ಲೋಕಸಭಾ ಚುನಾವಣೆ: ಬಿಜೆಪಿಯ ಕೆಲವರಿಗೆ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದೆ.!

ಲೋಕಸಭಾ ಚುನಾವಣೆ: ಬಿಜೆಪಿಯ ಕೆಲವರಿಗೆ ಟಿಕೆಟ್ ಕೈ ತಪ್ಪುವ ಭೀತಿ ಎದುರಾಗಿದೆ.!

News.ashwasurya.in

✍️SUDHIR VIDHATA

ಬೆಂಗಳೂರು,ಮಾ.4- ವಿಧಾನಸಭಾ ಚುನಾವಣೆಯಲ್ಲಿ ಸೋತು ಲೋಕಸಭಾ ಚುನಾವಣೆಯಲ್ಲಿ ಮರು ರಾಜಕೀಯ ಪ್ರವೇಶ ಪಡೆಯಲು ಮುಂದಾಗಿದ್ದ ಬಿಜೆಪಿಯ ಹಲವರು ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ. ತಮ್ಮ ಪುತ್ರರು, ಕುಟುಂಬದವರು, ಸಂಬಂಧಿಕರು ಹಾಗೂ ಕೊನೆ ಕ್ಷಣದಲ್ಲಿ ತಾವೇ ಅಭ್ಯರ್ಥಿಯಾಗಬೇಕೆಂದು ಕೆಲವು ತಿಂಗಳಿಂದ ತಮ್ಮ ತಮ್ಮ ಕ್ಷೇತ್ರದಲ್ಲಿ ತೆರೆಮರೆಯಲ್ಲಿ ಪ್ರಚಾರ ನಡೆಸಿದ್ದರು ಅದರೆ ಈಗ ಹಲವು ಆಕಾಂಕ್ಷಿಗಳಿಗೆ
ಟಿಕೆಟ್ ಸಿಗುವುದು ಅನುಮಾನ ಎನ್ನಲಾಗುತ್ತಿದೆ.


ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿ ಹಿನ್ನಡೆ ಅನುಭವಿಸಿದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೇಂದ್ರ ಬಿಜೆಪಿ ವರಿಷ್ಠರು ಈ ಬಾರಿ ಅಂತಹ ಯಾವುದೇ ದುಸ್ಸಾಹಸಕ್ಕೆ ಕೈ ಹಾಕದಿರಲು ಮುಂದಾಗಿದ್ದಾರೆ.

ಮಧ್ಯ ಕರ್ನಾಟಕದ ರಾಜಧಾನಿ ದಾವಣಗೆರೆಯಲ್ಲಿ ಹಾಲಿ ಸಂಸದ ಜಿ.ಎಂ.ಸಿದ್ದೇಶ್‍ ಅವರಿಗೆ ಟಿಕೆಟ್ ನೀಡಬಾರದೆಂದು ಜಿಲ್ಲಾ ಘಟಕ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ ಕ್ಷೇತ್ರದಲ್ಲಿ ಮಾಜಿ ಸಚಿವ ರೇಣುಕಾಚಾರ್ಯ, ಜಗಳೂರು ಕ್ಷೇತ್ರದ ಶಾಸಕ ಡಾ.ಗುರುಸಿದ್ದನಗೌಡರ್ ಪುತ್ರ ಡಾ.ರವಿ ಸೇರಿದಂತೆ ಹಲವರು ಟಿಕೆಟಿಗಾಗಿ ತೆರೆಮರೆಯಲ್ಲಿ ಕಸತ್ತು ನೆಡೆಸುತ್ತಿದ್ದರು.!
ಇದೀಗ ಬಿಜೆಪಿ ಸಿದ್ದೇಶ್‍ ಅವರಿಗೆ ಟಿಕೆಟ್ ಕೊಡದೆ ಹೋದರೆ ಜಿಲ್ಲೆಯಲ್ಲಿ ಪ್ರಬಲವಾಗಿರುವ ಸಾಧು ಲಿಂಗಾಯತ ಸಮುದಾಯ ಚುನಾವಣೆಯಲ್ಲಿ ಕೈಕೊಡಬಹುದು ಎಂಬ ಭೀತಿಯಿಂದ ವಿಧಿಯಿಲ್ಲದೆ ಮತ್ತೆ ಸಿದ್ದೇಶ್‍ ಅವರಿಗೆ ಮಣೆ ಹಾಕುವ ಸಂಭವ ಎದುರಾಗಿದೆ. ಹೀಗಾಗಿ ರೇಣುಕಾಚಾರ್ಯರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ. ಹಾವೇರಿ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರ ಕಾಂತೇಶ್‍ಗೆ ಟಿಕೆಟ್ ಕೊಡಿಸಲು ಮಾಜಿ ಸಚಿವ ಈಶ್ವರಪ್ಪ ನಡೆಸಿದ ಪ್ರಯತ್ನಗಳು ಮತ್ತೆ ಕೈಗೂಡುವ ಸಾಧ್ಯತೆಗಳು ಹೆಚ್ಚಿದೆ. ಈ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಣಕ್ಕಿಳಿದರೆ ಕಾಂತೇಶ್‍ ಅವರಿಗೆ ಟಿಕೆಟ್ ಕೈ ತಪ್ಪಲಿದೆ.


