ಪರಿಪಕ್ವ ಪತ್ರಕರ್ತ ಗಜೇಂದ್ರ ಸ್ವಾಮಿ @ 51
ಗಜ ವೃಂದಕ್ಕೆ ಅಧಿಪತಿ ಗಜೇಂದ್ರ. ಪತ್ರಿಕಾ ವೃಂದದಲ್ಲಿ ಇಂತಹ ಅಧಿಪತ್ಯ ಸ್ಥಾಪನೆ ಕಷ್ಟ ಸಾಧ್ಯ. ಆದರೆ ಪಾರುಪತ್ಯ ಸ್ಥಾಪನೆ ಅಸಾಧ್ಯವೇನಲ್ಲ. ಇಂತಹ ಅಸಾಧ್ಯತೆಯನ್ನು ಸಾಧ್ಯತೆಯನ್ನಾಗಿಸಿರುವ ತುಂಗಾ ತರಂಗ ದಿನಪತ್ರಿಕೆಯ ಸಂಪಾದಕ ಗಜೇಂದ್ರ ಸ್ವಾಮಿ 50ನೇ ಜನ್ಮ ದಿನ ಪೂರೈಸಿ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದಾರೆ.
ಮನುಷ್ಯನ ಜೀವಿತಾವಧಿಯಲ್ಲಿ 50 ವರ್ಷ ಪೂರೈಕೆ ಮಹತ್ವದ ಮೈಲಿಗಲ್ಲು. ಗಜೇಂದ್ರ ಸ್ವಾಮಿಗೆ ಅದಾಗಲೇ 50 ವರ್ಷ ತುಂಬಿ ಹೋಯ್ತಾ ಎಂದು ಅಚ್ಚರಿ ಪಡುವಷ್ಟು ಕ್ರಿಯಾಶೀಲ, ಸಕ್ರಿಯ, ಚಿರ ಯೌವನಿಗ ಪತ್ರಕರ್ತರಾಗಿರುವ ಜಿ. ಸ್ವಾಮಿ ಕಾಲಚಕ್ರ ಯಾರಿಗೂ ಕಾಯುವುದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.
ಜನ್ಮ ದಿನಾಂಕ ಆಧಾರಿತ ವಯಸ್ಸು ಕೇವಲ ದೇಹಕ್ಕಷ್ಟೇ ಹೊರತು ಮನಸ್ಸಿಗಲ್ಲ. ಸಾಧಿಸಬೇಕೆಂಬ ಛಲ, ಪ್ರಯತ್ನ, ಪರಿಶ್ರಮವಿದ್ದರೆ ಉತ್ತಮ ಫಲ, ಯಶಸ್ಸು ಪಡೆಯಲು ವಯಸ್ಸು ಎಂದೂ ಅಡ್ಡಿಯಾಗುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆಯೇ ಪತ್ರಕರ್ತ ಗಜೇಂದ್ರ ಸ್ವಾಮಿ.
ನಮ್ಮ ಸುತ್ತಲಿನ ವಿದ್ಯಾಮಾನ, ಸಾಮಾಜಿಕ ಆಗು ಹೋಗುಗಳು, ಜನಸಾಮಾನ್ಯರ ಸಮಸ್ಯೆ, ಆಡಳಿತಶಾಹಿಯ ನ್ಯೂನತೆ, ಕರ್ತವ್ಯಲೋಪ ಸೇರಿದಂತೆ ನವನವೀನ ಸಂಗತಿಗಳನ್ನು ಬಹು ಬೇಗನೆ ಸಲೀಸಾಗಿ, ಸೂಕ್ಷ್ಮವಾಗಿ ಗ್ರಹಿಸುವ, ಆಳಕ್ಕಿಳಿದು ಅಧ್ಯಯನ ಮಾಡುವ ಮತ್ತು ಲೇಖನ, ವರದಿ, ವಿಶೇಷ ವರದಿ, ಹುಡುಕಾಟದ ವರದಿಗಳ ಮೂಲಕ ತುಂಗಾತರAಗ ಪತ್ರಿಕೆಯಲ್ಲಿ ಅಚ್ಚುಕಟ್ಟಾಗಿ ಸಾದರ ಪಡಿಸುವ ಶೈಲಿ ಗಜೇಂದ್ರ ಸ್ವಾಮಿಯವರಿಗೆ ಸಿದ್ಧಿಸಿದೆ. ಸ್ಥಳೀಯ, ನಾಡು- ಹೊರನಾಡಿನ ಪ್ರಸ್ತುತ ಸುದ್ದಿ- ಸನ್ನಿವೇಶಗಳನ್ನು ದಿನನಿತ್ಯ ಪತ್ರಿಕೆಯ ಮೂಲಕ ಓದುಗರ ಮುಂದಿಡುತ್ತಾ ಬರುತ್ತಿದ್ದಾರೆ.
