂದುಳಿದ ವರ್ಗಕ್ಕೆ ಸೇರಿರುವ ಶ್ರೀ ಯಾಗಕ್ಷತ್ರಿಯ ಸಾಧುಶೆಟ್ಟಿ ಸಮಾಜದವರ ಅನುಕೂಲಕ್ಕಾಗಿ ನಗರದಲ್ಲಿ ಸಮುದಾಯ ಭವನ ನಿರ್ಮಿಸಲು ಸರ್ಕಾರದಿಂದ 4 ಕೋಟಿ ರೂ. ಅನುದಾನ ದೊರಕಿಸಿಕೊಡಬೇಕೆಂದು ಶ್ರೀ ಯಾಗಕ್ಷತ್ರಿಯ ಸಾಧುಶೆಟ್ಟಿ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ, ಹಾಲಿ ನಿರ್ದೇಶಕ ಆರ್. ಮೋಹನ್ ಮನವಿ ಮಾಡಿದರು.
ಶ್ರೀ ಯಾಗಕ್ಷತ್ರಿಯ ಸಾಧುಶೆಟ್ಟಿ ಸಂಘದ ವತಿಯಿಂದ 04-03-2024ರ ಸೋಮವಾರ ಬೆಳಿಗ್ಗೆ 9 ಗಂಟೆಗೆ ಇಲ್ಲಿನ ಜೆಪಿಎನ್ ರಸ್ತೆಯಲ್ಲಿರುವ ಸರ್ವಸಿದ್ಧಿ ವಿನಾಯಕ ದೇವಾಲಯದ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪನವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಈ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೋಹನ್, ಶ್ರೀ ಯಾಗಕ್ಷತ್ರಿಯ ಸಾಧುಶೆಟ್ಟಿ ಸಮಾಜ ಸೇರಿದಂತೆ ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗಗಳ ಹರಿಕಾರರಾಗಿ ದೇವರಾಜ ಅರಸ್ ಮತ್ತು ಬಂಗಾರಪ್ಪನವರು ಕೆಲಸ ಮಾಡಿದ್ದಾರೆ. ಯಾಗಕ್ಷತ್ರಿಯ ಸಾಧುಶೆಟ್ಟಿ ಸಮಾಜವು ಪ್ರವರ್ಗ-1ಕ್ಕೆ ಸೇರಲು ಬಂಗಾರಪ್ಪನವರ ಪಾತ್ರ ಮಹತ್ವದ್ದಾಗಿದೆ ಎಂದರು.
ನಗರದ ಬೊಮ್ಮನಕಟ್ಟೆಯಲ್ಲಿ ಆಶ್ರಯ ಬಡಾವಣೆ ನಿರ್ಮಿಸಿ ಹಿಂದುಳಿದವರು, ಅತಿ ಹಿಂದುಳಿದವರು, ಬಡವರು, ಕೂಲಿ ಕಾರ್ಮಿಕರು ತಲೆಯ ಮೇಲೊಂದು ಸ್ವತಃ ಸೂರು ಹೊಂದಲು ಬಂಗಾರಪ್ಪನವರು ಕಾರಣ. ತಂದೆಗೆ ತಕ್ಕ ಮಗನಾಗಿ ಇವರದ್ದೇ ಹಾದಿಯಲ್ಲಿ ನಡೆಯುತ್ತಿರುವ ಮಧು ಬಂಗಾರಪ್ಪನವರು ಅಹಿಂದ ವರ್ಗಕ್ಕೆ ಆಶಾಕಿರಣವಾಗಿದ್ದಾರೆ ಎಂದು ಹೇಳಿದರು.
ನಿಗಮ- ಮಂಡಳಿ, ಪ್ರಾಧಿಕಾರಗಳಿಗೆ ನೇಮಕಾತಿ ಮಾಡುವ ಸಂದರ್ಭದಲ್ಲಿ ಶ್ರೀ ಯಾಗಕ್ಷತ್ರಿಯ ಸಾಧುಶೆಟ್ಟಿ ಸಮಾಜದವರಿಗೆ ಅವಕಾಶ ಕಲ್ಪಿಸಿಕೊಡಬೇಕು. ಈ ಮೂಲಕ ಹಿಂದುಳಿದ ವರ್ಗದ ಹಿತ ಕಾಪಾಡಬೇಕೆಂದು ಕೋರಿದರು.
ಮನವಿಗೆ ಸ್ಪಂದಿಸಿ ಮಾತನಾಡಿದ ಮಧು ಬಂಗಾರಪ್ಪನವರು ಸಮುದಾಯ ಭವನ ನಿರ್ಮಿಸಲು ನಾಲ್ಕು ಕೋಟಿ ರೂ. ಅನುದಾನ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯವರೊAದಿಗೆ ಚರ್ಚಿಸಿ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಶ್ರೀ ಯಾಗಕ್ಷತ್ರಿಯ ಸಾಧುಶೆಟ್ಟಿ ಸಂಘದ ಅಧ್ಯಕ್ಷರಾದ ಎನ್. ಉಮಾಪತಿ, ಪ್ರಧಾನ ಕಾರ್ಯದರ್ಶಿ ಕಿಬ್ಬನಹಳ್ಳಿ ನರಸಿಂಹ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಆರ್. ಮೋಹನ್, ಕಂಚಿ ಕಾಮಾಕ್ಷಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಾಜಿ ಅಧ್ಯಕ್ಷ ಕೃಷ್ಣಯ್ಯ, ಸಾಧುಶೆಟ್ಟಿ ಯುವಕ ಸಂಘದ ಗೌರವಾಧ್ಯಕ್ಷ ಶಿವಾನಂದ್, ಹೊನ್ನಪ್ಪ, ಹಸೂಡಿ ಕುಮಾರ್, ಶಿವಕುಮಾರ್ ಅಪ್ಪು, ಸರ್ಕಾರಿ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಎಸ್.ವೈ. ರಮೇಶ್, ಶ್ರೀ ಯಾಗಕ್ಷತ್ರಿಯ ಸಾಧುಶೆಟ್ಟಿ ಸಂಘದ ಉಪಾಧ್ಯಕ್ಷ ಎಸ್.ಆರ್. ಸೋಮು, ನಿರ್ದೇಶಕ ಶಿ.ದು. ಸೋಮಶೇಖರ್, ಹಸೂಡಿ ಗ್ರಾಪಂ ಅಧ್ಯಕ್ಷೆ ಚೈತ್ರಾ ಮೋಹನ್, ಸಾಧುಶೆಟ್ಟಿ ಮಹಿಳಾ ಸಂಘದ ನಾಗರತ್ನಮ್ಮ ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.