ಶಿವಮೊಗ್ಗ : ಆಕಾಶವಾಣಿ ಭದ್ರಾವತಿಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ.
news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ನವೆಂಬರ್ 28 ರಂದು ಆಕಾಶವಾಣಿ ಭದ್ರಾವತಿ ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹೊಳೆಹೊನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕರು ಮತ್ತು ಕುವೆಂಪು ವಿಶ್ವವಿದ್ಯಾಲಯದ ಕನ್ನಡಭಾರತಿ ಸದಸ್ಯರಾದ ಡಾ. ಭಾರತಿದೇವಿ ಡಿ.ಆರ್ ಅವರು ಅನ್ನಕೊಡುವ ಭಾಷೆಯೆಂದು ಬೇರೆ ಭಾಷೆಯನ್ನು ಓಲೈಸದೆ ನಮ್ಮ ತಾಯ್ನುಡಿಯನ್ನು ಗೌರವಿಸಬೇಕು ಹಾಗೂ ಕರ್ನಾಟಕದವರೆಲ್ಲರೂ ಒಗ್ಗೂಡಿ ನಾವು ಕನ್ನಡಿಗರೂ ಎನ್ನುವ ಭಾವನೆ ಬೆಳೆಸಿಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.
ಭದ್ರಾವತಿ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥರಾದ ಎಸ್.ಆರ್.ಭಟ್ ಅವರು ಕನ್ನಡ ನಾಡು ನುಡಿಗೆ ಶಿವಮೊಗ್ಗ ಜಿಲ್ಲೆಯ ಕೊಡುಗೆ ಅಪಾರ, ಜ್ಞಾನಪೀಠ ಮತ್ತು ಮುಖ್ಯಮಂತ್ರಿಗಳನ್ನ ನೀಡಿ ಕನ್ನಡದ ಹೋರಾಟದಲ್ಲಿಯೂ ಅತ್ಯಂತ ಪ್ರಮುಖ ಪಾತ್ರವಹಿಸಿದ್ದು ಅದನ್ನ ಉಳಿಸಿ ಬೆಳೆಸುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು. ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಎಸ್.ಎಸ್.ಕೃಷ್ಣಪ್ಪ ರವರು ಹಳ್ಳಿಯಲ್ಲಿ ಹುಟ್ಟಿದರೂ ಇಂಗ್ಲೀಷಿನ ವ್ಯಾಮೋಹವನ್ನ ಬೆಳೆಸಿಕೊಂಡು ಹೋಗುತ್ತಿರುವಾಗ ನಮ್ಮಲ್ಲಿರುವ ಕನ್ನಡದ ಕೀಳಿರೆಮೆಯನ್ನ ಬಿಡಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಆಕಾಶವಾಣಿಯ ಕಾರ್ಯಕ್ರಮ, ತಾಂತ್ರಿಕ, ಆಡಳಿತ, ಉದ್ಘೋಷಕವರ್ಗ ಹಾಗೂ ನಿರ್ಮಾಣ ತಂಡದ ಎಲ್ಲಾ ಸಿಬ್ಬಂದಿಗಳಿಗೆ ಮಡಿಕೆ ಒಡೆಯುವ ಸ್ಪರ್ಧೆ ಮತ್ತು ಮ್ಯೂಸಿಕಲ್ ಚೇರ್ ಹಾಗೂ ಅಂತ್ಯಾಕ್ಷರಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಎಸ್.ಎಂ.ಸುಧಾಕರ್ ಅವರು ಸ್ವಾಗತಿಸಿ, ಕೇಶವಮೂರ್ತಿಯವರು ವಂದನಾರ್ಪಣೆಯನ್ನು ಸಲ್ಲಿಸಿದರು. ಅರ್ಪಿತಾ ನಾಯುರ್ ನಿರೂಪಣೆ ಮಾಡಿದರು. ಐವತ್ತಕ್ಕೂ ಹೆಚ್ಚು ಸಿಬ್ಬಂದಿಗಳು ಅದ್ದೂರಿ ಸಮಾರಂಭದಲ್ಲಿ ಪಾಲ್ಗೊಂಡು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.


