ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದ ವತಿಯಿಂದ ಶಿವಮೊಗ್ಗ ನಗರದ ರಾಗಿಗುಡ್ಡ ಶಾಂತಿನಗರದಲ್ಲಿ ಸಾರ್ವಜನಿಕ ಸಭೆ

ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದ ವತಿಯಿಂದ ಶಿವಮೊಗ್ಗ ನಗರದ ರಾಗಿಗುಡ್ಡ ಶಾಂತಿನಗರದಲ್ಲಿ ಸಾರ್ವಜನಿಕ ಸಭೆ

ಈ ದಿನ ದಿನಾಂಕಃ 17-12-2023 ರಂದು ಸಂಜೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದ ವತಿಯಿಂದ ಶಿವಮೊಗ್ಗ ನಗರದ ರಾಗಿಗುಡ್ಡ ಶಾಂತಿನಗರದಲ್ಲಿ ಸಾರ್ವಜನಿಕ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು, ಸದರಿ ಸಭೆಗೆ ಡಾ|| ಸೆಲ್ವಮಣಿ ಆರ್ ಐಎಎಸ್, ಮಾನ್ಯ ಜಿಲ್ಲಾಧಿಕಾರಿಗಳು, ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದು, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಸಾರ್ವಜನಿಕರ ಕುರಿತು ಈ ಕೆಳಕಂಡಂತೆ ಮಾತನಾಡಿರುತ್ತಾರೆ.

1) ಯಾವಾಗ ಒಳ್ಳೆಯವರು ನಮ್ಮ ಸುತ್ತ ನಡೆಯುವ ಕೆಟ್ಟದನ್ನು ಪ್ರಶ್ನೆ ಮಾಡದೇ ಇದ್ದಾಗ, ಕೆಟ್ಟದ್ದು ಬೆಳೆಯುತ್ತಾ ಹೋಗುತ್ತದೆ. ಇದರಿಂದಾಗಿ ಯಾರೋ ಕೆಲವರು ಮಾಡುವ ಸಮಸ್ಯೆಗಳಿಂದ ಉಳಿದ ಎಲ್ಲರೂ ಅದರ ದುಷ್ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯುತ್ತವೆ ಎಂದರೆ, ಅದು ಆ ಕ್ಷಣದಲ್ಲಿ ಇದ್ದಕ್ಕಿದ್ದ ಹಾಗೇ ನಡೆಯುವುದಿಲ್ಲ. ಅದರ ಹಿನ್ನೆಲೆಯು ಬಹು ಹಿಂದಿನಿಂದಲೂ ನಡೆದಿರುತ್ತದೆ. ಆದ್ದರಿಂದ ನಮ್ಮ ಮಕ್ಕಳು / ಯುವಕರು ಹಾದಿ ತಪ್ಪುತ್ತಿರುವ ಬಗ್ಗೆ ಸಾರ್ವಜನಿಕರ / ಪೋಷಕರ ಗಮನಕ್ಕೆ ಬಂದಲ್ಲಿ, ಕೂಡಲೇ ಅವರನ್ನು ತಿದ್ದಿ ಬುದ್ದಿ ಹೇಳ ಬೇಕು, ಇಲ್ಲದೇ ಹೋದಲ್ಲಿ ಮುಂದೆ ಪೊಲೀಸರು ಬುದ್ದಿ ಹೇಳುವಂತಹ ಹಂತಕ್ಕೆ ತಲುಪಿದಲ್ಲಿ ಅದರಿಂದ ಕಠಿಣ ಪರಿಣಾಮಗಳನ್ನು ಎದುರಿಬೇಕಾಗುತ್ತದೆ ಮತ್ತು ಸಮಾಜದಲ್ಲಿ ಶಾಂತಿ ನೆಲಸುಂತೆ ಮಾಡುವುದು ಕೇವಲ ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿರದೇ, ಅದು ಸಾರ್ವಜನಿಕರ ಜವಾಬ್ದಾರಿಯು ಸಹಾ ಆಗಿರುತ್ತದೆ. ಆದ್ದರಿಂದ ಈ ನಿಟ್ಟಿನಲ್ಲಿ ಸಾರ್ವಜನಿಕರು, ಪೋಷಕರು, ಮುಖಂಡರು ನಮ್ಮೊಂದಿಗೆ ಕೈಜೋಡಿಸಿ ಸಹಕರಿಸಿ.

