ನೀತಿಯುತ ಯೋಜನೆಗಳ ಮೂಲಕ ಭದ್ರತೆ ಒದಗಿಸುವುದೆ ನಮ್ಮ ಸರ್ಕಾರದ ಗುರಿ : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ನೀತಿಯುತ ಯೋಜನೆಗಳ ಮೂಲಕ ಭದ್ರತೆ ಒದಗಿಸುವುದೆ ನಮ್ಮ ಸರ್ಕಾರದ ಗುರಿ : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ಶಿವಮೊಗ್ಗ, ಫೆಬ್ರವರಿ 24
ನೀತಿಯುತ ಯೋಜನೆಗಳ ಮೂಲಕ ಬಡತನ ನಿರ್ಮೂಲನೆ ಮಾಡಿ ಭದ್ರತೆಯನ್ನು ಒದಗಿಸುವುದು ನಮ್ಮ ಸರ್ಕಾರದ ಹೋರಾಟವಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರದ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಇಂದು ನಗರದ ಅಲ್ಲಮಪ್ರಭು ಮೈದಾನದಲ್ಲಿ ಏರ್ಪಡಿಸಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾತಿಯ ಆಧಾರದಲ್ಲಿ ಅಲ್ಲ ಬದಲಾಗಿ ನೀತಿಯ ಆಧಾರದಲ್ಲಿ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಚುನಾವಣಾ ಪೂರ್ವ ಸಮಿತಿಯನ್ನು ರಚಿಸಿ, ಗ್ಯಾರಂಟಿ ಕಾರ್ಡುಗಳನ್ನು ಮನೆ ಮನೆಗಳಿಗೆ ತಲುಪಿಸಿದಂತೆ ಸರ್ಕಾರ ರಚನೆಯಾದ ತಕ್ಷಣ ಯೋಜನೆಗಳನ್ನು ಜಾರಿ ಮಾಡಿ ನಡೆದಂತೆ ನುಡಿದಿದ್ದೇವೆ ನಾವು,


ಹೆಣ್ಣು ಕುಟುಂಬದ ಕಣ್ಣು. ಅವರ ಕುಟುಂದಲ್ಲಿ ಭಾಗ್ಯೋದಯವಾಗಲೆಂದು ಗೃಹಲಕ್ಷ್ಮಿ ಯೋಜನೆಯನ್ನು ಬೆಳಗಾವಿಯಲ್ಲಿ ಚಾಲನೆಗೆ ತಂದು ಇದುವರೆಗೆ 1 ಕೋಟಿ 10 ಲಕ್ಷ, ಮಹಿಳೆಯರಿಗೆ ರೂ.2000 ಭತ್ಯೆ ನೀಡಲಾಗಿದ್ದು ರಾಷ್ಟ್ರದಲ್ಲೆ ಇದೊಂದು ಇತಿಹಾಸ.
ಗೃಹಜ್ಯೋತಿ ಯೋಜನೆಯಡಿ ಇದುವರೆಗೆ 1.5 ಕೋಟಿ ಜನರಿಗೆ ಉಚಿತ 200 ಯುನಿಟ್ ವಿದ್ಯುತ್ ನೀಡಿದ್ದೇವೆ ಜೊತೆಗೆ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ ದಾರರ ಪ್ರತಿಯೊಬ್ಬ ಸದಸ್ಯನಿಗೂ 5 ಕೆ ಜಿ ಉಚಿತ ಅಕ್ಕಿಯ ಜೊತೆಗೆ ಇನ್ನುಳಿದ ಐದು ಕೆಜಿ ಅಕ್ಕಿ ಬದಲು ಪ್ರತಿ ಸದಸ್ಯರಿಗೆ ಒಂದು ಕೆಜಿಗೆ ರೂ.34 ರಂತೆ ಹಣವನ್ನು ಅವರ ಖಾತೆಗೆ ಹಾಕಲಾಗುತ್ತಿದೆ.
ಪ್ರಸ್ತುತ ಬೆಲೆ ಏರಿಕೆ ಸಂಕಷ್ಟದಲ್ಲಿ ಸರ್ಕಾರ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆ ಜಾರಿಗೊಳಿಸಿದೆ. ಹಾಗೂ ಪ್ರಸ್ತುತ ಹೊಸದಾಗಿ 1000 ಬಸ್ ಖರೀದಿ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳಿಗಾಗಿ ಈ ಸಾಲಿನ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು 50 ಸಾವಿರ ಕೊಟಿ ಮೀಸಲು ಇಟ್ಟಿದ್ದಾರೆ.

  ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಎಲ್ಲಾ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸರ್ಕಾರದ ಹಂತದಲ್ಲಿ ಸಮಿತಿ ರಚಿಸಿ  ಕೋಟಿಗೂ ಹೆಚ್ಚು ಬಂಡವಾಳ ಹಾಕಿ ಕೆಪಿಎಸ್, ಸಿಎಸ್ ಆರ್ ಮಾದರಿ ಶಾಲೆಗಳನ್ನು ತೆರೆಯುವ ಯೋಜನೆ ಮೂಲಕ ದೊಡ್ಡ ನಗರದಲ್ಲಿ ದೊರೆಯುವಂತಹ ಶಿಕ್ಷಣ ಗ್ರಾಮಾಂತರ ಹಳ್ಳಿಮಕ್ಕಳಿಗೂ ಸಿಗುವಂತಹ ಕಾರ್ಯಕ್ರಮ ರೂಪಿಸಿದ್ದೇವೆ. 
ಯುವನಿಧಿ ಯೋಜನೆ ಮೂಲಕ ಪದವಿ ಪೂರ್ಣಗೊಳಿಸಿದವರಿಗೆ ರೂ.3 ಸಾವಿರ ಹಾಗೂ ಡಿಪ್ಲೊಮಾದಾರರಿಗೆ ರೂ.1500 ನೀಡುವ ಮೂಲಕ ಯುವಜನರಿಗೆ ಆಶಾಕಿರಣವಾಗಿದ್ದು ಐದು ಗ್ಯಾರಂಟಿ ಯೋಜನೆಗಳು ಕರ್ನಾಟಕದ ಜನರಲ್ಲಿ ಶಕ್ತಿ ತುಂಬಿದೆ ಎಂದರು.
 ಮುಂದಿನ ದಿನದಲ್ಲಿ ಎಲ್ಲಾ ವರ್ಗದವರಿಗೆ 35 ರ್ಷದ ಮಿತಿಯೊಳಗೆ ಅರಣ್ಯ ಹಕ್ಕು ನೀಡಲು ಸರ್ಕಾರ ಬದ್ದವಾಗಿದೆ. ಅಧಿಕಾರಿಗಳು ಬಡವರನ್ನು ಒಕ್ಕಲೆಬ್ಬಿಸಬಾರದು. ಶರಾವತಿ ಸಂತ್ರಸ್ತರ ರಕ್ಷಣೆ ಬಗ್ಗೆ ನಮ್ಮ ಬದ್ದತೆ ಇದ್ದು ಬಡತನ ನಿರ್ಮೂಲನೆ ನಮ್ಮ ಯುದ್ದವಾಗಿದೆ.
      ಉಳುವವನೆ ಭೂಮಿಯ ಒಡೆಯ ಹಕ್ಕು ವಿಚಾರವಾಗಿ ರೈತರಿಗೆ ನ್ಯಾಯ ಒದಗಿಸಲು ಸರ್ಕಾರ ಮುಂದಾಗಿದೆ, ಜಿಲ್ಲಾ ತಾಲ್ಲೂಕು ಮಟ್ಟದಲ್ಲಿ ಸಮಿತಿ ರಚಿಸಲಾಗಿದ್ದು ಐದು ಗ್ಯಾರಂಟಿಗಳ ಸೌಲಭ್ಯಗಳನ್ನು ನೀಡಲು ಮನೆ ಬಾಗಿಲಿಗೆ ನಮ್ಮ ಸರ್ಕಾರ ಬಂದಿದೆ.ಇದರ ಸದುಪಯೋಗವನ್ನು ಫಲಾನುಭವಿಗಳು ಪಡೆಯಿರಿ. ಎಲ್ಲಾ ವರ್ಗಗಳಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತಂದಿದೆ ಎಂದ ಅವರು     ಇದೇ ಸಂದರ್ಭದಲ್ಲಿ ಹೇಳಿದರು, ಡಿಕೆ ಶಿವಕುಮಾರ್ ಅವರು ಅವರು ಅಲ್ಲಮಪ್ರಭು  ವಚನಗಳನ್ನು ಸ್ಮರಿಸಿದರು.