ಉಡುಪಿ, ಚಿಕ್ಕಮಗಳೂರು ಕ್ಷೇತ್ರದಿಂದ ಸ್ಫರ್ಧಿಸಲು ಮಾಜಿ ಸಚಿವರಾದ ಸಿ.ಟಿ.ರವಿ, ಪ್ರಮೋದ್ ಮಧ್ವರಾಜ್, ಜೀವರಾಜ್ ಅವರುಗಳಿಗೂ ಟಿಕೆಟ್ ಕೈತಪ್ಪುವ ಭೀತಿ ಎದುರಾಗಿದೆ. ಹಾಲಿ ಸಚಿವರಾಗಿರುವ ಶೋಭಾ ಕರಂದ್ಲಾಜೆ ಅವರನ್ನೇ ಮುಂದುವರೆಸಲು ಬಿಜೆಪಿ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಟಿಕೆಟ್ ಕೊಡಬಾರದೆಂದು ದಕ್ಷಿಣ ಕನ್ನಡದಲ್ಲಿ ನಳಿನ್ ಕುಮಾರ್ ಕಟೀಲ್ ವಿರುದ್ಧ ನಡೆಸಿದ ಅಭಿಯಾನಕ್ಕೂ ಬಿಜೆಪಿ ವರಿಷ್ಠರು ಮಣೆ ಹಾಕುವ ಸಾಧ್ಯತೆಗಳು ಕಡಿಮೆ. ಮತ್ತೆ ನಳಿನ್ ಕುಮಾರ್ ಕಟೀಲ್ ಚುನಾವಣ ಅಖಾಡಕ್ಕೆ ಇಳಿಯಲಿದ್ದಾರೆ. ಇನ್ನೂ ಬಿಜೆಪಿಯ ಸಾಕಷ್ಟು ಕ್ಷೇತ್ರದಲ್ಲಿ ಬಿಜೆಪಿಯ ವರಿಷ್ಠರು ಹೊಸಮುಖಗಳಿಗೆ ಮಣೆಹಾಕಲಿದ್ದಾರೆ ಎಂದು ತಿಳಿದು ಬಂದಿತ್ತು. ಸಾಕಷ್ಟು ಹೊಸ ಮುಖಗಳು ಚುನಾವಣೆಯ ಅಖಾಡಕ್ಕೆ ಇಳಿಯಲು ಟಿಕೆಟ್ ಲಾಭಿಗೆ ಮುಂದಾಗಿದ್ದರು. ಬಿಜೆಪಿಯ ಪಡುಸಾಲೆಯಿಂದ ಬಂದ ಇತ್ತೀಚಿನ ಮಾಹಿತಿ ಪ್ರಕಾರ .ಕಳೆದ ವಿಧಾನಸಭಾ ಚುನಾವಣೆಯ ಸೋಲಿನ ಕಾರಣ ಬದಲಾವಣೆಗೆ ಮುಂದಾಗದೆ ಹಾಲಿ ಸಂಸದರಿಗೆ ಟಿಕೆಟ್ ಕೊಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!