
ಬೆಂಗಳೂರು : ಮುಖ್ಯಮಂತ್ರಿ ಬದಲಾವಣೆ ಅಸಾಧ್ಯ: ಹೈ ಕಮಾಂಡ್ ಸಂದೇಶ..!
news.ashwasurya.in

ಅಶ್ವಸೂರ್ಯ/ಬೆಂಗಳೂರು :ಕಳೆದ ಹದಿನೈದು ದಿನಗಳಿಂದ ದೊಡ್ಡ ಮಟ್ಟದ ಚರ್ಚೆಯಾಗಿದ್ದ ಮುಖ್ಯಮಂತ್ರಿಗಳ ಬದಲಾವಣೆಯ ವಿಷಯಕ್ಕೆ ಸಧ್ಯಕ್ಕೆ ಬ್ರೇಕ್ ಬಿದ್ದಿದೆ.! ಕಾಂಗ್ರೆಸ್ ಪಕ್ಷದ ಭವಿಷ್ಯ ಹಾಗೂ ಮುಂದಿನ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬದಲಾವಣೆ ಅಸಾಧ್ಯ ಎಂಬ ಸಂದೇಶವನ್ನು ಕಾಂಗ್ರೆಸ್ ಹೈಕಮಾಂಡ್ ರವಾನಿಸಿದ್ದು, ಅದನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಟ್ಟಿಸಿದ್ದಾರೆ.
ಅಧಿಕಾರ ಹಂಚಿಕೆ ಹಾಗೂ ಸಚಿವ ಸಂಪುಟ ಪುನರ್ ರಚನೆ ಸೇರಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದಂತೆ ನಾನು ಮತ್ತು ಡಿ.ಕೆ.ಶಿವಕುಮಾರ್ ಕೇಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಡಿ.ಕೆ.ಶಿವಕುಮಾರ್ ಕೂಡ ಅದನ್ನು ಅನುಮೋದಿಸಿದ್ದರು.

ಎರಡು ಉಪಹಾರ ಕೂಟದ ಬಳಿಕ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರ ನಡುವಿನ ಕುರ್ಚಿ ಕಾಳಗಕ್ಕೆ ಬ್ರೇಕ್ ಬಿದ್ದಂತಾಗಿದೆ.! ಸದ್ಯ ರಾಜ್ಯ ಕಾಂಗ್ರೆಸ್ ಆಡಳಿತದಲ್ಲಿ ತಣ್ಣನೆಯ ವಾತಾವರಣ ನಿರ್ಮಾಣವಾಗಿದೆ. ಪಕ್ಷ ಸಂಘಟನೆ ಹಾಗೂ ಮುಂದಿನ ದಿನಗಳಲ್ಲಿ ನಡೆಯುವ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ಮ ಮತ್ತು ಗ್ರಾಮ ಪಂಚಾಯತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯತ್ತ ಎಲ್ಲಾ ನಾಯಕರು ದೃಷ್ಟಿ ನೆಟ್ಟಿದ್ದಾರೆ. ಈ ನಡುವೆ ಸಿದ್ದರಾಮಯ್ಯ ಅವರಲ್ಲಿದ್ದ ಗೊಂದಲಕ್ಕೆ ಹೈಕಮಾಂಡ್ ನಿಟ್ಟುಸಿರು ಬಿಡಿವಂತಹ ಸಂದೇಶ ರವಾನಿಸಿದ್ದು ಸಮಾಧಾನ ತಂದಿದೆ . ನಿಮ್ಮ ಕೆಲಸ ನೀವು ಮುಂದುವರಿಸಿಕೊಂಡು ಹೋಗಿ ಯಾವುದೇ ಚಿಂತೆ ಬೇಡ ಎಂಬ ಚುಟುಕು ಸಂದೇಶವನ್ನು ಮಂಗಳೂರಿಗೆ ಆಗಮಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಸಿದ್ದರಾಮಯ್ಯನವರಿಗೆ ಹೇಳಿದ್ದಾರೆ ಎನ್ನಲಾಗಿದೆ.

ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶ ಸೇರಿ ಇಡೀ ದೇಶದಲ್ಲಿ ಮೂರು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಆಡಳಿತವಿದೆ. ನಾಯಕತ್ವ ಬದಲಾವಣೆಯಿಂದಾಗಿ ಕರ್ನಾಟಕದಲ್ಲಿ ಅಧಿಕಾರ ಕಳೆದುಕೊಂಡರೆ ದೇಶದಲ್ಲೇ ಭಾರಿ ಪ್ರಮಾಣದ ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಲೆಕ್ಕಚಾರ ಕಾಂಗ್ರೆಸ್ ಹೈಕಮಾಂಡ್ ನಲ್ಲಿದೆ ಎನ್ನಲಾಗಿದೆ.