ಶಿವಮೊಗ್ಗ ಜಿಲ್ಲೆ ಸಮಾಜವಾದಿ ಹೋರಾಟದ ನಾಡು.  ಶಿವಪ್ಪನಾಯಕ ಆಳಿದ ನೆಲೆ. ಕುವೆಂಪು ಅವರ ಜನ್ಮಸ್ಥಳ, ಗೋಪಾಲಗೌಡರು, ಕಾಗೋಡು ತಿಮ್ಮಪ್ಪ, ಬಂಗಾರಪ್ಪನವರಂತಹ ಹೋರಾಟಗಾರರ ನಾಡು. ಅತಿ ಹೆಚ್ಚು ಮುಖ್ಯಮಂತ್ರಿ ನೀಡಿದ ಜಿಲ್ಲೆ ಇದಾಗಿದ್ದು ದೊಡ್ಡ ಇತಿಹಾಸವನ್ನೆ ಹೊಂದಿದ ಮಲೆನಾಡು ಪ್ರಾಂತ್ಯವಿದು, ಪ್ರಜ್ಞಾವಂತರ ನಾಡು. ತಾಯಂದಿರು, ಯುವಕರು, ರೈತರು ಚಿಂತೆ ಮಾಡಬೇಡಿ. ನಮ್ಮ ಬಲಿಷ್ಟ ಸರ್ಕಾರ ನಿಮ್ಮ ಜೊತೆಗೆ ಇದೆ. ಏನೇ ಟೀಕೆ ಟಿಪ್ಪಣಿ ಇದ್ದರೂ ಮುಂದೆಯೂ ಗ್ಯಾರಂಟಿ ಮುಂದುವರೆಯುವುದು. 

ಎಂದು ಮಾನ್ಯ ಉಪ ಮುಖ್ಯ ಮಂತ್ರಿಗಳಾದ ಡಿ.ಕೆ.ಶಿವಕುಮಾರ್ ನುಡಿದರು..

ನಂತರ ಮಾತನಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ನವರು ಇದೊಂದು ಐತಿಹಾಸಿಕ ಕಾರ್ಯಕ್ರಮ. ಹಾಗೂ ತಾಯಂದಿರಿಗೆ ಸಮರ್ಪಿತವಾದ ಕಾರ್ಯಕ್ರಮವಾಗಿದ್ದು ವೇದಿಕೆಗೆ ಕೂಡ ಅಕ್ಕಮಹಾದೇವಿಯ ಹೆಸರಿಡಲಾಗಿದೆ.


