ಹತ್ಯೆಯಾದ ಹದಿನೇಳರ ಕಾರ್ತಿಕ್ ಸಿಂಗ್
ಇತ್ತೀಚೆಗಂತು ಮೀಸೆ ಬಾರದ ಹುಡುಗರ ಕೈಯಲ್ಲಿ ಲಾಂಗ್ ಜಳಪಿಸುತ್ತಿದೆ. ಪಾತಕಲೋಕದಲ್ಲಿ ಡಾನ್ ಆಗಬೇಕೆನ್ನುವ ಹುಚ್ಚುತನದಲ್ಲಿ ತಮಗೆ ಅರಿವಿಲ್ಲದಂತೆ ಕೈಗೆ ನೆತ್ತರನ್ನು ಅಂಟಿಸಿಕೊಂಡು ಭೂಗತ ಲೋಕದಲ್ಲಿ ಹೆಣವಾಗಿ ಹೋಗುತ್ತಿದ್ದಾರೆ. ಒಂದು ಕಡೆ ಗಾಂಜಾದ ಕಿಕ್ಕು ಮತ್ತೊಂದು ಕಡೆ ಹಣದ ಬೆನ್ನಿಗೆ ಬಿಳುತ್ತಿರುವ ಹುಡುಗರು ಹೆಂಡ ಜೂಜಾಟ ಮತ್ತು ಅಕ್ರಮಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ಸರಿಯಾಗಿ ಜೀವನದ ಹಾದಿಯಲ್ಲಿ ಕಣ್ಣು ಬಿಡುವ ಮೊದಲೇ ಅಕ್ರಮ ಚಟುವಟಿಕೆ ಅದರಲ್ಲೂ ರೌಡಿಸಂ ಗಿಳಿಗೆ ಕೈಹಾಕಿ ಹೆಣವಾಗುತ್ತಿದ್ದಾರೆ.ಇಪ್ಪತ್ತರಿಂದ ಮೂವತ್ತು ವರ್ಷ ಪ್ರಾಯದಲ್ಲೇ ಸುಡುಗಾಡು ಸೇರುತ್ತಿದ್ದಾರೆ.
ಭೂಗತ ಲೋಕದಲ್ಲಿ ಡಾನ್’ ಆಗುವ ಹುಚ್ಚುತನಕ್ಕೆ ಬಾಲಕನ ಬರ್ಬರ ಹತ್ಯೆ!
ತಂದೆ ಪೊಲೀಸ್ ತಾಯಿ ಶಿಕ್ಷಕಿ ದಂಪತಿಗಳ ಪುತ್ರನೆ ಈ ಹತ್ಯೆಯ ಪ್ರಮುಖ ಆರೋಪಿ..!!
ಕೋಲಾರ: ನಗರದ ಪೇಟೆಚಾಮನಹಳ್ಳಿ ಬಡಾವಣೆಯಲ್ಲಿ ಕಳೆದ ಶುಕ್ರವಾರ ರಾತ್ರಿ ಹದಿನೇಳು ವರ್ಷದ ಬಾಲಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಇದೇ ಬಡಾವಣೆಯ ಅರುಣ್ ಸಿಂಗ್ ಮತ್ತು ಸುಶೀಲಾ ದಂಪತಿ ಪುತ್ರ ಕಾರ್ತಿಕ್ ಸಿಂಗ್ ಕೊಲೆಯಾದ ಅಮಾಯಕ ಬಾಲಕ.ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಈ ಹತ್ಯೆಯ ಪ್ರಕರಣ ದಾಖಲಾಗಿದೆ, ಈ ಹತ್ಯೆ ಮಾಡಿರುವ ಆರೋಪಿಗಳೆಲ್ಲರೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಎಂಬುದು ತನಿಖೆಯಿಂದ ತಿಳಿದುಬಂದಿದೆ.ಈ ಕೊಲೆ ಮಾಡಿದ ನಂತರ ತಲೆಮರೆಸಿಕೊಂಡಿದ್ದಾರೆ.