ವಯಸ್ಸು 50 ದಾಟಿದ್ದರೂ ತನ್ನ ಬದುಕಿನ ಅರ್ಧದಷ್ಟು ವಯಸ್ಸನ್ನು (28 ವರ್ಷ) ಪತ್ರಿಕೋದ್ಯಮದಲ್ಲಿ ಕಳೆದಿರುವ ಗಜೇಂದ್ರ ಸ್ವಾಮಿ ವೃತ್ತಿ ಬದುಕಿನಲ್ಲಿ ಸಾಗಿ ಬಂದ ಹಾದಿ ಸಲೀಸಲ್ಲ. ಸಾಕಷ್ಟು ಏಳು- ಬೀಳು, ಕಷ್ಟ- ನಷ್ಟ, ನೋವು- ನಲಿವನ್ನು ಅನುಭವಿಸಿ ಮನಸ್ಸಿದ್ದರೆ ಮಾರ್ಗ ಎಂದು ಗಜ ಗಾಂಭಿರ್ಯದಿಂದ ಸಾಗಿದ ಪರಿಣಾಮ ಯಶಸ್ಸು, ಸಾಧನೆ ಸಾಧ್ಯವಾಗಿದೆ.
ಚಿಕ್ಕ ಅಂಕುಶದಿಂದ ದೊಡ್ಡ ಗಜವನ್ನು (ಆನೆಯನ್ನು) ಬೇಕಾದರೂ ಪಳಗಿಸಬಹುದು ಎಂಬುದನ್ನು ಅರಿತಿರುವ ಗಜೇಂದ್ರ ಸ್ವಾಮಿ, ಪೆನ್ ಎಂಬ ಚಿಕ್ಕ ಅಂಕುಶ ಹಿಡಿದು ಆಡಳಿತಶಾಹಿ ಎಂಬ ಮದಗಜವನ್ನು ಸಾಮಾಜಿಕ ಹಿತಾಸಕ್ತಿ, ಬದ್ಧತೆ, ಕಾಳಜಿ, ಕಳಕಳಿಯಿಂದ ತಿವಿಯುತ್ತಿದ್ದಾರೆ. ಪಳಗಿಸಲು ಹರಸಾಹಸ ಪಡುತ್ತಲೇ ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಲವು ಬಾರಿ ಯಶಸ್ಸನ್ನೂ ಸಾಧಿಸಿದ್ದಾರೆ.
ಪೆನ್ನಿನಷ್ಟೇ ಪೆಗ್ಗಿನ ಮೇಲೆ ಪ್ರೀತಿ: ಪೆನ್ನಿನಷ್ಟೇ ಪೆಗ್ಗಿನ ಮೇಲೂ ಪ್ರೀತಿ ಹೊಂದಿರುವ ಗಜೇಂದ್ರ ಸ್ವಾಮಿ ಅವರ ಬರವಣಿಗೆಯಲ್ಲೂ ‘ಕಿಕ್’ ಇದೆ. ಎಡಪಂಥೀಯ, ಬಲಪಂಥೀಯ ಎಂಬ ಯಾವುದೇ ಇಸಂ ಹೊಂದದೆ ‘ಮದ್ಯ’ಪಂಥೀಯರಾಗಿ, ಯಾವುದೇ ಮತ, ಜಾತಿ, ಧರ್ಮ, ಪಕ್ಷದ ಚೌಕಟ್ಟು ಹಾಕಿ ಕೊಳ್ಳದೆ ಆನೆ ನಡೆದದ್ದೇ ಹಾದಿ ಎಂಬAತೆ ಗಜೇಂದ್ರ ಸ್ವಾಮಿ ಸಾಗುತಿದ್ದಾರೆ.