ನಿಮ್ಮ ವಿಶ್ವಾಸ ಉಳಿಸಿಕೊಂಡು ನುಡಿದಂತೆ ನಡೆದಿದ್ದೇವೆ. ನಮ್ಮ ಸರ್ಕಾರ ನಿಮ್ಮೆಲ್ಲರ ಸಮಸ್ಯೆ ಅರ್ಥ ಮಾಡಿಕೊಂಡು, ನಿಮ್ಮ ಕಷ್ಟದಲ್ಲಿ ಪಾಲುದಾರರಾಗಬೇಕೆಂದು ಗ್ಯಾರಂಟಿ ಯೋಜನೆಗಳನ್ನು ನಿಮಗೆ ನೀಡಿದ್ದು, ಗೃಹಲಕ್ಷ್ಮಿ ಯೋಜನೆಯಿಂದಾಗಿ ನಮ್ಮ ಹೆಣ್ಣುಮಕ್ಕಳಿಗೆ ವರ್ಷಕ್ಕೆ ಒಟ್ಟು 24 ಸಾವಿರ ಅವರ ಖಾತೆಗೆ ಜಮಾ ಆಗಲಿದೆ.
ಗೃಹಜ್ಯೋತಿ ಯಿಂದ ನಿಮ್ಮ ಮನೆ ಬೆಳಗಿದೆ. ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು, ಕಾಗೋಡು ತಿಮ್ಮಪ್ಪನವರು, ಬಂಗಾರಪ್ಪ ಮುಂತಾದವರ ಹೋರಾಟದ ಫಲವಾಗಿ ಭೂಹಕ್ಕು, ರೈತರಿಗೆ ಉಚಿತ ಕರೆಂಟ್, ಇತರೆ ಸೌಲಭ್ಯಗಳು ದೊರೆತಿವೆ.
ತಾಯಂದಿರ ಋಣ ತೀರಿಸುವುದು ಕಷ್ಟ. ತಾಯಿಂದಿರು ನೀಡಿರುವ ಸರ್ಕಾರ ಇದು. ಬಡವರಿಗೆ ಹಣ ನೀಡಿದರೆ ಅವರು ಖರ್ಚು ಮಾಡಿ ಪುನಃ ಸರ್ಕಾರಕ್ಕೆ ನೀಡುತ್ತಾರೆ. ನಮ್ಮ ಎಲ್ಲಾ ಯೋಜನೆಗಳಲ್ಲಿ ಸೌಲಭ್ಯದ ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿದೆ. ಎಲ್ಲಾ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.
ಶಾಸಕರು ಹಾಗೂ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಮಾತನಾಡಿ, ರಾಜ್ಯ ಸರ್ಕಾರ ಅತಿ ದೊಡ್ಡ ಖಾತರಿ ಯೋಜನೆಗಳನ್ನು ಅತಿ ಕಡಿಮೆ ಅವಧಿಯಲ್ಲಿ ನೀಡಿದೆ. ಮಾನ್ಯ ಮುಖ್ಯಮಂತ್ರಿಗಳು ಎಲ್ಲರಿಗೂ ಸಮಾನವಾದ, ಮೂಲಸೌಕರ್ಯ ಒದಗಿಸುವ ಬಜೆಟ್ ನೀಡಿದ್ದಾರೆ. ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಸಮುದಾಯಗಳಿಗೆ ಯೋಜನೆ ನೀಡಿರುವುದು ನಮ್ಮ ಸರ್ಕಾರ. ಇದೀಗ 5200 ಬಸ್ ನೀಡುವ ಮೂಲಕ 6 ನೇ ಗ್ಯಾರಂಟಿ ನೀಡಿದೆ ಎಂದರು.


ಇನ್ನೂ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿಯಾದ ಶಾರದಾ ಪೂರ್ಯಾನಾಯ್ಕ್ ಮಾತನಾಡಿ, ನೀಡಿದ ಭರವಸೆಯನ್ನು ಸರ್ಕಾರ ಸಾಕಾರಗೊಳಿಸಿದೆ. ಎಲ್ಲರೂ ಐದು ಯೋಜನೆಗಳ ಉಪಯೋಗ ಪಡೆಯಿರಿ ಎಂದರು,

ಅವರು ಜಿಲ್ಲೆಯ ಶರಾವತಿ ಸಂತ್ರಸ್ತರು, ಶುಗರ್ ಫ್ಯಾಕ್ಟರಿ, ರೈತರ ಸಮಸ್ಯೆ ಗಳನ್ನು ಬಗೆಹರಿಸುವಂತೆ ಇದೇ ಸಂದರ್ಭದಲ್ಲಿ ಕೋರಿ ಸರ್ಕಾರಕ್ಕೆ ಮನವಿಮಾಡಿದರು

ಫಲಾನುಭವಿಗಳ ಮಾತು…

ತೀರ್ಥಹಳ್ಳಿ ಫಲಾನುಭವಿ ಫಾತಿಮಾ ರಾಡ್ರಿಗಸ್ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯ ಹಣ ‘ನನ್ನ ಹಣ’ ಎಂಬ ಹೆಮ್ಮೆ ಇದೆ. ಈ ಯೋಜನೆಯ ಸೌಲಭ್ಯ ಪಡೆಯುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು ನಮಗೆ ಹೆಚ್ಚಿನ ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಈ ಹಣವು ನನ್ನ ವೈದ್ಯಕೀಯ ವೆಚ್ಚ, ಇತರೆ ವೆಚ್ಚ ಭರಿಸಲು ಸಹಕಾರಿಯಾಗಿದೆ. ಒಟ್ಟು ಇದುವರೆಗೆ 12 ಸಾವಿರ ನನಗೆ ಸಿಕ್ಕಿದೆ. ಅಷ್ಟಾಗಿ ಆರೋಗ್ಯ ಸರಿಯಿಲ್ಲದ ನನಗೆ ಈ ಯೋಜನೆ ಒಂದು ಭದ್ರತೆ ಒದಗಿಸಿದ್ದು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.