2) ಮಾದಕ ದ್ರವ್ಯ ಮಾರಾಟ ಸಾಗಾಟ ಮತ್ತು ಸೇವನೆಯ ವಿರುದ್ಧ ಪೊಲೀಸ್ ಇಲಾಖೆಯು ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಮಾದಕ ದ್ರವ್ಯ ಹಾಗೂ ಇತರೆ ಯಾವುದೇ ಕಾನೂನು ಬಾಹೀರ ಚಟುವಟಿಕೆಗಳ ಬಗ್ಗೆ ಮಾಹಿತಿ ಇದ್ದಲ್ಲಿ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವುದು.

3) ಸಮಾಜದಲ್ಲಿನ ಎಲ್ಲರೂ ಕಿಡಿಗೇಡಿಗಳಾಗಿರುವುದಿಲ್ಲ, ಯಾರೋ ಕೆಲವರು ಮಾಡುವ ಕಿಡಿಗೇಡಿತನದಿಂದ ಉಳಿದವರು ತೊಂದರೆ ಎದುರಿಸುವಂತಾಗುತ್ತದೆ ಮತ್ತು ಜನ ಸಾಮನ್ಯರ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರುತ್ತದೆ. ಸಾರ್ವಜನಿಕರು ಈ ನಿಟ್ಟಿನಲ್ಲಿ ಜಾಗರೂಕರಾದಲ್ಲಿ ಮಾತ್ರ ದುಷ್ಕೃತ್ಯಗಳನ್ನು ತಡೆಯಲು ಸಾಧ್ಯವಿರುತ್ತದೆ. ಸಮಾಜದ ಉತ್ತಮ ನಾಗರೀಕರಾಗಿ ದಾರಿ ತಪ್ಪುವವರಿಗೆ ಬುದ್ದಿವಾದ ಹೇಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ. ಆಗ ಮಾತ್ರ ಶಾಶ್ವತವಾಗಿ ಶಾಂತಿ ನೆಲಸುವಂತೆ ಮಾಡಲು ಸಾದ್ಯವಿರುತ್ತದೆ ಹಾಗೂ ಪುನಾಃ ಇದೇ ರೀತಿಯ ತಪ್ಪುಗಳು ಪುನಾರಾವರ್ತನೆಯಾಗದೇ ಇದ್ದರೇ ಇದು ನಮ್ಮೆಲ್ಲರ ಸಂಘಟಿತ ಯಶಸ್ಸಾಗಿರುತ್ತದೆ.

4) ರಾಗಿಗುಡ್ಡ ಶಾಂತಿನಗರದಲ್ಲಿ ಈಗಾಗಲೇ ಶಾಂತಿ ಸಮಿತಿ (ಶಾಂತಿ ಪಡೆ)ಯನ್ನು ರಚಿಸಲಾಗಿದ್ದು, ಇನ್ನು ಹೆಚ್ಚಿನ ಆಸಕ್ತರು ಇದಕ್ಕೆ ಸೇರಬಹುದಾಗಿರುತ್ತದೆ. ಶಾಂತಿ ಸಮಿತಿ ಸದಸ್ಯರು ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ ನಡುವೆ ಪ್ರಾಥಮಿಕ ಸಂಕರ್ಪ ಸೇತುವಾಗಿ ಕಾರ್ಯ ನಿರ್ವಹಿಸಲಿದ್ದು, ಬೀಟ್ ಸಿಬ್ಬಂಧಿಗಳೊಂದಿಗೆ ಗಸ್ತು ಮಾಡುವುದು ಹಾಗೂ ಗ್ರಾಮದಲ್ಲಿ ನಡೆಯುವ ಘಟನೆಗಳ ಬಗ್ಗೆ ಮತ್ತು ಕಾನೂನು ಬಾಹೀರ ಚಟುವಟಿಕೆಗಳ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವುದು ಅವರುಗಳ ಜವಾಬ್ದಾರಿಯಾಗಿರುತ್ತದೆ.

