ಕೊನೆಗೂ ಮಗ್ಗಲು ಬದಲಿಸಿದ ಸೌಜನ್ಯ ಮೃತದೇಹ.!!:ಸೌಜನ್ಯ ತಂದೆಯಿಂದ ಹೈಕೋರ್ಟ್ ಗೆ ಮೇಲ್ಮನವಿ
news.ashwasurya.in
ಇತ್ತೀಚಿನ ಒಂದೆರಡು ತಿಂಗಳಿಂದ ಸೌಜನ್ಯ ಪರ ಧ್ವನಿಗಳು ಮೌನಕ್ಕೆ ಜಾರಿದ್ದವು.ಅಕೆಯ ಸಾವಿಗೆ ನ್ಯಾಯಕೊಡಿಸಲೆ ಬೇಕೆಂದು ದೊಡ್ಡಮಟ್ಟದಲ್ಲಿ ಹೋರಾಟ ನೆಡೆಯಿತು.ಅದರಲ್ಲೂ ದಕ್ಷಿಣ ಕನ್ನಡದ ಕರಾವಳಿ ಪ್ರದೇಶದಲ್ಲಿ ಭುಗಿಲೆದ್ದ ಆಕೆಯ ಪರ ಹೋರಾಟದ ಧ್ವನಿ ಇತ್ತೀಚೆಗೆ ಸೈಲೆಂಟ್ ಆಗಿತ್ತು. ಆದರೆ ಇನ್ನೇನು ಈ ಪ್ರಕರಣ ಇಲ್ಲಿಗೆ ಮುಗಿಯಿತು ಎಂದು ಕೊಂಡಿದ್ದರು ಸಾಕಷ್ಟು ಮಂದಿ. ಈಗ ಈ ಪ್ರಕರಣಕ್ಕೆ ಮತ್ತೆ ಜೀವ ಬಂದಂತೆ ಕಾಣುತ್ತದೆ.
ವಿಧ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದ ಮರು ತನಿಖೆ ನಡೆಸಲು ಸೌಜನ್ಯ ತಂದೆ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಕುರಿತಂತೆ ಇದೀಗ ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ಕೇಂದ್ರೀಯ ತನಿಖಾ ದಳಕ್ಕೆ ನೋಟಿಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.
ಮೃತ ಯುವತಿ ಸೌರ್ಜನ್ಯ ಅವರ ತಂದೆ ಚಂದಪ್ಪ ಗೌಡ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಪ್ರಕರಣದಿಂದ ಆರೋಪಿ ಸಂತೋಷ್ ರಾವ್ ಅನ್ನು ಖುಲಾಸೆಗೊಳಿಸಿ ವಿಚಾರಣಾಧೀನ ನ್ಯಾಯಾಲಯ ನೀಡಿರುವ ತೀರ್ಪು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿಯು ಇದೇ ನ್ಯಾಯಾಲಯದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಾಕಿಯಿದೆ. ಮೇಲ್ಮನವಿಯೊಂದಿಗೆ ವಿಭಾಗೀಯ ಪೀಠದ ಮುಂದೆ ಈ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು. ಇದನ್ನು ಪರಿಗಣಿಸಿರುವ ಪೀಠವು ರೋಸ್ಟರ್ ಪ್ರಕಾರ ಸೂಕ್ತ ವಿಭಾಗೀಯ ಪೀಠದ ಮುಂದೆ ಈ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸಲು ಮುಖ್ಯ ನ್ಯಾಯಮೂರ್ತಿಗಳಿಂದ ಅನುಮತಿ ಪಡೆಯುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಿದೆ.
ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನಂತರ ಪ್ರತಿವಾದಿಗಳಾಗಿರುವ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಸಿಐಡಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಅಪರಾಧ ಮತ್ತು ತಾಂತ್ರಿಕ ಸೇವಗಳ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ, ಸಿಐಡಿ ಉಪ ಪೊಲೀಸ್ ವರಿಷ್ಠಾಧಿಕಾರಿ, ಬೆಳ್ತಂಡಗಿ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬಿಐಗೆ ಪೀಠವು ನೋಟಿಸ್ ಜಾರಿಗೊಳಿಸಿದೆ.