ಗೃಹಜ್ಯೋತಿ ಫಲಾನುಭವಿ ರೈತ ರಾಜೇಶ್ ಮಾತನಾಡಿ, ನಾವು 11 ಜನ ಮಕ್ಕಳು, ನಮ್ಮ ಮನೆಯಲ್ಲಿ ಖರ್ಚುವೆಚ್ಚ ಭರಿಸುವುದು ಬಹಳ ಕಷ್ಟವಾಗುತ್ತಿತ್ತು. ಗೃಹಜ್ಯೋತಿ ಯೋಜನೆಯಿಂದಾಗಿ ನಮ್ಮ ಕಟುಂಬಕ್ಕೆ ತುಂಬಾ ಸಹಾಯವಾಗಿದೆ. ಸರ್ಕಾರಕ್ಕೆ ಧನ್ಯವಾದಗಳು.

ಅನ್ನಭಾಗ್ಯ ಯೋಜನೆಯ ಫಲಾನುಭವಿ ಅಬ್ಬಲಗೆರೆಯ ಮಧು ಮಾತನಾಡಿ, 5 ಕೆಜಿ ಅಕ್ಕಿ ಹಾಗೂ ಮತ್ತೆ ಐದು ಕೆಜಿ ಅಕ್ಕಿಯ ಬದಲು ನೀಡುತ್ತಿರುವ ಹಣದಿಂದ ಇತರೆ ಪದಾರ್ಥಗಳ ಖರೀದಿ ಮಾಡುತ್ತಿದ್ದು, ಕುಟುಂಬಕ್ಕೆ ಆಸರೆಯಾಗಿದೆ ಎಂದರು.

ಶಕ್ತಿ ಯೋಜನೆ ಫಲಾನುಭವಿ ಭದ್ರಾವತಿ ಶಾಲಿನಿ ಮಾತನಾಡಿ, ಉಚಿತ ಬಸ್ ಸೇವೆಯಿಂದಾಗಿ ನನಗೆ ಹಾಗೂ ನನ್ನಂತಹ ಅನೇಕ ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ. ಸರ್ಕಾರಕ್ಕೆ ಧನ್ಯವಾದಗಳು ಎಂದರು.

ಸರ್ಕಾರದ ವಿವಿಧ ಯೋಜನೆಗಳ ಮಳಿಗೆಗಳನ್ನು ತೆರೆಯಲಾಗಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ , ಸದುಪಯೋಗ ಪಡೆದುಕೊಂಡರು.
ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ, ಯುವನಿಧಿ ಯೋಜನೆಗಳ ಫಲಾನುಭವಿಗಳು ಪಾಲ್ಗೊಂಡು ತೆರೆಯಲಾದ ಯೋಜನೆಗಳ ಸೌಲಭ್ಯವನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಲ್ಯಾಪ್ಟಾಪ್ ವಿತರಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಹತ್ತು ಹೊಸ ಕೆಎಸ್‍ಆರ್‍ಟಿಸಿಟಿಸಿ ಬಸ್ ಗಳಿಗೆ ಮಾನ್ಯ ಉಪ ಮುಖ್ಯಮಂತ್ರಿ ಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಿದರು. ಹಾಗೂ ಅಲ್ಲಮಪ್ರಭು ಮೈದಾನದಲ್ಲಿ ಬರೆಸಲಾಗಿರುವ ಅಲ್ಲಮಪ್ರಭು ವಚನಗಳನ್ನು ವೀಕ್ಷಿಸಿದರು. ವೇದಿಕೆ ಮುಂಭಾಗದಲ್ಲಿ ಸಿರಿಧಾನ್ಯಗಳಲ್ಲಿ ‘ಅರಿವೇ ಗುರು ಅಲ್ಲಮ ಪ್ರಭು’ ಅಲಂಕಾರ ವಿಶೇಷ ಆಕರ್ಷಣೆಯಾಗಿತ್ತು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಸ್ ಸುಂದರೇಶ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ,ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ, ಜಿ.ಪಂ,ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಇತರೆ ಅಧಿಕಾರಿಗಳು, ಫಲಾನುಭವಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

Optimized by Optimole
error: Content is protected !!