5) ರಾಗಿಗುಡ್ಡದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಬಗ್ಗೆ ಪೊಲೀಸ್ ಇಲಾಖೆಯು ಕ್ರಮ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ರಾಗಿಗುಡ್ಡದಲ್ಲಿ ಸ್ವಚ್ಚತೆ ಕಾಪಾಡುವ ದೃಷ್ಠಿಯಿಂದ ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆಯು ಸೇರಿ ಶ್ರಮದಾನ ಆಯೋಜನೆ ಮಾಡಲಿದ್ದು ಎಲ್ಲಾ ಸಾರ್ವಜನಿಕರು ಭಾಗವಹಿಸಿ.

6) ಯಾರೇ ಆಗಲಿ ಸಮಾಜದಲ್ಲಿ ಶಾಂತಿ ಕದಡುವಂತಹ ವಿಚಾರಗಳನ್ನು ಹೇಳುವಾಗ ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ನೀವೇ ತೀರ್ಮಾನ ಮಾಡಿ ನಂತರ ಪ್ರತಿಕ್ರಿಯೆ ನೀಡಿರಿ. ಇದರಿಂದ ನಮ್ಮ ಸಮಾಜಕ್ಕೆ ಒಳ್ಳೆಯದಾಗಯುತ್ತಾ ಎಂಬ ಬಗ್ಗೆ ಯೋಚಿಸಿ ಆನಂತರ ಮುಂದುವರೆಯಿರಿ. ಎಲ್ಲರೂ ಒಗ್ಗಟ್ಟಿನಿಂದ ಸಮಾಜದ ಹಿತದೃಷ್ಠಯಿಂದ ಕಾರ್ಯ ನಿರ್ವಹಿಸಿದಲ್ಲಿ ಮಾತ್ರ ಶಾಶ್ವತವಾಗಿ ಶಾಂತಿ ನೆಲಸುವಂತಾಗುತ್ತದೆ. ಆದ್ದರಿಂದ ಸಾರ್ವಜನಿಕರ ಹಿತ ದೃಷ್ಟಿಯಿಂದ ಕೈಗೊಳ್ಳಲಾಗುವ ಕಾರ್ಯಗಳಿಗೆ ನಿಮ್ಮೆಲ್ಲರ ಸಹಕಾರ ಪ್ರಮುಖವಾಗಿದ್ದು, ಮುಂದೆಯೂ ಕೂಡ ಇದೇ ರೀತಿ ಸಹಕಾರ ನೀಡಿ. ಎಂದು ತಿಳಿಸಿದರು.

ಮಾನ್ಯ ಜಿಲ್ಲಾಧಿಕಾರಿಗಳು, ಶಿವಮೊಗ್ಗ ಜಿಲ್ಲೆ ರವರು ಸಾರ್ವಜನಿಕರ ಕುರಿತು ಈ ಕೆಳಕಂಡಂತೆ ಮಾತನಾಡಿರುತ್ತಾರೆ.

1) ಕೆಲವು ಸಂದರ್ಭಗಳಲ್ಲಿ ಸಣ್ಣ ಸಮಸ್ಯೆಗಳನ್ನು ಸಹಾ ದೊಡ್ಡದಾಗಿ ಮಾಡುತ್ತಾರೆ. ಯಾರೇ ಆಗಲಿ ತಪ್ಪು / ಕೆಟ್ಟದ್ದು ಮಾಡಬೇಕು ಎಂಬ ಉದ್ದೇಶದಿಂದ ಯಾವುದೇ ಕೃತ್ಯವನ್ನು ಮಾಡುವುದಿಲ್ಲ. ಯುವಕರು ಆ ಸಮಯದಲ್ಲಿ ಅತಿರೇಕದ ಪ್ರತಿಕ್ರಿಯೆ ನೀಡುವುದಿರಿಂದ ಸಮಸ್ಯೆಗಳು ಉಲ್ಭಣಗೊಳ್ಳುತ್ತವೆ. ಆ ಸಮಯದಲ್ಲಿ ಇದನ್ನು ತಡೆದಲ್ಲಿ ಸಮಸ್ಯೆಯು ದೊಡ್ಡದಾಗುವುದನ್ನು ತಡೆಯ ಬಹುದಾಗಿರುತ್ತದೆ. ಕೃತ್ಯಗಳನ್ನು ಮೂಲದಲ್ಲಿಯೇ ತಡೆಯುವ ಉದ್ದೇಶದಿಂದ ಪೊಲೀಸ್ ಇಲಾಖೆಯು ಶಾಂತಿ ಸಮಿತಿ (ಶಾಂತಿ ಪಡೆ) ಯನ್ನು ರಚಿಸಿರುತ್ತಾರೆ.