ಬರವಣಿಗೆ ಮೂಲಕ ತಾನೂ ಬೆಳೆಯುವುದರೊಂದಿಗೆ ಮತ್ತೊಬ್ಬರನ್ನೂ ಬೆಳೆಸುವಂತಹ, ಪ್ರೋತ್ಸಾಹಿಸುವಂತಹ ಸಹೃದಯತೆ ಜಿ. ಸ್ವಾಮಿಯವರ ವಿಶೇಷ ಗುಣ. ಪತ್ರಿಕೋದ್ಯಮದ ಗಂಧ- ಗಾಳಿ ಗೊತ್ತಿಲ್ಲದಂತಹ ಸೋಮಿನಕೊಪ್ಪದ ರಾಕೇಶ್‌ನನ್ನು ವಿಶೇಷ ವರದಿ ಮಾಡುವ ವರದಿಗಾರನನ್ನಾಗಿ ರೂಪಿಸಿ, ತಿದ್ದಿ- ತೀಡಿ, ಪ್ರೀತಿಯಿಂದ ಗದರಿ, ಬೈಯ್ದು ರಾಜ್ಯ ಮಟ್ಟದ ಪತ್ರಿಕೆಯಲ್ಲಿ ಕೆಲಸ ಮಾಡುವಂತಹ ಸಾಮರ್ಥ್ಯ ಮೂಡಿಸಿದ್ದಾರೆ. ಕೇವಲ ಇದೊಂದು ಸಾಂದರ್ಭಿಕ ಉದಾಹರಣೆ ಅಷ್ಟೇ. ಇಂತಹ ಅನೇಕರು ಸ್ವಾಮಿಯ ಪತ್ರಿಕೋದ್ಯಮ ಎಂಬ ಗರಡಿ ಮನೆಯಲ್ಲಿ ಪಳಗಿದ್ದಾರೆ. ಪಟ್ಟುಗಳನ್ನು ಕಲಿತಿದ್ದಾರೆ.
ಬ್ರೋ (ಬ್ರದರ್), ಸಿಸ್ (ಸಿಸ್ಟರ್) ಎಂದು ಕರೆಯುವುದು ಫ್ಯಾಷನ್ ಆಗಿರುವ ಇಂದಿನ ಕಾಲಮಾನದಲ್ಲಿ ತನಗಿಂತಲೂ ಕಿರಿಯ ವಯಸ್ಸಿನವರನ್ನೂ ಸಹ ಅಣ್ಣಾ ಹೇಳಿ, ಅಕ್ಕ ಹೇಳಿ ಎಂದು ಸಹೋದರತ್ವದ ಮನೋಭಾವದಿಂದ ಮೊಬೈಲ್ ಕರೆ ಸ್ವೀಕರಿಸಿ ಮಾತನಾಡು ಮನೋಭಾವ ಸ್ವಾಮಿಯವರದ್ದು. ಸಿಡುಕುತನ, ಮನೋಭಾವದ ಬದಲಾವಣೆ ಇಲ್ಲವೆಂದಲ್ಲ, ಆದರೆ ಅದು ಸಂದರ್ಭಕ್ಕೆ ಮಾತ್ರ ಸೀಮಿತ.
ಇವರ ಯಶಸ್ಸಿನ ಹುಡುಕಾಟದ ವರದಿಯ ಜೋತೆಗೆ ನನ್ನ ತಪ್ಪು ಸರಿ ಎಲ್ಲವನ್ನೂ ಸ್ಥಿತಪ್ರಜ್ಞತೆಯಿಂದ ಸಹಿಸಿ, ಸೈರಿಸಿಕೊಂಡಿರುವ ಸಹಧರ್ಮಿಣಿ, ಸರ್ಕಾರಿ ಶಾಲೆಯ ಶಿಕ್ಷಕಿ ವೀಣಾ ಟೀಚರ್, ಅಪ್ಪನ ಮುದ್ದು ಮಗಳಾಗಿರುವ ಇಂಜಿನಿಯರಿಂಗ್ ವಿದ್ಯಾರ್ಥಿನಿ ದೀಪಿಕಾ ಜಿ. ಸ್ವಾಮಿ, ಕುಲಪುತ್ರ ದರ್ಶನ್ ಜಿ. ಸ್ವಾಮಿಯವರನ್ನು ಒಳಗೊಂಡ ಸುಖಿ ಕುಟುಂಬ ಇವರದ್ದು.