ಪೋಲಿಸರು ಆರೋಪಿಗಳ ಸ್ನೇಹಿತರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡ ಪೋಲಿಸರು ಆರೋಪಿಗಳ ಪತ್ತೆಗೆ ವಿಷೇಶ ತಂಡವನ್ನು ರಚಿಸಿ ಹುಡುಕಾಟ ಆರಂಭಿಸಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಮಾದ್ಯಮದವರಿಗೆ ತಿಳಿಸಿದ್ದಾರೆ.
ಭೂಗತ ಲೋಕವನ್ನು ಅಳಬೇಕು ನೆತ್ತರ ಲೋಕದ ಡಾನ್ ಆಗುವ ಹುಚ್ಚು ತನಕ್ಕೆ ಹೆಜ್ಜೆ ಹಾಕಿದ ಐವರು ಹುಡುಗರ ಗ್ಯಾಂಗ್ ಅಮಾಯಕ ಬಾಲಕನ ಹತ್ಯೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.ಈ ಕೊಲೆ ಪ್ರಕರಣ ಪ್ರಮುಖ ಆರೋಪಿತನ ತಂದೆ ಪೊಲೀಸ್ ಕಾನ್‌ಸ್ಟೆಬಲ್ ಆಗಿದ್ದು ಇತನ ತಾಯಿ ಶಿಕ್ಷಕಿ ಯಾಗಿದ್ದಾರೆ. ಒಂದು ಕಡೆ ರಕ್ಷಣೆ ಮತ್ತು ಕ್ರೈಮ್ ಗಳ ವಿರುದ್ಧ ಹಗಲಿರುಳು ಹೋರಾಡುವ ತಂದೆ ಮತ್ತೊಂದು ಕಡೆ ಮಕ್ಕಳ ಸುಂದರ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರದಾರಿಯಾಗಿರುವಂತಹ ಶಿಕ್ಷಕಿಯ ಚಂಡಾಳ ಪುತ್ರನೊಬ್ಬ ಡಾನ್ ಆಗಬೇಕೆಂಬ ಹುಚ್ಚಿನಲ್ಲಿ ಈ ಕೃತ್ಯ ಎಸಗಿದ್ದಾನೆಂದು ತಿಳಿದು ಬಂದಿದೆ.ಈ ಹಿಂದೆಯೂ ಅಪರಾಧ ಕೃತ್ಯಗಳಲ್ಲಿ ಈತ ಭಾಗಿಯಾಗಿದ್ದ’ ಎಂದು ಪೊಲೀಸರೊಬ್ಬರು ಮಾಹಿತಿ ನೀಡಿದ್ದಾರೆ.
ಕೋಲಾರದ ಬೈಪಾಸ್ ರಸ್ತೆಯಲ್ಲಿರುವ ಎಸ್‌ಡಿಸಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಅಮಾಯಕ ಹುಡುಗ ಕಾರ್ತಿಕ್‌ನನ್ನು ಆರೋಪಿಗಳು ಶುಕ್ರವಾರ ರಾತ್ರಿ 8 ಗಂಟೆ ಹೊತ್ತಿಗೆ ಪೇಟೆಚಾಮನಹಳ್ಳಿ ಬಡಾವಣೆಯ ಶಾಲೆ ಆವರಣಕ್ಕೆ ಕರೆಸಿಕೊಂಡು ಹತ್ಯೆ ಮಾಡಿದ್ದಾರೆ. ಹತ್ಯೆಗೂ ಮುನ್ನ ಬಾಲಕನಿಗೆ ಚಿತ್ರ ಹಿಂಸೆ ಕೊಟ್ಟಿದ್ದಾರೆ. ಬಟ್ಟೆ ಬಿಚ್ಚಿಸಿ ಮೈ ಕೈಗೆ ಗಾಜು, ಚಾಕು, ಬ್ಲೇಡ್‌ನಿಂದ ಮನಬಂದಂತೆ ಕುಯ್ದಿದ್ದಾರೆ. ಇದನ್ನು ವಿಡಿಯೊ ಕೂಡ ಮಾಡಿದ್ದಾರೆ ಎನ್ನುವುದು ತಿಳಿದು ಬಂದಿದೆ. ವಿಕೃತ ಮನಸ್ಸಿನ ಐವರು ಹಂತಕರ ತಂಡ ಮನಸೋ ಇಚ್ಚೆ ವಿಕೃತಿ ಮೆರೆದು ಅಮಾಯಕನೊಬ್ಬನ ಬದುಕಿಗೆ ಅಂತ್ಯವಾಡಿದ್ದಾರೆ. ಹತ್ಯೆಯಾದ ಯುವಕನ ಮನೆಯವರ ಹೇಳಿಕೆಯಂತೆ
ನಮ್ಮ ಪುತ್ರ ಶುಕ್ರವಾರ ಹೊಟ್ಟೆ ನೋವು ಎಂದು ಕಾಲೇಜಿಗೆ ಹೋಗಿರಲಿಲ್ಲ. ಮಧ್ಯಾಹ್ನದವರೆಗೆ ಮನೆಯಲ್ಲೇ ಮಲಗಿಕೊಂಡಿದ್ದ. ಸಂಜೆ ಎಲ್ಲೋ ಹೋಗಿದ್ದ. ಕರೆ ಮಾಡಿದಾಗ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ಆತನ ಕೊಲೆಯಾಗಿರುವ ಬಗ್ಗೆ ರಾತ್ರಿ 8.30ರ ಸುಮಾರಿಗೆ ಸಂಬಂಧಿಯೊಬ್ಬರು ಹೇಳಿದರು. ಪುತ್ರನ ಜೊತೆಗೆ ಇರುತ್ತಿದ್ದ ವ್ಯಕ್ತಿಯಿಂದಲೆ ಕೊಲೆ ಮಾಡಿರುವ ಶಂಕೆ ಇದ್ದು, ಆತನಿಗೆ ಶಿಕ್ಷೆ ಕೊಡಿ’ ಎಂದು ಕಾರ್ತಿಕ್ ತಾಯಿ ಸುಶೀಲಾ ಗೋಳು ತೋಡಿಕೊಂಡರು.
ಈ ಹಿಂದೆಯೂ ಹಲ್ಲೆ ಮಾಡಿದ್ದರು ಹಂತಕರು!
ಇಬ್ಬರು ಅಮಾಯಕ ಬಾಲಕರ ಮೇಲೆ ಲಾಂಗ್‌ನಿಂದ ಹಲ್ಲೆ ನಡೆಸಿದ್ದ ಸಂಬಂಧ ಈ ಗ್ಯಾಂಗ್‌ನ ಕೆಲವರ ಮೇಲೆ ನಗರದ ಮಹಿಳಾ ಠಾಣೆಯಲ್ಲಿ ಫೆಬ್ರುವರಿ 26ರಂದು ಪ್ರಕರಣ ದಾಖಲಾಗಿತ್ತು. ಅಲ್ಲದೇ, ಕೊಲೆಯಾದ ಕಾರ್ತಿಕ್ ಸಿಂಗ್‌ಗೆ ಹಿಂದೆಯೂ ಈ ಗ್ಯಾಂಗ್ ಕಿರುಕುಳ ನೀಡಿರುವುದು ಗೊತ್ತಾಗಿದೆ.
ಒಟ್ಟಿನಲ್ಲಿ ಬಿಸಿ ರಕ್ತದ ಹುಡುಗರ ಪಾತಕಲೋಕವನ್ನು ಅಳಬೇಕು ಡಾನ್ ಗಳಾಗಿ ಮೇರೆಯ ಬೇಕು ಎನ್ನುವ ಹುಚ್ಚುತನಕ್ಕೆ ಅಮಾಯಕ ಬಾಲಕನೊಬ್ಬನ ಹೆಣಬಿದ್ದಿದೆ. ಪೋಲಿಸ್ ತನಿಖೆಯಿಂದ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ
ಸುಧೀರ್ ವಿಧಾತ ,ಶಿವಮೊಗ್ಗ