2) ನಾವು ನಮ್ಮ ಮಕ್ಕಳ ತಪ್ಪುಗಳನ್ನು ತಿದ್ದದೇ ಇದ್ದಲ್ಲಿ, ಬೇರೆಯವರು ಅವರನ್ನು ತಿದ್ದುತ್ತಾರೆ, ಇದಕ್ಕೆ ಅವಕಾಶ ನೀಡದೇ, ನಮ್ಮ ಮಕ್ಕಳಿಗೆ ನಾವೇ ಬುದ್ದಿ ಮಾತುಗಳನ್ನು ಹೇಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ. ನಮ್ಮ ಗುರು ಹಿರಿಯರು ನಮಗೆ ಹೇಳಿದ ಬುದ್ದಿ ಮಾತುಗಳಿಂದಾಗಿ ನಾವು ಜೀವನದಲ್ಲಿ ಯಶಸ್ಸು ಕಂಡು ಈ ಮಟ್ಟಿಗೆ ತಲುಪಲು ಸಾದ್ಯವಾಗಿರುತ್ತದೆ. ಆದ್ದರಿಂದ ಎಲ್ಲಾ ತಂದೆ ತಾಯಂದಿರು ಮನಸ್ಸು ಮಾಡಿದಲ್ಲಿ ತಮ್ಮ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡಬಹುದಾಗಿರುತ್ತದೆ.

ಜಾಹೀರಾತು

3) ರಾಗಿಗುಡ್ಡಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ಬೇಡಿಕೆ ಇದ್ದು, ಶಿವಮೊಗ್ಗ ನಗರಕ್ಕೆ ಮಂಜೂರಾದ 09 ನಮ್ಮ ಕ್ಲೀನಿಕ್ ಗಳ ಪೈಕಿ, ಒಂದನ್ನು ರಾಗಿಗುಡ್ಡ ಶಾಂತಿ ನಗರಕ್ಕೆ ಮಂಜೂರು ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಥಾಪನೆಯ ಬಗ್ಗೆಯೂ ಸಹಾ ಸಂಬಂಧ ಪಟ್ಟ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಿ ಕ್ರಮ ಕೈಗೊಳ್ಳಲಾಗುತ್ತದೆ. ರಾಗಿಗುಡ್ಡದಲ್ಲಿ *ರಸ್ತೆ ನಿರ್ಮಾಣದ ಬಗ್ಗೆ ಈಗಾಗಲೇ ಪಿಡಬ್ಲಯುಡಿ ಇಲಾಖೆಗೆ ಸೂಚಿಸಲಾಗಿರುತ್ತದೆ. ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಈಗಾಗಲೇ ಸ್ಥಳಗಳನ್ನು ಗುರುತಿಸಲಾಗಿದ್ದು, ಕ್ಯಾಮೆರಾಗಳ ಅಳವಡಿಕಗೆ ಕ್ರಮ ಕೈಗೊಳ್ಳಲಾಗುತ್ತದೆ. ಹಾಗೆಯೇ ಬೀದಿ ದೀಪಗಳ ದುರಸ್ತಿ, ಹೊಸ ದೀಪಗಳ ಅಳವಡಿಕೆ, ಯುಜಿಡಿ ಮತ್ತು 24/7 ಕುಡಿಯು ನೀರಿನ ವ್ಯವಸ್ಥೆಯ ಕುರಿತಂತೆಯೂ ಕೂಡ ಸಂಬಂದಪಟ್ಟ ಇಲಾಖೆಗೆ ಸೂಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

4) ರಾಗುಗಿಡ್ಡದಲ್ಲಿ ಸ್ವಚ್ಚತೆಯನ್ನು ಕಾಪಾಡುವ ಉದ್ದೇಶದಿಂದ ಒಣ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಲಾಗಿರುತ್ತದೆ. ಮುಂದಿನ ದಿನಗಳಲ್ಲಿ ರಾಗಿಗುಡ್ಡದಲ್ಲಿ ಸ್ವಚ್ಚತೆ ಕಾಪಾಡುವ ದೃಷ್ಠಿಯಿಂದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮಹಾನಗರ ಪಾಲಿಕೆ ಮತ್ತು ಸಾರ್ವಜನಿಕರು ಸೇರಿ ಶ್ರಮದಾನ ಆಯೋಜನೆ ಮಾಡಲಿದ್ದು, ಎಲ್ಲಾ ಸಾರ್ವಜನಿಕರು ಭಾಗವಹಿಸಿ. ನಮ್ಮ ಸುತ್ತ ಮುತ್ತಲಿನ ಪ್ರದೇಶವನ್ನು ಸ್ವಚ್ಚವಾಗಿ ಇಟ್ಟುಕೊಳ್ಳುವುದು ನಮ್ಮ ಜವಾಬ್ದಾರಿಯಾಗಿರುವುದರಿಂದ ಈ ನಿಟ್ಟಿನಲ್ಲಿ ಎಲ್ಲರೂ ಸೇರಿ ಶ್ರಮದಾನ ಮಾಡೋಣ.

ಸಮಸ್ಯೆಯನ್ನು ಮುಂದುವರೆಸಿಕೊಂಡು ಹೋದಲ್ಲಿ ಅದಕ್ಕೆ ಕೊನೆ ಎಂಬುದು ಇರುವುದಿಲ್ಲ. ಆದ್ದರಿಂದ ಯಾವುದೇ ಸಮಸ್ಯೆಗಳಿಗೆ ಒಟ್ಟಿಗೆ ಸೇರಿ ಪರಿಹಾರ ಕಂಡು ಕೊಂಡಲ್ಲಿ ಮಾತ್ರ ಅದಕ್ಕೆ ಶಾಶ್ವತ ಅಂತ್ಯ ಕಾಣಬಹುದಾಗಿರುತ್ತದೆ ಎಂದು ತಿಳಿಸಿದರು.

   ನಂತರ ಶ್ರೀ ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಮಾತನಾಡಿ,  ಸಮಸ್ಯೆಗೆ ಮೂಲದಲ್ಲಿಯೇ ಪರಿಹಾರ ಕಂಡುಕೊಂಡಲ್ಲಿ ಪೊಲೀಸ್ ಇಲಾಖೆಯು ಮಧ್ಯ ಪ್ರವೇಶಿಸುವ ಅಗತ್ಯತೆ ಇರುವುದಿಲ್ಲ. ಯಾವುದೇ ಅಹಿತಕರ ಘಟನೆಗಳು ನಡೆದ ನಂತರ ಅದರ ಪರಿಣಾಮ ತೀವ್ರ ಸ್ವರೂಪದ್ದಾಗಿರುತ್ತವೆ ಆದ್ದರಿಂದ ಶಾಂತಿ ಸಮಿತಿ ಸದಸ್ಯರು / ಮುಖಂಡರು ನೀವುಗಳೆ ಮುಂದೆ ನಿಂತು, ಕಿಡಿಗೇಡಿಗಳಿಗೆ ಬುದ್ದಿವಾದ ಹೇಳಿ ಕಿಡಿಗೇಡಿತನ ಮಾಡದಂತೆ ತಿಳುವಳಿಕೆ ನೀಡಿ ಉತ್ತಮ ರೀತಿಯಲ್ಲಿ ಸಮಾಜವನ್ನು ಮುನ್ನಡೆಸಿಕೊಂಡು ಹೋಗಿ.  ನಮ್ಮ ಯುವ ಪೀಳಿಗೆಯು ದಾರಿ ತಪ್ಪದಂತೆ ನೋಡಿಕೊಂಡು ಹೋಗುವುದು ನಮ್ಮ ಜವಾಬ್ದಾರಿಯಾಗಿರುತ್ತದೆಂದು ತಿಳಿಸಿದರು. 