ಸದ್ಯಕ್ಕೆ ಮೂರು ರಾಜ್ಯಗಳಲ್ಲೂ ಯಥಾಸ್ಥಿತಿ ಮುಂದುವರಿಸಲು ಹೈಕಮಾಂಡ್ ನಿರ್ಧರಿಸಿದೆ. ಈ ಮೊದಲು ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್ ಸೇರಿದಂತೆ ಮತ್ತಿತರ ರಾಜ್ಯಗಳಲ್ಲಿ ಪರ್ಯಾಯ ನಾಯಕತ್ವಕ್ಕೆ ಮಣೆ ಹಾಕುವ ಪ್ರಯೋಗ ಮಾಡಿ ಕಾಂಗ್ರೆಸ್ ಕೈ ಸುಟ್ಟುಕೊಂಡಿದೆ. ಗೆಲ್ಲಬಹುದಾದ ರಾಜ್ಯಗಳನ್ನು ಕಳೆದುಕೊಂಡಿದೆ. ಕರ್ನಾಟಕದಲ್ಲಿ ಡಿ.ಕೆ.ಶಿವಕುಮಾರ್ ಅವರ ಒತ್ತಡಕ್ಕೆ ಮಣಿದು ನಾಯಕತ್ವ ಬದಲಾವಣೆ ಮಾಡಿದರೆ ಅಹಿಂದ ವರ್ಗ ಕಾಂಗ್ರೆಸ್ ನಿಂದ ದೂರವಾಗುವ ಹೆದರಿಕೆ ಕಾಂಗ್ರೆಸ್ ನಲ್ಲಿದೆ ಎನ್ನಲಾಗಿದೆ.
ದೇಶದಲ್ಲೇ ಕಾಂಗ್ರೆಸ್ ಗೆ ಪ್ರಬಲವಾದ ಅಹಿಂದ ನಾಯಕರಿಲ್ಲದೆ ಇರುವುದು ದೊಡ್ಡ ಕೊರತೆಯಾಗಿದೆ. ಸಿದ್ದರಾಮಯ್ಯ ಅವರು ಅಹಿಂದ ನಾಯಕರಾಗಿ ಪ್ರಬಲವಾಗಿ ಗುರುತಿಸಿಕೊಂಡಿದ್ದು ಅವರನ್ನು ರಾಷ್ಟ್ರಮಟ್ಟದಲ್ಲಿ ಪ್ರತಿಬಿಂಬಿಸುವ ಪ್ರಯತ್ನಗಳು ನಡೆದಿತ್ತು. ಈ ಸಂದರ್ಭದಲ್ಲಿ ಅವರನ್ನು ಬದಲಾವಣೆ ಮಾಡಿದರೆ ಕಾಂಗ್ರೆಸ್ ಗೆ ಭಾರಿ ಪ್ರಮಾಣದ ಹಾನಿಯಾಗಬಹುದು ಎಂದು ಹೇಳಲಾಗುತ್ತಿದೆ.
ಜೊತೆಗೆ ಸಿದ್ದರಾಮಯ್ಯ ಉತ್ತಮ ಆಡಳಿತಗಾರರು ಮತ್ತು ಆರ್ಥಿಕವಾಗಿ ವಿಚಾರಗಳಲ್ಲಿ ಅನುಭವಸ್ಥರು. ದೇಶದಲ್ಲೇ ಎಲ್ಲೂ ಇಲ್ಲದಂತ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಥವಾಗಿ ಜಾರಿಗೊಳಿಸುವ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ. ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಿದರೆ ರಾಜ್ಯದ ಆರ್ಥಿಕ ವ್ಯವಸ್ಥೆ ಕೂಡ ಏರುಪೇರಾಗುವ ಆತಂಕ ಇದೆ. ಇದು ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲಾಗದ ಅಸಹಾಯಕ ಸ್ಥಿತಿ ನಿರ್ಮಿಸಬಹುದು. ಅದು ಮುಂದಿನ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗಳಿಗೆ 2026ರ ಮೇ ಮತ್ತು ಜೂನ್ ನಲ್ಲಿ ಚುನಾವಣೆ ನಡೆಯಬೇಕಿದೆ. ಒಟ್ಟು 824 ವಿಧಾನಸಭಾ ಕ್ಷೇತ್ರಗಳ ಈ ರಾಜ್ಯಗಳ ಚುನಾವಣೆ ಕಾಂಗ್ರೆಸ್ ಪಾಲಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದೆ.