ಪತ್ರಿಕೋದ್ಯಮದೊಂದಿಗೆ ಕೃಷಿಯಲ್ಲಿಯೂ ತೊಡಗಿಕೊಂಡಿರುವ ಗಜೇಂದ್ರ ಸ್ವಾಮಿ ಅಸಲಿ ಮಣ್ಣಿನ ಮಗ. ಕ್ರೀಡೆ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ, ನಾಟಕ, ರಂಗಭೂಮಿ ಮತ್ತಿತರೆ ಕ್ಷೇತ್ರಗಳಲ್ಲೂ ಇಂದಿಗೂ ಇವರ ಬರವಣಿಗೆಯ ಆಸಕ್ತಿ ಕುಂದಿಲ್ಲ. ಊಟಕ್ಕೆ ಒಂದಿಷ್ಟು ಉಪ್ಪಿನಕಾಯಿ ಎಂಬಂತೆ ಕ್ರೈಂ, ಸೆಕ್ಸ್ ವರದಿಗಳೂ ಉಂಟು. ದಿ. ಪತ್ರಕರ್ತ ಪಿ. ಲಂಕೇಶ್‌ರ ತುಂಟಾಟ, ರವಿ ಬೆಳೆಗೆರೆಯವರ ಲವಲವಿಕೆಯಂತಹ ಪೋರಿ- ಟಪೋರಿತನದಿಂದ 51ರ ಹರೆಯದ ಚಿರ ಯೌವನದ ಪತ್ರಕರ್ತರಾಗಿರುವ ಗಜೇಂದ್ರ ಸ್ವಾಮಿ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಇವರು ಬರೆಯದ ಪ್ರಕಾರಗಳೇ ಬಹುತೇಕ ಇಲ್ಲವೆನ್ನಬಹುದು.
ನುಡಿದಂತೆ ನಡೆಯುವ, ಬರೆದಂತೆ ಬದುಕುವ ಗಜೇಂದ್ರ ಸ್ವಾಮಿ ಪರಿಪಕ್ವ ಪರ್ತಕರ್ತರಾಗಿ ರೂಪುಗೊಂಡಿದ್ದಾರೆ. ಫೆ. 24ರ ಶನಿವಾರ ಇವರು 50 ವರ್ಷ ಪೂರೈಸಿ 51ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದಾಗ ‘ವಿಧಾತ ಸುಧೀರ್’ ಎಂದೇ ಹೆಸರಾಗಿರುವ ಸಹ್ಯಾದ್ರಿ ಸುದ್ದಿ ದಿನಪತ್ರಿಕೆಯ ಸಂಪಾದಕ ಸುಧೀರ್ ಸೋಷಿಯಲ್ ಮೀಡಿಯಾದಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದ ಗಜೇಂದ್ರ ಸ್ವಾಮಿಯವರ ಫೋಟೊ ಹಾಕಿ 51 ನಾಟ್ ಔಟ್ ಎಂದು ಶುಭ ಹಾರೈಸಿದ್ದರು. ಪೆನ್ ಎಂಬ ಬ್ಯಾಟ್ ಹಿಡಿದಿರುವ ಈ ದೈತ್ಯ ದಾಂಡಿಗ ಪತ್ರಕರ್ತ ಬದುಕಿನ ಮ್ಯಾಚ್‌ನಲ್ಲೂ ಸೆಂಚುರು ಬಾರಿಸಲಿ ಎಂಬುವುದೇ ಹಿತೈಷಿಗಳ ಹಾರೈಕೆ.
ಲೇಖಕರು:
ಸಂತೋಷ್ ಎಲಿಗಾರ್,
ಹವ್ಯಾಸಿ ಪತ್ರಕರ್ತರು, ಕೃಷಿಕರು.
ಮೊ: 7848851966