    ರಾಗಿಗುಡ್ಡದ ಸಾರ್ವಜನಿಕರಾದ ಶ್ರೀ ರಾಮಚಂದ್ರ, ವಕೀಲರು, ಮಾತನಾಡಿ ನಮ್ಮ ರಾಗಿಗುಡ್ಡದಲ್ಲಿ ಶ್ರಮಿಕ ವರ್ಗ ಹೆಚ್ಚಿರುವುದರಿಂದ ಯಾವುದೇ ಘಟನೆ ನಡೆದಾಗ ಅದರ ಪರಿಣಾಮದಿಂದ ಜನರ ಜೀವನ ನಿರ್ವಹಣೆಯಲ್ಲಿ ಎಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ಈಗಾಗಲೇ ತಿಳಿದುಬಂದಿರುತ್ತದೆ. ಯಾವುದೇ ಸಣ್ಣ ಘಟನೆ ನಡೆದಾಗ ಅದನ್ನು ವೈಭವೀಕರಿಸುವ  ಅಗತ್ಯತೆ ಇರುವುದಿಲ್ಲ. ಈ ಬಗ್ಗೆ ನಾವುಗಳು ಎಚ್ಚೆತ್ತುಕೊಂಡು, ವೈಭವೀಕರಿಸುವುವರನ್ನು ನಿಯಂತ್ರಿಸಬೇಕಿರುತ್ತದೆ. ಕೆಲವರು ರಾಗಿಗುಡ್ಡದಲ್ಲಿ ನಡೆದ ಸಣ್ಣ ಘಟನೆಯನ್ನು ವಿಜೃಂಭಿಸಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿ ರಾಗಿಗುಡ್ಡ ಧಗಧಗ - ಕೊತಕೊತ ಎಂದು ಬಿಂಬಿಸಿದ್ದು, ಆದರೆ ರಾಗಿಗುಡ್ಡದ ವಾಸಿಗಳಾದ ನಾವು ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಸಹಯೋಗದೊಂದಿಗೆ ಇನ್ನು ಮುಂದೆ ರಾಗಿಗುಡ್ಡ ಪಳಪಳ ಹೊಳೆಯುವಂತೆ ಮಾಡಲು ಶ್ರಮಿಸೋಣ. ರಾಗಿಗುಡ್ಡದಲ್ಲಿ ಶ್ರಮಿಕ ವರ್ಗವೇ ಹೆಚ್ಚಿರುವುದರಿಂದ ಯಾವುದೇ ಘಟನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸದಯೇ ಪ್ರತಿಕ್ರಿಯೆ ನೀಡುತ್ತಾರೆ. ಆದ್ದರಿಂದ ಸಾರ್ವಜನಿಕರು ಯಾವುದೇ ವಿಚಾರವನ್ನು ಪರಿಶೀಲಿಸದೆಯೇ ಅದಕ್ಕೆ ಪ್ರತಿಕ್ರಿಯೆ ನೀಡದಂತೆ ಶಾಂತಿ ಪಡೆಯ ಮೂಲಕ ಜಾಗೃತಿ ಮೂಡಿಸೋಣ. ಶಾಂತಿ ಪಡೆ ಸದಸ್ಯರುಗಳನ್ನು ಓಳಗೊಂಡ  ವಾಟ್ಸ್ ಅಪ್ ಗ್ರೂಪ್ ಅನ್ನು ಸೃಜಿಸಿದ್ದು, ಅದನ್ನು ಜನರಲ್ಲಿ ಅರಿವು ಮೂಡಿಸಲು ಮತ್ತು ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ಹಾಗೂ ಸಾರ್ವಜನಿಕರ ಹಿತಾಸಕ್ತಿಯ ವಿಚಾರಕ್ಕೆ ಸಂಬಂಧಿಸಿದಂತೆ ಮಾತ್ರ ಬಳಸೋಣ. 

ರಾಗಿಗುಡ್ಡ ಶಾಂತಿನಗರದಲ್ಲಿ ನಡೆದ ಅಹಿತಕರ ಘಟನೆಯ ಸಂದರ್ಭದಲ್ಲಿ, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂಧಿಗಳು ಸೇರಿದಂತೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯು ಉತ್ತಮ ಕರ್ತವ್ಯ ನಿರ್ವಹಿಸಿರುತ್ತಾರೆಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಸುರೇಶ್ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ  ಬಿ ಉಪ ವಿಭಾಗ, ಶ್ರೀ ಸತ್ಯನಾರಾಯಣ್ ಪಿಐ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ರಾಗಿಗುಡ್ಡದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Optimized by Optimole
error: Content is protected !!