ಕರ್ನಾಟಕದಲ್ಲಿ ಒಟ್ಟು 224, ಹಿಮಾಚಲ ಪ್ರದೇಶದಲ್ಲಿ 68, ತೆಲಂಗಾಣದಲ್ಲಿ 119 ವಿಧಾನಸಭಾ ಕ್ಷೇತ್ರಗಳಿದ್ದು, ಕರ್ನಾಟಕ ಹೊರತುಪಡಿಸಿದರೆ ಉಳಿದ ಎಲ್ಲಿಯೂ ದೊಡ್ಡ ರಾಜ್ಯವನ್ನು ಕಾಂಗ್ರೆಸ್ ಗೆದ್ದಿಲ್ಲ. ಕರ್ನಾಟಕದಲ್ಲಿ ಸ್ಥಿರ ಮತ್ತು ಅಭಿವೃದ್ಧಿ ಪರ ಆಡಳಿತ ನೀಡಿ ಮುಂದಿನ ದಿನಗಳಲ್ಲಿ ಅಸ್ಸಾಂ, ಪುದುಚೇರಿಯನ್ನು ಮರಳಿ ಗೆಲ್ಲುವುದು, ತಮಿಳುನಾಡಿನಲ್ಲಿ ಮಿತ್ರ ಪಕ್ಷವನ್ನು ಅಧಿಕಾರಕ್ಕೆ ತಂದು ಸರ್ಕಾರದ ಪಾಲುದಾರಿಕೆ ಮುಂದುವರಿಸುವುದು, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳುವುದು ಕಾಂಗ್ರೆಸ್ ಗೆ ಅನಿವಾರ್ಯವಾಗಿದೆ.
ಈ ಕಾರಣಕ್ಕೆ ರಾಜ್ಯ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯಂತಹ ದುಸ್ಸಾಹ ಬೇಡ ಎಂದು ಹೈಕಮಾಂಡ್ ಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆಯಾಗಿದೆ ಎನ್ನಲಾಗಿದೆ. ಈ ಸಂದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಲುಪಿಸಲಾಗಿದೆ.
ಸಧ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಎಂದು ಕಾಂಗ್ರೆಸ್ ನಾಯಕರು ಸಚಿವರು ಮತ್ತು ಶಾಸಕರು ರಾಜ್ಯದಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಿದರೆ ಅಂತವರ ವಿರುದ್ಧ ಕಠಿಣ ಕ್ರಮ ಅನಿವಾರ್ಯ ಎಂಬ ಎಚ್ಚರಿಕೆಯನ್ನು ಹೈಕಮಾಂಡ್ ರವಾನಿಸಿದೆ. ಮಂಗಳೂರಿಗೆ ಕೆ.ಸಿ.ವೇಣುಗೋಪಾಲ್ ಆಗಮಿಸಿದಾಗ ಡಿಕೆ.. ಡಿಕೆ… ಎಂದು ಘೋಷಣೆ ಕೂಗಿದ ಮಿಥುನ್ ರೈ ಮತ್ತು ಬೆಂಬಲಿಗರಿಗೆ ಕೆಪಿಸಿಸಿ ಬದಲಾಗಿ ನೇರವಾಗಿ ಎಐಸಿಸಿಯಿಂದಲೇ ನೋಟಿಸ್ ಜಾರಿ ಮಾಡುವ ಮೂಲಕ ಕಠಿಣ ಸಂದೇಶ ರವಾನಿಸಲಾಗಿದೆ. ಇತ್ತ ಸಿದ್ದರಾಮಯ್ಯ ಅವರ ಪರವಾಗಿ ಘೋಷಣೆ ಕೂಗಿದ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾರಿಗೂ ನೋಟಿಸ್ ನೀಡಲಾಗಿದೆ. ಈ ಮೂಲಕ ಹೈಕಮಾಂಡ್ ಶಿಸ್ತು ಪಾಲನೆ ವಿಷಯದಲ್ಲಿ ಅಖಾಡಕ್ಕೆ ಇಳಿದಿರುವುದು ಒಳ್ಳೆಯದಾಗಿದೆ.


